ಅಂಬೇಡ್ಕರ್ ಅಂದರೆ ಶಕ್ತಿ-ಸ್ವಾಭಿಮಾನ ಅವರು ನೀಡಿರುವ ಸಂವಿಧಾನ ಶಕ್ತಿಯನ್ನು ಉಳಿಸಿಕೊಂಡು ಹೋಗಬೇಕಿದೆ. ದಲಿತರಿಗೆ ಅಂಬೇಡ್ಕರ್ ಅವರ ಪರಿಶ್ರಮದ ಫಲವೇ ಇಂದು ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ನ ಅತ್ಯುನ್ನತ ಹುದ್ದೆಯಲ್ಲಿ ಇರಲು ಸಾಧ್ಯವಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ನೆಲ ಕಚ್ಚಿಸುವ ಭೀಮ ಸಂಕಲ್ಪ ಸಮಾವೇಶ ಹಾಗೂ ಜನಮನ ನಮನ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಭೀಮ ಸಂಕಲ್ಪ ಮತ್ತು ದಸಂಸ ಕಾರ್ಯಕರ್ತರಿಗೆ ಅಭಿನಂದನಾ ಸಮಾವೇಶವನ್ನು ದಸಂಸ ಆಯೋಜಿಸಿತ್ತು.
ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, “ನಿಮ್ಮ ನ್ಯಾಯಯುತ ಬೇಡಿಕೆಗಳ ಅನುಷ್ಠಾನಕ್ಕೆ ನಾವು ಬದ್ಧರಾಗಿದ್ದೇವೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳುವ ಮೂಲಕ ನಿಮ್ಮ ಋಣ ತೀರಿಸುತ್ತೇವೆ. ರಾಜ್ಯದಲ್ಲಿ ಚುನಾವಣೆ ಫಲಿತಾಂಶದ ಮೂಲಕ ಸ್ಪಷ್ಟ ಬಹುಮತದ ಸಂದೇಶ ನೀಡಿದಂತೆ 2024ರ ಚುನಾವಣೆಯಲ್ಲಿ ನಿಮ್ಮ ಗುರಿಯನ್ನು ಸಾಕಾರ ಮಾಡಿ. ನಾವೆಲ್ಲರೂ ಮಾನವೀಯತೆ ನೆಲೆಗಟ್ಟಿನಲ್ಲಿ ಒಗ್ಗಟ್ಟಿನಲ್ಲಿ ಮುಂದೆ ಸಾಗೋಣ” ಎಂದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಮಾತನಾಡಿ, “ಕಾಂಗ್ರೆಸ್ ಬಹುಮತ ಸಾಧಿಸುವಲ್ಲಿ ಈ ರಾಜ್ಯದ ದಲಿತ ಸಮುದಾಯಗಳ ಸಮಸ್ಯೆ-ಸಂಕಷ್ಟ ಹಾಗೂ ಸ್ಪಷ್ಟ ನಿಲುವು ಕೂಡ ಕಾರಣವಾಗಿದೆ. ಅದೇ ರೀತಿ, ಸಮೃದ್ಧ ಭಾರತದ ಕನಸು ಹೊತ್ತು ಹಾಗೂ ಸಂವಿಧಾನದ ಆಶಯ-ಉದ್ದೇಶಗಳನ್ನು ದೇಶದೆಲ್ಲೆಡೆ ಉಳಿಸುವ ಸಲುವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ನಿಟ್ಟಿನಲ್ಲಿ ದ.ಸಂ.ಸ, ಕಾಂಗ್ರೆಸ್ ಪಕ್ಷಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿದೆ” ಎಂದರು.
“ಈಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದೇವೆ. ಆದರೆ ಕೋಮುವಾದಿ ಶಕ್ತಿಗಳ ವ್ಯಕ್ತಿ ಪೂಜೆಯನ್ನು ದೇಶದೆಲ್ಲೆಡೆ ಅಳಿಸಿ ಹಾಕಬೇಕು. ವಿರೋಧ ಪಕ್ಷದಲ್ಲಿ ಇದ್ದಾಗಲೂ ಜನವಿರೋಧಿ ನೀತಿಗಳನ್ನು ಖಂಡಿಸಿದೆ. ಆದರೆ, ಅದೆಲ್ಲವನ್ನು ತಿರುಚಿ ಸಿದ್ದರಾಮಯ್ಯ ಅವರನ್ನು ಕುರುಬರ ಪಕ್ಷಪಾತಿ ಅಂತ ಬಿಂಬಿಸುತ್ತಾರೆ. ಕಾಂಗ್ರೆಸ್ ಯಾವುದೇ ಜಾತಿ-ಧರ್ಮಕ್ಕೆ ಸೀಮಿತವಾಗಿಲ್ಲ, ಜನರ ಸ್ವಾಭಿಮಾನದ ಬದುಕಿಗೆ ಪೂರಕವಾಗಿ, ಸಾಮಾಜಿಕ ನ್ಯಾಯವನ್ನು ಉಳಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಉಳಿಸಿಕೊಂಡು ಹೋಗಲಿದೆ” ಎಂದು ಹೇಳಿದರು.
ಎಸ್‌ಸಿ/ಎಸ್‌ಟಿ ಸಮುದಾಯಗಳ ಆದಾಯ ಮಿತಿಯನ್ನು ಹೆಚ್ಚಳ ಮಾಡಿ: ಮುನಿಸ್ವಾಮಿ
“ಕರ್ನಾಟಕ ರಾಜ್ಯದ ಉದ್ದಗಲಕ್ಕೂ ದ.ಸಂ.ಸ ಕೆಲಸ ಮಾಡಿದೆ. 2022 ಡಿ.6ರಂದು ದ.ಸಂ.ಸ ಮಾಡಿದ ಶಪಥ ಈಡೇರಿದೆ. ಅದರ ಫಲವೇ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಸರ್ಕಾರವೂ ಹಸಿವು ಮುಕ್ತ ಕರ್ನಾಟಕ ಮಾಡುವ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಜನರ ನೆಮ್ಮದಿ ಕೆಡಿಸಿ, ಕೋಮುವಾದ ಸೃಷ್ಟಿಸಿ ಸಂಘರ್ಷಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದ ಶಕ್ತಿಗಳನ್ನು ಹಿಮ್ಮೆಟ್ಟಿಸುವ ಕೆಲಸ ಮಾಡಬೇಕು” ಎಂದು ದ.ಸ.ಸಂದ ಮುನಿಸ್ವಾಮಿ ಅವರು ಹೇಳಿದರು.
“ದಲಿತರ ಅಭಿವೃದ್ದಿಗೆ ಇರುವ ಅನುದಾನ ದುರ್ಬಳಕೆ ಆಗುವುದನ್ನು ತಡೆಯಬೇಕು. ಮೀಸಲು ಹುದ್ದೆ, ಖಾಲಿ ಹುದ್ದೆ ಭರ್ತಿಯಾಗಬೇಕು. ಮತಾಂತರ ಕಾಯ್ದೆ, ಜಾನುವಾರು ಸಾಗಾಣಿಕೆ ಹಾಗೂ ಹತ್ಯೆ ನಿಷೇಧ ಕಾಯ್ದೆ, ವಿದ್ಯುತ್ ಖಾಸಗೀಕರಣ, ಎನ್.ಇಪಿ ರದ್ದುಪಡಿಸಬೇಕು. ಎಸ್‌ಸಿ/ಎಸ್‌ಟಿ ಸಮುದಾಯಗಳ ಆದಾಯ ಮಿತಿಯನ್ನು ಹೆಚ್ಚಳ ಮಾಡಬೇಕು. ಅತಿಸೂಕ್ಷ್ಮ ಸಮುದಾಯಗಳ ರಕ್ಷಣೆಗೆ ಪ್ರತ್ಯೇಕ ಆಯೋಗ ರಚನೆ ಮಾಡಿ. ಇಡಬ್ಲೂಎಸ್ ತಿರಸ್ಕರಿಸಿ, ಒಳಮೀಸಲಾತಿಯನ್ನು ಸರಿಯಾದ ರೀತಿಯಲ್ಲಿ ಸ್ಥಾಪಿಸಬೇಕು” ಎಂದರು.
ಬಿಜೆಪಿ ಸರ್ಕಾರದ ವಿರುದ್ದದ ಹೋರಾಟ ಮುಂದುವರಿಯಲಿದೆ: ಗುರುಪ್ರಸಾದ್ ಕೆರಗೋಡು
“ಸಂವಿಧಾನವನ್ನು ಬದಲಾಯಿಸುತ್ತೇವೆ, ಪ್ರಜಾಪ್ರಭುತ್ವವ ವ್ಯವಸ್ಥೆಯನ್ನು ಧಿಕ್ಕರಿಸುತ್ತೇವೆ ಎಂಬ ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದದ ಹೋರಾಟ ಮುಂದುವರಿಯಲಿದೆ. ಇದು ಈ ದೇಶದ ದಲಿತರು, ಅಲ್ಪಸಂಖ್ಯಾತರು ಅಳಿವು-ಉಳಿವಿನ ಪ್ರಶ್ನೆಯಾಗಿದೆ. ಹಾಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ ಕೋಮುವಾದಿ, ಸರ್ವಾಧಿಕಾರಿ ಆರ್‌ಎಸ್‌ಎಸ್ -ಬಿಜೆಪಿಯ ಕಪಿಮುಷ್ಠಿಯಿಂದ ತೊಲಗಿಸಿದಾಗ ಈ ದೇಶದಲ್ಲಿ ಸಂವಿಧಾನ-ಪ್ರಜಾಪ್ರಭುತ್ವವನ್ನು ಉಳಿಸಬಹುದು. ಈ ಕುರಿತು ಸಮಾವೇಶದಲ್ಲಿ ಭೀಮ ಸಂಕಲ್ಪ ಮಾಡೋಣ” ಎಂದು ದಸಂಸ ಸಂಚಾಲಕ ಗುರುಪ್ರಸಾದ್ ಕೆರಗೋಡು ಹೇಳಿದರು.
ಸಂವಿಧಾನ ಉಳಿವಿಗಾಗಿ ಬೀದಿಯಲ್ಲಿ ನಿಂತು ದಲಿತ ಮುಖಂಡರು ಹೋರಾಡಬೇಕಿದೆ
ಹಿರಿಯ ದಲಿತ ಹೋರಾಟಗಾರ ಇಂದೂಧರ ಹೊನ್ನಾಪುರ ಮಾತನಾಡಿ, “ದಲಿತ ಸಂಘರ್ಷ ಸಮಿತಿ ತನ್ನ ಆರಂಭಿಕ ಧ್ಯೇಯೋದ್ದೇಶಗಳನ್ನು ಇಂದಿಗೂ ಉಳಿಸಿಕೊಂಡಿದೆ. ಕೋಮುವಾದಿಗಳನ್ನ ಮುಲಾಜಿಲ್ಲದೆ ಮನೆಗೆ ಕಳುಹಿಸಿದ್ದೇವೆ. ಕಳೆದ ಎರಡು ವರ್ಷಗಳಿಂದ ದಲಿತರು ಅಸ್ತಿತ್ವಕ್ಕಾಗಿ ಹೋರಾಟ ಮಾಡಿದ್ದೇವೆ. ಭಾರತವನ್ನು ಸಮಗ್ರವಾಗಿ ಮತ್ತು ಸಮೃದ್ಧವಾಗಿ ಉಳಿಸಿಕೊಳ್ಳುವ ಸಲುವಾಗಿ ಹೋರಾಡಿದ್ದೇವೆ. ಕಾಂಗ್ರೆಸ್‌ನವರು ನಮ್ಮನ್ನ ಬೆಂಬಲ ಕೇಳಿರಲಿಲ್ಲ ಅದಾಗ್ಯೂ ಸಂವಿಧಾನದ ಉಳಿವಿಗಾಗಿ 19 ಷರತ್ತುಗಳನ್ನು ಹಾಕಿ ಬೆಂಬಲ ವ್ಯಕ್ತಪಡಿಸಲಾಗಿತ್ತು, ಅದನ್ನ ಹಿಂದಿನ ವಿರೋಧ ಪಕ್ಷದ ನಾಯಕ, ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿದ್ದರು” ಎಂದರು.
ಈ ಸುದ್ದಿ ಓದಿದ್ದೀರಾ? ಮನುಸ್ಮೃತಿ ಆರಾಧಕ ಆರ್‌ಎಸ್‌ಎಸ್, ಬಿಜೆಪಿಗರು ಸಂವಿಧಾನ ವಿರೋಧಿಗಳು: ಸಿಎಂ ಸಿದ್ದರಾಮಯ್ಯ
“ಸಂವಿಧಾನ- ಪ್ರಜಾಪ್ರಭುತ್ವವನ್ನು ಇಲ್ಲವಾಗಿಸುತ್ತಿರುವುದರಿಂದ ಭಾರತದ ಜನ ಒಂಭತ್ತು ವರ್ಷಗಳಿಂದ ನರಕ ಕಂಡಿದ್ದಾರೆ. ಆರ್‌ಎಸ್‌ಎಸ್ ಬಿಜೆಪಿಯ ಗುಜರಾತ್ ಮಾದರಿ ಕೋಮುದ್ವೇಷವನ್ನು ರಾಜ್ಯದಲ್ಲೂ ಕೃತಕವಾಗಿ ಸ್ಥಾಪಿಸಲು ಮುಂದಾಗಿದ್ದು, ರಾಜ್ಯದಲ್ಲಿ ಎಲ್ಲೆ ಮೀರಿದ ನೈತಿಕ ಪೊಲೀಸ್‌ಗಿರಿ, ಸಂವಿಧಾನ ಬದಲಾವಣೆ ಮಾತು, ಪಠ್ಯಪುಸ್ತಕಗಳಲ್ಲಿ ಪುರಾಣ, ಕೋಮುವಾದಿ ವಿಚಾರಗಳನ್ನ ಸೇರಿಸುವುದನ್ನು ಒಪ್ಪಲಾಗಲಿಲ್ಲ. ಆ ಅಸಮಾಧಾನವನ್ನು ರಾಜ್ಯದ ದಲಿತರು, ಜನಸಾಮಾನ್ಯರು ಚುನಾವಣಾ ಫಲಿತಾಂಶದ ಮೂಲಕ ತೋರಿಸಿದ್ದಾರೆ” ಎಂದು ಹೇಳಿದರು.
“ಆಪರೇಷನ್ ಕಮಲದ ಹೆಸರಲ್ಲಿ ಸಂವಿಧಾನವನ್ನು ಧಿಕ್ಕರಿಸಿ ಅಧಿಕಾರ ಪಡೆದಿದ್ದು, ಬಿಜೆಪಿಯ ಸಂಸ್ಕೃತಿ ಹಾಗೂ ಕೀಳು ರಾಜಕೀಯ ನಡೆ. ದ.ಸಂ.ಸ ಮುಖಂಡರು, ದಲಿತರು ಒಗ್ಗಟ್ಟಾದರೆ ಇಡೀ ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಸಬಹುದು. 2024ಕ್ಕೆ ಲೋಕಸಭಾ ಚುನಾವಣೆಯಲ್ಲಿ ನೀತಿಗೆಟ್ಟ ಕೋಮುವಾದಿ ಬಿಜೆಪಿ ಪಕ್ಷವನ್ನು ಒದ್ದೋಡಿಸುವುದೇ ದ.ಸಂ.ಸಮಿತಿಯ ಇಂದಿನ ಭೀಮ ಸಂಕಲ್ಪ. ಆರ್‌ಎಸ್.ಎಸ್ ಕೂಡ ಹೇಳಿದೆ ದಲಿತರು ಕಾಂಗ್ರೆಸ್ ಬೆಂಬಲಿಸಿದ್ದರಿಂದ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರದಲ್ಲಿ ಕಳೆದುಕೊಂಡಿದೆ ಅಂತ. ಹಾಗಾಗಿ ಸಂವಿಧಾನ ಉಳಿವಿಗಾಗಿ ಬೀದಿಯಲ್ಲಿ ನಿಂತು ದಲಿತ ಮುಖಂಡರು ಹೋರಾಡಬೇಕಿದೆ” ಎಂದು ತಿಳಿಸಿದರು.