ನಮ್ಮದು ವಿಶ್ವದಲ್ಲೇ ಅತಿದೊಡ್ಡ ರಾಜಕೀಯ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿ ದೇಶದಲ್ಲಿ ಅತೀ ಶ್ರೀಮಂತ ಪಕ್ಷ ಎನಿಸಿಕೊಂಡಿದೆ. 2024ರ ಮಾರ್ಚ್ 31ರ ಲೆಕ್ಕಾಚಾರದ ಪ್ರಕಾರ ಬಿಜೆಪಿಯ ಬಳಿ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ ಸೇರಿ ಒಟ್ಟು 7,113.80 ಕೋಟಿ ರೂಪಾಯಿಯಿದೆ. ಆದರೆ ದೇಶದ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ಬಳಿ 857.15 ಕೋಟಿ ರೂಪಾಯಿ ಇದೆ ಎಂದು ಚುನಾವಣಾ ಆಯೋಗಕ್ಕೆ ಒದಗಿಸಿದ ಅಂಕಿಅಂಶಗಳು ತಿಳಿಸಿವೆ.
ವಿಶ್ವದಲ್ಲೇ ಅತಿ ದೊಡ್ಡ ಹಗರಣ ಎಂದು ಹೇಳಬಹುದಾದ ಚುನಾವಣಾ ಬಾಂಡ್ ಹೆಸರಿನಲ್ಲಿ ಬಿಜೆಪಿ ಸಾಕಷ್ಟು ಹಣವನ್ನು ಸಂಗ್ರಹಿಸಿದೆ. ಬಿಜೆಪಿ ಕಾನೂನು ಚೌಕಟ್ಟಿಗೆ ತಂದು ಮಾಡಿದ ಈ ಹಗರಣದಲ್ಲಿ ಅದೆಷ್ಟೋ ಕಾರ್ಪೋರೇಟ್ ಸಂಸ್ಥೆಗಳಿಗೆ ಇಡಿ, ಆದಾಯ ತೆರಿಗೆ ಸಂಸ್ಥೆ, ಸಿಬಿಐ ದಾಳಿಯ ಬೆದರಿಕೆಯನ್ನು ಒಡ್ಡಿ ದೇಣಿಗೆ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಹಣ ಪಡೆದಿರುವುದು ಚುನಾವಣಾ ಬಾಂಡ್ ದಾಖಲೆಗಳು ಹೊರಬಿದ್ದ ಬಳಿಕ ಬಹಿರಂಗವಾಗಿದೆ. ಹಾಗಿರುವಾಗ ಬಿಜೆಪಿ ಬಳಿ ಇಷ್ಟೊಂದು ಹಣ ಇರುವುದು ಆಶ್ಚರ್ಯವೇನಲ್ಲ.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ ಮೂಲಕ 1700 ಕೋಟಿ ದೇಣಿಗೆ ಪಡೆದ ಬಿಜೆಪಿ
ಚುನಾವಣಾ ಆಯೋಗದ ಮಾಹಿತಿ ಪ್ರಕಾರ 2023-24ರ ಲೋಕಸಭೆ ಚುನಾವಣೆಗೆ ಬಿಜೆಪಿ 1,754.06 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2022-23ರಲ್ಲಿ ಬಿಜೆಪಿ ಖರ್ಚು ಮಾಡಿದ್ದ 1,092 ಕೋಟಿ ರೂ.ಗಳಿಗಿಂತ ಇದು ಶೇಕಡ 60ರಷ್ಟು ಹೆಚ್ಚಾಗಿದೆ. ಇಷ್ಟೊಂದು ಖರ್ಚು ಮಾಡಿದರೂ ಮೋದಿ ಘೋಷಿಸಿದಂತೆ 400ಕ್ಕೂ ಅಧಿಕ ಸ್ಥಾನಗಳನ್ನು ಮಾತ್ರವಲ್ಲ, 300ರಷ್ಟು ಸೀಟುಗಳನ್ನು ಕೂಡಾ ಬಿಜೆಪಿಗೆ ಗೆಲ್ಲಲು ಸಾಧ್ಯವಾಗಿಲ್ಲ.
ಬಿಜೆಪಿಗೆ ಹೋಲಿಸಿದರೆ ಕಾಂಗ್ರೆಸ್ ಲೋಕಸಭೆ ಚುನಾವಣೆ ನಡೆದ 2023-24ರಲ್ಲಿ 619.67 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2022-23ರಲ್ಲಿ ಕಾಂಗ್ರೆಸ್ 192.56 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಇದರ ಮೂರು ಪಟ್ಟು ಹೆಚ್ಚು ಖರ್ಚು ಮಾಡಿದೆ. ಲೋಕಸಭೆ ಚುನಾವಣೆಯನ್ನು 2024ರ ಮಾರ್ಚ್ 16ರಂದು ಘೋಷಿಸಲಾಗಿದೆ.
ವಾರ್ಷಿಕ ಲೆಕ್ಕಪರಿಶೋಧನಾ ವರದಿಗಳಲ್ಲಿ ಚುನಾವಣಾ ಆಯೋಗಕ್ಕೆ ಒದಗಿಸಲಾದ ಅಂಕಿಅಂಶಗಳ ಪ್ರಕಾರ, 2023-24ರಲ್ಲಿ ಬಿಜೆಪಿ ಪ್ರಸ್ತುತ ಸುಪ್ರೀಂ ಕೋರ್ಟ್ ನಿಷೇಧಿಸಿದ ಚುನಾವಣಾ ಬಾಂಡ್‌ಗಳ ಮೂಲಕ 1,685.69 ಕೋಟಿ ರೂ. ಪಡೆದಿದೆ. ಅದಕ್ಕೂ ಹಿಂದಿನ ವರ್ಷದಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ 1,685.69 ಕೋಟಿ ರೂಪಾಯಿ ಪಡೆದಿದೆ. ಹಾಗೆಯೇ 2023-24ರಲ್ಲಿ 2,042.75 ಕೋಟಿ ರೂ.ಗಳ ಇತರೆ ದೇಣಿಗೆಯನ್ನು ಪಡೆದಿದೆ ಎಂದು ಬಿಜೆಪಿ ಹೇಳಿಕೊಂಡಿದೆ. 2022-23ರಲ್ಲಿ ಬಿಜೆಪಿ 648.42 ಕೋಟಿ ರೂ. ದೇಣಿಗೆ ಪಡೆದುಕೊಂಡಿತ್ತು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ಆರೋಪಿ, ಅಪರಾಧಿಗಳೇ ಇಲ್ಲದ ಹಗರಣವೇ?
ಚುನಾವಣಾ ಆಯೋಗಕ್ಕೆ ನೀಡಿದ ಲೆಕ್ಕಪರಿಶೋಧನಾ ವರದಿಯಲ್ಲಿ, ಕಾಂಗ್ರೆಸ್ 2023-24ರಲ್ಲಿ ಒಟ್ಟು 1,225.11 ಕೋಟಿ ರೂ.ಗಳ ಮೊತ್ತವನ್ನು ಕೊಡುಗೆಯಾಗಿ ಪಡೆದಿದೆ. ಇದರಲ್ಲಿ ಅನುದಾನಗಳು, ದೇಣಿಗೆಗಳು ಮತ್ತು ಕೊಡುಗೆಗಳ ಮೂಲಕ ಪಡೆದ 1129.67 ಕೋಟಿ ರೂಪಾಯಿ ಸೇರಿವೆ. 2024ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಕಾಂಗ್ರೆಸ್ ಚುನಾವಣಾ ಬಾಂಡ್ ಮೂಲಕ 828.36 ಕೋಟಿ ರೂ. ಪಡೆದಿದೆ.
ಜಾಹೀರಾತಿಗಾಗಿ ಬಿಜೆಪಿ, ಕಾಂಗ್ರೆಸ್ ಮಾಡಿದ ಖರ್ಚುಗಳು
ಬಿಜೆಪಿ ಜಾಹೀರಾತುಗಳಿಗಾಗಿ ಒಟ್ಟು 591 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಈ ಪೈಕಿ ಎಲೆಕ್ಟ್ರಾನಿಕ್ ಮಾಧ್ಯಮಕ್ಕೆ 434.84 ಕೋಟಿ ರೂ.ಗಳು ಮತ್ತು ಮುದ್ರಿತ ಮಾಧ್ಯಮಕ್ಕೆ 115.62 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. ಇನ್ನೊಂದೆಡೆ ಕಾಂಗ್ರೆಸ್ 2023-24ರಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಜಾಹೀರಾತಿಗೆ 207.94 ಕೋಟಿ ರೂ. ಮತ್ತು ಮುದ್ರಿತ ಮಾಧ್ಯಮದಲ್ಲಿ ಜಾಹೀರಾತಿಗಾಗಿ 43.73 ಕೋಟಿ ರೂ. ಖರ್ಚು ಮಾಡಿದೆ.
ಬಿಜೆಪಿ 2023-24ರಲ್ಲಿ ವಿಮಾನ/ಹೆಲಿಕಾಪ್ಟರ್‌ಗಳಿಗಾಗಿ 174 ಕೋಟಿ ರೂ.ಗಳನ್ನು ಖರ್ಚು ಮಾಡಿದೆ. 2022-23ರಲ್ಲಿ 78.23 ಕೋಟಿ ರೂಪಾಯಿ ಖರ್ಚು ಮಾಡಿತ್ತು. ಇನ್ನು ಬಿಜೆಪಿ ತನ್ನ ಅಭ್ಯರ್ಥಿಗಳಿಗಾಗಿ 191.06 ಕೋಟಿ ರೂ.ಗಳ ಆರ್ಥಿಕ ಸಹಾಯವನ್ನು ನೀಡಿದೆ. ಈ ಹಿಂದಿನ ವರ್ಷದಲ್ಲಿ 75.05 ಕೋಟಿ ರೂ. ಆರ್ಥಿಕ ಸಹಾಯವನ್ನು ನೀಡಿತ್ತು.
ಇದನ್ನು ಓದಿದ್ದೀರಾ? ಚುನಾವಣಾ ಬಾಂಡ್ | ನಿರ್ಮಲಾ ಸೀತಾರಾಮನ್ ವಿರುದ್ಧದ ಎಫ್‌ಐಆರ್ ರದ್ದು
ವಿರೋಧ ಪಕ್ಷ ಕಾಂಗ್ರೆಸ್ 2023-24ರಲ್ಲಿ ವಿಮಾನ/ಹೆಲಿಕಾಪ್ಟರ್‌ಗಳಿಗಾಗಿ 62.65 ಕೋಟಿ ರೂ. ಖರ್ಚು ಮಾಡಿದೆ. ಹಾಗೆಯೇ ತನ್ನ ಅಭ್ಯರ್ಥಿಗಳಿಗೆ 238.55 ಕೋಟಿ ರೂ. ಆರ್ಥಿಕ ನೆರವು ನೀಡಿದೆ. 2024ರ ಮಾರ್ಚ್ 31ಕ್ಕೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಪ್ರಚಾರ ವೆಚ್ಚಗಳಿಗಾಗಿ ಕಾಂಗ್ರೆಸ್ 28.03 ಕೋಟಿ ರೂ. ಮತ್ತು ಸಾಮಾಜಿಕ ಮಾಧ್ಯಮ ವೆಚ್ಚಗಳಿಗಾಗಿ 79.78 ಕೋಟಿ ರೂ. ಖರ್ಚು ಮಾಡಿದೆ.
ಇನ್ನು ಬಿಜೆಪಿ 2024ರಲ್ಲಿ ಸಭೆಗಳ ವೆಚ್ಚಕ್ಕಾಗಿ 84.32 ಕೋಟಿ ರೂ. ಮತ್ತು 2023-24ರಲ್ಲಿ ಮೋರ್ಚಾಗಳು, ರ್‍ಯಾಲಿಗಳು, ಆಂದೋಲನಗಳು ಮೊದಲಾದ ಕಾರ್ಯಕ್ರಮಗಳನ್ನು ಆಯೋಜಿಸಲು 75.14 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
ಕಾಂಗ್ರೆಸ್ ತನ್ನ ಆಡಿಟ್ ವರದಿಯಲ್ಲಿ 2023-24ರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಭಾರತ್ ಜೋಡೋ ಯಾತ್ರೆ 2 ಗೆ 49.63 ಕೋಟಿ ರೂ. ಖರ್ಚು ಮಾಡಿದೆ ಎಂದು ಹೇಳಿದೆ. ಹಾಗೆಯೇ 2022-23ರಲ್ಲಿ ಅವರು ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಕೈಗೊಂಡ ಭಾರತ್ ಜೋಡೋ ಯಾತ್ರೆಗೆ 71.84 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ಕಾಂಗ್ರೆಸ್ ಆಡಿಟ್‌ನಲ್ಲಿ ತಿಳಿಸಿದೆ.
