ಲೋಕಸಭೆ ಚುನಾವಣೆಗೆ ಟಿಕೆಟ್ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) 22 ನಾಯಕರು ಏಕಕಾಲದಲ್ಲಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ನೀಡಿರುವ ನಾಯಕರು ‘ಇಂಡಿಯಾ’ ಮೈತ್ರಿಕೂಟಕ್ಕೆ ಬೆಂಬಲ ನೀಡುವುದಾಗಿ ಹೇಳಿದ್ದಾರೆ.
ರಾಜೀನಾಮೆ ನೀಡಿದ ಪ್ರಮುಖ ವ್ಯಕ್ತಿಗಳಲ್ಲಿ ಮಾಜಿ ಸಚಿವೆ ರೇಣು ಕುಶ್ವಾಹಾ, ಮಾಜಿ ಶಾಸಕ ಮತ್ತು ಎಲ್‌ಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ರಾಜ್ಯ ಸಂಘಟನೆ ಸಚಿವ ರವೀಂದ್ರ ಸಿಂಗ್, ಅಜಯ್ ಕುಶ್ವಾಹ, ಸಂಜಯ್ ಸಿಂಗ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಾಂಗಿ ಸೇರಿದ್ದಾರೆ.
ಪಕ್ಷದೊಳಗಿನ ಅಸಮಾಧಾನದಿಂದ ರಾಜೀನಾಮೆ ಪರ್ವ ಆರಂಭವಾಗಿದ್ದು, ಹಣ ನೀಡಿದವರಿಗೆ ಟಿಕೆಟ್ ಕೊಡಲಾಗುತ್ತಿದೆ ಎಂದು ಆರೋಪಗಳು ಕೇಳಿಬಂದಿವೆ.
ಪಕ್ಷಕ್ಕೆ ರಾಜೀನಾಮೆ ನೀಡಿದ ಬಗ್ಗೆ ಮಾತನಾಡಿದ ಮಾಜಿ ಸಂಸದೆ ರೇಣು ಕುಶ್ವಾಹಾ, ”ಹೊರಗಿನವರಿಗೆ ಟಿಕೆಟ್ ನೀಡುವ ಬದಲು ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಹೊರಗಿನವರಿಗೆ ಟಿಕೆಟ್ ನೀಡಲಾಗಿದೆ ಎಂದರೆ, ನಿಮ್ಮ ಪಕ್ಷದಲ್ಲಿ ಸಮರ್ಥರು ಇಲ್ಲ ಎಂದರ್ಥ. ಹಾಗಾದರೆ ನಾವು ಸಮರ್ಥರಲ್ಲವೇ? ಪಕ್ಷದಲ್ಲಿರುವ ಕಾರ್ಯಕರ್ತರು, ಮುಖಂಡರು ಪಕ್ಷಕ್ಕಾಗಿ ಕೆಲಸ ಮಾಡುತ್ತಾರೆ, ನಿಮ್ಮನ್ನು (ಚಿರಾಗ್) ನಾಯಕರನ್ನಾಗಿ ಮಾಡುತ್ತಾರೆ. ಆದರೆ, ಹೊರಗಿನವರಿಗೆ ಟಿಕೆಟ್ ನೀಡಿದಾಗ ನಮ್ಮ ಪಕ್ಷ ನಿಷ್ಠೆಗೆ ಬೆಲೆ ಎಲ್ಲಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಟಿಕೆಟ್ ಸಿಗದಿದ್ದಕ್ಕೆ ಅಸಮಾಧಾನಗೊಂಡಿರುವ ಮಾಜಿ ಶಾಸಕ ಮತ್ತು ಎಲ್‌ಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, “ಬಂಡಾಯ ಎಲ್‌ಜೆಪಿ ನಾಯಕರು ‘ಇಂಡಿಯಾ’ ಮೈತ್ರಿಕೂಟವನ್ನು ಬೆಂಬಲಿಸುತ್ತಾರೆ” ಎಂದು ಹೇಳಿದ್ದಾರೆ.
“ದೇಶದಲ್ಲಿ ಇಂತಹ ಮಹತ್ವದ ಚುನಾವಣೆಗಳು ನಡೆಯುತ್ತಿರುವಾಗ ಎಲ್‌ಜೆಪಿ ವರಿಷ್ಠರು ಹೊರಗಿನವರಿಗೆ ಟಿಕೆಟ್ ನೀಡಿ ಪಕ್ಷದ ಕಾರ್ಯಕರ್ತರನ್ನು ಕಡೆಗಣಿಸಿದ್ದಾರೆ. ‘ಚಿರಾಗ್ ಪಾಸ್ವಾನ್‌ಗೆ ಜಯವಾಗಲಿ’ ಎಂಬ ಘೋಷಣೆಗಳನ್ನು ಹಗಲಿರುಳು ಕೂಗುತ್ತಿದ್ದ ಜನರು ‘ಹೊಸ ಬಿಹಾರ’ದ ನಿರೀಕ್ಷೆಯಲ್ಲಿದ್ದರು. ಆದರೆ, ಜನರ ನಿರೀಕ್ಷೆಗೆ ದ್ರೋಹ ಮಾಡಲಾಗಿದೆ. ದೇಶವನ್ನು ಉಳಿಸಲು, ‘ಇಂಡಿಯಾ’ ಮೈತ್ರಿಕೂಟವನ್ನು ನಾವು ಬೆಂಬಲಿಸುತ್ತೇವೆ” ಎಂದು ಅವರು ಹೇಳಿದ್ದಾರೆ.
ಪಕ್ಷದ ಸಂಘಟನಾ ಕಾರ್ಯದರ್ಶಿ ರವೀಂದ್ರ ಸಿಂಗ್ ಅವರು ಪಕ್ಷದ ವರಿಷ್ಠ ಚಿರಾಗ್ ಪಾಸ್ವಾನ್ ಟಿಕೆಟ್ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. “ಚಿರಾಗ್ ಪಾಸ್ವಾನ್ ಅವರು ಬಿಹಾರದ ಜನರ ಭಾವನೆಗಳೊಂದಿಗೆ ಆಟವಾಡಿದ್ದಾರೆ. ನಮ್ಮ ಪರಿಶ್ರಮದಿಂದ ಪಕ್ಷಕ್ಕೆ ಐದು ಸೀಟುಗಳು ಸಿಕ್ಕಿದ್ದವು. ಅವುಗಳನ್ನು ಮಾರಾಟ ಮಾಡಿದ್ದಾರೆ. ಅವರಿಗೆ ಬಿಹಾರದ ಜನರು ಉತ್ತರ ನೀಡಲಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ, ಜೆಡಿಯು ಜೊತೆ ಮೈತ್ರಿ ಮಾಡಿಕೊಂಡಿರುವ ಲೋಕ ಜನಶಕ್ತಿ ಪಕ್ಷ (ಎಲ್‌ಜೆಪಿ) ಬಿಹಾರದ 40 ಲೋಕಸಭಾ ಸ್ಥಾನಗಳ ಪೈಕಿ ಐದರಲ್ಲಿ ಸ್ಪರ್ಧಿಸುತ್ತಿದೆ – ವೈಶಾಲಿ, ಹಾಜಿಪುರ್, ಸಮಸ್ತಿಪುರ್, ಖಗಾರಿಯಾ ಮತ್ತು ಜಮುಯಿ.
ಬಿಹಾರದಲ್ಲಿ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮೊದಲ ಹಂತ ಏಪ್ರಿಲ್ 19, ಎರಡನೇ ಹಂತ ಏಪ್ರಿಲ್ 26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಮತ್ತು ಏಳನೇ ಹಂತ ಜೂನ್ 1 ರಂದು ನಡೆಯಲಿದೆ.