- ‘ಮತಾಂತರ ನಿಷೇಧ ಕಾಯ್ದೆ’ ಹಿಂಪಡೆಯುವ ಕಾಂಗ್ರೆಸ್ ತೀರ್ಮಾನಕ್ಕೆ ಬಿಜೆಪಿ ಆಕ್ಷೇಪ
- ಯಾವ “ಮಾಫಿಯಾ” ಈ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ: ಯತ್ನಾಳ
‘ಮತಾಂತರ ನಿಷೇಧ ಕಾಯ್ದೆ’ ಹಿಂಪಡೆಯುವ ತೀರ್ಮಾನ ಮಾಡಿರುವ ಕಾಂಗ್ರೆಸ್ ಸರ್ಕಾರ ಮತ್ತೆ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, “ಅಲ್ಪಸಂಖ್ಯಾತರ ಓಲೈಕೆಗಾಗಿ ಸದಾ ಹಿಂದೂ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಬಲವಂತದ ಮತಾಂತರ, ಲವ್ ಜಿಹಾದ್ʼನಂತಹ ಪ್ರಕರಣಗಳಿಗೆ ಗ್ರೀನ್ ಸಿಗ್ನಲ್ ನೀಡಿದೆ” ಎಂದು ದೂರಿದ್ದಾರೆ.
“ಹಿಂದೂಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿರುವ ಕಾಂಗ್ರೆಸ್ʼಗೆ ಧಿಕ್ಕಾರವಿರಲಿ. ಹಿಂದೂಗಳು ಈಗ ಜಾಗೃತರಾಗಿದ್ದಾರೆ. ನಿಮ್ಮ ಓಲೈಕೆಯ ಆಟ ಇನ್ನು ನಡೆಯದು. ಹಿಂದೂಗಳನ್ನು ರದ್ದಿ ಕಾಗದದಂತೆ ಬಳಸುವ ನಿಮ್ಮ ದಾರ್ಷ್ಟ್ಯಕ್ಕೆ ಶೀಘ್ರವೇ ಉತ್ತರ ಸಿಗಲಿದೆ” ಎಂದಿದ್ದಾರೆ.
ಯತ್ನಾಳ್ ಕಿಡಿ
“ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದರ ಮೂಲಕ ಸಿದ್ದರಾಮಯ್ಯನವರ ಹಿಂದೂ ವಿರೋಧಿ ನಿಲುವನ್ನು ಮತ್ತೆ ಕಾಂಗ್ರೆಸ್ ಸರ್ಕಾರ ಅನುಸರಿಸಿದೆ. ಆಮಿಷದ ಮತಾಂತರವನ್ನು ನಿರ್ಬಂಧಿಸುವ ಮತಾಂತರ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದು “ಹಿಂದೂ” ಸಮಾಜವನ್ನು ಮತಾಂತರಗೊಳಿಸುವವರಿಗೆ ಬೆಂಬಲ ನೀಡಿದಂತೆ ಅಲ್ಲವೇ? ಯಾವ “ಮಾಫಿಯಾ” ಈ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಡ ಹೇರಿದೆ” ಎಂದು ಬಸನಗೌಡ ಪಾಟೀಲ ಯತ್ನಾಳ್ ಟ್ವೀಟ್ ಮಾಡಿದ್ದಾರೆ.
ರಾಷ್ಟ್ರವಿರೋಧಿ ಧೋರಣೆ
“ರಾಷ್ಟ್ರಹಿತ, ರೈತ ಹಿತ ಮತ್ತು ಸಂಸ್ಕೃತಿಯ ರಕ್ಷಣೆಯ ಭಾಗವಾಗಿ ನಮ್ಮ ಸರ್ಕಾರ ಎಪಿಎಂಸಿ ಕಾಯ್ದೆ, ಪಠ್ಯ ಪರಿಷ್ಕರಣೆ, ಮತಾಂತರ ನಿಷೇಧ ಮುಂತಾದ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ರಾಜಕೀಯವಾಗಿ ನಮ್ಮನ್ನು ವಿರೋಧಿಸುವ ಭರದಲ್ಲಿ ಅವುಗಳನ್ನು ಹಿಂತೆಗೆದುಕೊಳ್ಳುವ ನಿರ್ಣಯವನ್ನು ಸಂಪುಟ ಸಭೆಯಲ್ಲಿ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ರಾಷ್ಟ್ರವಿರೋಧಿ ಮತ್ತು ರೈತವಿರೋಧಿ ಧೋರಣೆಗಳನ್ನು ಪ್ರದರ್ಶಿಸುತ್ತಿದೆ” ಎಂದು ಬಿಜೆಪಿ ಟ್ವೀಟ್ ಮಾಡಿದೆ.
“ಸಿದ್ದರಾಮಯ್ಯ ಅವರ ಸರ್ಕಾರ ನಿತ್ಯವೂ ಹೊಸ ಅಧಃಪತನ ಕಾಣುತ್ತಿದೆ. ದೇಶವನ್ನೇ ಶಿಥಿಲಗೊಳಿಸಲು ಹವಣಿಸುತ್ತಿರುವ ಕಾಂಗ್ರೆಸ್ ಜನರ ಭಾವನೆಗಳಿಗೆ ಕೊಳ್ಳಿ ಇಡುವ ಮೂಲಕ ಸ್ವತಃ ಶಿಥಿಲಗೊಳ್ಳಲಿದೆ” ಎಂದಿದೆ.