ಐಪಿಎಲ್‌ನಲ್ಲಿ ಆರ್‌ಸಿಬಿ ಗೆದ್ದ ಬಳಿಕ ನಡೆದ ಸಂಭ್ರಮಾಚಾರಣೆ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತ ಸೇರಿದಂತೆ ವಿವಿಧ ವಿಚಾರಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನವನ್ನು ಕರೆಯುವಂತೆ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ. ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ವಿಶೇಷ ಅಧಿವೇಶನ ನಡೆಸಲು ನಿರಾಕರಿಸಿದೆ.
ರಾಜ್ಯ ಸರ್ಕಾರ ವಿಶೇಷ ಅಧಿವೇಶನಕ್ಕೆ ಹಿಂದೇಟು ಹಾಕುತ್ತಿದ್ದಂತೆ ಕಾಲ್ತುಳಿತ ವಿಶೇಷ ಅಧಿವೇಶನಕ್ಕೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಲು ಮುಂದಾಗಿದೆ. ನಾಳೆ(ಜೂನ್ 17) ಪ್ರತಿಭಟನೆ ನಡೆಯಲಿದೆ. ವಿಪಕ್ಷ ಬಿಜೆಪಿ ಕಾಲ್ತುಳಿತದ ಹೊಣೆಯನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಾಜೀನಾಮೆ ನೀಡಬೇಕೇಂದೂ ಆಗ್ರಹಿಸಿದೆ.
ಇದನ್ನು ಓದಿದ್ದೀರಾ? ಸರ್ಕಾರದ ಹಲವಾರು ಉದ್ಧಟತನಗಳೇ ಕಾಲ್ತುಳಿತಕ್ಕೆ ಕಾರಣ: ಹೆಚ್ ಡಿ ಕುಮಾರಸ್ವಾಮಿ ಆರೋಪ
ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಉಂಟಾಗಿ ಒಟ್ಟು 11 ಮಂದಿ ಸಾವನ್ನಪ್ಪಿದ್ದರು. ರಾಜ್ಯ ಸರ್ಕಾರ ಅಷ್ಟು ತರಾತುರಿಯಲ್ಲಿ ಈ ವಿಜಯೋತ್ಸವಕ್ಕೆ ಅವಕಾಶ ನೀಡಿರುವುದೇ ಈ ಕಾಲ್ತುಳಿತಕ್ಕೆ ಕಾರಣ ಎಂದು ವಿಪಕ್ಷಗಳು ಆರೋಪಿಸಿವೆ. ಈ ದುರಂತದ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ನಡೆಸುವಂತೆ ವಿಪಕ್ಷ ನಾಯಕ ಆರ್.ಅಶೋಕ್ ಅವರು ಮುಖ್ಯಮಂತ್ರಿ ಅವರಿಗೆ ಪತ್ರ ಬರೆದಿದ್ದರು.
ಭವಿಷ್ಯದಲ್ಲಿ ಈ ರೀತಿಯ ದುರಂತ ನಡೆಯುವುದನ್ನು ತಡೆಯಲು ಅಗತ್ಯ ಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಚರ್ಚೆ ನಡೆಸಬೇಕಿದೆ. ಮೂರು ದಿನಗಳ ತುರ್ತು ಅಧಿವೇಶನ ಕರೆಯಬೇಕು. ಕಾಲ್ತುಳಿತದ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಸಂತ್ರಸ್ತ ಕುಟುಂಬಗಳಿಗೆ ಪರಿಹಾರದ ವ್ಯವಸ್ಥೆ ಬಗ್ಗೆ ಚರ್ಚಿಸಬೇಕು ಎಂದು ಆರ್ ಅಶೋಕ್ ಪತ್ರದಲ್ಲಿ ಉಲ್ಲೇಖಿಸಿದ್ದರು.
ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ವಿಶೇಷ ಅಧಿವೇಶನಕ್ಕೆ ನಿರಾಕರಿಸಿದೆ. ಮುಂಗಾರು ಅಧಿವೇಶನವು ಜುಲೈ ತಿಂಗಳ ಮೊದಲ ವಾರ ಅಥವಾ ಎರಡನೇ ವಾರದಲ್ಲಿ ನಡೆಯಲಿದೆ. ಈ ಕಾರಣದಿಂದಾಗಿ ಮತ್ತೆ ವಿಶೇಷ ಅಧಿವೇಶನ ನಡೆಸುವ ಅಗತ್ಯ ಏನಿಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಪಹಲ್ಗಾಮ್ ಬಗ್ಗೆ ವಿಶೇಷ ಅಧಿವೇಶನ ನಡೆಸದ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಕಾಂಗ್ರೆಸ್ ಇದೀಗ ಕರ್ನಾಟಕದಲ್ಲಿ ವಿಶೇಷ ಅಧಿವೇಶನಕ್ಕೆ ಹಿಂದೇಟು ಹಾಕುತ್ತಿರುವುದು ಚರ್ಚೆಗೆ ಗ್ರಾಸವಾಗುತ್ತಿದೆ.
ಇನ್ನೊಂದೆಡೆ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಲು ವಿರೋಧ ಪಕ್ಷಗಳು ಕಾಯುತ್ತಿದೆ. ಅದಕ್ಕಾಗಿ ಈ ವಿಶೇಷ ಅಧಿವೇಶನದ ಒತ್ತಡ ಹೇರುತ್ತಿದೆ. ಇನ್ನು ಒಂದು ತಿಂಗಳಲ್ಲೇ ಮುಂಗಾರು ಅಧಿವೇಶನ ಇರುವ ಕಾರಣ ಸರ್ಕಾರ ವಿಶೇಷ ಅಧಿವೇಶನ ನಡೆಸುವುದು ಬಹುತೇಕ ಅಸಾಧ್ಯ.
