ಚಾಮರಾಜನಗರದಲ್ಲಿ ಶಾಸಕ ಪುಟ್ಟರಂಗಶೆಟ್ಟಿ ಅವರನ್ನು ಸೋಲಿಸಲು ಬಿಜೆಪಿಯು ಹಣ ಮತ್ತು ಜಾತಿಯ ಬಲವಿರುವ ವಿ ಸೋಮಣ್ಣ ಅವರನ್ನು ಕರೆತಂದಿದೆ. ಅಸಂಘಟಿತ ಉಪ್ಪಾರ ಸಮುದಾಯದ ಏಕೈಕ ಶಾಸಕರನ್ನೂ ಶತಾಯಗತಾಯ ಸೋಲಿಸಲೇಬೇಕು ಎಂದು ಪ್ರಯತ್ನ ಪಡುತ್ತಿದೆ.
ಕರ್ನಾಟಕ ರಾಜ್ಯದಲ್ಲಿ 30 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜ ಒಂದು ಅಸಂಗಟಿತ ಸಮುದಾಯ. ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ತೀರಾ ಹಿಂದುಳಿದಿರುವ ಉಪ್ಪಾರ ಸಮಾಜವು ಎಸ್‌ಟಿ ಮೀಸಲಾತಿಗಾಗಿ ಹೋರಾಟ ಕೂಡ ಮಾಡುತ್ತಿದೆ.
30 ಲಕ್ಷ ಜನಸಂಖ್ಯೆ ಇರುವ ಉಪ್ಪಾರ ಸಮಾಜವು ರಾಜಕೀಯವಾಗಿ ಮುಂದೆ ಬರಲು ಸಾಕಷ್ಟು ಪ್ರಯತ್ನ ಪಟ್ಟರು ಅದು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಚಾಮರಾಜನಗರದ ಶಾಸಕ ಪುಟ್ಟರಂಗಶೆಟ್ಟಿಯನ್ನು ಬಿಟ್ಟರೆ ಯಾರೊಬ್ಬರೂ ಈ ಸಮುದಾಯದವರು ಶಾಸಕರಾಗಿಲ್ಲ. ಕಾರಣ ಈ ಸಮುದಾಯದಲ್ಲಿ ಸಂಘಟನೆಯ ಕೊರತೆ ಎದ್ದು ಕಾಣುತ್ತಿದೆ. ಪುಟ್ಟರಂಗಶೆಟ್ಟಿಯವರು ಕಾಂಗ್ರೆಸ್‌ನಿಂದ ಮೂರು ಬಾರಿ ಶಾಸಕರಾಗಿದ್ದು, ಒಮ್ಮೆ ಸಚಿವರೂ ಆಗಿದ್ದರು. ಆದರೆ, ಬಿಜೆಪಿ ಆ ಒಬ್ಬ ಶಾಸಕನನ್ನು ಸೋಲಿಸಲು ಪ್ರಯತ್ನಿಸುತ್ತಿದೆ.
ಪುಟ್ಟರಂಗಶೆಟ್ಟಿ ಅವರನ್ನು ಸೋಲಿಸಲು ಬಿಜೆಪಿಯು ಹಣ ಮತ್ತು ಜಾತಿಯ ಬೆಂಬಲವಿರುವ ವಿ ಸೋಮಣ್ಣ ಅವರನ್ನು ಕ್ಷೇತ್ರಕ್ಕೆ ಕರೆತಂದಿದೆ. ಮೂರು ಬಾರಿ ಶಾಸಕರಾಗಿರುವ ಪುಟ್ಟರಂಗಶೆಟ್ಟಿ ಅವರನ್ನು ಸೋಲಿಸುವುದು ಬಿಜೆಪಿಗೆ ಸುಲಭದ ಮಾತಲ್ಲ. ಆದರೆ, ಸಮುದಾಯದಿಂದ ಇರುವ ಏಕೈಕ ಶಾಸಕನನ್ನು ಬಿಜೆಪಿಯವರು ಸೋಲಿಸಲು ಹೊರಟಿರುವುದು ಉಪ್ಪಾರರನ್ನು ಕೆರಳಿಸಿದೆ.
ಅರಬಾವಿ, ಕಡೂರು, ಗೋಕಾಕ್, ಕುಷ್ಟಗಿ ಹಾಗೂ ರಾಜ್ಯದ 30 ಕ್ಷೇತ್ರಗಳಲ್ಲಿ ಉಪ್ಪಾರ ಮತದಾರರು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಆ ಕ್ಷೇತ್ರಗಳಲ್ಲಿ ತಮ್ಮ ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಉಪ್ಪಾರರು ಕೇಳಿಕೊಂಡಿದ್ದರೂ ಬಿಜೆಪಿಯವರು ಅವರನ್ನು ಪರಿಗಣಿಸಿಲ್ಲ.
ನೀವು ಟಿಕೆಟ್ ನೀಡದಿದ್ದರೂ ಪರವಾಗಿಲ್ಲ. ಇರುವ ಒಬ್ಬ ಶಾಸಕನನ್ನು ಸೋಲಿಸಲು ಹೊರಟಿರುವುದು ನಮ್ಮ ಸಮುದಾಯಕ್ಕೆ ಮಾಡುತ್ತಿರುವ ಅನ್ಯಾಯವೆಂದು ಉಪ್ಪಾರರು ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಟ್ಟರಂಗಶೆಟ್ಟಿ ಅವರ ವಿರುದ್ಧವಾಗಿ ಬಿಜೆಪಿಯು ಸೋಮಣ್ಣಗೆ ಟಿಕೆಟ್ ನೀಡುವ ಮೂಲಕ ರಾಜ್ಯದ ಉಪ್ಪಾರ ಮತದಾರರ ಕೆಂಗಣ್ಣಿಗೆ ಗುರಿಯಾಗಿದೆ. ಈ ಬೆಳವಣಿಗೆಯನ್ನು ನೋಡುತ್ತಿದ್ದರೆ ಉಪ್ಪಾರರು ಬಿಜೆಪಿಗೆ ಮತ ಹಾಕುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ಒಂದು ಕ್ಷೇತ್ರ ಗೆಲ್ಲಲು ಹೋಗಿ ಬಿಜೆಪಿ ತನ್ನ 10 ರಿಂದ 12 ಕ್ಷೇತ್ರಗಳನ್ನು ಕಳೆದುಕೊಳ್ಳಬಹುದು ಎಂದೂ ಹೇಳಲಾಗಿದೆ.