ರಾಜ್ಯ ರಾಜಕಾರಣದಲ್ಲಿ ಬೆಳಗಾವಿಯ ಪ್ರಭಾವ ಎಂದಿಗೂ ಪ್ರಮುಖವಾಗಿದ್ದು, ಹಳೆಯದಾಗಿ ಹಲವಾರು ಬಾರಿ ಸರ್ಕಾರ ರಚನೆ-ಉರುಳಿಗೆ ಬೆಳಗಾವಿಯ ರಾಜಕೀಯ ಕಾರಣವಾಯಿತೆಂಬ ಉದಾಹರಣೆಗಳಿವೆ. ಮುಖ್ಯಮಂತ್ರಿಯ ಹುದ್ದೆ ಕಳೆದುಕೊಂಡ ಘಟನೆಗಳೂ ಕೂಡ ಬೆಳಗಾವಿಯಿಂದ ಪ್ರೇರಿತವಾಗಿವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ರಾಜ್ಯ ಮಟ್ಟದಲ್ಲಿ ರಾಜಕೀಯ ಸಮೀಕರಣಗಳನ್ನು ಬದಲಾಯಿಸಿದ ಉದಾಹರಣೆಗಳಾಗಿವೆ.
ಇದೀಗ ಬೈಲಹೊಂಗಲ ಉಪ ವಿಭಾಗಾಧಿಕಾರಿ ವರ್ಗಾವಣೆ ಮತ್ತು ನೇಮಕ ವಿಚಾರವು ರಾಮದುರ್ಗ ಕ್ಷೇತ್ರದ ಶಾಸಕ ಅಶೋಕ ಪಟ್ಟಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ರಾಜಕೀಯ ಸಮರಕ್ಕೆ ಹೊಸ ಜ್ವಾಲೆಯುಂಟುಮಾಡಿದೆ.
ಎರಡು ವರ್ಷಗಳಿಂದ ಬೈಲಹೊಂಗಲ ವಿಭಾಗೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರಭಾವತಿ ಫಕೀರಾಪುರ ಅವರ ವರ್ಗಾವಣೆಗೆ ಮುನ್ನವೇ ಹೊಸ ಉಪ ವಿಭಾಗಾಧಿಕಾರಿ ಹುದ್ದೆಗೆ ನೇಮಕ ಮಾಡಲು ನಾಲ್ವರು ಶಾಸಕರು ನಡೆಸಿರುವ ಲಾಬಿ ಕಾಂಗ್ರೆಸ್‌ನೊಳಗಿನ ಘರ್ಷಣೆಯಾಗಿ ಬದಲಾಗಿದೆ.
ರಾಮದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ ಪಟ್ಟಣ, ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ, ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮತ್ತು ಕಿತ್ತೂರಿನ ಶಾಸಕ ಬಾಬಾಸಾಹೇಬ್ ಪಾಟಿಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನಡುವೆ ಬೈಲಹೊಂಗಲ ಉಪ ವಿಭಾಗಾಧಿಕಾರಿ ನೇಮಕ ಹಾಗೂ ಜಿಲ್ಲೆಯಲ್ಲಿನ ಅಧಿಕಾರಿಗಳ ವರ್ಗಾವಣೆಯ ವಿಚಾರವು ಬೆಳಗಾವಿ ರಾಜಕಾರಣದಲ್ಲಿ ಹೊಸ ಕಲಹಕ್ಕೆ ಅವಕಾಶ ಮಾಡಿಕೊಟ್ಟಿದೆ.
ಬೈಲಹೊಂಗಲ ಉಪ ವಿಭಾಗಾಧಿಕಾರಿ ಹುದ್ದೆಗೆ ಇಬ್ಬರು ಅಧಿಕಾರಿಗಳು ಶಾಸಕರ ಮೂಲಕ ಲಾಬಿ ನಡೆಸುತ್ತಿದ್ದು, ಬಿಡಿಎಯಲ್ಲಿ ಜಗದೀಶ ಗಂಗಣ್ಣವರ ಮತ್ತು ಬುಡಾದಲ್ಲಿ ಪ್ರವೀಣ ಜೈನ್ ಅಧಿಕಾರಿಗಳ ಪರವಾಗಿ ಜಿಲ್ಲೆಯ ನಾಲ್ವರು ಶಾಸಕರು ಲಾಬಿ ನಡೆಸುತ್ತಿದ್ದು, ಪ್ರವೀಣ ಜೈನ್ ಪರವಾಗಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ಮತ್ತು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೂಲಕ ಲಾಬಿ ನಡೆಯುತ್ತಿದೆ ಎನ್ನಲಾಗಿದೆ. ಜಗದೀಶ ಗಂಗಣ್ಣವರ ಪರವಾಗಿ ಸವದತ್ತಿ ಶಾಸಕ ವಿಶ್ವಾಸ ವೈದ್ಯ ಮತ್ತು ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟಿಲ್ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮೂಲಕ ಲಾಬಿ ನಡೆಸುತ್ತಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಒಪ್ಪಿಗೆಯಿಲ್ಲದೆ ಹಲವಾರು ವರ್ಗಾವಣೆ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದ್ದು, ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಜಾರಕಿಹೊಳಿ ಇತ್ತೀಚಿನ ವರ್ಗಾವಣೆ ಪ್ರಕ್ರಿಯೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅವರು ಈ ಹಿಂದೆ ಖಾಸಗಿಯಾಗಿ ಅತೃಪ್ತಿ ವ್ಯಕ್ತಪಡಿಸಿದ್ದರೂ, ಈ ಬಾರಿ ಅವರು ಮುಖ್ಯಮಂತ್ರಿಯ ಸಮ್ಮುಖದಲ್ಲಿಯೇ ನೇರವಾಗಿ ತಮ್ಮ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎನ್ನುವುದು ಸಚಿವರ ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಸತೀಶ್ ಜಾರಕಿಹೊಳಿ, “ಜಿಲ್ಲೆಯಲ್ಲಿ 27 ಇಲಾಖೆಯ ಅಧಿಕಾರಿಗಳ ವರ್ಗಾವಣೆ ಲಿಸ್ಟ್ ಮಾಡಲಾಗಿದೆ. ಈ ಪೈಕಿ ಒಬ್ಬ ಅಧಿಕಾರಿ ವರ್ಗಾವಣೆಯ ಪಟ್ಟಿ ಮಾತ್ರ ನನ್ನ ಬಳಿ ಇದೆ. ಬೆಂಗಳೂರಿನ ಸಚಿವರು ಶಾಸಕರು ಹೇಳಿದ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ” ಎಂದು ಮಾಧ್ಯಮದ ಮೂಲಕ ತಿಳಿಸಿದ್ದಾರೆ.
ರಾಮದುರ್ಗದ ಶಾಸಕ ಅಶೋಕ ಪಟ್ಟಣ, ಸಿದ್ದರಾಮಯ್ಯನವರ ಆಪ್ತನೆಂದು ಕಾಂಗ್ರೆಸ್ ವಲಯದಲ್ಲಿ ಗುರುತಿಸಿಕೊಂಡವರು. ಆದರೆ, ಅವರು ತಮ್ಮ ಕ್ಷೇತ್ರಕ್ಕಿಂತ ಹೆಚ್ಚು ಕಾಲ ಬೆಂಗಳೂರಿನಲ್ಲಿ ಕಳೆಯುತ್ತಾರೆ ಎಂಬ ಟೀಕೆಗಳು ಪಕ್ಷದ ಒಳಗೇ ಕೇಳಿಬರುತ್ತಿವೆ. ಆದರೆ ಅದನ್ನೇ ಅವರು ಶಕ್ತಿಯ ಕೇಂದ್ರವಾಗಿ ಬಳಸುತ್ತಿದ್ದಾರೆ ಎಂಬುದು ಈ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ಪಷ್ಟವಾಗಿದೆ.
2023ರಲ್ಲಿ ವರ್ಗಾವಣೆ ವಿಚಾರವಾಗಿ ಸಾಕಷ್ಟು ಬಾರಿ ಡಿ ಕೆ ಶಿವಕುಮಾರ್ ಹಸ್ತಕ್ಷೇಪ ಬೆಳಗಾವಿ ಜಿಲ್ಲೆಯ ಅಧಿಕಾರಿಗಳ ವರ್ಗಾವಣೆಯಲ್ಲಿ ಆಗಿದೆ. ಹಾಗೆಂದು, ನನ್ನ ಮೌನ ದೌರ್ಬಲ್ಯ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿರುದ್ಧ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಈ ರೀತಿಯಾಗಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಾರದೆ ಅಧಿಕಾರಗಳ ನೇಮಕ ಅಥವಾ ವರ್ಗಾವಣೆ ಮಾಡುವುದು ಜಿಲ್ಲೆಯ ಆಡಳಿತದ ಮೇಲೆ ಪರಿಣಾಮ ಬೀರುತ್ತದೆ ಎನ್ನುವದು ಕ್ಷೇತ್ರದ ಜನರ ಅಭಿಪ್ರಾಯವಾಗಿದೆ.
ಈ ವಿಚಾರ ಕೇವಲ ಒಂದು ಕ್ಷೇತ್ರ ಅಥವಾ ವೈಯಕ್ತಿಕ ಅಸಮಾಧಾನವಲ್ಲ, ಬೆಳಗಾವಿಯ ಸ್ಥಳೀಯ ರಾಜಕಾರಣ ರಾಜ್ಯ ರಾಜಕೀಯದ ಮೇಲೆ ಎಷ್ಟು ಪರಿಣಾಮ ಬೀರುವ ಸಾಧ್ಯತೆಗಳು ಇವೆ ಎಂಬುದನ್ನು ತೋರಿಸುತ್ತದೆ.
ವರ್ಗಾವಣೆ ಪ್ರಕ್ರಿಯೆಯಲ್ಲಿ ರಾಜಕಾರಣಿಗಳ ಪ್ರಭಾವ ಸಾರ್ವತ್ರಿಕ ಮೌಲ್ಯಗಳಿಗೆ ಎಸೆಯುವ ಸವಾಲು
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿಕಾರಿಗಳ ವರ್ಗಾವಣೆ ವಿವಾದವು ಬೆಳಗಾವಿ ಆಡಳಿತ ಎಂಬದು ಶಾಸಕರ ಲಾಬಿಗೆ ಪರ್ಯಾಯವಾಗಿಬಿಟ್ಟಿದೆಯೇ? ನ್ಯಾಯಯುತವಾದ ಆಡಳಿತ ವ್ಯವಸ್ಥೆ ಎಂಬ ಆಶಯವಿಲ್ಲದೆ, ಪಕ್ಷಪಾತದ ರಾಜಕಾರಣದಿಂದ ಇಡೀ ವ್ಯವಸ್ಥೆ ನಡೆಯುತ್ತಿದೆಯೇ ಎಂಬ ಭಾವ ಜನರಲ್ಲಿ ಮೂಡುತ್ತಿದೆ.
ಬೈಲಹೊಂಗಲ ಉಪವಿಭಾಗಾಧಿಕಾರಿ ಹುದ್ದೆಗೆ ಸಂಬಂಧಿಸಿದ ನೇಮಕಾತಿ ವಿಚಾರ ಆಡಳಿತಾತ್ಮಕ ವಿಷಯವಾಗಿದ್ದರೂ, ಇಂದು ಇದು ರಾಜಕೀಯ ಲಾಬಿ ತಂತ್ರದ ಪ್ರದರ್ಶನವಾಗಿಬಿಟ್ಟಿದೆ. ಶಾಸಕರು ತಮ್ಮ ಪ್ರಭಾವ ಬಳಸಿ ಯಾರನ್ನು ನೇಮಿಸಬೇಕು ಎಂಬ ಬಗ್ಗೆ ಲಾಬಿ ನಡೆಸುವುದು, ಸಚಿವರು ತಮ್ಮ ಅಧಿಕಾರ ಮೀರಿ ನಿರ್ಲಕ್ಷಿತರಾಗುವುದು, ಮುಖ್ಯಮಂತ್ರಿಯ ಆಪ್ತರು ನಿರ್ಧಾರಗಳನ್ನು ಕೈಹಿಡಿಯುವುದು ಈ ಎಲ್ಲವೂ ಸಾರ್ವತ್ರಿಕ ಮೌಲ್ಯಗಳಿಗೆ ಎಸೆಯುವ ಸವಾಲಾಗಿದೆ.
ಜನಪ್ರತಿನಿಧಿಗಳ ಪ್ರಭಾವವು ಪ್ರಜಾಪ್ರಭುತ್ವಕ್ಕೆ ನಿಕೃಷ್ಟವಾಗಬಾರದು. ಶಾಸಕರು ತಮ್ಮ ಕ್ಷೇತ್ರಕ್ಕೆ ಸದುಪಯೋಗವಾಗುವ ಅಧಿಕಾರಿಗಳನ್ನು ಬಯಸುವುದು ಅರ್ಥಪೂರ್ಣ. ಆದರೆ, ಅದು ಸಾರ್ವಜನಿಕ ಹಿತಕ್ಕಿಂತ ವ್ಯಕ್ತಿಗತ ನಿಷ್ಠೆ ಆಧಾರವಾಗಬಾರದು. ಇಂತಹ ಲಾಬಿ ನಡವಳಿಕೆಗಳು ಯಂತ್ರದಂತೆ ನಡೆದಾಡಬೇಕಾದ ಆಡಳಿತ ವ್ಯವಸ್ಥೆಯನ್ನು ರಾಜಕೀಯ ಲಾಭಗಳಿಗೆ ಒಳಪಡಿಸುತ್ತವೆ.
ಸಚಿವ ಸತೀಶ್ ಜಾರಕಿಹೊಳಿ ಅವರ ಅಸಮಾಧಾನವನ್ನು ತಿರಸ್ಕರಿಸದೆ ನೋಡಲಾಗದು. ಜಿಲ್ಲಾಧಿಕಾರಿ ಹುದ್ದೆಯಂತಹ ನೈತಿಕ ಪ್ರಮಾಣದ ಹುದ್ದೆಗೆ ಸಂಬಂಧಿಸಿದ ನಿರ್ಧಾರಗಳಲ್ಲಿ ಜಿಲ್ಲೆ ಉಸ್ತುವಾರಿಯವರ ಅಭಿಪ್ರಾಯಕ್ಕೂ ಬೆಲೆ ಇರಬೇಕು. ಆದರೆ ಇಲ್ಲಿನ ಸರಣಿಯಲ್ಲಿ ಅವರು ಕಡೆಗಣನೆಯಾದಂತೆ ಭಾಸವಾಗುತ್ತಿದೆ. ಇದು ಸಚಿವರ ಹುದ್ದೆಯ ಗೌರವವನ್ನೂ ಪ್ರಶ್ನಿಸುತ್ತದೆ.
ಇದನ್ನೂ ಓದಿದ್ದೀರಾ? ಬಿಪಿಎಲ್ ಕುಟುಂಬಗಳಿಗೆ ‘ಇಂದಿರಾ ಆಹಾರ ಕಿಟ್’ ವಿತರಣೆಗೆ ಸರ್ಕಾರ ಚಿಂತನೆ; ತಗ್ಗುವುದೇ ಮಧ್ಯವರ್ತಿಗಳ ಹಾವಳಿ
ಸರ್ಕಾರದ ಮೂಲ ಧ್ಯೇಯ, ಜನಸೇವೆ ಆಗಬೇಕೇ ಹೊರತು ಶಾಸಕರ ನಡುವಿನ ಬಲ ಪ್ರದರ್ಶನವಾಗಬಾರದು.
ಜನತೆ ಈ ವ್ಯವಸ್ಥೆಗೆ ಮತ ಹಾಕಿದ್ದು ಉತ್ತಮ ಆಡಳಿತಕ್ಕಾಗಿ, ಸರ್ಕಾರದ ಅಧಿಕಾರಿಗಳ ನಿಯುಕ್ತಿ ಅಥವಾ ವರ್ಗಾವಣೆಗೆ ಪಕ್ಷಪಾತಿ ನಾಯಕರ ಲಾಬಿಗಾಗಿ ಅಲ್ಲ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರಿಗಳ ನೇಮಕ ಮತ್ತು ವರ್ಗಾವಣೆಯ ಹಿಂದೆ ನಡೆಯುತ್ತಿರುವ ಆಟಗಳು, ಸಮರ್ಥ ಆಡಳಿತದ ಭರವಸೆಯೇ ಕುಸಿಯುವಂತೆ ಮಾಡಬಲ್ಲವು. ಆದ್ದರಿಂದ ಈ ವಿಚಾರ ಕಾಂಗ್ರೆಸ್ ಪಕ್ಷ ಹಾಗೂ ಅದರ ನಾಯಕರಿಗೆ ಇದು ಎಚ್ಚರಿಕೆಯ ಘಂಟೆಯಾಗಿ ಹೊರಹೊಮ್ಮಬೇಕು.
ಸಾರ್ವಜನಿಕ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡದಿದ್ದರೆ ಪಕ್ಷದ ಒಳಘರ್ಷಣೆಗೆ ಬಲಿಯಾಗುತ್ತಿರುವ ಆಡಳಿತ ಕ್ರಮಗಳು ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಮಾತ್ರವಲ್ಲ, ಆಡಳಿತಾತ್ಮಕವಾಗಿಯೂ ವಿಫಲವಾಗಬಹುದು ಎಂಬುದನ್ನು ಪಕ್ಷದ ನಾಯಕರು ಅರಿತು ಈ ಸಮಸ್ಯೆಯನ್ನು ಪರಿಹರಿಸಬೇಕು. ರಾಜಕಾರಣಿಗೆ ಜನಸೇವೆಯೇ ಮೊದಲ ಆದ್ಯತೆಯಾಗಬೇಕಿದೆ.

ಸುನಿಲ್ ಹಂಪನ್ನವರ
ಬೆಳಗಾವಿ ಜಿಲ್ಲಾ ಸಂಯೋಜಕರು