ಒಂದೇ ಒಂದು ಜೋರು ಮಳೆಗೆ ಬೆಂಗಳೂರು ನಗರದ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಗಂಭೀರ ಯೋಚನೆ ನಡೆದಿಲ್ಲ. ಬೆಂಗಳೂರು ನಗರವಾಸಿಗಳ ಪಾಲಿಗೆ ಮಳೆ ಎನ್ನುವುದು ನರಕವಾಗಿದೆ. ಅಧಿಕಾರಿಗಳಿಗೆ ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಮಾತ್ರ ಮಳೆ ಸಂಭ್ರಮವಾಗಿದೆ. ಮಳೆ ಸುರಿದಷ್ಟು ಅವರ ಜೇಬಲ್ಲಿ ಹಣದ ಹೊಳೆ ಹರಿಯುತ್ತದೆ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಅಕ್ಟೋಬರ್ 14ರಿಂದ 16ರವರಗೆ ನಿರಂತರವಾಗಿ ಸುರಿದ ಮಳೆಯಿಂದ ಸಾಕಷ್ಟು ಅವಾಂತರಗಳು ಸೃಷ್ಟಿಯಾಗಿ, ಬೆಂಗಳೂರು ನಗರ ನಿವಾಸಿಗಳು ಅಕ್ಷರಶಃ ಹೈರಾಣಾಗಿದ್ದಾರೆ. ಸೋಮವಾರದಿಂದ ಮೂರು ದಿನ ಬಿಟ್ಟು ಬಿಟ್ಟು ಸುರಿದಿರುವ ಮಳೆಗೆ ನಗರವು ನಲುಗಿಹೋಗಿದೆ. ಮಹದೇವಪುರ, ಸರ್ಜಾಪುರ ಹಾಗೂ ಯಲಹಂಕದ ಕೆಲವು ಭಾಗಗಳಂತೂ ದ್ವೀಪಗಳಂತೆ ಮಾರ್ಪಟ್ಟಿವೆ.
ಎಡಬಿಡದೆ ಸುರಿದ ಮಳೆಯಿಂದ ಬೆಂಗಳೂರು ರಸ್ತೆಗಳು ಜಲಾವೃತಗೊಂಡು ಹಲವೆಡೆ ಮನೆಗಳಿಗೆ ಮಳೆ ನೀರು ನುಗ್ಗಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್‌ಗೆ ಸಿಲುಕಿದ ಸವಾರರು ಅನುಭವಿಸಿದ ತೊಂದರೆ ಹೇಳತೀರದು. ಹೆಬ್ಬಾಳ ಜಂಕ್ಷನ್, ಮೈಸೂರು ರಸ್ತೆ, ತುಮಕೂರು ರಸ್ತೆ, ಹೆಣ್ಣೂರು ರಸ್ತೆ ಹಾಗೂ ಹೊರ ವರ್ತುಲ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಮಧ್ಯರಾತ್ರಿ ಮನೆ ಮುಟ್ಟಿ ಬಿಬಿಎಂಪಿಗೆ ಹಿಡಿ ಶಾಪ ಹಾಕಿದ್ದಾರೆ.
ಮೆಜೆಸ್ಟಿಕ್ ಬಳಿಯ ಓಕಳೀಪುರ ಅಂಡರ್ ಪಾಸ್‌ನಲ್ಲಿ ಮಳೆ ನೀರಿಲ್ಲಿ ವಾಹನಗಳು ಮುಳಿಗಿದ್ದವು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದಲ್ಲಿ ಸಹಕಾರ ನಗರ ಬಳಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿ ಮೂರು ಕಿಲೋ ಮೀಟರ್ ಉದ್ದಕ್ಕೂ ವಾಹನಗಳು ಸಾಲುಗಟ್ಟಿ ನಿಂತಿದ್ದು ವರದಿಯಾಯಿತು.
ಎಚ್ಎಂಟಿ ಲೇಔಟ್ನಲ್ಲಿ ಬೃಹತ್ ಮರವೊಂದು ಧರೆಗುರುಳಿ ಕಾರು ಜಖಂಗೊಂಡಿತು. ಮರ ತೆರವುಗೊಳಿಸುವಂತೆ ವಾಹನ ಮಾಲೀಕರು ಬಿಬಿಎಂಪಿಗೆ ದೂರು ನೀಡಿದರೂ ಅಧಿಕಾರಿಗಳಿಂದ ತಕ್ಷಣಕ್ಕೆ ಯಾವ ಸ್ಪಂದನೆಯೂ ಸಿಗಲಿಲ್ಲ. ಲಾಲ್‌ಬಾಗ್ ಬಳಿಯ ಆರ್.ವಿ ಟೀಚರ್ಸ್ ಕಾಲೇಜು ಜಂಕ್ಷನ್‌ನಲ್ಲಿ ದೊಡ್ಡ ಮರವೊಂದು ರಸ್ತೆಗೆ ಉರುಳಿ ಬಿದ್ದು ಮೂರ್ನಾಲ್ಕು ಗಂಟೆ ಸಂಚಾರ ದಟ್ಟನೆ ಉಂಟಾಗಿತ್ತು.
ಮಹದೇವಪುರದಲ್ಲಿ ಭಾರೀ ಮಳೆಯಿಂದಾಗಿ ಬೈಕ್‌ವೊಂದು ನೀರಿನಲ್ಲಿ ಮುಳುಗಿತು. ಬೈಕ್ ಸವಾರ ಅಲ್ಪದರಲ್ಲೇ ನೀರಿನಲ್ಲಿ ಮುಳುಗುವುದರಿಂದ ತಪ್ಪಿಸಿಕೊಂಡಿದ್ದಾನೆ. ಬೈಕ್ ಸವಾರ ಹಾಗೂ ಸ್ಥಳೀಯರು ನೀರಿನಲ್ಲಿ ಮುಳುಗಿರುವ ಬೈಕ್ ಅನ್ನು ಮೇಲಕ್ಕೆ ಎತ್ತುವುದಕ್ಕೆ ಹರಸಾಹಸ ಪಟ್ಟಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೀರಿನಲ್ಲಿ ಮುಳುಗಿದ ಬೈಕ್ ಹೊರತೆಗೆಯಲು ಆ ವ್ಯಕ್ತಿ ನೀರಿನಲ್ಲಿ ಮುಳುಗಿ ಹಗ್ಗಕಟ್ಟಿದ್ದಾನೆ. ಆ ಮೇಲೆ ಸ್ಥಳೀಯರ ನೆರವಿನಿಂದ ಬೈಕ್ ಮೇಲಕ್ಕೆ ಎತ್ತಲಾಗಿದೆ.
ಮಂಗಳವಾರ (ಅ.15) ರಾತ್ರಿ ಹತ್ತು ಗಂಟೆ ವೇಳೆಗೆ ಬೆಂಗಳೂರು ನಗರದ ಅನೇಕ ಏರಿಯಾಗಳಲ್ಲಿ ಮಳೆ ನೀರು ಮನೆಗೆ ನುಗ್ಗಿ, ಮನೆಯಯೊಳಗಿನ ದಿನಸಿ, ಟಿವಿ, ಫ್ರಿಡ್ಜ್, ಸೋಫಾ, ಬಟ್ಟೆ ಬರೆ ನೀರಿನಲ್ಲಿ ಮುಳುಗಿ ಹಾನಿಯಾಗಿವೆ. ಮತ್ತೊಂದೆಡೆ ಮಾನ್ಯತಾ ಟೆಕ್ ಪಾರ್ಕ್ ಕಳೆದ ಮೂರು ದಿನಗಳಿಂದ ಜಲದಿಗ್ಬಂಧನ ಎದುರಿಸುತ್ತಿದೆ. ರಸ್ತೆಯಲ್ಲಿ ನೀರು ತುಂಬಿದ್ದು, ನದಿಯಂತೆ ಭಾಸವಾಗುತ್ತಿದೆ.

ವಿಶ್ವದ ಹಲವು ದೈತ್ಯ ಐಟಿ ಕಂಪನಿಗಳು ತಮ್ಮ ಕಾರ್ಯನಿರ್ವಹಣೆ ನೆಡೆಸುತ್ತಿರುವ ಮಾನ್ಯತಾ ಟೆಕ್ ಪಾರ್ಕ್ ಅನ್ನು ‘ಮಾನ್ಯತಾ ಟೆಕ್ ಫಾಲ್ಸ್’ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ರಸ್ತೆ ಬದಿಯೇ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ಇದರಿಂದ ರಸ್ತೆ ಪಕ್ಕದಲ್ಲೇ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆ ಕಾಂಪೌಂಡ್ ಕೂಡ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ.
ಮೂರು ದಿನದ ಮಳೆಯಿಂದ 200ಕ್ಕೂ ಹೆಚ್ಚು ಮನೆಗಳಿಗೆ ಕಲುಷಿತ ನೀರು ನುಗ್ಗಿದೆ. 39 ಮರಗಳು ಧರೆಗುರುಳಿವೆ. 26 ಮರಗಳನ್ನು ತೆರವುಗೊಳಿಸಲಾಗಿದೆ. 55 ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ. ಜಿಟಿ ಜಿಟಿ ಮಳೆಯಿಂದ ಮಾರುಕಟ್ಟೆಗೆ ತರಕಾರಿ ಸರಬರಾಜು ಕಡಿಮೆಯಾಗಿದೆ. ಬೆಳೆದಿದ್ದ ತರಕಾರಿ ಅತಿ ಹೆಚ್ಚು ತೇವಾಂಶ ಹಾಗೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ತೋಟದಲ್ಲಿಯೇ ಹಾನಿಯಾಗಿದ್ದು, ಟೊಮೆಟೊ, ಸೊಪ್ಪು, ಹೂ ಬೆಳೆಗಳಲ್ಲಿ ರೋಗ ಬಾಧೆ ಕಾಣಿಸಿಕೊಂಡಿದೆ. ಈ ಎಲ್ಲ ಕಾರಣಗಳಿಂದ ಬೆಂಗಳೂರಲ್ಲಿ ತರಕಾರಿಗಳ ದರ ಗಗಣಕಕ್ಕೇರಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | 9 ತಿಂಗಳಲ್ಲಿ ಬೆಂಗಳೂರು ನಗರವೊಂದರಲ್ಲೇ 455 ಪೋಕ್ಸೊ ಪ್ರಕರಣ; ಹಲ್ಲಿಲ್ಲದ ಹಾವಾಯಿತೇ ಕಾಯ್ದೆ?
ಇಷ್ಟೆಲ್ಲ ಕೇವಲ ಮೂರು ದಿನದ ಮಳೆಯ ಬೆಂಗಳೂರು ಕಥೆ! ಇತ್ತೀಚಿನ ದಿನಗಳಲ್ಲಿ ಬೆಂಗಳೂರು ನಗರವಾಸಿಗಳ ಪಾಲಿಗೆ ಮಳೆ ಎನ್ನುವುದು ಸಂಭ್ರಮವಾಗದೇ ನರಕವಾಗಿದೆ. ಅಧಿಕಾರಿಗಳಿಗೆ ಮತ್ತು ಅಧಿಕಾರಸ್ಥ ರಾಜಕಾರಣಿಗಳಿಗೆ ಮಾತ್ರ ಮಳೆ ಸಂಭ್ರಮ ತರುತ್ತದೆ. ಮಳೆ ಸುರಿದಷ್ಟು ಅವರ ಜೇಬಲ್ಲಿ ಹಣದ ಹೊಳೆ ಹರಿಯುತ್ತದೆ!
ಹಾಗೆಯೇ ಮಳೆ, ಸಂಚಾರ ಅಸ್ತವ್ಯಸ್ತ, ವಾಹನ ಸವಾರರ ಪರದಾಟವಾಗುತ್ತಿದ್ದಂತೆ ದೃಶ್ಯ ಮಾಧ್ಯಮಗಳಿಗೆ ಹಬ್ಬವೇ ಹಬ್ಬ. ಟಿಆರ್‌ಪಿಗಾಗಿ ಅರಚಾಡುತ್ತ ಎದ್ದು ನಿಲ್ಲುತ್ತವೆ. ನಗರದ ಭಯಾನಕತೆಯನ್ನು ಬಗೆಬಗೆಯಾಗಿ ತೋರಿಸುತ್ತವೆ. ಜನ ಆಕ್ರೋಶಗೊಂಡು, ಅಧಿಕಾರಿಗಳನ್ನು ಮತ್ತು ಆಳುವ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ತಮಗೆ ಹೇಗೆ ಬೇಕೋ ಹಾಗೇ ಬಿತ್ತರಿಸುತ್ತವೆ. ಅಧಿಕಾರಿಗಳು ರಾಜಕಾರಣಿಗಳು ಸಿಟಿ ರೌಂಡ್ಸ್ ಹೆಸರಲ್ಲಿ ಪ್ರಚಾರಗಿಟ್ಟಿಸಿಕೊಳ್ಳುತ್ತಾರೆ. ವಾರ ಕಳೆಯುತ್ತಿದ್ದಂತೆ ಮಳೆಯ ಅವಾಂತರ ತೆರೆಗೆ ಸರಿಯುತ್ತದೆ. ಈ ಬೆಳವಣಿಗೆ ಬೆಂಗಳೂರಿನಲ್ಲಿ ಸರ್ವೇ ಸಾಮಾನ್ಯವಾಗಿದೆ.
ಬೆಂಗಳೂರು ನಗರ ಅಭಿವೃದ್ಧಿ ಖಾತೆ ಸಚಿವ ಡಿ.ಕೆ ಶಿವಕುಮಾರ್ ಅವರು ಕೆಂಪೇಗೌಡ ಕಟ್ಟಿದ ಬೆಂಗಳೂರು ನಗರವನ್ನು ಮತ್ತಷ್ಟು ಅಭಿವೃದ್ಧಿ ಮಾಡಿ ವಿಶ್ವವೇ ತಿರುಗಿ ನೋಡುವಂತೆ ಮಾಡುತ್ತೇನೆ ಎನ್ನುತ್ತಾರೆ. ಬೆಂಗಳೂರಿಗೆ ಸ್ಕೈ-ಡೆಕ್ ನಿರ್ಮಾಣ ಮತ್ತು ಬ್ರ್ಯಾಂಡ್ ಬೆಂಗಳೂರು ಬಗ್ಗೆ ಹೆಚ್ಚು ಜಪ ಮಾಡುತ್ತಿದ್ದಾರೆ.

ಆದರೆ, ಮೂಲಭೂತ ಸಮಸ್ಯೆಗಳಾದ ರಸ್ತೆಗಳು, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಬಿಬಿಎಂಪಿ ಶಾಲೆಗಳ ಬಗ್ಗೆ, ಬಡವರು ಕೂಡ ಬದುಕಬಹುದಾದ ನಗರದ ಬಗ್ಗೆ ಗಮನವೇ ಯಾರಿಗೂ ಇಲ್ಲವಾಗಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಅಧಿಕಾರಿಗಳು, ಜನರ ಜೇಬು ಬಿಟ್ಟು ಬೇರೆ ನೋಡುತ್ತಿಲ್ಲ. ಬಿಬಿಎಂಪಿ, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎ ಸೇರಿದಂತೆ ನಗರ ಯೋಜನೆಗೆ ಸಂಬಂಧಿಸಿದ ಸಂಸ್ಥೆಗಳು, ಇಲಾಖೆಗಳ ನಡುವೆ ಸಮನ್ವಯತೆಯೇ ಇಲ್ಲ.
ಇದು ಬರೀ ಕಾಂಗ್ರೆಸ್ ಸರ್ಕಾರ ಅವಧಿಯ ಕಥೆಯಲ್ಲ. ಬೊಮ್ಮಾಯಿ ಸರ್ಕಾರದ ಅವಧಿಯಲ್ಲೂ 2022ರಲ್ಲಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರಿನ ಎಂಟು ವಲಯಗಳಲ್ಲಿ 3,453 ಮನೆಗಳಿಗೆ ಹಾನಿಯಾಗಿತ್ತು. ನೆಲಮಹಡಿ ಮನೆಗಳಿಗೆ ಪೂರ್ತಿ ಮಳೆ ನೀರು ನುಗ್ಗಿ ಮನೆಯ ವಸ್ತುಗಳು ತೇಲಾಡಿದ್ದವು. ಕಾರು, ಬೈಕ್‌ಗಳು ಜಲಾವೃತಗೊಂಡಿದ್ದವು. ರಾಜಕಾಲುವೆಯಲ್ಲಿ ವ್ಯಕ್ತಿಗಳು ಕೊಚ್ಚಿ ಹೋದ ಭಯಾನಕ ದೃಶ್ಯವನ್ನು ಜನತೆ ಇನ್ನೂ ಮರೆತಿಲ್ಲ.
ರಾಜಕಾಲುವೆ ಒತ್ತುವರಿ ತೆರವು ಮಾಡಿ, ಭವಿಷ್ಯದಲ್ಲಿ ಮಳೆ ಬಂದಾಗ ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮವಾಗಿ ಮುನ್ನೆಚ್ಚರಿಕೆ ಕೈಗೊಳ್ಳಲಾಗುತ್ತಿದೆ ಎಂದು ರಾಜಕಾರಣಿಗಳು, ಬಿಬಿಎಂಪಿ ಅಧಿಕಾರಿಗಳು ಮಾಧ್ಯಮಗಳ ಮುಂದೆ ಜಂಭಕೊಚ್ಚಿಕೊಂಡಿದ್ದೇ ಹೆಚ್ಚು. ಆದರೆ, ಸಮಸ್ಯೆ ಮಾತ್ರ ಇನ್ನೂ ಹಾಗೆಯೇ ಇದೆ.
ಒಂದೇ ಒಂದು ಜೋರು ಮಳೆಗೆ ಬೆಂಗಳೂರು ನಗರದ ಜನಜೀವನ ಅಸ್ತವ್ಯಸ್ತವಾಗುತ್ತದೆ ಎಂದರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಬೇಕಲ್ಲವೇ? ಮೆಳೆಯಿಂದ ಸಣ್ಣ ಪುಟ್ಟ ಕಾಯಿಲೆಗಳು ಹರಡಿದರೆ ಬೆಂಗಳೂರಿನಂತಹ ನಗರಗಳಲ್ಲಿ ವೈದ್ಯಕೀಯ ನೆರವು ಸಿಕ್ಕರೂ, ಅದು ಹಣವಿರುವವರಿಗೆ ಮಾತ್ರ. ಬಡವರಿಗೆ ವಾಸಯೋಗ್ಯ ಪ್ರದೇಶಗಳೇ ಇಲ್ಲದಂತಾಗಿವೆ. ಚಿಕ್ಕ ಚಿಕ್ಕ ಬೀದಿಯಲ್ಲಿ, ವಠಾರದಲ್ಲಿ ಒತ್ತಟ್ಟಾಗಿ ಬದುಕುವ ಬಡವರು, ಕಾರ್ಮಿಕರು, ಕೆಳವರ್ಗದವರ ಆರೋಗ್ಯದ ಬಗ್ಗೆ ವಿಚಾರಿಸುವರೇ ಇಲ್ಲ!
ಮಳೆಯ ಅವಾಂತರದಿಂದ ದೇಶದ ಐಟಿ ಹಬ್ ಎಂದೇ ಹೆಸರಾದ ಬೆಂಗಳೂರು ನಗರ ಇಂದು ಬದುಕುವುದಕ್ಕೆ ಯೋಗ್ಯವೇ ಎನ್ನುವಂಥ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿದೆ. ಮಳೆ ಬಂದಾಗ ಕೆಲವು ಪ್ರದೇಶಗಳು ಕೆರೆಗಳಂತಾಗುತ್ತವೆ. 1960ರ ಹೊತ್ತಿಗೆ ನಗರದ ಸುತ್ತಮುತ್ತ 280 ಕೆರೆಗಳಿದ್ದವು. ಈಗ ಅವುಗಳ ಸಂಖ್ಯೆ 50 ದಾಟುವುದಿಲ್ಲ. ಕೆರೆಗಳಿದ್ದ ಜಾಗವೆಲ್ಲ ಬಡಾವಣೆಗಳಾಗಿವೆ. ಅಂಥ ಜನವಸತಿ ಪ್ರದೇಶಗಳು ಮಳೆಗಾಲದಲ್ಲಿ ಪ್ರವಾಹಕ್ಕೆ ಸಿಲುಕುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದವರೂ ಜೇಬು ತುಂಬಿಸಿಕೊಳ್ಳಲು ಅಗತ್ಯವಾಗಿ ಮಾಡಬೇಕಿದ್ದನ್ನು ಮಾಡವುದು ಬಿಟ್ಟು, ಉಳಿದಿದ್ದೆಲ್ಲವನ್ನು ಮಾಡಲು ಹೊರಟಿರುವುದೇ ಸಮಸ್ಯೆಯ ಮೂಲವಾಗಿದೆ.
‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತಹ ಅಭಿವೃದ್ಧಿ ಬೆಂಗಳೂರಿಗೆ ಬೇಕಿಲ್ಲ. ಬೆಂಗಳೂರಿನ ಮೂಲ ಸಮಸ್ಯೆಗಳ ಪರಿಹಾರಕ್ಕೆ ಮೊದಲು ಸ್ಪಂದಿಸಿ, ಪ್ರತಿಷ್ಠೆಯ ಅಭಿವೃದ್ಧಿಯನ್ನು ನಂತರ ಮಾಡಿಕೊಳ್ಳಲಿ ಎಂಬುದು ಬೆಂಗಳೂರು ನಿವಾಸಿಗಳ ಅಳಲು. ಇದಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಕಿವಿಯಾಗಬೇಕು. ಮುಂದೆ ಇಂತಹ ಸಮಸ್ಯೆಗಳು ಬರದಂತೆ ನೋಡಿಕೊಳ್ಳಬೇಕು.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.