ವಕ್ಫ್ ಮಂಡಳಿಯ ವಿರುದ್ಧ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ನೇತ್ರತ್ವದ ತಂಡ ಬೀದರ್ ನಗರದಲ್ಲಿ ಸೋಮವಾರ ಗಣೇಶ ಮೈದಾನದಿಂದ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದರು.
ಬಳಿಕ ಬೀದರ್ ತಾಲೂಕಿನ ಧರ್ಮಾಪುರ ಗ್ರಾಮಕ್ಕೆ ಭೇಟಿ ನೀಡಿದ ವೇಳೆ ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಬೆಂಬಲಿಗರು ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆಂಬಲಿಗರ ಮಧ್ಯೆ ಗಲಾಟೆ ನಡೆದಿದೆ.
ಇಂದು ವಕ್ಫ್ ವಿರುದ್ಧ ನಡೆದ ಹೋರಾಟದಲ್ಲಿ ಬಿಜೆಪಿ ಶಾಸಕ ಯತ್ನಾಳ, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. ಆದರೆ, ಧರ್ಮಾಪುರ ಗ್ರಾಮದಲ್ಲಿ ಸ್ಥಳೀಯ ಶಾಸಕ ಡಾ. ಶೈಲೇಂದ್ರ ಬೆಂಬಲಿಸದೆ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು.
ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರ ಬೆಂಬಲಿಗರು ಮಾತನಾಡಿ, ʼಶಾಸಕ ಯತ್ನಾಳ ನೇತ್ರತ್ವದ ಬಿಜೆಪಿ ನಾಯಕರ ತಂಡ ವಕ್ಫ್ ವಿರುದ್ಧ ಹೋರಾಟ ನಡೆಸುತ್ತಿರುವುದಕ್ಕೆ ನಮ್ಮ ಬೆಂಬಲವಿದೆ, ಆದರೆ, ಸ್ಥಳೀಯ ಶಾಸಕ ಸೇರಿದಂತೆ ಮುಖಂಡರು, ಕಾರ್ಯಕರ್ತರಿಗೆ ಮಾಹಿತಿ ನೀಡದೆ ಹೋರಾಟ ಮಾಡಲಾಗುತ್ತಿದೆ ಎಂದು ಯತ್ನಾಳ ವಿರುದ್ಧ ಶಾಸಕ ಬೆಲ್ದಾಳೆ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.
ಶಾಸಕ ಯತ್ನಾಳ ನೇತ್ರತ್ವದ ತಂಡ ನಡೆಸಿದ ಹೋರಾಟದಲ್ಲಿ ಜಿಲ್ಲೆಯ ಬಿಜೆಪಿ ಶಾಸಕರು ಹಾಗೂ ಜಿಲ್ಲಾಧ್ಯಕ್ಷ ಸೇರಿದಂತೆ ಸ್ಥಳೀಯ ಮುಖಂಡರು ಬೆಂಬಲಿಸದೆ ದೂರು ಉಳಿದಿದ್ದಾರೆ. ಬಿಜೆಪಿಯಲ್ಲಿ ಎರಡು ಬಣಗಳ ನಡುವಿನ ಈ ಆಂತರಿಕ ಕೆಸರೆರಚಾಟ ಇದೀಗ ವಕ್ಫ್ ವಿರುದ್ಧ ಪ್ರತಿಭಟನೆಯಲ್ಲಿ ಬಯಲಾಗಿದೆ. ಇದು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಲಾಭವಾಗುವುದು ಖಚಿತ ಎನ್ನುವಂತಾಗಿದೆ.
ಈ ಸುದ್ದಿ ಓದಿದ್ದೀರಾ? ವಕ್ಫ್ ವಿವಾದ | ಯತ್ನಾಳ್ ನೇತೃತ್ವದ ಬಿಜೆಪಿಯ ಬಂಡಾಯ ತಂಡದಿಂದ ಬೀದರ್ ಜಿಲ್ಲೆಗೆ ಭೇಟಿ
ರಾಜ್ಯಾದ್ಯಂತ ವಕ್ಫ್ ವಿರುದ್ಧ ರೈತರು, ವಿಪಕ್ಷಗಳಿಂದ ವ್ಯಾಪಕ ಪ್ರತಿರೋಧ ವ್ಯಕ್ತವಾದ ಹಿನ್ನಲೆ ವಕ್ಫ್ ಮಂಡಳಿಯಿಂದ ಯಾವುದೇ ರೈತರಿಗೆ ನೋಟೀಸ್ ನೀಡದಂತೆ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಆದರೆ, ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿದ್ದನ್ನು ತೆಗೆದು ಹಾಕುವಂತೆ ಯತ್ನಾಳ ನೇತ್ರತ್ವದ ತಂಡ ಇಂದು ಬೀದರ್ ಜಿಲ್ಲೆಯಿಂದ ಮತ್ತೆ ಹೋರಾಟ ಆರಂಭಿಸಿದೆ.