- ಮಹಾರಾಷ್ಟದ ಮಾಜಿ ಮುಖ್ಯಮಂತ್ರಿಯಿಂದ ಕಾಂಗ್ರೆಸ್ ವಿರುದ್ಧ ವಾಗ್ದಾಳಿ
- ಪ್ರಧಾನಿಯವರ ಆತ್ಮನಿರ್ಭರ ಭಾರತದ ಕನಸು ಸಾಕಾರಗೊಳ್ಳುತ್ತಿದೆ
ದೇಶಾದ್ಯಂತ ಕಾಂಗ್ರೆಸ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಪ್ರಸ್ತುತ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಿಂದಲೂ ಧೂಳೀಪಟವಾಗಲಿದೆ ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ನಾರಾಯಣ ರಾಣೆ ವಾಗ್ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆ ಔರಾದ ತಾಲೂಕಿನ ಏಕಂಬಾ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಕಾರ್ಯಕರ್ತರ ಸಭೆ ಏರ್ಪಡಿಸಲಾಗಿತ್ತು.
ಈ ವೇಳೆ ನಾರಾಯಣ ರಾಣೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, “ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಸಾಕಷ್ಟು ಪ್ರಗತಿ ಸಾಧಿಸಿದೆ. ಆರ್ಥಿಕವಾಗಿ ಬಲಿಷ್ಠವಾಗಿರುವ ಪ್ರಮುಖ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ಸ್ಥಾನ ಪಡೆದಿದೆ. ಮುಂದಿನ ದಿನಗಳಲ್ಲಿ ಅಗ್ರ 3ನೇ ರಾಷ್ಟ್ರವಾಗುವತ್ತ ಮುನ್ನುಗ್ಗುತ್ತಿದೆ. ಪ್ರಧಾನಿಯವರ ಆತ್ಮನಿರ್ಭರ ಭಾರತದ ಕನಸು ಸಾಕಾರಗೊಳ್ಳುತ್ತಿದೆ” ಎಂದು ಹೇಳಿದರು.
“ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಏನು ಮಾತನಾಡಬೇಕೆನ್ನುವುದೇ ಗೊತ್ತಿಲ್ಲ. ಅಭಿವೃದ್ಧಿ ಕುರಿತಂತೆ ಯಾವುದೇ ಗೊತ್ತು ಗುರಿಯಿಲ್ಲದಿರುವ ಅವರಿಗೆ ಕೇಂದ್ರ ಸರ್ಕಾರವನ್ನು ಟೀಕಿಸುವುದೇ ಕೆಲಸವಾಗಿದೆ. ಅಂಥವರಿಂದ ದೇಶದ ಪ್ರಗತಿ ಅಸಾಧ್ಯ. ಅಂತಹ ಪಕ್ಷದಿಂದ ಅಭಿವೃದ್ಧಿ ಕೆಲಸಗಳನ್ನು ನಿರೀಕ್ಷಿಸುವುದು ಅಸಾಧ್ಯ” ಎಂದು ಲೇವಡಿ ಮಾಡಿದರು.
ಈ ಸುದ್ದಿ ಓದಿದ್ದೀರಾ? : ಧರ್ಮ ಆಧಾರಿತ ಮೀಸಲಾತಿಯನ್ನು ಅನುಮೋದಿಸಲು ಸಾಧ್ಯವಿಲ್ಲ: ಯೋಗಿ ಆದಿತ್ಯನಾಥ
ಔರಾದ ಕ್ಷೇತ್ರದಲ್ಲಿ ಸದಾ ಜನರ ಜೊತೆಗಿದ್ದು, ಅಭಿವೃದ್ಧಿ ಕುರಿತು ಚಿಂತಿಸುವ ಮತ್ತು ಜನಹಿತಕ್ಕಾಗಿ ಉತ್ತಮ ಕೆಲಸಗಳನ್ನು ಮಾಡುತ್ತಿರುವ ಪ್ರಭು ಚವ್ಹಾಣ ಅವರಿಗೆ ಉತ್ತಮ ಜನಬೆಂಬಲ ಕಾಣುತ್ತಿದೆ. ಇಲ್ಲಿ ವಿರೋಧ ಪಕ್ಷಗಳು ಲೆಕ್ಕಕ್ಕೆ ಕಾಣುತ್ತಿಲ್ಲ. ಈ ಬಾರಿಯ ಚುನಾವಣೆಯಲ್ಲಿ ಬೃಹತ್ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಔರಾದ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಚಿವ ಪ್ರಭು ಬಿ ಚವ್ಹಾಣ ಮಾತನಾಡಿ, “ಔರಾದ ಕ್ಷೇತ್ರದ ಮಹಾಜನತೆಯ ಆಶೀರ್ವಾದದಿಂದ 3 ಬಾರಿ ಶಾಸಕರಾಗಿ ಸೇವೆ ಸಲ್ಲಿಸುವ ಅವಕಾಶ ದೊರತಿದೆ. ಈ ಅವಧಿಯಲ್ಲಿ ಸಾಕಷ್ಟು ಜನಹಿತ ಕೆಲಸಗಳನ್ನು ಮಾಡಿದ್ದೇನೆ. ಪ್ರತಿ ವರ್ಷ ಗ್ರಾಮ ಸಂಚಾರ ಮಾಡಿ ಜನರ ಸಮಸ್ಯೆಗಳನ್ನು ಅರಿತು ಅಗತ್ಯ ಪರಿಹಾರ ಒದಗಿಸಲು ಪ್ರಯತ್ನಿಸಿದ್ದೇನೆ. ಅಭಿವೃದ್ಧಿಯೇ ನನ್ನ ಮೂಲ ಮಂತ್ರವಾಗಿದೆ. ಚುನಾವಣೆಯಲ್ಲಿ ಅಭಿವೃದ್ಧಿ ಕೆಲಸಗಳ ರಿಪೋರ್ಟ್ ಕಾರ್ಡ್ ತೆಗೆದುಕೊಂಡು ಜನರ ಬಳಿಗೆ ಹೋಗುತ್ತಿದ್ದೇನೆ. ಜನತೆ ಯಾವತ್ತೂ ಕೈಬಿಡುವುದಿಲ್ಲ ಎಂಬ ವಿಶ್ವಾಸವಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಸುರೇಶ ಭೋಸ್ಲೆ, ಶಿವಾಜಿ ಪಾಟೀಲ ಮುಂಗನಾಳ, ಸತೀಷ ಪಾಟೀಲ, ಕಿರಣ ಪಾಟೀಲ, ವೀರಣ್ಣಾ ಕಾರಬಾರಿ, ರಾಜು ಪೋಕಲವಾರ, ರಮೇಶ ಉಪಾಸೆ, ಬಾಬುರಾವ ಪಾಟೀಲ ಕವಳಖೇಡ, ಡಾ.ಉಮೇಶ ನಾಯಕ್, ಎಂ.ಡಿ ಸಲಾವೋದ್ದಿನ್, ಹಣಮಂತ ಸುರನಾರ, ಖಂಡೋಬಾ ಕಂಗಟೆ, ಸಂಜು ಮಾನಕಾರೆ, ಸಚಿನ ಬಿರಾದಾರ, ರಾಮ ಬಿರಾದಾರ, ರಾಜೇಂದ್ರ ಶಿಂಧೆ, ವೆಂಟಕರಾವ ಡೊಂಬಾಳೆ, ಅಮರ ಜಾಧವ, ಅನೀಲ ವಾಡೆಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.