“ಇಡೀ ದೇಶದಲ್ಲೇ ಬದಲಾವಣೆಯ ಗಾಳಿ ಬೀಸುತ್ತಿದೆ. ಬಿಜೆಪಿಯವರಿಗೆ ತಾವು ಗೆಲ್ಲುವುದಿಲ್ಲ ಎನ್ನುವುದು ಅರ್ಥವಾಗಿದೆ. ಇದಕ್ಕಾಗಿಯೇ 12 ಹಾಲಿ ಸಂಸದರನ್ನು ಬದಲಾಯಿಸಿದ್ದಾರೆ. ಆಪರೇಷನ್ ಕಮಲ ಮಾಡಿ ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿದವರ ಜತೆಗೆ ಈಗ ನೆಂಟಸ್ಥನ ಮಾಡಿಕೊಂಡಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರದ ಮಾಜಿ ಶಾಸಕ ಕೆ.ಪಿ. ಬಚ್ಚೇಗೌಡ, ಶಿಡ್ಲಘಟ್ಟದ ನಾಯಕ ಪುಟ್ಟ ಆಂಜನಪ್ಪ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ಕಾಂಗ್ರೆಸ್ ಪಕ್ಷ ಸೇರಿದ ನಂತರ ಹಳಬರು, ಹೊಸಬರು ಎನ್ನುವ ತಾರತಮ್ಯ ನಮ್ಮಲ್ಲಿಲ್ಲ. 50 ವರ್ಷ ಪಕ್ಷ ಕಟ್ಟಿರುವವರು ಮತ್ತು ಹೊಸಬರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸವನ್ನು ನಾವು, ನೀವು ಎಲ್ಲರೂ ಸೇರಿ ಮಾಡಬೇಕು. ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಮರೆತು ಒಟ್ಟಾಗಿ ಹೋಗಬೇಕು” ಎಂದು ಇದೇ ವೇಳೆ ಡಿಸಿಎಂ ತಿಳಿಸಿದರು.
ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಮಾಜಿ ಶಾಸಕರಾದ ಶ್ರೀ ಕೆ.ಪಿ. ಬಚ್ಚೇಗೌಡ , ಜಿಲ್ಲಾಧ್ಯಕ್ಷರಾದ ಶ್ರೀ ಕೆ.ಎಂ. ಮುನೇಗೌಡ, ಶ್ರೀ ಪುಟ್ಟು ಆಂಜಿನಪ್ಪ, ವೈದ್ಯರಾದ ಡಾ. ಪ್ರಶಾಂತ್, ಶ್ರೀ ತಿರುಮಲಪ್ಪ, ಶ್ರೀ ವಂಶಿಕೃಷ್ಣ, ಶ್ರೀ ಶ್ರೀಧರ್ ಬಾಬು ಸೇರಿದಂತೆ ಅನೇಕರು ಇಂದು ಜೆಡಿಎಸ್, ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್… pic.twitter.com/rTZ5CX0IBf
— DK Shivakumar (@DKShivakumar) April 2, 2024
“ಹಸ್ತ ಎನ್ನುವುದು ಕೇವಲ ಗುರುತಲ್ಲ, ಇದು ರೈತರ ನೇಗಿಲು ಹಿಡಿಯುವ ಹಸ್ತ, ಕಾರ್ಮಿಕರ ಶ್ರಮದ ಹಸ್ತ, ಮಹಿಳೆಯರ ಶಕ್ತಿಯ ಹಸ್ತ, ಯುವಕರ ಭವಿಷ್ಯದ ಹಸ್ತ. ಹಸ್ತ ಈ ದೇಶ ಮತ್ತು ಜನರ ಶಕ್ತಿ. ಕಾಂಗ್ರೆಸ್ ಎಂದರೆ ಹಲವು ನದಿಗಳ ಸಂಗಮ. ಕಾಂಗ್ರೆಸ್ ಪಕ್ಷ ಪವಿತ್ರವಾದ ದೇವಸ್ಥಾನ. ನಾವೆಲ್ಲಾ ಈ ದೇಶವನ್ನು ಕಾಪಾಡಲು ಈ ದೇವಸ್ಥಾನದಲ್ಲಿ ಸೇರಿದ್ದೇವೆ. ನೀವು ಈಶ್ವರ, ವೆಂಕಟೇಶ್ವರ ಹೀಗೆ ಯಾವುದೇ ದೇವಸ್ಥಾನಕ್ಕೆ ಹೋದರು ದೇವರು ಆಶೀರ್ವಾದ ಮಾಡುವುದು ಈ ಹಸ್ತದಿಂದ” ಎಂದು ಡಿ ಕೆ ಶಿವಕುಮಾರ್ ಹೇಳಿದರು.
“ಕುಮಾರಸ್ವಾಮಿ ಸರಿ ಇಲ್ಲ ಎಂದವರೇ ಕುಮಾರಸ್ವಾಮಿಯ ಬೆಂಬಲ ಬೇಕು ಎಂದು ಹೊರಟಿದ್ದಾರೆ. ಅವರ ನೀತಿ, ಸಿದ್ಧಾಂತದ ಬಗ್ಗೆ ಚರ್ಚೆ ಮಾಡುವುದು ಬೇಡ. ಎಂತಹ ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಜನ ಅವರನ್ನು ನೋಡಿ ನಗುತ್ತಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ಜಾತಿ, ನೀತಿಯ ಮಾತುಗಳು ಕೇಳಿಬರುತ್ತಿದೆ. ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸುವಾಗ ಎಲ್ಲಿ ಹೋಗಿತ್ತು” ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.
“ಕಾಂಗ್ರೆಸ್ ಪಕ್ಷ ಎಂಟು ಮಂದಿ ಒಕ್ಕಲಿಗರಿಗೆ ಟಿಕೆಟ್ ನೀಡಿದೆ. ಒಕ್ಕಲಿಗರಿಗೆ ಬಿಜೆಪಿ, ಜೆಡಿಎಸ್ ಎರಡೂ ಮಾನ್ಯತೆ ನೀಡಿಲ್ಲ. ಒಂದೇ ಕುಟುಂಬದ ಮೂರು ಮಂದಿ ದಳ ಮತ್ತು ಬಿಜೆಪಿಯಿಂದ ಚುನಾವಣೆ ಎದುರಿಸುತ್ತಿದ್ದಾರೆ. ಭವಿಷ್ಯದಲ್ಲಿ ದಳ ಎಲ್ಲಿರುತ್ತದೆ ಗೊತ್ತಿಲ್ಲ. ದೇವೇಗೌಡರು ತಮ್ಮ ಅಳಿಯನನ್ನೇ ಬಿಜೆಪಿಯಿಂದ ನಿಲ್ಲಿಸಿದ ಮೇಲೆ ದಳದ ಚಿಹ್ನೆ ಮತ್ತು ಆ ಪಕ್ಷಕ್ಕೆ ಬೆಲೆಯೇ ಇಲ್ಲದಂತಾಗಿದೆ” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಬರಗಾಲಕ್ಕೆ ಬರಲಿಲ್ಲ, ಪರಿಹಾರ ಕೊಡಲಿಲ್ಲ, ಓಡೋಡಿ ಬರುತ್ತಿದ್ದಾರೆ ಓಟಿಗಾಗಿ!
“ಕೋಲಾರ ಮತ್ತು ಚಿಕ್ಕಬಳ್ಳಾಪುರವನ್ನು ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ. ಎರಡು ಕ್ಷೇತ್ರದಲ್ಲಿ ಇಬ್ಬರು ಯುವಕರಿಗೆ ಅವಕಾಶ ನೀಡಿದ್ದೇವೆ. ಅವರಿಗೆ ಹಣ ಬೇಕಾಗಿಲ್ಲ, ಜನಸೇವೆ ಮಾಡಲು ನಿಮ್ಮ ಬೆಂಬಲ ಬೇಕಾಗಿದೆ. ಒಗ್ಗಟ್ಟಿನಿಂದ ಎಲ್ಲರು ಹೊಸ ಮುಖಗಳ ಗೆಲುವಿಗೆ ಶ್ರಮಿಸಬೇಕು. ಎಂ.ಎಸ್.ರಾಮಯ್ಯ ಅವರ ಕುಟುಂಬ ಶಿಕ್ಷಣ, ಆರೋಗ್ಯ, ಧರ್ಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದೆ. ಈ ಕುಟುಂಬವನ್ನು ಜಾತಿ ಮೇಲೆ ತೀರ್ಮಾನ ಮಾಡಬಾರದು. ಪಕ್ಷ ಮತ್ತು ಸಿದ್ಧಾಂತದ ಆಧಾರದ ಮೇಲೆ ತೀರ್ಮಾನ ಮಾಡಬೇಕು” ಎಂದು ತಿಳಿಸಿದರು.
