ಬೋಧನಾಧಾರಿತ ಕಲಿಕೆಗಿಂತ ಕೌಶಲ್ಯಾಧಾರಿತ ಪಠ್ಯಕ್ರಮ ಇಂದಿನ ಅಗತ್ಯ. ಹಾಗಾಗಿ, ಅದಕ್ಕೆ ಪೂರಕವಾದ ಪಠ್ಯಕ್ರಮವನ್ನು ಸಿದ್ಧಪಡಿಸುವ ಹಾದಿಯಲ್ಲಿ ಉನ್ನತ ಶಿಕ್ಷಣ ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.
ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ‘ಬೆಂಗಳೂರು ಟೆಕ್ ಸಮ್ಮಿಟ್’ನ ಎರಡನೇ ದಿನವಾದ ಗುರುವಾರ ಆಯೋಜಿಸಲಾಗಿದ್ದ ‘ಸ್ಟಾರ್ಟ್ ಅಪ್’ ಉತ್ಪನ್ನಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
“ಬೋಧನಾಧಾರಿತ ಕಲಿಕೆಗಿಂತ ಕೌಶಲ್ಯಾಧಾರಿತ ಪಠ್ಯಕ್ರಮ ರಚಿಸುವ ನಿಟ್ಟಿನಲ್ಲಿ ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನ ಮಂತ್ರಿ ಹಾಗೂ ಕೌಶಲಾಭಿವೃದ್ಧಿ ಮಂತ್ರಿಗಳೊಂದಿಗೆ ಸಂಪರ್ಕದಲ್ಲಿದ್ದು, ಕೈಗಾರಿಕೆಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಯುವಜನತೆಗೆ ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ” ಎಂದು ಮಾಹಿತಿ ನೀಡಿದರು.
‘ಉದ್ಯಮಗಳ ಅಗತ್ಯಗಳಿಗೆ ಪೂರಕವಾಗಿ 6ರಿಂದ 8 ವಾರಗಳ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸುವ ಕುರಿತೂ ಚಿಂತನೆ ನಡೆದಿದೆ. ಇದರಿಂದ ಕೈಗಾರಿಕೆಗಳ ಬೇಡಿಕೆಗೆ ಅನುಗುಣವಾದ ಮಾನವ ಸಂಪನ್ಮೂಲವನ್ನು ಸಿದ್ಧಪಡಿಸಲಾಗುವುದು. ಆ ಮೂಲಕ ಉದ್ಯೋಗ ಪಡೆದವರು ಗೌರವಯುತ ಬದುಕನ್ನು ನಡೆಸಲು ಸಾಧ್ಯವಾಗುವಂತಹ ಪರಿಸರವನ್ನು ಸೃಷ್ಟಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲಸ ಮಾಡುತ್ತಿದೆ’ ಎಂದು ಉನ್ನತ ಶಿಕ್ಷಣ ಸಚಿವರು ತಿಳಿಸಿದರು.
‘ಈ ಎಲ್ಲ ಯೋಜನೆಗಳನ್ನು ತ್ವರಿತಗತಿಯಲ್ಲಿ ಜಾರಿಗೊಳಿಸುವ ಮೂಲಕ ಕರ್ನಾಟಕವು ತಂತ್ರಜ್ಞಾನ ಹಾಗೂ ಉತ್ಪಾದನೆಯಲ್ಲಿ ತನ್ನ ಅಗ್ರಸ್ಥಾನವನ್ನು ಕಾಯ್ದುಕೊಳ್ಳಲಿದೆ’ ಎಂದು ಸಚಿವ ಡಾ.ಎಂ.ಸಿ.ಸುಧಾಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
‘ಬೆಂಗಳೂರು ಟೆಕ್ ಸಮ್ಮಿಟ್’ನಲ್ಲಿ ಬಿಡುಗಡೆಯಾಗಲಿರುವ 35 ಸ್ಟಾರ್ಟ್‌ಅಪ್ ಉತ್ಪನ್ನಗಳಲ್ಲಿ 13 ಉತ್ಪನ್ನಗಳು ಈ ವೇದಿಕೆಯಲ್ಲಿ ಬಿಡುಗಡೆಗೊಂಡವು.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯ ಕಾರ್ಯದರ್ಶಿ ಡಾ. ಏಕ್‌ರೂಪ್ ಕೌರ್, ಸ್ಟಾರ್ಟ್‌ಅಪ್ ವಿಷನ್ ಗ್ರೂಪ್‌ನ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.