ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಏಕೆ ಪದೇಪದೆ ಬಣ ಬದಲಿಸುತ್ತಾರೆ ಎನ್ನುವುದನ್ನು ಬಿಹಾರದ ಜನತೆ ತಿಳಿದುಕೊಳ್ಳಲು ಬಯಸಿದೆ ಎಂದು ಬಿಹಾರ ವಿಧಾನಸಭೆಯಲ್ಲಿ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ.
ಎನ್‌ಡಿಎ-ಜೆಡಿ(ಯು) ಮೈತ್ರಿಕೂಟದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಮಾತನಾಡಿದ ಅವರು, “ನಿತೀಶ್ ಕುಮಾರ್ ಮತ್ತೊಮ್ಮೆ ಬಣ ಬದಲಿಸುವುದಿಲ್ಲ ಎನ್ನುವುದನ್ನು ಪ್ರಧಾನಿ ನರೇಂದ್ರ ಮೋದಿ ಖಾತರಿಪಡಿಸುವರೆ?” ಎಂದು ಪ್ರಶ್ನಿಸಿದ್ದಾರೆ.
ವಿಶ್ವಾಸಮತ ಯಾಚನೆಗೆ ಮೊದಲು ಆಡಳಿತ ಪಕ್ಷ ಮುಂದಿಟ್ಟ ಸ್ಪೀಕರ್ ಬದಲಾವಣೆಗೆ ಸದನ ಅಂಗೀಕರಿಸಿದೆ. ಆಡಳಿತ ಪಕ್ಷದ ಪರ 125 ಮತ್ತು ವಿಪಕ್ಷಗಳ ಪರವಾಗಿ 112 ಮತಗಳು ದಾಖಲಾಗಿವೆ.
ಮೊದಲಿಗೆ 9ನೇ ಬಾರಿಗೆ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ಅವರಿಗೆ ಅಭಿನಂದನೆ ಸಲ್ಲಿಸಿದ ತೇಜಸ್ವಿ, “ಒಂದೇ ಅವಧಿಯಲ್ಲಿ ಮೂರು ಬಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಅದ್ಭುತ ಕ್ಷಣ ಹಿಂದೆಂದೂ ನೋಡಿಲ್ಲ” ಎಂದು ತೇಜಸ್ವಿ ಹೇಳಿದ್ದಾರೆ.
“ಹಳೇ ಪಿಂಚಣಿ ವ್ಯವಸ್ಥೆಯನ್ನು ಮರಳಿ ತನ್ನಿ” ಎಂದು ಜೆಡಿಯು-ಎನ್‌ಡಿಎ ಸರ್ಕಾರವನ್ನು ಅವರು ಒತ್ತಾಯಿಸಿದರು. “ಸಮಾಜವಾದಿ ಪಕ್ಷಗಳ ಕೂಟದ ಸದಸ್ಯರಾದ ನೀವು ಪ್ರಧಾನಿ ಮೋದಿ ವಿರುದ್ಧ ಬಾವುಟ ಹಾರಿಸಿದವರಲ್ಲಿ ಮೊದಲಿಗರು. ಈಗ ನಾನು ಬಾವುಟ ಹಿಡಿದು ಮೋದಿಯನ್ನು ಬಿಹಾರದಲ್ಲಿ ತಡೆಯುವ ಕೆಲಸ ಮಾಡುತ್ತೇನೆ” ಎಂದು ಹೇಳಿದ್ದಾರೆ.