ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಬಿ.ವೈ ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ನೇಮಿಸಲಾಗಿದೆ. ಆ ಮೂಲಕ ಲಿಂಗಾಯತರನ್ನು ಹಿಡಿದಿಡುವ ಪ್ರಯತ್ನವನ್ನು ಬಿಜೆಪಿ ಹೈಕಮಾಂಡ್ ಮಾಡಿದೆ. ಅದೇ ರೀತಿಯಲ್ಲಿ, ಹಿಂದುಳಿದ ವರ್ಗಗಳ ಮತದಾರರನ್ನು ಸೆಳೆಯಲು ಒಕ್ಕಲಿಗ ಸಮುದಾಯದ ನಾಯಕನೊಬ್ಬನನ್ನು ವಿಧಾನಸಭೆ ವಿಪಕ್ಷ ನಾಯಕನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಅದರಲ್ಲೂ ಆರ್‌ಎಸ್‌ಎಸ್ ಹಿನ್ನೆಲೆ ಮತ್ತು ಸೈದ್ಧಾಂತಿಕತೆ ಇರುವವರನ್ನೇ ಆಯ್ಕೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಡಿಸೆಂಬರ್ 4ರಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ನಡೆಯಲಿದೆ. ಅದಕ್ಕೂ ಮುನ್ನ ನವೆಂಬರ್ 17ರಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸಭೆಯಲ್ಲಿ ಕೇಂದ್ರ ವೀಕ್ಷಕರು ಭಾಗವಹಿಸಲಿದ್ದಾರೆ. ಎಲ್ಲ 66 ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ, ವಿಪಕ್ಷ ನಾಯಕನನ್ನು ಆಯ್ಕೆ ಮಾಡಲು ನಿರ್ಧಾರ ತೆಗೆದುಕೊಳ್ಳುವ ಸಂಭವವಿದೆ.
ಎಲ್ಲ ಶಾಸಕರಂತೆ ತಾನೂ ಕೂಡ ಪ್ರತಿಪಕ್ಷ ನಾಯಕನ ರೇಸ್‌ನಲ್ಲಿದ್ದೇನೆಂದು ಒಕ್ಕಲಿಗ ಸಮುದಾಯಕ್ಕೆ ಸೇರಿದ ಮಾಜಿ ಸಚಿವ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿಕೊಂಡಿದ್ದಾರೆ. ಅಲ್ಲದೆ, ಯಡಿಯೂರಪ್ಪ ಅವರನ್ನೂ ಭೇಟಿ ಮಾಡಿ ಬಂದಿದ್ದಾರೆ. ಮತ್ತೊಬ್ಬ ಒಕ್ಕಲಿಗ ಮುಖಂಡ ಆರ್ ಅಶೋಕ್ ಅವರ ಹೆಸರೂ ಕೂಡ ವಿಪಕ್ಷ ನಾಯಕನ ರೇಸ್‌ನಲ್ಲಿ ಕೇಳಿಬಂದಿದೆ.
ಆದರೆ, ಒಕ್ಕಲಿಗ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿರುವುದರಿಂದ ಆ ಸಮುದಾಯದವರನ್ನು ವಿಪಕ್ಷ ನಾಯಕರನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಕಡಿಮೆ ಎನ್ನುವ ಮಾತುಗಳೂ ಕೂಡ ಬಿಜೆಪಿಯಲ್ಲಿವೆ.
ಇನ್ನು, ಹಿಂದುಳಿದ ಬಿಲ್ಲವ ಸಮುದಾಯದ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಬಿಲ್ಲವರ ಪ್ರಾಬಲ್ಯ ಹೆಚ್ಚಾಗಿದ್ದು, ಅವರನ್ನು ಕಡೆಗಣಿಸಲಾಗದು ಎಂಬ ಮಾತುಗಳಿವೆ. ಜೊತೆಗೆ ಸುನೀಲ್ ಕುಮಾರ್ ಬ್ರಾಹ್ಮಣರಲ್ಲೂ ಗುರುತಿಸಿಕೊಳ್ಳುತ್ತಿದ್ದು, ಅದು ಈಗ ನೆರವಿಗೆ ಬರಬಹುದು ಎನ್ನಲಾಗುತ್ತಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಲ್ಲವ ಸಮುದಾಯವು ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಹೀಗಾಗಿ, ಸುನೀಲ್ ಕುಮಾರ್ ಅವರನ್ನು ಪ್ರತಿಪಕ್ಷ ನಾಯಕನಾಗಿ ನೇಮಿಸಿದರೆ, ಬಿಲ್ಲವ ಮತಗಳು ಮತ್ತೆ ಬಿಜೆಪಿಗೆ ಮರಳಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ ಎನ್ನಲಾಗಿದೆ.
‘ವಿರೋಧ ಪಕ್ಷದ ನಾಯಕ ಕಾವಲು ನಾಯಿ ಇದ್ದಂತೆ, ಅರ್ಹರಿಗೆ ಆ ಹುದ್ದೆ ನೀಡಬೇಕು. ಜಾತಿಯ ಆಧಾರದ ಮೇಲೆ ವಿಪಕ್ಷ ನಾಯಕನನ್ನು ನೇಮಕ ಮಾಡುವುದನ್ನು ನಾನು ಒಪ್ಪುವುದಿಲ್ಲ. ಅಂತಹ ನೇಮಕದಿಂದ ತಾತ್ಕಾಲಿಕವಾಗಿ ಮಾತ್ರ ಪಕ್ಷಕ್ಕೆ ಪ್ರಯೋಜನವಾಗಬಹುದು’ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದ್ದಾರೆ.
ಈ ಎಲ್ಲ ಚರ್ಚೆಗಳ ನಡುವೆ ಬಿಜೆಪಿ ಹೈಕಮಾಂಡ್ ಬಿ ಎಸ್ ಯಡಿಯೂರಪ್ಪ ಅವರೊಂದಿಗೆ ವಿಪಕ್ಷ ನಾಯಕನ ನೇಮಕದ ಬಗ್ಗೆ ಚರ್ಚಿಸುತ್ತಿದೆ. ಅಂತಿಮ ಆಯ್ಕೆಯು ಅವರ ತಂತ್ರಗಾರಿಕೆಯನ್ನು ಅವಲಂಬಿಸಿದೆ ಎಂದು ತಿಳಿದುಬಂದಿದೆ.