ಇತ್ತೀಚೆಗಷ್ಟೇ ಬೆಂಗಳೂರಿನ ನಾಗವಾರದಲ್ಲಿ ಕೊಡಗು ಮೂಲದ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನಲ್ಲಿ ಮತ್ತೊಬ್ಬ ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತನನ್ನು ಆನೇಕಲ್ ಪಟ್ಟಣದ ಪ್ರವೀಣ್ ಗೌಡ ಬೇಲೂರು ಎಂದು ಹೇಳಲಾಗಿದೆ.
ಆನೇಕಲ್‌ನ ಎಸ್‌ವಿಎಂ ಶಾಲೆಯ ಬಳಿ ಪ್ರವೀಣ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ತಮ್ಮ ಸಾವಿಗೂ ಮುನ್ನ ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ತಮ್ಮ ಸಾವಿಗೆ ಆನೇಕಲ್‌ನ ಬಿಜೆಪಿ ಅಧ್ಯಕ್ಷ ಸೇರಿದಂತೆ ಹಲವರು ಕಾರಣವೆಂದು ಹೇಳಿದ್ದಾರೆ. ಅವರುಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ.
ತಮ್ಮ ಸಾವಿಗೆ ಸಮಂದೂರ್ ಕಿರಣ್, ಗೋಕುಲ್ ಫ್ಯಾಷನ್ ಹರೀಶ್, ಭಾಸ್ಕರ್, ನಾರಾಯಣಪ್ಪ, ದೊಡ್ಡಹಾಗಡೆ ಮಧುಗೌಡ, ಸರವಣ ಕಾರಣವೆಂದು ವಿಡಿಯೋದಲ್ಲಿ ಹೇಳಿದ್ದಾರೆ. ಮುಖ್ಯವಾಗಿ ಕಿರಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಹೆಸರಿಸಲಾದವರಲ್ಲಿ ಯಾರನ್ನೇ ಬಿಟ್ಟರೂ ಪರವಾಗಿಲ್ಲ. ಆದರೆ, ಕಿರಣ್ ಎಂಬಾತನನ್ನು ಬಿಡುಬಾರದು. ಆತನಿಗೆ ಶಿಕ್ಷೆಯಾಗಬೇಕು. ಆತ ಹಲವಾರು ಹೆಣ್ಣು ಮಕ್ಕಳಿಗೆ ಕಿರುಕುಳ ಕೊಟ್ಟಿದ್ದಾನೆ. ಆತ ಮಾಡಿರುವ ಕೃತ್ಯಗಳು ನನ್ನ ಮೇಲೆ ಬಂದಿವೆ ಎಂದು ವಿಡಿಯೋದಲ್ಲಿ ಪ್ರವೀಣ್ ಆರೋಪಿಸಿದ್ದಾರೆ.
ಕಿರಣ್ ಮಾಡಿದ್ದ ಕೃತ್ಯಗಳಿಗೆ ನಾನು ತಲೆಕೊಡಬೇಕಾಗಿದೆ. ಅಲ್ಲದೆ, ಹಣದ ವಿಚಾರದಲ್ಲಿ ನನ್ನನ್ನು ಮಾತುಕತೆಗೆ ಕರೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾರೆ.
ಈ ವರದಿ ಓದಿದ್ದೀರಾ?:ರಾಜ್ಯಪಾಲರ ದುರುಪಯೋಗ; ಮೋದಿ ಸರ್ಕಾರದ ಕುತಂತ್ರಕ್ಕೆ ಸುಪ್ರೀಂ ಕಡಿವಾಣ
ಆನೇಕಲ್ ಬಿಜೆಪಿ ಸ್ಥಳೀಯ ಅಧ್ಯಕ್ಷ ಮುನಿರಾಜುಗೌಡ ವಿರುದ್ಧವೂ ಆರೋಪಗಳನ್ನು ಮಾಡಿರುವ ಪ್ರವೀಣ್, “ಬಿಜೆಪಿ ಮುಖಂಡ ನಾಯನಹಳ್ಳಿ ಮುನಿರಾಜುಗೌಡ ಅವರು ನನ್ನನ್ನು ಮನೆಗೆ ಕರೆದಿದ್ದರು. ಈ ವೇಳೆ, ಆನೇಕಲ್ ಕೌನ್ಸಿಲರ್ ಭಾಗ್ಯಮ್ಮ ಮತ್ತು ಆಕೆಯ ಪತಿ ಶ್ರೀನಿವಾಸ್ ಕೂಡ ಇದ್ದರು. ಅವರು ಇನ್ನೂ ಹಲವರನ್ನು ಕರೆಸಿಕೊಂಡು ಸುಮಾರು 2 ಗಂಟೆಗಳ ಕಾಲ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಿದ್ದಾರೆ.
‘‘ನಾನು ಸತ್ತ ಮೇಲೆ ನನ್ನ ದೇಹದ ಮೇಲಿರುವ ಗಾಯದ ಗುರುತುಗಳನ್ನು ಪರಿಶೀಲಿಸಿದರೆ ಸತ್ಯ ಗೊತ್ತಾಗುತ್ತದೆ. ಪೊಲೀಸರು ನನಗೆ ನ್ಯಾಯ ಕೊಡಿಸಬೇಕು’’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಘಟನಾ ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.