ಲೋಕಸಭಾ ಚುನಾವಣೆ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 7 ರಂದು ಎರಡನೇ ಹಂತದಲ್ಲಿ ನಡೆಯಲಿರುವ ಬೀದರ್ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಪೈಪೋಟಿ ಏರ್ಪಡುವ ಸಾಧ್ಯತೆ ಬಹುತೇಕ ನಿಚ್ಚಳ ಎಂಬಂತಿದೆ.
ಹಾಲಿ ಸಂಸದ, ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಈ ಬಾರಿ ಟಿಕೆಟ್ ನೀಡದಂತೆ ಸ್ವಪಕ್ಷದಲ್ಲೇ ವಿರೋಧದ ಅಲೆ ಎದ್ದಿತ್ತು, ಕೆಲ ಶಾಸಕರ, ಮುಖಂಡರು ಹೈಕಮಾಂಡ್‌ಗೆ ಸುದ್ದಿ ಮುಟ್ಟಿಸಿದರು. ಆದರೆ ಸ್ವಪಕ್ಷೀಯರ ತಿಕ್ಕಾಟಗಳಿಗೆ ಕಿವಿಗೊಡದೆ ಬಿಜೆಪಿ ಮತ್ತೆ ಭಗವಂತ ಖೂಬಾ ಅವರಿಗೆ ಟಿಕೆಟ್ ಘೋಷಿಸಿ ಎಲ್ಲ ಗೊಂದಲಗಳಿಗೆ ತೆರೆ ಎಳೆದಿದೆ. ಆದರೆ ಕಾಂಗ್ರೆಸ್ ಟಿಕೆಟ್‌ಗಾಗಿ ಕ್ಷೇತ್ರದ ನಾಯಕರ ಮಧ್ಯೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಟಿಕೆಟ್ ಯಾರ ಪಾಲಾಗಲಿದೆ ಎಂಬುದು ಕ್ಷೇತ್ರದಲ್ಲಿ ಜನರಿಗೆ ತೀವ್ರ ಕುತೂಹಲ ಕೆರಳಿಸಿದೆ.
ಬೀದರ್ ಲೋಕಸಭಾ ಟಿಕೆಟ್‌ಗಾಗಿ ಬಸವರಾಜ ಬುಳ್ಳಾ, ಅಯಾಜ್ ಖಾನ್, ಅಬ್ದುಲ್ ಮನ್ನಾನ್ ಸೇಠ್, ರಾಜಶ್ರೀ ಶ್ರೀಕಾಂತ್ ಸ್ವಾಮಿ ಹಾಗೂ ಸಿಎಂ ಸಿದ್ದರಾಮಯ್ಯನವರ ಆಪ್ತ ಸಲಹೆಗಾರರು, ಆಳಂದ ಕ್ಷೇತ್ರದ ಶಾಸಕರಾದ ಬಿ.ಆರ್.ಪಾಟೀಲ್ ಸೇರಿದಂತೆ ಹಲವರು ಟಿಕೆಟ್‌ಗಾಗಿ ಪ್ರಯತ್ನಿಸಿದ್ದಾರೆ. ಆದರೆ ಅಂತಿಮವಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಸುಪುತ್ರ ಸಾಗರ್ ಖಂಡ್ರೆ ಹಾಗೂ ಮಾಜಿ ಸಚಿವರಾದ ರಾಜಶೇಖರ್ ಪಾಟೀಲ್ ಹುಮನಾಬಾದ್ ಅವರ ಹೆಸರು ಅಂತಿಮವಾಗಿ ಮುನ್ನೆಲೆಗೆ ಬಂದಿದೆ. ಆದರೆ ಟಿಕೆಟ್ ಕಗ್ಗಂಟು ಮಾತ್ರ ಇನ್ನು ಬಗೆಹರಿದಿಲ್ಲ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಕಣಕ್ಕಳಿಯುತ್ತಾರೆ ಎಂದು ಕೇಳಿ ಬಂದಿತ್ತು, ನಂತರದಲ್ಲಿ ಅವರೇ ಅದನ್ನು ನಿರಾಕರಿಸಿ ತಮ್ಮ ಮಗ ಸಾಗರ್ ಖಂಡ್ರೆಯವರಿಗೆ ಟಿಕೆಟ್ ಕೊಡಿಸಿ ಕಣಕ್ಕಿಸಲು ಮುಂದಾದರು. ಅತ್ತ ಕಾಂಗ್ರೇಸ್ ಮುಖಂಡರು, ಮಾಜಿ ಸಚಿವರೂ ಆದ ರಾಜಶೇಖರ್ ಪಾಟೀಲ್ ಅವರ ಹೆಸರೂ ಮುನ್ನೆಲೆಗೆ ಬಂತು. ಈಗ ಸಾಗರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಹೆಸರು ಮುಂಚೂಣಿಯಲ್ಲಿದ್ದು, ಇಬ್ಬರಲ್ಲಿ ಒಬ್ಬರು ಹೆಸರು ಅಂತಿಮಗೊಳ್ಳುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ʼಕೈʼ ಟಿಕೆಟ್ ಯಾರಿಗೆ ಒಲಿಯಲಿದೆ ಎಂಬ ಚರ್ಚೆ ಜೋರಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆಯವರು ಕಳೆದ ಬಾರಿ ಲೋಕಸಭಾ ಚುನಾವಣೆಯಲ್ಲಿ ಹಾಲಿ ಸಂಸದ ಭಗವಂತ ಖೂಬಾ ವಿರುದ್ಧ ಸ್ಪರ್ಧಿಸಿ ಪರಾಭವಗೊಂಡಿದ್ದರು. ಈಗ ಸುಪುತ್ರ ಸಾಗರ್ ಖಂಡ್ರೆ ಅವರು ರಾಜಕಾರಣಕ್ಕೆ ಪ್ರವೇಶಿಸಲು ಲೋಕಸಭಾ ಚುನಾವಣೆ ವೇದಿಕೆಯಾಗಿಸಿಕೊಳ್ಳಲು ಇದು ಸಕಾಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರು ಮಗನಿಗೆ ಟಿಕೆಟ್ ಕೊಡಿಸಲು ಹೈಕಮಾಂಡ್‌ನಲ್ಲಿ ಪ್ರಯತ್ನ ಮುಂದುವರೆಸಿದ್ದಾರೆ.
ಹ್ಯಾಟ್ರಿಕ್ ಗೆಲುವಿನ ಹುಮ್ಮಸ್ಸಿನಲ್ಲಿರುವ ಸಂಸದ ಭಗವಂತ ಖೂಬಾ ಅವರನ್ನು ಹೇಗಾದರೂ ಮಾಡಿ ಮಣಿಸಲು ಕಾಂಗ್ರೆಸ್ ಹೈಕಮಾಂಡ್ ಅಳೆದು-ತೂಗಿ ಟಿಕೆಟ್ ಹಂಚಿಕೆ ಮಾಡಲು ತಂತ್ರಗಾರಿಕೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಮಹಿಳೆಯರಿಗೆ ಇಲ್ಲ ರಾಷ್ಟ್ರೀಯ ಪಕ್ಷಗಳ ಟಿಕೆಟ್ :
ಮೊದಲಿನಿಂದಲೂ ಮಹಿಳೆಯರನ್ನು ಅಧಿಕಾರದಿಂದ ದೂರ ಇಡಲಾಗಿದೆ. ರಾಜಕಾರಣದ ಲೋಕಕ್ಕೆ ಅವಳು ಸೂಕ್ತವಲ್ಲವೆಂಬ ಹಣೆಪಟ್ಟಿ ಸೃಷ್ಟಿಸಿ ರಾಜಕೀಯದಲ್ಲಿ ಕಾಲಿಡದಂತೆ ಪ್ರಮುಖ ರಾಷ್ಟ್ರೀಯ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ನೀಡದೇ ಇರುವುದು ವಿಪರ್ಯಾಸವೇ ಸರಿ.
ಬೀದರ್ ಲೋಕಸಭಾ ಕ್ಷೇತ್ರ ರಚನೆಯಾದ ಬಳಿಕ ಇಲ್ಲಿಯವರೆಗೆ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಸೇರಿದಂತೆ ಇತರ ಪಕ್ಷಗಳು ಮಹಿಳೆಯರಿಗೆ ಟಿಕೆಟ್ ಕೊಟ್ಟು ಕಣಕ್ಕಿಳಿಸಿದ ನಿದರ್ಶನ ಇಲ್ಲವೇ ಇಲ್ಲ. 1989 ರಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಶಿವಕಾಂತ ಚತೂರೆ ಅವರು ಅಲ್ಪ ಮತ ಪಡೆದು ಸೋತಿದ್ದರು. 1991ರಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ ಮಹಾದೇವಿ ಶಂಕರ್ ಸೋಲಬೇಕಾಯ್ತು, ಬಳಿಕ 1996 ರ ಚುನಾವಣೆಯಲ್ಲಿ ಅನ್ನಪೂರ್ಣ ಬಾಯಿ, ಶೋಭಾ ನಾಯಕ್, ಮಹಾದೇವಿ ಹಾಗೂ ಶಾಂತಾಬಾಯಿ ರಾಠೋಡ್ ಎಂಬ ನಾಲ್ವರು ಮಹಿಳಾ ಮಣಿಗಳು ಸ್ಪರ್ಧೆಯಲ್ಲಿದ್ದರು. ಆದರೆ ಬಿಜೆಪಿಯಿಂದ ರಾಮಚಂದ್ರ ವೀರಪ್ಪ ಜಯ ಸಾಧಿಸಿದ್ದರು.
1996 ರಿಂದ 2014ರವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಹಿಳೆಯರ ಸ್ಪರ್ಧೆ ಇಲ್ಲ, ಬಳಿಕ 2014ರಲ್ಲಿ ಕಲಬುರಗಿ ಮೂಲದ ಶ್ಯಾಮಲಾ ಎಂಬುವರು ಸ್ಪರ್ಧಿಸಿ ಸೋತರು. 2019ರ ಚುನಾವಣೆಯಲ್ಲಿ ಯಾರೊಬ್ಬರೂ ಮಹಿಳೆಯರು ಅಖಾಡದಲ್ಲಿ ಇರಲಿಲ್ಲ. ಈಗ 2024ರ ಲೋಕಸಭಾ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಬಿಜೆಪಿಯಿಂದ ಭಗವಂತ ಖೂಬಾ ಹಾಗೂ ಬಿಎಸ್‌ಪಿ ಪಕ್ಷದಿಂದ ರಾಜು ಎಂಬುವರು ಹೆಸರು ಅಂತಿಮಗೊಂಡಿದೆ. ಅಂದರೆ ಎರಡೂ ಪಕ್ಷಗಳಲ್ಲಿ ಮತ್ತೆ ಪುರುಷ ಪ್ರಧಾನ ಮುಂದುವರೆಸಿದೆ.
ಕಾಂಗ್ರೆಸ್‌ನಿಂದ ಸಾಗರ್ ಖಂಡ್ರೆ ಹಾಗೂ ರಾಜಶೇಖರ್ ಪಾಟೀಲ್ ಅವರು ಹೆಸರು ಅಂತಿಮ ಪಟ್ಟಿಯಲ್ಲಿದ್ದು, ಕಾಂಗ್ರೆಸ್‌ನಿಂದಲೂ ನಿರೀಕ್ಷೆಯಂತೆ ಮತ್ತೆ ಪುರುಷ ಅಭ್ಯರ್ಥಿಯೇ ಫೈನಲ್ ಎಂಬುದು ಬಹುತೇಕ ಖಚಿತವಾಗಿದೆ. ಇದರಿಂದ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಜಶ್ರೀ ಶ್ರೀಕಾಂತ್ ಸ್ವಾಮಿ ಅವರಿಗೆ ಸಹಜವಾಗಿ ನಿರಾಸೆಯಾಗಲಿದೆ.
ಜಗತ್ತಿಗೆ ಸಮ ಸಮಾಜದ ಪರಿಕಲ್ಪನೆ ನೀಡಿ ಮೊಟ್ಟ ಮೊದಲ ಬಾರಿಗೆ ಸ್ತ್ರೀ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ ಬಸವಾದಿ ಶರಣರ ನೆಲದ ರಾಜಕಾರಣದಲ್ಲಿ ಪುರುಷ ಪ್ರಧಾನ ವ್ಯವಸ್ಥೆ ಬೇರೂರಿದ್ದು ಶರಣರ ಆಶಯಗಳಿಗೆ ತದ್ವಿರುದ್ಧ ಎಂಬಂತಿದೆ. ಎಲ್ಲ ರಾಜಕೀಯ ಪಕ್ಷಗಳು ಮಹಿಳೆಯರನ್ನು ಆಟಕ್ಕುಂಟು, ಲೆಕ್ಕಕ್ಕಿಲ್ಲವೆಂಬಂತೆ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡದೇ ಕಡೆಗಣಿಸಲಾಗುತ್ತಿದೆ ಎಂಬ ಕೂಗು ಸಹಜವಾಗಿ ಕೇಳಿ ಬರುತ್ತದೆ. ಆದರೆ ʼಪರಿವಾರʼವಾದ ರಾಜಕಾರಣದ ಮಧ್ಯೆ ಮಹಿಳೆ ರಾಜಕಾರಣದಲ್ಲಿ ಗುರುತಿಸಿಕೊಳ್ಳಲು ಒಲವು ತೋರಿದರೂ ಅವರನ್ನು ನಿರಾಕರಿಸಿ ಪುರುಷ ಪ್ರಧಾನ ವ್ಯವಸ್ಥೆ ಅನುಸರಿಸುವುದು ಸಾಮಾನ್ಯ ಎಂಬಂತಾಗಿದೆ.
ಇಂದು ಅಥವಾ ನಾಳೆ ಕಾಂಗ್ರೆಸ್ ಟಿಕೆಟ್ ಅಂತಿಮ :
ರಾಜ್ಯದ 28 ಕ್ಷೇತ್ರಗಳಿಗೆ ಕಾಂಗ್ರೆಸ್ ಈಗಾಗಲೇ 7 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳು ಹೆಸರು ಪ್ರಕಟಿಸಿದೆ, ಇನ್ನು ಉಳಿದ 21 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಖೈರುಗೊಳ್ಳಬೇಕು.
ಇಂದು (ಮಾ.19) ರಂದು ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಇಂದು ಅಥವಾ ನಾಳೆ ಬುಧವಾರ (ಮಾ.20) ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳ್ಳಲಿದೆ. ಎರಡು ಮೂರು ಕ್ಷೇತ್ರ ಬಿಟ್ಟು ಎಲ್ಲಾ ಅಭ್ಯರ್ಥಿಗಳ ಪಟ್ಟಿ ಫೈನಲ್ ಆಗಲಿದೆ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ. ಕಾಂಗ್ರೆಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯಲ್ಲಿ ಬೀದರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.