ಸಂವಿಧಾನವನ್ನು ಬದಲಿಸುವ ಮೂಲಕ ಪ್ರಜಾಪ್ರಭುತ್ವವನ್ನು ನಾಶಪಡಿಸುವುದು ಮತ್ತು ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಜನಾಂಗದವರ ಮೀಸಲಾತಿಯನ್ನು ‘ಕಿತ್ತುಕೊಳ್ಳುವುದು’ ಬಿಜೆಪಿಯ ಉದ್ದೇಶವಾಗಿದೆ. ಇದು ಬಿಜೆಪಿ ನಾಯಕರ ಹೇಳಿಕೆಗಳಿಂದಲೇ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಕಾಂಗ್ರೆಸ್ ಇರುವವರೆಗೆ ಜಗತ್ತಿನ ಯಾವ ಶಕ್ತಿಯೂ ವಂಚಿತ ಜನರ ಮೀಸಲಾತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಪ್ರತಿಪಾದಿಸಿದ್ದಾರೆ.
“ಬಿಜೆಪಿ ನಾಯಕರು ಮತ್ತು ನರೇಂದ್ರ ಮೋದಿಯವರ ನಿಕಟವರ್ತಿಗಳ ಹೇಳಿಕೆಯಿಂದ ಅವರ ಉದ್ದೇಶ – ಸಂವಿಧಾನವನ್ನು ಬದಲಾಯಿಸುವ ಮೂಲಕ ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸುವುದು ಎಂಬುದು ಈಗ ಸ್ಪಷ್ಟವಾಗಿದೆ. ದಲಿತರು, ಹಿಂದುಳಿದ ವರ್ಗಗಳು ಮತ್ತು ಆದಿವಾಸಿಗಳ ಮೀಸಲಾತಿಯನ್ನು ಕಿತ್ತುಕೊಳ್ಳುವುದು ಮತ್ತು ದೇಶವನ್ನು ಮುನ್ನಡೆಸುವಲ್ಲಿ ಈ ಸಮುದಾಯಗಳ ಭಾಗವಹಿಸುವಿಕೆಯನ್ನೂ ತಡೆಯುವುದು ಬಿಜೆಪಿಯ ಗುರಿಯಾಗಿದೆ” ಎಂದು ರಾಹುಲ್ ಆರೋಪಿಸಿದ್ದಾರೆ.
“ಸಂವಿಧಾನ ಮತ್ತು ಮೀಸಲಾತಿಯನ್ನು ಕೊನೆಗಾಣಿಸಲು ಯತ್ನಿಸುತ್ತಿರುವ ಬಿಜೆಪಿಯ ದಾರಿಗೆ ಕಾಂಗ್ರೆಸ್ ಬಂಡೆಯಂತೆ ನಿಂತಿದೆ. ಕಾಂಗ್ರೆಸ್ ಇರುವವರೆಗೆ ಜಗತ್ತಿನ ಯಾವ ಶಕ್ತಿಯೂ ವಂಚಿತ ಜನರ ಮೀಸಲಾತಿಯನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.