ಬಿಹಾರ ಮತದಾರ ಪಟ್ಟಿ ಪರಿಷ್ಕರಣೆ: ಮೋದಿ ಮಸಲತ್ತು ಬಹಿರಂಗ?

Date:

Advertisements
ಬಿಹಾರದಲ್ಲಿ SIR ಪ್ರಕ್ರಿಯೆ ಆರಂಭಿಸಿದೆ. ಮಹಾರಾಷ್ಟ್ರದ ಚುನಾವಣಾ ವ್ಯತ್ಯಾಸ ಮತ್ತು ಬಿಹಾರದ ಎಸ್‌ಐಆರ್ ಪ್ರಕ್ರಿಯೆಗಳು ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿದೆ. ಅನುಮಾನಿಸುವಂತೆ ಮಾಡಿದೆ. 

ಚುನಾವಣೆಯ ತಯಾರಿಯಲ್ಲಿರುವ ಬಿಹಾರದಲ್ಲಿ ಚುನಾವಣಾ ಆಯೋಗವು ‘ವಿಶೇಷ ತೀವ್ರ ಪರಿಷ್ಕರಣೆ’ (ಸ್ಪೆಷಲ್ ಇನ್‌ಟೆನ್ಸಿವ್ ರಿವಿಷನ್ -SIR) ನಡೆಸಲು ಆರಂಭಿಸಿದೆ. ಮತದಾರರ ಪಟ್ಟಿಯ ಸಮಗ್ರತೆಯನ್ನು ರಕ್ಷಿಸುವುದು ಈ ಕ್ರಮದ ಉದ್ದೇಶವೆಂದು ಆಯೋಗ ಹೇಳಿಕೊಂಡಿದೆ. ಆದರೆ, ಮತದಾರ ಪಟ್ಟಿಯ ಪರಿಷ್ಕರಣೆಗೆ ಆಯೋಗ ಹಾಕಿರುವ ಮಾನದಂಡಗಳು/ನಿಯಮಗಳು ಬಿಹಾರದ ಹಿಂದುಳಿದ, ತಳ ಸಮುದಾಯ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಬಹುಸಂಖ್ಯಾತರನ್ನು ಮತದಾನದಿಂದ ಹೊರಗಿಡುತ್ತವೆ, ವಂಚಿಸುತ್ತವೆ ಎಂಬ ಗಂಭೀರ ಆರೋಪಗಳಿವೆ.

ಭಾರತದ ಜನಪ್ರತಿನಿಧಿಗಳ ಕಾಯಿದೆ-1950 (RPA-1950)ರ ಸೆಕ್ಷನ್ 21(1) ಮತ್ತು (2) ಪ್ರತಿ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳು ನಡೆಯುವ ಸಮಯದಲ್ಲಿ, ಚುನಾವಣೆಗೂ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಕಡ್ಡಾಯ. ಕಾಯಿದೆಯ ಸೆಕ್ಷನ್ 21(3) ಚುನಾವಣಾ ಆಯೋಗಕ್ಕೆ ಯಾವುದೇ ಕ್ಷೇತ್ರದಲ್ಲಿ ‘ವಿಶೇಷ ಪರಿಷ್ಕರಣೆ’ ನಡೆಸುವ ಅಧಿಕಾರ ನೀಡಿದೆ. ಈ ಪರಿಷ್ಕರಣೆ ನಡೆಸಲು ಯಾವ ಕಾರಣಕ್ಕಾಗಿ ಪರಿಷ್ಕರಣೆ ಮಾಡಲಾಗುತ್ತಿದೆ ಎಂಬುದನ್ನು ಕಡ್ಡಾಯವಾಗಿ ವಿವರಿಸಬೇಕು. ಆದರೆ, ಈಗ ಬಿಹಾರದಲ್ಲಿ ನಡೆಸುತ್ತಿರುವ ‘ವಿಶೇಷ ತೀವ್ರ ಪರಿಷ್ಕರಣೆ-SIR’ ಕುರಿತಾಗಿ ಕಾಯ್ದೆಯಲ್ಲಿ ಯಾವುದೇ ವಿವರಣೆ ಅಥವಾ ಆಯೋಗಕ್ಕೆ ಅಧಿಕಾರ ನೀಡಲಾಗಿಲ್ಲ.

ಆದಾಗ್ಯೂ, ಕಳೆದ ತಿಂಗಳು (ಜೂನ್ 24) ಆಯೋಗ ಹೊರಡಿಸಿದ ಪ್ರಕಟಣೆಯಲ್ಲಿ, ”1960ರ ಮತದಾರರ ನೋಂದಣಿ ನಿಯಮಗಳ ಸೆಕ್ಷನ್ 25ಕ್ಕೆ 1987ರಲ್ಲಿ ತಿದ್ದುಪಡಿ ಮಾಡಲಾಗಿದೆ. ತಿದ್ದುಪಡಿಯಲ್ಲಿ ಎರಡು ವಿಧದ ಪರಿಷ್ಕರಣೆಗಳನ್ನು ಸೇರಿಸಲಾಗಿದೆ. 1. ಸಂಕ್ಷಿಪ್ತ ಪರಿಷ್ಕರಣೆ ಮತ್ತು 2. ವಿಶೇಷ ತೀವ್ರ ಪರಿಷ್ಕರಣೆ” ಎಂದು ಹೇಳಿಕೊಂಡಿದೆ.

“ವೇಗವಾಗಿರುವ ನಗರೀಕರಣ, ವಲಸೆ, ಯುವ ಮತದಾರರ ಸೇರ್ಪಡೆ, ಮರಣ ಹೊಂದಿದವರನ್ನು ಪಟ್ಟಿಯಿಂದ ಅಳಿಸುವುದು ಹಾಗೂ ವಿದೇಶಿ ಅಕ್ರಮ ವಲಸಿಗರ ಹೆಸರುಗಳನ್ನು ಗುರುತಿಸಿ ದೋಷರಹಿತ ಮತದಾರರ ಪಟ್ಟಿಯನ್ನು ತಯಾರಿಸಲು ಗಾಢ ಪರಿಷ್ಕರಣೆ ಅಗತ್ಯವಾಗಿದೆ” ಎಂದು ಆಯೋಗ ವಾದಿಸಿದೆ.

ಈ ವಲಸೆ, ಹೊಸ ಮತದಾರರ ಸೇರ್ಪಡೆ ಹಾಗೂ ಮೃತ ಮತದಾರರ ಹೆಸರುಗಳ ತೆಗೆದುಹಾಕುವಿಕೆಯು ಸಾಮಾನ್ಯ ಸಂಗತಿ. ಇದು ಪ್ರತಿಬಾರಿಯೂ ನಡೆಯುತ್ತದೆ. ಇದಕ್ಕಾಗಿ, ವಿಶೇಷ ಪರಿಷ್ಕರಣೆ ಅಥವಾ ತೀವ್ರ ಪರಿಷ್ಕರಣೆಯ ಅಗತ್ಯವಿಲ್ಲ ಎಂಬುದು ತಿಳಿದಿರುವ ಸಂಗತಿ. ಆದರೆ, ಆಯೋಗವು ‘ವಿದೇಶಿ ಅಕ್ರಮ ವಲಸಿಗರ’ ಸೇರ್ಪಡೆಯ ಬಗ್ಗೆ ಮಾತನಾಡುತ್ತಿದೆ. ಆದರೆ, ಮತದಾರ ಪಟ್ಟಿಯಲ್ಲಿ ವಿದೇಶಿ ಅಕ್ರಮ ವಲಸಿಗರು ಹೆಸರು ನೋಂದಾಯಿಸಿದ್ದಾರೆ ಎಂಬುದಕ್ಕೆ ಆಯೋಗ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ. ಇದು ವಿಶೇಷ ತೀವ್ರ ಪರಿಷ್ಕರಣೆಯ ಔಚಿತ್ಯದ ಕುರಿತ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ.

ಬಿಹಾರದಲ್ಲಿ 7.89 ಕೋಟಿ ಮತದಾರರಿದ್ದಾರೆ ಎಂದು ಹೇಳಲಾಗಿದೆ. ಈ ಪ್ರಮಾಣದ ಮತದಾರರನ್ನು 98,498 ಬೂತ್‌ ಲೆವೆಲ್ ಆಫೀಸರ್‌ಗಳು (ಬಿಎಲ್‌ಒ) 30 ದಿನಗಳೊಳಗೆ (ಜೂನ್ 25ರಿಂದ ಜುಲೈ 25) ಮನೆ-ಮನೆಗೆ ಹೋಗಿ ಪರಿಶೀಲಿಸಬೇಕು. ಮತಪತ್ರ ಪರಿಷ್ಕರಣೆಯ ಫಾರ್ಮ್‌ಗಳನ್ನು ಭರ್ತಿ ಮಾಡಿಸಿ, ಅಗತ್ಯವಿರುವ ಸ್ವಯಂ-ದೃಢೀಕರಣ (ತಾವು ಈ ದೇಶದ ಮತದಾರರು ಎಂಬುದನ್ನು ಮತದಾರರೇ ಸಾಬೀತು ಮಾಡಬೇಕು) ದಾಖಲೆಗಳನ್ನು ಪಡೆದು ಚುನಾವಣಾ ಆಯೋಗದ ಅಧಿಕೃತ ಪೋರ್ಟಲ್‌ ECINetಗೆ ಅಪ್‌ಲೋಡ್ ಮಾಡಬೇಕು. ಗಡುವಿನೊಳಗೆ ಫಾರ್ಮ್ ಸಲ್ಲಿಸದವರನ್ನು 2025ರ ಆಗಸ್ಟ್ 1ರಂದು ಪ್ರಕಟವಾಗುವ ಕರಡು ಮತದಾರರ ಪಟ್ಟಿಯಿಂದ ಕೈಬಿಡಲಾಗುವುದು. ಕೈಬಿಡಲ್ಪಟ್ಟವರು 2025ರ ಸೆಪ್ಟೆಂಬರ್ 1ರೊಳಗಿನ ‘ಕ್ಲೈಮ್ಸ್ ಆಂಡ್ ಆಬ್ಜೆಕ್ಷನ್ಸ್’ ಅವಧಿಯಲ್ಲಿ ಹೊಸ ಫಾರ್ಮ್ ಭರ್ತಿಮಾಡಿ ಸಲ್ಲಿಸಬಹುದು ಎಂದು ಚುನಾವಣಾ ಆಯೋಗ ಹೇಳಿದೆ.

ಆದರೆ, ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗದಲ್ಲಿ ಕಾನೂನಾತ್ಮಕ ಅವಕಾಶ ಇದೆಯೇ ಎಂಬುದು ಪ್ರಮುಖ ಪ್ರಶ್ನೆಯಾದರೆ, ಮತದಾರರೇ ಒದಗಿಸಬೇಕಾದ ಸ್ವಯಂ-ದೃಢೀಕೃತ ದಾಖಲೆಗಳು ವಿವಾದ-ವಿರೋಧಕ್ಕೆ ಕಾರಣವಾಗಿವೆ. ಪ್ರತಿ ಮತದಾರರು ತನ್ನ ಜನನ ದಿನಾಂಕ ಮತ್ತು ಜನ್ಮಸ್ಥಳವನ್ನು ಸಾಬೀತುಪಡಿಸಬೇಕು. 1987ಕ್ಕಿಂತ ಮೊದಲು ಜನಿಸಿದವರು ತಮ್ಮ ಜನ್ಮದಿನಾಂಕ ಅಥವಾ ಜನ್ಮಸ್ಥಳವನ್ನು ಸಾಬೀತುಪಡಿಸಬೇಕು. 1987ರ ಜುಲೈ 1 ಮತ್ತು 2004ರ ಡಿಸೆಂಬರ್ 2ರ ನಡುವೆ ಜನಿಸಿದವರು ತಮ್ಮ ಜನ್ಮದಿನಾಂಕ ಮತ್ತು ತಮ್ಮ ಒಬ್ಬ ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. 2004ರ ಡಿಸೆಂಬರ್ 2ರ ನಂತರ ಜನಿಸಿದವರು ತಮ್ಮ ಜನ್ಮದಿನಾಂಕ/ಸ್ಥಳ ಮತ್ತು ತಮ್ಮ ಇಬ್ಬರು ಪೋಷಕರ ಜನ್ಮದಿನಾಂಕ/ಸ್ಥಳವನ್ನು ಸಾಬೀತುಪಡಿಸಬೇಕು. ಅದಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಬೇಕು.

ಈ ಕ್ರಮವು 2019ರಲ್ಲಿ ಮೋದಿ ಸರ್ಕಾರ ಜಾರಿಗೊಳಿಸಿದ ಪೌರತ್ವ ತಿದ್ದುಪಡಿ ಕಾಯಿದೆ (ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಆಧಾರದ ಮೇಲೆ ಬಿಹಾರದ ಪ್ರತಿ ಮತದಾರನ ಪೌರತ್ವವನ್ನು ಪರಿಶೀಲಿಸುವ ಉದ್ದೇಶವನ್ನು ಹೊಂದಿದೆ ಎಂದು ಸ್ಪಷ್ಟವಾಗಿದೆ.

ಅಸ್ಸಾಂನಲ್ಲಿ ಎನ್‌ಆರ್‌ಸಿಯನ್ನು ಜಾರಿಗೊಳಿಸಲು 2019ರಲ್ಲಿ ಕೇಂದ್ರ ಸರ್ಕಾರ ಯತ್ನಿಸಿತು. ಆದರೆ, ದೇಶವ್ಯಾಪಿ ಎದುರಾದ ಪ್ರತಿಭಟನೆಗಳಿಂದಾಗಿ, ತನ್ನ ನಿರ್ಧಾರದಿಂದ ಹಿಂದೆಸರಿಯಿತು. ಈಗ, ಚುನಾವಣಾ ಆಯೋಗದ ಮೂಲಕ ಮತಧಾರರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಎನ್‌ಆರ್‌ಸಿಯನ್ನು ಹಿಂಬಾಗಿಲಿನಿಂದ ಜಾರಿಗೊಳಿಸಲು ಮೋದಿ ಸರ್ಕಾರ ಹವಣಿಸುತ್ತಿದೆ. ಆ ಕಾರಣಕ್ಕಾಗಿಯೇ, ‘ವಿಶೇಷ ತೀವ್ರ ಪರಿಷ್ಕರಣೆ’ (ಎಸ್‌ಐಆರ್‌) ಪ್ರಕ್ರಿಯೆ ಆರಂಭಿಸಿದೆ. ಮತದಾರರು ತಮ್ಮ ಪೌರತ್ವವನ್ನು ಸಾಬೀತು ಮಾಡಿ, ಅದಕ್ಕೆ ಅಗತ್ಯ ಪುರಾವೆಗಳನ್ನು ಒದಗಿಸುವಂತೆ ಒತ್ತಾಯಿಸುತ್ತಿದೆ. ಒಂದು ವೇಳೆ, ತಮ್ಮ ಜನ್ಮಸ್ಥಳ ಅಥವಾ ತನ್ನ ತಂದೆ-ತಾಯಿಯ ಜನ್ಮಸ್ಥಳ/ದಿನಾಂಕಕ್ಕೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸುವಲ್ಲಿ ವಿಫಲವಾದರೆ, ಅವರನ್ನು ಮತದಾರ ಪಟ್ಟಿಯಿಂದ ಹೊರಹಾಕಲಾಗುತ್ತದೆ. ಮಾತ್ರವಲ್ಲ, ಅವರು ಭಾರತೀಯರೇ ಆಗಿದ್ದರೂ, ಅವರನ್ನು ಭಾರತೀಯರಲ್ಲ ಎಂದೂ ಕೇಂದ್ರ ಸರ್ಕಾರ ತೀರ್ಮಾನಿಸುತ್ತದೆ. ಅವರನ್ನು ದೇಶದಿಂದ ಹೊರಹಾಕಲು ಅಥವಾ ಅಸ್ಸಾಂನಲ್ಲಿ ತೆರೆದಿರುವ ಬೃಹತ್ ಬಂದೀಖಾನೆ ‘ಡಿಟೆನ್ಶನ್‌ ಸೆಂಟರ್‌’ನಂತಹ ಜೈಲುಗಳಿಗೆ ದೂಡುತ್ತದೆ.

ಇದಕ್ಕೆ ನಿದರ್ಶನವಾಗಿ ಅಸ್ಸಾಂ ನಮ್ಮ ಮುಂದಿದೆ. ಅಲ್ಲಿ, 19 ಲಕ್ಷ ಜನರನ್ನು ಭಾರತೀಯರಲ್ಲ ಎಂದು ಗುರುತಿಸಲಾಗಿದೆ. ಆದರೆ, ಅವರಲ್ಲಿ ಹೆಚ್ಚಿನವರು ಭಾರತೀಯರೇ ಆಗಿದ್ದರೂ, ತಾವು ಭಾರತೀಯರು ಎಂದು ಸಾಬೀತು ಮಾಡುವಲ್ಲಿ ವಿಫಲರಾಗಿದ್ದಾರೆ. ಇತ್ತೀಚೆಗೆ, ಭಾರತೀಯ ಯುವತಿಯೊಬ್ಬರನ್ನು ಬಾಂಗ್ಲಾ ಗಡಿಯಲ್ಲಿ ನಿಲ್ಲಿಸಿ, ನೀನು ಭಾರತೀಯಳಲ್ಲ ಎಂದು ಬಾಂಗ್ಲಾದೇಶಕ್ಕೆ ಹೋಗುವಂತೆ ಒತ್ತಾಯಿಸಲಾಗಿತ್ತು.

ದೇಶದಲ್ಲಿ ಅಥವಾ ಬಿಹಾರದಲ್ಲಿ ಹೆಚ್ಚಿನ ಜನರು ಅದರಲ್ಲೂ ಹಿಂದುಳಿದ-ತಳ ವರ್ಗದವರು. ಅದರಲ್ಲೂ, 40-50 ವಯೋಮಾನ ದಾಟಿದವರಲ್ಲಿ ಹೆಚ್ಚಿನವರು ಅನಕ್ಷರಕ್ಷರು. ಇವರೆಲ್ಲರೂ ತಮ್ಮ ಜನ್ಮಸ್ಥಳ/ದಿನಾಂಕಕ್ಕೆ ಸಂಬಂಧಿಸಿದ ಪುರಾವೆಗಳನ್ನು ಹೊಂದಿಲ್ಲ ಎಂಬುದು ಸ್ಪಷ್ಟ. ಇದು ಸರ್ಕಾರಕ್ಕೂ ಗೊತ್ತು. ಹೀಗಿದ್ದರೂ, ಜನರನ್ನು ಶೋಷಿಸುವ ಕುತಂತ್ರಕ್ಕೆ ಸರ್ಕಾರ ಮುಂದಾಗಿದೆ. ಅದಕ್ಕೆ ಚುನಾವಣಾ ಆಯೋಗ ಸಾಥ್ ಕೊಡುತ್ತಿದೆ ಎಂದು ಆರೋಪಿಸಲಾಗಿದೆ.

ಬಿಹಾರದ ಬಹುಸಂಖ್ಯಾತ ಮತದಾರರು, ವಿಶೇಷವಾಗಿ ಕೃಷಿಕರು ಮತ್ತು ಹಿಂದುಳಿದ ವರ್ಗಗಳು, ದಲಿತರು ಹಾಗೂ ಗ್ರಾಮೀಣ ಕಾರ್ಮಿಕರು ಕಟ್ಟುನಿಟ್ಟಾದ ಪೌರತ್ವ ಮಾನದಂಡಗಳಿಗೆ ಅನುಗುಣವಾಗಿ ತಮ್ಮ ಪೌರತ್ವವನ್ನು ಸಾಬೀತು ಮಾಡಲು ಕಷ್ಟವಾಗಬಹುದು. ಅವರಲ್ಲಿ, ಬಹುತೇಕರು ತಮ್ಮದೇ ದಾಖಲೆಗಳನ್ನು ಸಂಗ್ರಹಿಸಲು BLOಗಳ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗುತ್ತಾರೆ. ಮಾತ್ರವಲ್ಲದೆ, ಬಿಎಲ್‌ಒಗಳು ಎಸಗಬಹುದಾದ ತಪ್ಪುಗಳಿಗೆ ಈ ಅಮಾಯಕ ಜನರು ಶಿಕ್ಷೆಗೆ ಒಳಗಾಗಬೇಕಾಗುತ್ತದೆ. ಗಮನಾರ್ಹವಾಗಿ, ಪ್ರತಿ ಬಿಎಲ್‌ಒಗಳು 30 ದಿನಗಳಲ್ಲಿ ಸುಮಾರು 800 ಮತದಾರರ ಫಾರ್ಮ್‌ಗಳನ್ನು ಪರಿಶೀಲಿಸಿ ಅಪ್‌ಲೋಡ್ ಮಾಡಬೇಕಾಗಿದೆ. ಹೀಗಾಗಿ, ತಪ್ಪುಗಳು ಸಾಮಾನ್ಯವಾಗಿ ಆಗಿಬಿಡುತ್ತವೆ. ಅಂತಹ ತಪ್ಪುಗಳ ಕಾರಣಕ್ಕಾಗಿ, ಆಗಸ್ಟ್ 1ರಂದು ಪ್ರಕಟವಾಗುವ ಕರಡು ಪಟ್ಟಿಯಿಂದ ಬೃಹತ್ ಸಂಖ್ಯೆಯ ಮತದಾರರನ್ನು ಕೈಬಿಡಬಹುದಾದ ಅಪಾಯಗಳಿವೆ. ಪರಿಣಾಮವಾಗಿ, ಜನರು ‘ಕ್ಲೈಮ್ಸ್ ಮತ್ತು ಆಕ್ಷೇಪಣೆ’ಗಳ ಮೊರೆ ಹೋಗಬೇಕಾಗುತ್ತದೆ. ಇದು ಜನರಿಗೂ-ಅಧಿಕಾರಿಗಳಿಗೂ ಭಾರೀ ತೊಂದರೆ ಕೊಡುತ್ತದೆ.

ಇನ್ನೊಂದು ಮುಖ್ಯವಾದ ಸಂಗತಿ ಎಂದರೆ, ಬಿಹಾರವು ವಲಸೆ ರಾಜ್ಯವೆಂದೇ ಕುಖ್ಯಾತಿ ಪಡೆದಿದೆ. ಭಾರತದ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ, ಅತೀ ಹೆಚ್ಚು ವಲಸೆ ಹೋಗುವವರು ಬಿಹಾರದ ಜನರು. ಬಿಹಾರದಲ್ಲಿ ನಡೆದ 2022ರ ಜಾತಿ ಸಮೀಕ್ಷೆಯ ಪ್ರಕಾರ, ಬಿಹಾರದ ಒಟ್ಟು 13.07 ಕೋಟಿ ಜನಸಂಖ್ಯೆಯಲ್ಲಿ 53.7 ಲಕ್ಷ ಜನರು (4%) ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದಾರೆ. ಅನ್ಯ ರಾಜ್ಯಗಳಲ್ಲಿ ವಾಸಿಸುತ್ತಿದ್ದಾರೆ. ಈ ವಲಸಿಗರಿಗೆ ದಾಖಲೆಗಳನ್ನು ಸಂಗ್ರಹಿಸುವ ಅಥವಾ ಗಡುವಿನೊಳಗೆ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದು ಕಷ್ಟಸಾಧ್ಯ. ಪರಿಣಾಮ, ವಲಸಿಗರು ಮತದಾರ ಪಟ್ಟಿಯಿಂದ ಹೊರಗುಳಿಯುವ ಅಪಾಯಗಳಿವೆ.

ಈ ಕಾರಣಗಳಿಗಾಗಿ, ಎಸ್‌ಆರ್‌ಐ ಪ್ರಕ್ರಿಯೆಯು ಒಂದು ಬಹಿಷ್ಕರಣಾ (exclusionary) ಕ್ರಮವಾಗಿದೆ. ಇದು, ಹೆಚ್ಚಿನ ಸಂಖ್ಯೆಯ ಮತದಾರರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ. ಹೀಗಾಗಿಯೇ, ಬಿಹಾರದ ಜನರು, ರಾಜಕೀಯ ತಜ್ಞರು ಹಾಗೂ ವಿಪಕ್ಷಗಳು ಎಸ್‌ಆರ್‌ಐ ಪ್ರಕ್ರಿಯೆನ್ನು ವಿರೋಧಿಸುತ್ತಿದ್ದಾರೆ. ಮತದಾರರ ಮತದಾನದ ಹಕ್ಕನ್ನು ರಕ್ಷಿಸಲು, ಚುನಾವಣಾ ಆಯೋಗವು ಇಂತಹ ಜನವಿರೋಧಿ ಕ್ರಮವನ್ನು ಕೈಬಿಡಬೇಕೆಂದು ಒತ್ತಾಯಿಸುತ್ತಿದ್ದಾರೆ.

ಈ ಲೇಖನ ಓದಿದ್ದೀರಾ?: ಡಾ. ಬಿ.ಆರ್. ಅಂಬೇಡ್ಕರ್ ಪೀಪಲ್ ಎಜುಕೇಷನ್ ಸೊಸೈಟಿ ಸ್ಥಾಪಿಸಿದ್ದೇಕೆ?

ಅಲ್ಲದೆ, ”ವಿಶೇಷ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ ಎನ್‌ಆರ್‌ಸಿಯನ್ನು ಗುಟ್ಟಾಗಿ ಜಾರಿಗೊಳಿಸುವ ಯತ್ನವಾಗಿದೆ. 2003ರ ನಂತರ ದಾಖಲಾದ 4.74 ಕೋಟಿ ಮತದಾರರು ತಾವು ಭಾರತೀಯ ಪೌರರೆಂದು ದಾಖಲೆಗಳ ಮೂಲಕ ಸಾಬೀತುಪಡಿಸಬೇಕಾಗಿದೆ. ಇದು ಎನ್‌ಆರ್‌ಸಿ ಹೇರಿಕೆಯ ಹುನ್ನಾರವಾಗಿದೆ” ಎಂದು ಎಐಎಂಐಎಂ ನಾಯಕ ಅಸಾದುದ್ದೀನ್ ಒವೈಸಿ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಬಿಹಾರದ ಸುಮಾರು 2-3 ಕೋಟಿ ಬಡವರು, ದಲಿತರು, ಮುಸ್ಲಿಮರು ಹಾಗೂ ವಲಸೆ ಕಾರ್ಮಿಕರು ತಮ್ಮ ಮತದಾನದ ಹಕ್ಕನ್ನು ಕಳೆದುಕೊಳ್ಳಬಹುದು. ಬಡವರನ್ನು ಮತದಾನದಿಂದ ಹೊರಗಿಡುವ ಹುನ್ನಾರದಿಂದಲೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಾಂಗ್ರೆಸ್‌ ಮತ್ತು ಆರ್‌ಜೆಡಿ ಆರೋಪಿಸಿವೆ. ಚುನಾವಣಾ ಫಲಿತಾಂಶಗಳ ಮೇಲೆ ರಾಜಕೀಯ ಪ್ರಭಾವ ಬೀರುವ ಹುನ್ನಾರವಿರುವ ರಾಜಕೀಯ ಒತ್ತಡಕ್ಕೆ ಮಣಿದು ಆಯೋಗವು ಇಂತಹ ನಿರ್ಧಾರ ಮಾಡಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಅಂದಹಾಗೆ, ಕಳೆದ ವರ್ಷದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಚುನಾವಣಾ ಆಯೋಗವು 41 ಲಕ್ಷ ಹೊಸ ಮತದಾರರನ್ನು ಐದು ತಿಂಗಳಲ್ಲಿ ದಾಖಲಿಸಿತ್ತು. ಇದು ಹಿಂದಿನ ಐದು ವರ್ಷಗಳಿಗೆ ಹೋಲಿಸಿದರೆ, ಭಾರೀ ಸಂಖ್ಯೆಯಾಗಿತ್ತು. ಆದಾಗ್ಯೂ, ಚುನಾವಣೆ ಬಳಿಕ ಅಂತಿಮ ಮತದಾನದ ಸಂಖ್ಯೆಯಲ್ಲಿ 76 ಲಕ್ಷ ಮತಗಳ ವ್ಯತ್ಯಾಸವೂ ಕಂಡುಬಂದಿತ್ತು. ಚುನಾವಣಾ ಮ್ಯಾಚ್‌ಫಿಕ್ಸಿಂಗ್‌ನಿಂದ ಆಗಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಆಯೋಗದ ಮೇಲೆ ಪ್ರಭಾವ ಬೀರಿದೆ. ಹೆಚ್ಚು ಮತದಾರರನ್ನು ಸೇರ್ಪಡೆಗೊಳಿಸಿದೆ ಎಂದು ಅವರು ದೂರಿದ್ದರು.

ಆದಾಗ್ಯೂ, ರಾಹುಲ್ ಗಾಂಧಿ ಆರೋಪಕ್ಕೆ ಆಯೋಗವು ಸ್ಪಷ್ಟ ಉತ್ತರ ನೀಡಲು ಅಥವಾ ಪುರಾವೆಗಳೊಂದಿಗೆ ಅಲ್ಲಗಳೆಯಲು ಸಾಧ್ಯವಾಗಿಲ್ಲ. ಇದೀಗ, ಆಯೋಗವು ಬಿಹಾರದಲ್ಲಿ SIR ಪ್ರಕ್ರಿಯೆ ಆರಂಭಿಸಿದೆ. ಮಹಾರಾಷ್ಟ್ರದ ಚುನಾವಣಾ ವ್ಯತ್ಯಾಸ ಮತ್ತು ಬಿಹಾರದ ಎಸ್‌ಐಆರ್ ಪ್ರಕ್ರಿಯೆಗಳು ಆಯೋಗದ ವಿಶ್ವಾಸಾರ್ಹತೆಯನ್ನು ಹಾಳು ಮಾಡುತ್ತಿದೆ. ಆಯೋಗವನ್ನೇ ಅನುಮಾನಿಸುವಂತೆ ಮಾಡಿದೆ. ಚುನಾವಣಾ ಆಯೋಗವನ್ನು ಬಿಜೆಪಿ ಏಜೆಂಟ್‌ ಎಂದು ವಿಪಕ್ಷಗಳು ಆರೋಪಿಸುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯುವಜನರಿಗಾಗಿ ಪ್ರಾಣವನ್ನೇ ತ್ಯಾಗ ಮಾಡುತ್ತೇನೆ: ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ

ಸುಡುವ ಬಿಸಿಲಿನಲ್ಲಿ ಕುರಿತು ಯುವಜನರು ತಮ್ಮ ಹಕ್ಕೊತ್ತಾಯಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದಾರೆ....

ದೆಹಲಿ ಶಾಲೆಗಳಲ್ಲಿ RSS ಬೋಧನೆ: ಮಕ್ಕಳ ಎಳೆ ಮನಸ್ಸಲ್ಲಿ ಕೋಮುದ್ವೇಷ ಬಿತ್ತುವ ಹುನ್ನಾರ!

ಕೋಮುವಾದಿ, ಕೋಮುದ್ವೇಷಿ, ಸಮಾಜಘಾತುಕ ಸಂಘಟನೆಯ ಬಗ್ಗೆ ಶಾಲೆಗಳಲ್ಲಿ ಬೋಧಿಸುವುದು ಎಳೆ ಮನಸ್ಸುಗಳಲ್ಲಿ...

ಬಾಪೂ ಎಂಬ ಪವಾಡದ ಅನ್ವೇಷಣೆ…

ಇಂದು ರಾಷ್ಟ್ರಪಿತ ಬಾಪೂ ಜನ್ಮದಿನ. ಆ ನೆನಪಿನಲ್ಲಿ ಸದ್ಯದಲ್ಲೇ ಹೊರಬರಲಿರುವ ಎನ್.ಎಸ್.‌...

ಆರ್‌ಎಸ್‌ಎಸ್‌ನ ಕೈಗಳಿಗೆ ಮಹಾತ್ಮ ಗಾಂಧಿಯ ರಕ್ತದ ಕಲೆ ಅಂಟಿದೆ: ಕಾಂಗ್ರೆಸ್‌

ಆರ್‌ಎಸ್‌ಎಸ್ ಮಹಾತ್ಮ ಗಾಂಧಿ, ಭಗತ್ ಸಿಂಗ್ ಮತ್ತು ಚಂದ್ರಶೇಖರ್ ಆಜಾದ್ ಅವರಂತಹ...

Download Eedina App Android / iOS

X