ಬಿಜೆಪಿ, ಆರ್‌ಎಸ್‌ಎಸ್ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಕೇಂದ್ರ ಸಚಿವ, ಎನ್‌ಸಿಪಿ ನಾಯಕ ಶರದ್ ಪವಾರ್, “ದೇಶದಲ್ಲಿ ಪ್ರಸ್ತುತ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಡಾ. ಬಿ. ಆರ್ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ನಾಶ ಮಾಡುವ ಪಿತೂರಿ ನಡೆಯುತ್ತಿದೆ” ಎಂದು ಆರೋಪಿಸಿದರು.
ವರ್ದಾ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಅಮರ್ ಕಾಳೆ ಪರ ಪ್ರಚಾರದಲ್ಲಿ ಮಾತನಾಡಿದ ಶರದ್ ಪವಾರ್, “ಬಿಜೆಪಿ ನಮ್ಮ ದೇಶವನ್ನು ನಾಶ ಮಾಡುತ್ತಿದೆ. ಸ್ವತಂತ್ರ್ಯ, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಕೂಡಾ ನಾಶ ಮಾಡುತ್ತಿದೆ. ನಮ್ಮ ಸಂವಿಧಾನ ಜನರಿಗೆ ನೀಡಿದ ಹಕ್ಕುಗಳ ರಕ್ಷಣೆ ಮಾಡಬೇಕಾದರೆ ಚುನಾವಣೆ ಅತೀ ಮುಖ್ಯವಾಗುತ್ತದೆ” ಎಂದು ಹೇಳಿದರು.
“ಅಘೋಷಿತ ತುರ್ತು ಪರಿಸ್ಥಿತಿ ನಮ್ಮ ದೇಶದಲ್ಲಿದೆ. ಈ ಸಂದರ್ಭದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ರಚಿತ ಸಂವಿಧಾನವನ್ನು ನಾಶ ಮಾಡುವ ಸಿದ್ಧಾಂತ ಹೊಂದಿರುವ ಬಿಜೆಪಿ-ಆರ್‌ಎಸ್‌ಎಸ್ ಅನ್ನು ನಾವು ಸೋಲಿಸುವು ಅನಿವಾರ್ಯ, ಅಗತ್ಯ. ನಾವು ಅಲ್ಪಸಂಖ್ಯಾತರು ಸೇರಿದಂತೆ ದೇಶದ ಎಲ್ಲರ ಹಿತಾಸಕ್ತಿಯ ರಕ್ಷಣೆ ಮಾಡಬೇಕಾಗಿದೆ” ಎಂದು ಕರೆ ನೀಡಿದರು.
ಇದನ್ನು ಓದಿದ್ದೀರಾ? ನಿಮ್ಮದು ಬೇರೆ ಪಕ್ಷ, ಶರದ್ ಪವಾರ್ ಚಿತ್ರ, ಚಿಹ್ನೆ ಬಳಸುವುದೇಕೆ?; ಅಜಿತ್ ಬಣಕ್ಕೆ ಸುಪ್ರೀಂ ಪ್ರಶ್ನೆ
“ಅಧಿಕಾರದಲ್ಲಿರುವ ಬಿಜೆಪಿಯು ವಿಪಕ್ಷಗಳ ಮೇಲೆ ದಾಳಿ, ದೌರ್ಜನ್ಯ ನಡೆಸಲು ತಮ್ಮ ಅಧಿಕಾರದ ದುರ್ಬಳಕೆ ಮಾಡುತ್ತಿದೆ. ಸರ್ಕಾರವನ್ನು ವಿರೋಧಿಸಿದವರ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ. ಕೇಂದ್ರದ ವಿರುದ್ಧ ಮಾತನಾಡಿದ ಜಾರ್ಖಾಂಡ್ ಮುಖ್ಯಮಂತ್ರಿಯವರನ್ನು ಬಂಧಿಸಲಾಗಿದೆ” ಎಂದು ದೂರಿದರು.
ಇನ್ನು “ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಸರ್ಕಾರದ ನಿರ್ಧಾರಗಳಿಗೆ ಬೆಂಬಲ ನೀಡುತ್ತಿದ್ದರು. ಆದರೂ ಕೂಡಾ ಪ್ರಧಾನಿ ಮೋದಿಗೆ ಕೇಜ್ರಿವಾಲ್ ಅವರ ರಾಜಕೀಯ ನಿಲುವು ಇಷ್ಟವಿಲ್ಲ. ಅದಕ್ಕಾಗಿ ಈಗ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ. ಕೇಜ್ರಿವಾಲ್ ಅವರ ಸಂಪುಟದ ಮೂವರು ಸಚಿವರನ್ನೂ ಕೂಡಾ ಬಂಧಿಸಲಾಗಿದೆ” ಎಂದು ಹೇಳಿದರು.
“ಲೋಕಸಭೆ ಚುನಾವಣೆಯು ಹಲವಾರು ರೀತಿಯಲ್ಲಿ ಅತೀ ಮುಖ್ಯವಾಗಿದೆ. ಬದಲಾಗುತ್ತಿರುವ ಸಂವಿಧಾನದ ಉಳಿವಿಗಾಗಿ, ಜನರ ಹಿತಾಸಕ್ತಿ ರಕ್ಷಣೆಗಾಗಿ, ಹೀಗೆ ಬೇರೆ ಬೇರೆ ರೀತಿಯಲ್ಲಿ ಲೋಕಸಭೆ ಚುನಾವಣೆ ಅತೀ ಮುಖ್ಯ” ಎಂದು ಶರದ್ ಪವಾರ್ ಅಭಿಪ್ರಾಯಿಸಿದರು.