16ನೇ ವಿಧಾನಸಭೆಯ ಎರಡನೇ ಅಧಿವೇಶನ (ಚಳಿಗಾಲ ಅಧಿವೇಶನ) ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿದ್ದು, ಎರಡನೇ ದಿನದ ಕಲಾಪದಲ್ಲಿ ಒಂದು ಚುನಾವಣೆ ಪ್ರಸ್ತಾವ ಮತ್ತು ಎರಡು ವಿಧೇಯಕಗಳನ್ನು ಮಂಡಿಸಲಾಯಿತು.
“1965ರ ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳ ಅಧಿನಿಯಮ ಕಲಂ 32 ಬಿ ಮೇರೆಗೆ ವರ್ಗಾಯಿಸಬಹುದಾದ ಒಂಟಿ ಮತದ ಮೂಲಕ ರಾಜ್ಯ ಗ್ರಂಥಾಲಯ ಪ್ರಾಧಿಕಾರಕ್ಕೆ ನಾಲ್ಕು ಜನರನ್ನು ಚುನಾಯಿಸಬೇಕು” ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ ಅವರು ಚುನಾವಣೆ ಪ್ರಸ್ತಾವ ಮಂಡಿಸಿದರು. ಸಭಾಧ್ಯಕ್ಷ ಯು ಟಿ ಖಾದರ್ ಅವರು ಕಾನೂನು ಸಚಿವರ ಪ್ರಸ್ತಾವವನ್ನು ಅಂಗೀಕರಿಸಿದರು.
ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಅವರು, “2023 ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವೆ ತಿದ್ದುಪಡಿ ವಿಧೇಯಕ ಮಂಡಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?
ಯೋಜನೆ ಮತ್ತು ಸಾಂಖಿಕ ಸಚಿವ ಡಿ. ಸುಧಾಕರ್ ಪರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ ಅವರು, 2023ನೇ ಸಾಲಿನ ಕರಾವಳಿ ಅಭಿವೃದ್ಧಿ ಮಂಡಳಿ ವಿಧೇಯಕ ಮಂಡಿಸಿದರು.
ಸಭಾಧ್ಯಕ್ಷ ಯು ಟಿ ಖಾದರ್ ಅವರು ಎರಡು ವಿಧೇಯಕಗಳನ್ನು ಸಭೆಯ ಮತಕ್ಕೆ ಹಾಕಿ ಅಂಗೀಕರಿಸಿದರು. ಬಳಿಕ ಮಾತನಾಡಿದ ಅವರು, “ಎರಡ್ಮೂರು ದಿನದ ನಂತರ ಈ ವಿಧೇಯಕಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಎಲ್ಲ ಶಾಸಕರು ಭಾಗಿಯಾಗಬೇಕು. ಇದರ ಸದುಪಯೋಗ ಪಡೆಯಬೇಕು” ಎಂದು ವಿನಂತಿಸಿದರು.