- ಮನುಸ್ಮೃತಿಯ ಆರಾಧಕರಾದ ಬಿಜೆಪಿ, ಆರ್ ಎಸ್ ಎಸ್ ನವರು ಸಂವಿಧಾನ ವಿರೋಧಿಗಳು
- ಟೌನ್‌ಹಾಲ್ ನಲ್ಲಿ ಹಮ್ಮಿಕೊಂಡಿದ್ದ ‘ಭೀಮ ಸಂಕಲ್ಪ’ ಸಮಾವೇಶ ಉದ್ಘಾಟಿಸಿದ ಸಿಎಂ
“ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದು ಹೇಳಿಕೆ ನೀಡಿದ್ದ ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿದ್ದ ಅಮಿತ್ ಶಾ ಅವರಾಗಲಿ, ಪ್ರಧಾನಿ ಮೋದಿ ಅವರಾಗಲಿ ಕ್ರಮ ಕೈಗೊಳ್ಳದೆ ಸುಮ್ಮನೆ ಕುಳಿತರು. ಆದರೆ, ನಾವು-ನೀವು ಸುಮ್ಮನೆ ಕೂರಲಿಲ್ಲ. ಸಂವಿಧಾನ ಬದಲಾಯಿಸಲು ಬಂದವರನ್ನೇ ನಾವು-ನೀವು ಬದಲಾಯಿಸಿದ್ದೀವಿ. ಇದು 2024ರಲ್ಲೂ ಪ್ರತಿಧ್ವನಿಸಬೇಕು, ಮರುಕಳಿಸಬೇಕು” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ನೆಲ ಕಚ್ಚಿಸುವ ಭೀಮ ಸಂಕಲ್ಪ ಸಮಾವೇಶ ಹಾಗೂ ಜನಮನ ನಮನ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಭೀಮ ಸಂಕಲ್ಪ ಮತ್ತು ದಸಂಸ ಕಾರ್ಯಕರ್ತರಿಗೆ ಅಭಿನಂದನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ವಿಗ್ರಹ ಇಟ್ಟುಕೊಂಡು ವಿಚಾರಗಳನ್ನು ಕೊಲ್ಲುವುದು ಬಿಜೆಪಿ, ಆರ್‌ಎಸ್‌ಎಸ್‌ನವರ ಚಾಳಿ. ಸಂವಿಧಾನ ವಿರೋಧಿಸುವ ಬಿಜೆಪಿ ಚುನಾವಣೆಗಾಗಿ ಅಂಬೇಡ್ಕರ್ ಪ್ರತಿಮೆಯನ್ನು ಇಟ್ಟುಕೊಂಡು ನಾಟಕ ಮಾಡುತ್ತಿದೆ” ಎಂದು ಟೀಕಿಸಿದರು.
“ಮನುಸ್ಮೃತಿಯ ಆರಾಧಕರಾದ ಆರ್‌ಎಸ್‌ಎಸ್ ಮತ್ತು ಬಿಜೆಪಿಗರು ಸಂವಿಧಾನದ ವಿರೋಧಿಗಳಾಗಿದ್ದಾರೆ. ಸಂವಿಧಾನವನ್ನೇ ಬದಲಾಯಿಸುತ್ತೇವೆ ಎಂದು ಅಹಂಕಾರ ಮೆರೆದವರನ್ನು ನೀವು ಬದಲಾಯಿಸಿದ್ದೀರಿ, ಅಧಿಕಾರಕ್ಕಾಗಿ ಅಲ್ಲಿಗೆ ಹೋದ ಶೋಷಿತ ಸಮುದಾಯಗಳ ಪ್ರತಿನಿಧಿಗಳು ಮನುಸ್ಮೃತಿಯ ಆರಾಧಕರಾಗಿ ಸಂವಿಧಾನ ವಿರೋಧಿಗಳಾಗುತ್ತಿದ್ದಾರೆ” ಎಂದರು.
“ಅಂಬೇಡ್ಕರ್ ಅವರು ಸಂವಿಧಾನ ಜಾರಿಗೊಳ್ಳುವ ಹಿಂದಿನ ದಿನ ಐತಿಹಾಸಿಕ ಭಾಷಣ ಮಾಡುತ್ತಾ, `ಸಾಮಾಜಿಕ, ಆರ್ಥಿಕ ಅಸಮಾನತೆಯನ್ನು ತೊಡೆದು ಹಾಕದಿದ್ದರೆ ಈ ಸ್ವಾತಂತ್ರ್ಯ ಸೌಧವನ್ನು ದೇಶದ ಜನರೇ ಧ್ವಂಸ ಮಾಡುತ್ತಾರೆ’ ಎಂದು ಎಚ್ಚರಿಸಿದ್ದರು. ಜಾತಿ ಸಮಾಜಕ್ಕೆ ಚಲನೆ ಇರುವುದಿಲ್ಲ. ಚಾಲನೆ ಬರಬೇಕಾದರೆ ಸಂವಿಧಾನ ಬದ್ದವಾದ ಜಾತ್ಯತೀತ ಮೌಲ್ಯಗಳು ಜಾರಿಯಾಗಿ ಶೋಷಿತ ಸಮುದಾಯಗಳಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಈ ಅವಕಾಶಗಳನ್ನು ಕಲ್ಪಿಸುವುದೇ ನನ್ನ ರಾಜಕೀಯ ಬದ್ಧತೆ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡ ನಿವಾಸಿಗಳು : ಎಫ್‌ಐಆರ್ ದಾಖಲು
“ಐಕ್ಯ ಹೋರಾಟ ಚಾಲನಾ ಸಮಿತಿ ಸಲ್ಲಿಸಿದ ಹಲವು ಬೇಡಿಕೆಗಳನ್ನು ಈಗಾಗಲೇ ಈಡೇರಿಸಿದ್ದೇವೆ. ಉಳಿದವುಗಳನ್ನೂ ಈಡೇರಿಸುತ್ತೇವೆ” ಎಂದು ಭರವಸೆ ನೀಡಿದರು.
“ದೇಶದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸದೆ ವಂಚಿಸಿದ ಬಿಜೆಪಿ, ನುಡಿದಂತೆ ನಡೆದ ನಮ್ಮನ್ನು ಟೀಕಿಸುತ್ತಿದ್ದಾರೆ. ಬಡವರ- ಮಧ್ಯಮ ವರ್ಗದವರ ಕಲ್ಯಾಣಕ್ಕೆ ನಾವು ನೀಡಿರುವ ಗ್ಯಾರಂಟಿಗಳನ್ನು ವಿಫಲಗೊಳಿಸಲು ಬಿಜೆಪಿ ಯತ್ನಿಸುತ್ತಿದೆ. ಇದಕ್ಕಾಗಿ ಸುಳ್ಳುಗಳನ್ನು ಹೊಸೆದು, ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ. ನಮ್ಮ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ನಾಡಿನ ಶೇ.85 ಕ್ಕೂ ಹೆಚ್ಚು ಜನರಿಗೆ ತಲುಪುತ್ತದೆ. ಉಳಿದವು ಇನ್ನೂ ಹೆಚ್ಚಿನ ಸಂಖ್ಯೆಯ ಜನರಿಗೆ ತಲುಪುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ದಲಿತ ಮುಖಂಡರುಗಳಾದ ಎಸ್.ಮರಿಸ್ವಾಮಿ, ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ಇಂದೂಧರ ಹೊನ್ನಾಪುರ, ಜಿಗಣಿ ಶಂಕರ್, ವಿ.ನಾಗರಾಜ್, ಎನ್.ವೆಂಕಟೇಶ್ ಸೇರಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ 50 ಕ್ಕೂ ಹೆಚ್ಚು ಮುಖಂಡರುಗಳು ಉಪಸ್ಥಿತರಿದ್ದರು.