ಬೆಳಗಾವಿ ಕಾಂಗ್ರೆಸ್‌ ಅಧಿವೇಶನ | ಶತಮಾನೋತ್ಸವದ ಸುತ್ತ ಒಂದು ಅವಲೋಕನ

Date:

Advertisements
1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್‌ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ. ಜೊತೆಗೆ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಇದಾಗಿದ್ದರಿಂದ ರಾಜ್ಯಕ್ಕೆ ಹೆಮ್ಮೆಯ ಸಂಗತಿಯೂ ಹೌದು. ಕುಂದಾನಗರಿಯಲ್ಲಿ ಇಂದಿನಿಂದ ಎರಡು ದಿನ (ಡಿ.26,27) ಗಾಂಧಿ ನೆನಪಿನೊಂದಿಗೆ ನಡೆಯುತ್ತಿರುವ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸುತ್ತ ಒಂದು ಅವಲೋಕನ ಇಲ್ಲಿದೆ...

ಕುಂದಾನಗರಿ ಬೆಳಗಾವಿ ಹಲವು ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾದ ನಗರ. ದೇಶದಲ್ಲಿ ಸ್ವಾತಂತ್ರ್ಯ ಹೋರಾಟ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ 1924ರಲ್ಲಿ ಮಹಾತ್ಮ ಗಾಂಧೀಜಿಯವರು 39ನೇ ಕಾಂಗ್ರೆಸ್‌ ಅಧಿವೇಶನದ ಅಧ್ಯಕ್ಷತೆ ವಹಿಸಿಕೊಂಡಿದ್ದು ಇದೇ ಬೆಳಗಾವಿಯಲ್ಲಿ. ಮಹಾತ್ಮ ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ ಕಾಂಗ್ರೆಸ್‌ ಅಧಿವೇಶನಕ್ಕೆ ಈಗ ಶತಮಾನೋತ್ಸವದ ಸಂಭ್ರಮ. ಜೊತೆಗೆ ಮಹಾತ್ಮಾ ಗಾಂಧಿಯವರ ಅಧ್ಯಕ್ಷತೆಯಲ್ಲಿ ನಡೆದ ಏಕೈಕ ಅಧಿವೇಶನ ಇದಾಗಿದ್ದರಿಂದ ರಾಜ್ಯಕ್ಕೆ ಹೆಮ್ಮೆಯ ಸಂಗತಿಯೂ ಹೌದು.

‘ದೇಶಕ್ಕೆ ಸ್ವಾತಂತ್ರ್ಯ ಸಿಗುವವರೆಗೂ, ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಬಾರದು’ ಎನ್ನುವ ನಿರ್ಣಯ ಅಂಗೀಕರಿಸಿದ್ದು ಬೆಳಗಾವಿ ನಗರದ ಟಿಳಕವಾಡಿ (ಆಗಿನ ವಿಜಯನಗರ) ಪ್ರದೇಶದ ಬಯಲಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಎಂಬುದು ವಿಶೇಷ. 1924ರ ಡಿಸೆಂಬರ್ 26, 27 ರಂದು ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಮಹಾ ಅಧಿವೇಶನ ಹೆಜ್ಜೆ ಗುರುತುಗಳು ಇಲ್ಲಿ ಇನ್ನೂ ಕಾಣಸಿಗುತ್ತವೆ. ಅಧಿವೇಶನಕ್ಕೆ ಸಾಕ್ಷಿಯಾದ ನೆಲದಲ್ಲಿ ವೀರಸೌಧ ನಿರ್ಮಿಸಲಾಗಿದೆ. ಸಮಾವೇಶಗೊಳ್ಳಲು ಬಂದಿದ್ದ 30 ಸಾವಿರ ಮಂದಿಯ ಕುಡಿಯುವ ನೀರಿಗಾಗಿ ಬಾವಿ ಕೂಡ ತೋಡಲಾಗಿತ್ತು. ಅದು ‘ಕಾಂಗ್ರೆಸ್ ಬಾವಿ‘ (ಪಂಪಾ ಸಾಗರ) ಎಂದೇ ಪ್ರಸಿದ್ಧವಾಗಿದ್ದು, ಅದರಲ್ಲಿ ಈಗಲೂ ಶುದ್ಧ ನೀರಿದೆ.

ಅಧಿವೇಶನಕ್ಕೆ ಆರು ದಿನ ಮುಂಚಿತವಾಗಿ ಮಹಾತ್ಮ ಗಾಂಧೀಜಿ ರೈಲಿನ ಮೂಲಕ ಬೆಳಗಾವಿಗೆ ಆಗಮಿಸಿದ್ದರು. ಇದೇ ಸಂದರ್ಭದಲ್ಲಿ ಅಧಿವೇಶನ ನಡೆಯುವ ಆವರಣಕ್ಕೆ ಹೊಂದಿಕೊಂಡಂತೆ ತಾತ್ಕಾಲಿಕವಾಗಿ ವಿಶೇಷ ರೈಲು ನಿಲ್ದಾಣ ವ್ಯವಸ್ಥೆಯನ್ನು ಮಾಡಲಾಗಿತ್ತು. ಅದನ್ನು ಈಗ ಫೋಟೊದಲ್ಲಿ ಮಾತ್ರ ನೋಡಲು ಸಾಧ್ಯ. ಗೋಪುರ ಶೈಲಿಯ ಪ್ರವೇಶ ದ್ವಾರವನ್ನು ನಿರ್ಮಾಣ ಮಾಡಲಾಗಿತ್ತು. ಮಹಾತ್ಮ ಗಾಂಧೀಜಿ ಅವರು ಬೆಳಗಾವಿ ಮಣ್ಣನ್ನು ಸ್ಪರ್ಶಿಸಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಬಾಲಗಂಗಾಧರ ತಿಲಕರ ಪ್ರಭಾವ ಮತ್ತು ಮುಂಬೈ ಪ್ರೆಸಿಡೆನ್ಸಿಗೆ ಬೆಳಗಾವಿ ಒಳಪಟ್ಟ ಹಿನ್ನೆಲೆ ಹಾಗೂ ಸ್ಥಳೀಯ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಾವು ಜೋರಾಗಿದ್ದಿದ್ದರಿಂದ ಕಾಂಗ್ರೆಸ್ ಅಧಿವೇಶನ ಬೆಳಗಾವಿಯಲ್ಲಿ ನಡೆಸಲಾಯಿತು.

Advertisements

ಸರಳ ಜೀವನ ಅಳವಡಿಸಿಕೊಂಡಿದ್ದ ಮಹಾತ್ಮ ಗಾಂಧೀಜಿ ಅವರು ಬೆಳಗಾವಿ ಅಧಿವೇಶನಕ್ಕೆ ಒಂದು ವಾರ ಮುಂಚೆಯೇ ಆಗಮಿಸಿದ್ದರು. ಅಂದಿನ ಮುಖಂಡರು ಗಾಂಧೀಜಿಯವರ ವಾಸ್ತವ್ಯಕ್ಕೆ ಮನೆಗಳಲ್ಲಿ ವ್ಯವಸ್ಥೆ ಮಾಡಿದ್ದರು. ಆದರೆ ಅದಕ್ಕೆ ಒಪ್ಪದ ಗಾಂಧಿ ಅಧಿವೇಶನ ನಡೆಯುತ್ತಿದ್ದ ಸ್ಥಳದಲ್ಲೇ ಒಂದು ಟೆಂಟ್ ಹಾಕಿಕೊಂಡು ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಅದೇ ಸಂದರ್ಭದಲ್ಲಿ ಪಕ್ಕದ ಗ್ರಾಮಗಳಿಗೆ ಭೇಟಿ ನೀಡಿ ಜನರಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿದ್ದರು.

ಗಾಂಧಿ 12
1924ರ ಡಿಸೆಂಬರ್ 26, 27 ರಂದು ನಡೆದ ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ 39ನೇ ಮಹಾ ಅಧಿವೇಶನದಲ್ಲಿ ಮಹಾತ್ಮ ಗಾಂಧಿ

ಬೆಳಗಾವಿ ಜಿಲ್ಲೆಯ ಹುದಲಿ ಗ್ರಾಮದವರಾದ ಕರ್ನಾಟಕದ ಖಾದಿ ಭಗೀರಥ ಎಂದೇ ಖ್ಯಾತಿ ಹೊಂದಿದ್ದ ಗಂಗಾಧರರಾವ್ ದೇಶಪಾಂಡೆ ಅಂದಿನ ಅಧಿವೇಶನದ ಸಂಪೂರ್ಣ ಉಸ್ತುವಾರಿ ಹೊತ್ತಿದ್ದರು. ‌ಮೋತಿಲಾಲ್ ನೆಹರೂ, ಜವಾಹರಲಾಲ್ ನೆಹರೂ, ಮೌಲಾನಾ ಮಹಮ್ಮದ್‌ಅಲಿ, ಮೌಲಾನಾ ಶೌಕತ್‌ ಅಲಿ, ಸರೋಜಿನಿ ನಾಯ್ಡು, ಲಾಲಾ ಲಜಪತ ರಾಯ್ ಅವರಂಥ ದಿಗ್ಗಜರ ತಂಡವೇ ಅಧಿವೇಶನಕ್ಕೆ ಆಗಮಿಸಿತ್ತು. ಕಪ್ಪು-ಬಿಳುಪಿನ ಕಾಲದ ಫೋಟೊಗಳು ಆ ರೋಮಾಂಚಕ ಕ್ಷಣಗಳನ್ನು ಈಗಲೂ ಹಿಡಿದಿಟ್ಟಿವೆ.

1923ರಲ್ಲಿ ಆಂಧ್ರಪ್ರದೇಶದ ಕಾಕಿನಾಡದಲ್ಲಿ 38ನೇ ಕಾಂಗ್ರೆಸ್ ಅಧಿವೇಶನ ನಡೆದಿತ್ತು. ಆ ವೇಳೆಯೂ ನೆಹರು ಮತ್ತು ಗಂಗಾಧರರಾವ್ ದೇಶಪಾಂಡೆ ಇಬ್ಬರೂ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಮುಂದಿನ ಅಧಿವೇಶನ ಕರ್ನಾಟಕದಲ್ಲಿ ನಡೆಸುವ ಬಗ್ಗೆ ನಿರ್ಧರಿಸಲಾಗಿತ್ತು. ಆದರೆ, ಕರ್ನಾಟಕದಲ್ಲಿ ಎಲ್ಲಿ ಆಗಬೇಕು ಎಂಬುದು ತೀರ್ಮಾನವಾಗಿರಲಿಲ್ಲ.‌ ವಿಜಯಪುರದಲ್ಲಿ ಮುಖಂಡ ಶ್ರೀನಿವಾಸ ಕೌಜಲಗಿ ಅವರ ಮನೆಯಲ್ಲಿ ನಡೆದ ಸಭೆಯಲ್ಲಿ ಅವರು ನಮ್ಮಲ್ಲೇ ಆಗಲಿ ಎಂದಿದ್ದರು. ಬಳಿಕ ಹುಬ್ಬಳ್ಳಿಯಲ್ಲಿ ನಡೆದ ಕರ್ನಾಟಕ ಪ್ರಾಂತೀಯ ಸಭೆಯಲ್ಲಿ ಹುಬ್ಬಳ್ಳಿ-ಧಾರವಾಡ ನಾಯಕರು ಇಲ್ಲಿಯೇ ಆಗಲಿ ಎಂದು ವಾದಿಸಿದ್ದರು.‌

ಆದರೆ, ಆ ಕಾಲದಲ್ಲಿ ದೊಡ್ಡ ವರ್ತಕರಾಗಿದ್ದ ಗಂಗಾಧರರಾವ್ ದೇಶಪಾಂಡೆ ಅವರು ದಾನಿಗಳಿಂದ 72 ಸಾವಿರ ರೂ. ಹಣ ಸಂಗ್ರಹಿಸಿಕೊಂಡು ಹೋಗಿ, “ಬೆಳಗಾವಿ ಮೂರು ರಾಜ್ಯಗಳ ಸಂಪರ್ಕ ಕೊಂಡಿ. ಈಗಾಗಲೇ ಅಧಿವೇಶನಕ್ಕೆ ನಾವು ಸಿದ್ಧತೆ ನಡೆಸಿದ್ದು, ಇದೇ ಸೂಕ್ತ” ಎಂದು ಪ್ರಬಲವಾಗಿ ವಾದಿಸಿ ಅಂತಿಮಗೊಳಿಸಲು ಯಶಸ್ವಿಯಾಗಿದ್ದರು. ಅಷ್ಟೇ ಅಲ್ಲ, ಮಹಾತ್ಮ ಗಾಂಧೀಜಿ ಅವರು ಹಿಂದಿನ ಯಾವುದೇ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಲು ಮುಂದೆ ಬಂದಿರಲಿಲ್ಲ. ಅಧ್ಯಕ್ಷತೆ ವಹಿಸಲು ನಿರಾಕರಿಸಿದ್ದರು.‌ ಆದರೆ, ಗಂಗಾಧರರಾವ್ ದೇಶಪಾಂಡೆ ಅವರು‌ ಗಾಂಧೀಜಿ ಮನವೊಲಿಸಿ ಅಧ್ಯಕ್ಷರಾಗುವಂತೆ ಮಾಡಿದ್ದು ಅಪರೂಪವೆನಿಸಿತ್ತು.

ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಬೇಕು. ದೇಶದ ಜನ ಹಿಂಸೆಯ ಮಾರ್ಗ ತುಳಿಯಬಾರದು. ಅಸಹಕಾರ ಚಳವಳಿ ಮೂಲಕ ಬ್ರಿಟಿಷರು ದೇಶ ಬಿಟ್ಟು ತೊಲಗುವಂತೆ ಮಾಡಬೇಕು’ ಎಂದು ಗಾಂಧೀಜಿ ಬೆಳಗಾವಿ ಅಧಿವೇಶನದಲ್ಲಿ ಜನತೆಗೆ ಕರೆ ಕೊಟ್ಟರು. ಜೊತೆಗೆ ದೇಶದ ಜನರಲ್ಲಿ ಒಗ್ಗಟ್ಟು, ಸ್ಥಳೀಯ ಭಾಷೆಯ ಮಹತ್ವ ಹಾಗೂ ಅಸ್ಪೃಶ್ಯತೆ ಕುರಿತು ಮಹತ್ವದ ಭಾಷಣ ಮಾಡಿದ್ದರು. ಅಧಿವೇಶನದ ಉಸ್ತುವಾರಿ ತಂಡದಲ್ಲಿದ್ದ ಗಂಗಾಧರರಾವ್ ದೇಶಪಾಂಡೆ ಅವರನ್ನು ‘ಕರ್ನಾಟಕದ ಸಿಂಹ‘ ಎಂದು ಮಹಾತ್ಮ ಗಾಂಧೀಜಿ ಅಧಿವೇಶನದಲ್ಲಿ ಬಿರುದು ನೀಡಿದರು.

ಗಂಗಾಧರ ದೇಶಪಾಂಡೆ
ಗಂಗಾಧರರಾವ್ ದೇಶಪಾಂಡೆ

ಗಂಗಾಧರರಾವ್ ದೇಶಪಾಂಡೆ ಅವರ ಮನೆಯ ಭಾಷೆ ಮರಾಠಿಯಾಗಿದ್ದರೂ ಕನ್ನಡ ಭಾಷೆಯ ಮೇಲೆ ಅವರಿಗೆ ಇನ್ನಿಲ್ಲದ ಪ್ರೀತಿ ಮತ್ತು ನಿಷ್ಠೆ ಇತ್ತು. ಪುಣೆ ಕಾಲೇಜಿನಲ್ಲಿ ಕನ್ನಡ ಕಡೆಗಣಿಸಿದ್ದಕ್ಕೆ ಸಿಡಿದೆದ್ದಿದ್ದರು. ಭಾಷಾವಾರು ಪ್ರಾಂತ ರಚನೆ ವೇಳೆ ಬೆಳಗಾವಿ ಕರ್ನಾಟಕಕ್ಕೆ ಸೇರಬೇಕು ಅಂತ ಗಂಗಾಧರರಾವ್ ದೇಶಪಾಂಡೆ ದೊಡ್ಡಮಟ್ಟದ ಧ್ವನಿ ಎತ್ತಿದ್ದರು. ಸ್ವಾತಂತ್ರ್ಯಾ ನಂತರ ಗಂಗಾಧರರಾವ್ ದೇಶಪಾಂಡೆ ಅವರಿಗೆ ಕೇಂದ್ರ ಗೃಹ ಸಚಿವರಾಗುವ ಅವಕಾಶ ಒದಗಿ ಬಂದಿತ್ತು. ಆದರೆ, ಅದನ್ನು ಸಾರಾಸಗಟಾಗಿ ತಿರಸ್ಕರಿಸಿದ್ದರು. ಒಮ್ಮೆ ಅವರು ಜೈಲಿನಲ್ಲಿದ್ದಾಗ, ಉಪವಾಸ ಮಾಡಿದರೆ ನಿಮ್ಮ ಇನಾಮು ಜಪ್ತಿ ಮಾಡುತ್ತೇವೆ ಎಂದು ಬ್ರಿಟಿಷರು ಹೆದರಿಸಿದ್ದಾಗ ಅದಕ್ಕೆ ಅವರು ಜಗ್ಗಿರಲಿಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಜಮೀನು, ಆಸ್ತಿಯನ್ನು ಅವರು ಕಳೆದುಕೊಂಡಿದ್ದರು. ಸಕ್ರಿಯ ರಾಜಕಾರಣದಲ್ಲಿ ಗಂಗಾಧರರಾವ್ ದೇಶಪಾಂಡೆ ತೊಡಗಿಸಿಕೊಂಡಿದ್ದರೆ ಅವರನ್ನು ಜವಾಹರಲಾಲ್ ನೆಹರು ಸಮವಾಗಿ ಇತಿಹಾಸದಲ್ಲಿ ನೋಡುತ್ತಿದ್ದರು ಎನ್ನುವ ಮಾತುಗಳಿವೆ.

ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ನೆನಪಿಗಾಗಿ ಬೆಳಗಾವಿ ನಗರ ರಾಮತೀರ್ಥ ನಗರದಲ್ಲಿ ನೂತನವಾಗಿ ನಿರ್ಮಿಸಿರುವ ಗಂಗಾಧರರಾವ್ ದೇಶಪಾಂಡೆ ಸ್ಮಾರಕ ಭವನ ಮತ್ತು ಫೋಟೋ ಗ್ಯಾಲರಿಯನ್ನು ಮುಖ್ಯಮಂತ್ರಿ‌ ಸಿದ್ದರಾಮಯ್ಯ ಅವರು
ಡಿ.26ರಂದು ಉದ್ಘಾಟಿಸಲಿದ್ದಾರೆ. ಹುದಲಿಯಲ್ಲಿ ಈಗಾಗಲೇ ನಿರ್ಮಿಸಿರುವ ಸ್ಮಾರಕ ಭವನವನ್ನು ದುರಸ್ತಿ ಪಡಿಸುವ ಕಾರ್ಯ ನಡೆಯುತ್ತಿದೆ. ಕರ್ನಾಟಕಕ್ಕೆ ಗಾಂಧಿ ನಂಟನ್ನು ಬೆಳೆಸಿದ ಮೇರು ವ್ಯಕ್ತಿತ್ವದ ಗಂಗಾಧರರಾವ್ ದೇಶಪಾಂಡೆ ಅವರ ಕುರಿತು ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ಅವರ ಬದುಕಿನ ಬಗ್ಗೆ ಶಾಲಾ-ಕಾಲೇಜುಗಳ ಪಠ್ಯದಲ್ಲಿ ಸೇರಿಸುವ ಜವಾಬ್ದಾರಿ ಸರ್ಕಾರದ ಮುಂದಿದೆ.

ಪ್ರಾದೇಶಿಕತೆಗೆ ಮಹತ್ವ ನೀಡಿದ್ದ ಅಧಿವೇಶನ

ಸ್ಥಳೀಯ ಭಾಷೆ ಹಾಗೂ ಸಂಸ್ಕೃತಿಗಳ ಬಗ್ಗೆ ಮಹಾತ್ಮ ಗಾಂಧೀಜಿಯವರಿಗೆ ಇದ್ದ ಕಳಕಳಿಯನ್ನು ಬೆಳಗಾವಿ ಅಧಿವೇಶನದಲ್ಲಿ ಕಾಣಬಹುದಾಗಿದೆ. ಹುಯಿಲಗೋಳ ನಾರಾಯಣರಾಯರು ರಚಿಸಿದ್ದ ‘ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು..’ ಹಾಡನ್ನು ಬಾಲಕಿಯಾಗಿದ್ದ ಗಂಗೂಬಾಯಿ ಹಾನಗಲ್ ಅವರು ಅಧಿವೇಶನದಲ್ಲಿ ಹಾಡಿ ಎಲ್ಲರ ಪ್ರಶಂಸೆ ಗಳಿಸಿದ್ದು ಸಹ ಇಲ್ಲಿನ ಐತಿಹಾಸಿಕ ಘಟನೆ. ಇದೇ ಸಂದರ್ಭದಲ್ಲಿ ಕನ್ನಡ ಚಳವಳಿಗೂ ಶಕ್ತಿ ಲಭಿಸಿತ್ತು.

ಖಾದಿ ಪ್ರಚಾರ ಮಾಡುವ ಉದ್ದೇಶದಿಂದ ಹೊರಟ ಗಾಂಧೀಜಿ ಅವರು ಖಾದಿ ಬಟ್ಟೆ – ಅದನ್ನು ತಯಾರಿಸುವ ವಿಧಾನದ ಬಗ್ಗೆ ಹೇಳಿದರು. ಗಾಂಧೀಜಿ ಪ್ರೇರಣೆಯಿಂದ ಬೆಳಗಾವಿ, ಧಾರವಾಡ ಸುತ್ತಮುತ್ತ ಖಾದಿ ನೇಯ್ಗೆಯ ಕೇಂದ್ರಗಳು ಸ್ಥಾಪನೆಯಾದವು. ಇದರಲ್ಲಿ ಉತ್ತರ ಕರ್ನಾಟಕದ ಧಾರವಾಡ ಜಿಲ್ಲೆಯ ಪುಟ್ಟ ಹಳ್ಳಿ ಗರಗ ಕೂಡ ಒಂದು. ಈ ಗ್ರಾಮವು ಕೈಯಿಂದ ನೇಯ್ದ ಖಾದಿ ರಾಷ್ಟ್ರಧ್ವಜಗಳಿಗೆ ಈಗಲೂ ಹೆಸರುವಾಸಿಯಾಗಿದೆ. ಗಾಂಧಿ ಸಂಪ್ರದಾಯ ಮತ್ತು ಮೌಲ್ಯಗಳನ್ನು ಜೀವಂತವಾಗಿಡಲು, ಧ್ವಜಗಳನ್ನು ತಯಾರಿಸಲು ಯಾವುದೇ ಆಧುನಿಕ ಯಂತ್ರೋಪಕರಣಗಳನ್ನು ಬಳಸದೇ ಕೈಯಿಂದ ಇಲ್ಲಿ ನೇಯಲಾಗುತ್ತದೆ. ದಿಲ್ಲಿಯಿಂದ ಗಲ್ಲಿಯವರೆಗೆ ಅಂದರೆ ಸಂಸತ್ ಭವನ, ರಾಷ್ಟ್ರಪತಿ ಭವನ, ಕೆಂಪು ಕೋಟೆ ಮತ್ತು ಸುಪ್ರೀಂ ಕೋರ್ಟ್‌ನಿಂದ ರಾಜ್ಯ ವಿಧಾನಸಭೆಗಳು ಮತ್ತು ಕಾರ್ಯದರ್ಶಿಗಳವರೆಗೆ ಎಲ್ಲೆಡೆ ಸರ್ಕಾರಿ ಕಟ್ಟಡಗಳ ಮೇಲೆ ಹಾರುವ ತ್ರಿವರ್ಣ ಧ್ವಜವು ಈ ಸಣ್ಣ ಹಳ್ಳಿ ‘ಗರಗ’ದಿಂದ ತಯಾರಾದದ್ದು.

ಗರಗ 1
ಗರಗ ಗ್ರಾಮದ ಖಾದಿ ಕೇಂದ್ರ

ಕಾಂಗ್ರೆಸ್ ಅಧಿವೇಶನದ ಜಾಗವನ್ನು 2002ರಲ್ಲಿ ಸ್ಮಾರಕವಾಗಿ ಅಭಿವೃದ್ಧಿ ಮಾಡಲಾಗಿದೆ. ಸ್ವಾತಂತ್ರ್ಯಯೋಧ ಆರ್.ಎಚ್.ಕುಲಕರ್ಣಿ ನೇತೃತ್ವದಲ್ಲಿ ಹಲವು ಸೇನಾನಿಗಳೇ ಇದಕ್ಕೆ ವೀರಸೌಧದ ರೂಪ ಕೊಟ್ಟಿದ್ದಾರೆ. ಅತ್ಯಂತ ವಿರಳವಾದ, ಐತಿಹಾಸಿಕ ಕ್ಷಣದ ಹಲವು ಫೋಟೊಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ಗಾಂಧಿ ಪ್ರತಿಮೆ ಹಾಗೂ ಮುಂಚೂಣಿ ನಾಯಕರ ಉಬ್ಬುಶಿಲ್ಪಗಳು ಗಮನ ಸೆಳೆಯುತ್ತವೆ. ಗಾಂಧೀಜಿ ಬಾಲ್ಯ, ಅವರು ಕಲಿತ ಶಾಲೆ, ಬೆಳೆದ ಮನೆಯ ಚಿತ್ರಗಳಿವೆ. ಬೆಳಗಾವಿಯ ಮಣ್ಣು ಮುಟ್ಟಿ ನಮಸ್ಕರಿಸುವ ಅವರ ಫೋಟೊ ರೋಮಾಂಚನ ಉಂಟು ಮಾಡುವಂತಿದೆ. ಗಾಂಧಿ ಅವರು ‘ಗಾಂಧಿ ಟೋಪಿ’ ಧರಿಸಿದ ಏಕಮಾತ್ರ ಚಿತ್ರ ಲಭ್ಯವಿದ್ದು, ಅದನ್ನೂ ಇಲ್ಲಿ ಕಾಣಬಹುದು. ಬೆಳಗಾವಿಯ ಅಧಿವೇಶನದಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಯೋಧರ ಮನೆಗಳಿಂದಲೇ ಆ ಎಲ್ಲ ಚಿತ್ರಗಳನ್ನು ಸಂಗ್ರಹಿಸಲಾಗಿದೆ.

ಬೆಳಗಾವಿ ಕಾಂಗ್ರೆಸ್‌ ಅಧಿವೇಶನ ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಆಡಳಿತ ಪಕ್ಷವಾಗಿ ಕಾಂಗ್ರೆಸ್‌ ಸರ್ಕಾರವೇ ಇರುವುದರಿಂದ ಶತಮಾನೋತ್ಸವದ ಐತಿಹಾಸಿಕ ಸಂದರ್ಭವನ್ನು ಇನ್ನೂ ಅದ್ಧೂರಿ ಹಾಗೂ ಅಭೂತಪೂರ್ವವಾಗಿ ಆಚರಿಸಲು ಕಾಂಗ್ರೆಸ್‌ ಪಕ್ಷ ಸಿದ್ಧತೆ ಮಾಡಿಕೊಂಡಿದೆ. ಡಿ.26, 27ರಂದು ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಈಗಾಗಲೇ 25 ಕೋಟಿ ರೂ.‌ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು‌ ಶತಮಾನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಹೆಚ್‌.ಕೆ.ಪಾಟೀಲ ತಿಳಿಸಿದ್ದಾರೆ.

ನೂರು ವರ್ಷದ ಹಿಂದೆ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ ಖರ್ಚಾಗಿದ್ದು 2,20,057 ರೂ. ಅಧಿವೇಶನಕ್ಕೆ ಸಂಗ್ರಹವಾಗಿದ್ದು ಒಟ್ಟು ಮೊತ್ತ 2,20,829 ರೂ. ಎಲ್ಲ ಖರ್ಚು ತೆಗೆದು ಕೊನೆಗೆ ಉಳಿದ 772 ರೂ. ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ‌ ಬಳಿ ಉಳಿಸಿಕೊಳ್ಳಲಾಗಿತ್ತು. ಆಗ ಯಾವುದೇ ದುಂದುವೆಚ್ಚವಾಗದಂತೆ ಅಷ್ಟೊಂದು ದೊಡ್ಡ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಗಿತ್ತು. ಆದರೆ, ಈಗ ಶತಮಾನೋತ್ಸವಕ್ಕೆ ಜನರ ತೆರಿಗೆ ಹಣದಲ್ಲಿ ಸರ್ಕಾರವೇ ಕೋಟಿ, ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಶತಮಾನ ಪೂರೈಸಿದ ಕಾಂಗ್ರೆಸ್ ಅಧಿವೇಶನವನ್ನು ಅರ್ಥಪೂರ್ಣವಾಗಿ ರಾಜ್ಯ ಮತ್ತು ದೇಶಕ್ಕೆ ನೆನಪಿಸುವ ಮಹತ್ತರವಾದ ಕಾರ್ಯಗಳಾವು ಕಾಣುತ್ತಿಲ್ಲ. 4 ಕೋಟಿ ರೂ ವೆಚ್ಚದಲ್ಲಿ ಸುವರ್ಣ ವಿಧಾನಸೌಧದ ಬಳಿ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದೆ. ಅಧಿವೇಶನ ನಡೆದ ಸ್ಥಳ ವೀರಸೌಧ, ಹುದಲಿ ಸೇರಿ ಜಿಲ್ಲೆಯಲ್ಲಿನ ಗಾಂಧೀಜಿ ಕುರುಹುಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ. ವರ್ಷವಿಡೀ ‘ಗಾಂಧಿ ಭಾರತ‘ ಹೆಸರಿನಲ್ಲಿ ಕಾರ್ಯಕ್ರಮ ನಡೆಸಲು ಮುಂದಾಗಿದೆ. ಇದಕ್ಕೆ ಖರ್ಚಿನ ಮೊತ್ತ ಇನ್ನೂ ಹೆಚ್ಚಾಗುವ ಸಾಧ್ಯತೆಯೇ ಹೆಚ್ಚಿದೆ.

ಗಾಂಧಿ ಬೆಳಗಾವಿ

ಕಾಂಗ್ರೆಸ್‌ ಪಕ್ಷ ದೇಶದಲ್ಲಿ ಸಂಕಷ್ಟದ ಸ್ಥಿತಿಯಲ್ಲಿದ್ದಾಗಲೆಲ್ಲಾ ಶಕ್ತಿ ತುಂಬುವ ಕೆಲಸ ಕರ್ನಾಟಕದಿಂದ ಆಗಿದೆ. ಕಾಂಗ್ರೆಸ್‌ ಮಹಾಧಿವೇಶನದ ಶತಮಾನೋತ್ಸವದ ಮೂಲಕ ಮತ್ತೊಂದು ಸಂದೇಶ ನೀಡುವ ತಯಾರಿಯೂ ನಡೆದಿದೆ. ದೇಶದ ಎಲ್ಲ ಕಾಂಗ್ರೆಸ್‌ ನಾಯಕರ ಸಮಾಗಮದ ಐತಿಹಾಸಿಕ ಕ್ಷಣಕ್ಕೆ ಬೆಳಗಾವಿ ಮತ್ತೆ ಸಾಕ್ಷಿಯಾಗುತ್ತಿದೆ. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸಭೆಯ 150 ಸದಸ್ಯರು ಒಳಗೊಂಡು ದೇಶದ ಮೂಲೆಮೂಲೆಗಳಿಂದ ಪಕ್ಷದ 300ಕ್ಕೂ ಹೆಚ್ಚು ಗಣ್ಯ ನಾಯಕರು ಬೆಳಗಾವಿಯಲ್ಲಿ ಒಟ್ಟುಗೂಡಲಿದ್ದಾರೆ. ”ಅಂದು ನಮ್ಮ ನಾಯಕರು ಸ್ವಾತಂತ್ರ್ಯ ಹೋರಾಟದ ನಾಯಕತ್ವ ವಹಿಸಿಕೊಂಡು ಈ ದೇಶಕ್ಕೆ ಮಾರ್ಗದರ್ಶನ ನೀಡಿದ್ದರು. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು ಮಹಾತ್ಮರಾದರು. ಇದನ್ನು ಸ್ಮರಿಸಲು ನಾವು ಕಾರ್ಯಕ್ರಮ ರೂಪಿಸಿದ್ದೇವೆ. ಇಂದಿನ ಪರಿಸ್ಥಿತಿಯಲ್ಲಿ ದೇಶವನ್ನು ಪಕ್ಷವನ್ನು ಯಾವ ದಿಕ್ಕಿನಲ್ಲಿ ಮುನ್ನಡೆಸಬೇಕು. ದೇಶಕ್ಕೆ ಯಾವ ರೀತಿ ಶಕ್ತಿ ತುಂಬಬೇಕು ಎಂದು ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಿದ್ದೇವೆ” ಎಂದು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಹೇಳಿದ್ದು ಇಲ್ಲಿ ಗಮನಾರ್ಹ.

ಮಹಾತ್ಮಾ ಗಾಂಧಿ ಅವರ ಸ್ಥಾನಕ್ಕೆ ಸಮವಾಗಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಈಗ ಕುಳಿತಿದ್ದಾರೆ. ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರಿಗೆ ಅಪಮಾನ ಮಾಡಿರುವ ವಿಚಾರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಲಾಗುವುದೇ ಎಂದು ಡಿ ಕೆ ಶಿವಕುಮಾರ್‌ ಅವರನ್ನು ಸುದ್ದಿಗಾರರು ಕೇಳಿದಾಗ, ”ಡಿ.27ರಂದು ನಡೆಯಲಿರುವ ಸಮಾವೇಶ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಎಂದು ಹೆಸರಿಟ್ಟಿದ್ದೇವೆ” ಎಂದು ಉತ್ತರಿಸಿದ್ದಾರೆ. ಇದು ಕೇವಲ ಹೆಸರಿಗಷ್ಟೇ ಸೀಮಿತವಾಗಬಾರದು. ನಡೆ, ನುಡಿ ಹಾಗೂ ಕಾರ್ಯದಲ್ಲಿ ಕಾಣಬೇಕು. ಮುಖ್ಯವಾಗಿ ಗಾಂಧಿ ನೆನಪಿನೊಂದಿಗೆ ನಡೆಯುತ್ತಿರುವ ಬೆಳಗಾವಿ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭ ಮುಂದಿನ ಪೀಳಿಗೆಗೆ ಹಿಂದಿನವರ ತ್ಯಾಗ, ಬಲಿದಾನಗಳನ್ನು ದಾಟಿಸುವ ಕೆಲಸವಾಗಬೇಕು ಎಂಬುದು ಜನರ ಆಶಯ.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಬೆಳಗಾವಿ : ವೇದಗಂಗಾ–ಘಟಪ್ರಭಾ ನದಿಗಳ ಅಬ್ಬರನಿಪ್ಪಾಣಿ – ಗೋಕಾಕ್ ಪ್ರದೇಶದಲ್ಲಿ ಪ್ರವಾಹದಿಂದ ಹಾನಿ

ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ವೇದಗಂಗಾ ನದಿ ಉಕ್ಕಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

Download Eedina App Android / iOS

X