ಉತ್ತರ ಪ್ರದೇಶದ ಮುಜಫರ್‌ನಗರದಲ್ಲಿ ಕಾವಡ್ ಯಾತ್ರೆ ನಡೆಯಲಿದೆ. ಈ ಯಾತ್ರೆ ಸಾಗುವ ಮಾರ್ಗದಲ್ಲಿ ತಿನಿಸು ಮಾರಾಟ ಮಾಡುವವರು ತಮ್ಮ ಅಂಗಡಿಯ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಫಲಕಗಳಲ್ಲಿ ಪ್ರದರ್ಶಿಸಬೇಕು ಎಂದು ಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿ ಸರ್ಕಾರ ಆದೇಶಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯೊಡ್ಡಿದೆ. ಆದರೂ, ತನ್ನ ಆದೇಶವನ್ನು ಸಮರ್ಥಿಸಿಕೊಂಡಿರುವ ಯೋಗಿ ಸರ್ಕಾರ, “ಯಾತ್ರೆಯಲ್ಲಿ ಹೋಗುವ ಕನ್ವಾರಿಗಳು ತಮ್ಮ ಅಜ್ಞಾನದಿಂದ ತಮಗಿಚ್ಚಿಸಿದ ಮಳಿಗೆಯಲ್ಲಿ ತಿನಿಸನ್ನು ತಿಂದರೆ, ಅದು ಹಿಂಸಾಚಾರಕ್ಕೆ ಕಾರಣವಾಗಬಹುದು. ಹಾಗಾಗಿ, ಶಾಂತಿ-ಸುವ್ಯವಸ್ಥೆ ಕಾಪಾಡಲು ಆದೇಶ ಹೊರಡಿಸಲಾಗಿತ್ತು” ಎಂದು ಸಮರ್ಥಿಸಿಕೊಂಡಿದೆ.
ಕನ್ವಾರಿಗಳು ಮುಸ್ಲಿಮರು ಮಾರುವ ತಿನಿಸುಗಳನ್ನು ಖರೀದಿಸದಂತೆ ತಡೆಯುವ ಉದ್ದೇಶದಿಂದ ಇಂತಹ ಆದೇಶವನ್ನು ಹೊರಡಿಸಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಈ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ಅದಾಗ್ಯೂ, ತನ್ನ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿರುವ ಸರ್ಕಾರ, ಶಾಂತಿ-ಸುವ್ಯವಸ್ಥೆಯ ಹೆಸರು ಹೇಳಿಕೊಂಡು ಈ ಆರೋಪದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ. ಆದರೂ, ಅದೇ ಅಫಿಡವಿಟ್‌ನಲ್ಲಿ ಉದಾಹರಣೆಯಾಗಿ ಮುಸ್ಲಿಮರ ಒಡೆತನದ ಮೂರು ಸಂಸ್ಥೆಗಳ ಚಿತ್ರಗಳನ್ನು ನೀಡಿದೆ. ಆ ಮೂಲಕ, ಯಾತ್ರೆ ವೇಳೆ ಮುಸ್ಲಿಂ ಅಂಗಡಿಗಳನ್ನು ತಡೆಯುವುದೇ ತನ್ನ ಉದ್ದೇಶವಾಗಿತ್ತು ಎಂಬುದನ್ನು ಸೂಚಿಸಿದೆ.
ಮುಂದುವರೆದು, “ಇತ್ತೀಚೆಗೆ ತೀರ್ಥಯಾತ್ರೆಯ ಮಾರ್ಗದಲ್ಲಿ ಈರುಳ್ಳಿ-ಬೆಳ್ಳುಳ್ಳಿಯನ್ನು ತಿನಿಸುಗಳಲ್ಲಿ ನೀಡುವ ಕಾರಣಕ್ಕೆ ನಡೆದಿದ್ದ ಗಲಾಟೆಯನ್ನು ಸರ್ಕಾರ ಉಲ್ಲೇಖಿಸಿದೆ. ಇಂತಹ ಸಂದರ್ಭಗಳು ನಿಸ್ಸಂಶಯವಾಗಿ ಹಿಂಸಾಚಾರಕ್ಕೆ ಕಾರಣವಾಗುತ್ತವೆ. ಯಾತ್ರೆಯಲ್ಲಿ ಲಕ್ಷಾಂತರ ಜನರು ಪವಿತ್ರ ನೀರನ್ನು ಹೊತ್ತು ಬರಿಗಾಲಿನಲ್ಲಿ ನಡೆಯುತ್ತಿರುತ್ತಾರೆ. ಅವರು ತಮಗೆ ಅರಿವಿಲ್ಲದೆ, ತಮ್ಮ ಆಯ್ಕೆಯ ಅಂಗಡಿಗಳಲ್ಲಿ ತಿನಿಸುಗಳನ್ನು ಪಡೆಯಬಹುದು. ಇದು ಗೊಂದಲಕ್ಕೆ ಕಾರಣವಾಗುತ್ತದೆ. ಇಡೀ ಯಾತ್ರೆಯನ್ನು ಹಾಳುಮಾಡುತ್ತದೆ. ಆ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಖಾತ್ರಿ ಪಡಿಸಲು ಇಂತಹ ಅದೇಶ ಹೊಡಿಸಲಾಗಿದೆ” ಎಂದು ಸಮರ್ಥಿಸಿಕೊಂಡಿದೆ.
“ಕನ್ವಾರಿಯಾಗಳು ಕಟ್ಟುನಿಟ್ಟಾದ ಸಸ್ಯಾಹಾರಿಗಳು – ಸಾತ್ವಿಕ ಆಹಾರಿಗಳು. ಅವರು ಈರುಳ್ಳಿ, ಬೆಳ್ಳುಳ್ಳಿ ಸೇರಿದಂತೆ ಎಲ್ಲ ತಾಮಸಿಕ ಆಹಾರಗಳನ್ನು ತ್ಯಜಿಸುತ್ತಾರೆ. ಸಾತ್ವಿಕ್ ಆಹಾರ ಎಂದರೆ, ಕೇವಲ ಈರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದೆ ಆಹಾರ ತಯಾರಿಸುವುದು ಎಂದರ್ಥವಲ್ಲ. ಇತರ ಹಬ್ಬಗಳ ಸಮಯದಲ್ಲಿ ಉಪವಾಸ ಆಚರಣೆಗಳನ್ನು ಕೈಗೊಳ್ಳುವಾಗ ತಯಾರಿಸುವ ಫಲಹಾರದಂತೆಯೇ ಆಹಾರವನ್ನು ತಯಾರಿಸುವ ವಿಧಾನವೂ ಆಗಿದೆ” ಎಂದು ಸರ್ಕಾರ ವಾದಿಸಿದೆ.
ಅದಕ್ಕಾಗಿಯೇ, ‘ಸಾತ್ವಿಕ ಆಹಾರ’ವನ್ನು ಪ್ರಾಮಾಣಿಕರಿಸಲು ಅಂಗಡಿಗಳ ಮಾಲೀಕರು ಮತ್ತು ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸಲು ಅದೇಶಿಸಲಾಗಿದೆ ಎಂದು ಹೇಳಿದೆ. ಆದರೆ, ಹಿಂದುಗಳಲ್ಲದವರು ತಯಾರಿಸಿದ ಆಹಾರ ಸಾತ್ವಿಕವಾಗಿರಲು ಸಾಧ್ಯವಿಲ್ಲ ಎಂದು ಹೇಳುವ ಯಾವುದೇ ಹಿಂದು ಧರ್ಮಗ್ರಂಥವಿಲ್ಲ ಎಂದು ವಿದ್ವಾಂಸರು ಹೇಳುತ್ತಾರೆ.
ಇದು ಕಾನೂನು – ಸುವ್ಯವಸ್ಥೆಯ ಹೆಸರಿನಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ದೂರವಿಡುವ, ಅವರ ಆದಾಯ ಮೂಲವನ್ನು ಮುಚ್ಚುವ ಹುನ್ನಾರವಾಗಿದೆ ಎಂದು ಪ್ರತಿಪಕ್ಷಗಳು ವಾದಿಸುತ್ತವೆ. ಅಂದಹಾಗೆ, 2022ರಲ್ಲಿ ಕರ್ನಾಟಕದ ಧಾರವಾಡ ಜಿಲ್ಲೆಯ ನುಗ್ಗಿಕೇರಿಯಲ್ಲಿ ನಡೆದಿದ್ದ ಹುನುಮಂತನ ಜಾತ್ರೆಯಲ್ಲಿ ನಬೀಸಾಬ್ ಎಂಬವರು ಕಲ್ಲಂಗಡಿ ಹಣ್ಣು ಮಾರಾಟ ಮಾಡುತ್ತಿದ್ದಾಗ, ಅಲ್ಲಿಗೆ ನುಗ್ಗಿದ್ದ ಶ್ರೀರಾಮಸೇನೆ ಸಂಘಟನೆಯ ಪುಂಡರು ಕಲ್ಲಂಗಡಿ ಹಣ್ಣನ್ನು ಬೀದಿಗೆ ಚೆಲ್ಲಿ, ದಾಂಧಲೆ ನಡೆಸಿದ್ದರು. ನಬೀಸಾಬ್ ಅವರು ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದರು. ಅಲ್ಲದೆ, ನಂತರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವೆಡೆ ಜಾತ್ರೆಗಳ ವೇಳೆ ಹಿಂದುಯೇತರ ವ್ಯಾಪಾರಿಗಳಿಗೆ ಅರ್ಥಾತ್ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರುವ ಹಲವಾರು ಬ್ಯಾನರ್‌ಗಳು ಕಾಣಿಸಿಕೊಂಡಿದ್ದವು.
ಈ ಸುದ್ದಿ ಓದಿದ್ದೀರಾ? ಇಸ್ರೇಲ್ ನಿಯಂತ್ರಿತ ಗೋಲನ್ ಹೈಟ್ಸ್ ಮೇಲೆ ರಾಕೆಟ್ ದಾಳಿ: 12 ಮಕ್ಕಳು ಸಾವು; ಹೆಜ್ಬುಲ್ಲಾ ಮೇಲೆ ಆರೋಪ
ಅಲ್ಲದೆ, ಉತ್ತರಾಖಂಡದ ಹರಿದ್ವಾರದಲ್ಲಿ ಕಾವಡ್ ಯಾತ್ರೆ ನಡೆಯುವ ಮಾರ್ಗದಲ್ಲಿದ್ದ ಮಸೀದಿಗಳು ಕಾಣದಂತೆ ಶುಕ್ರವಾರ ಬೃಹತ್ ಬಿಳಿ ಪರದೆಗಳನ್ನೂ ಹಾಕಲಾಗಿತ್ತು. ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆ ಪರದೆಗಳನ್ನು ತೆರವುಗೊಳಿಸಲಾಗಿದೆ.
ಕೋಮು ದ್ವೇಷ ಬಿತ್ತುವ, ಜಾತ್ರೆ, ಸಂಭ್ರಮ, ಹಬ್ಬಗಳಲ್ಲಿ ಮುಸ್ಲಿಂ ವ್ಯಾಪಾರಿಗಳನ್ನು ದೂರ ಇಡುವ ವ್ಯವಸ್ಥಿತಿ ಹುನ್ನಾರ ದೇಶಾದ್ಯಂತ ಹಬ್ಬುತ್ತಿದೆ. ಸದ್ಯಕ್ಕೆ, ಉತ್ತರಪ್ರದೇಶದಲ್ಲಿ ಸರ್ಕಾರದ ಆದೇಶಕ್ಕೆ ಜುಲೈ 22ರಂದು ಸುಪ್ರೀಂ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಹೋಟೆಲ್, ಡಾಬಾ ಸೇರಿದಂತೆ ಯಾವುದೇ ಆಹಾರ ಅಥವಾ ಪಾನೀಯ ಮಾರಾಟಗಾರರು ತಮ್ಮ ಹೆಸರನ್ನು ಪ್ರದರ್ಶಿಸುವಂತೆ ಒತ್ತಾಯಿಸುವಂತಿಲ್ಲ ಎಂದು ಕೋರ್ಟ್ ಹೇಳಿದೆ. ಸುಪ್ರೀಂ ಕೋರ್ಟ್‌ನ ಈ ಆದೇಶವು ಕೋಮು ದ್ವೇಷ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ರೀತಿಯಲ್ಲಿ ಕೋಮು ದ್ವೇಷವನ್ನು ಹತ್ತಿಕ್ಕಿ, ಸೌಹಾದರ್ತೆ, ಪ್ರೀತಿ, ಸಹಬಾಳ್ವೆಯನ್ನು ಬಿತ್ತುವ ಕೆಲಸವಾಗಬೇಕಿದೆ.