ರಾಜಕೀಯ ಲಾಭಕ್ಕಾಗಿ ಸಮುದಾಯಗಳ ನಡುವೆ ಗಲಭೆ ತಂದಿಟ್ಟ ಬಿಜೆಪಿ

Date:

Advertisements

ಬಹುತ್ವವನ್ನು ಸಾರುವ ರಾಷ್ಟ್ರ ಭಾರತ. ಇಲ್ಲಿ ಎಲ್ಲ ಧರ್ಮದವರು ನೆಲೆಸಿದ್ದಾರೆ. ಎಲ್ಲ ಧರ್ಮೀಯರೂ ಒಂದಾಗಿ ಈ ದೇಶವನ್ನು ಕಟ್ಟಿದ್ದಾರೆ. ಅದಕ್ಕಾಗಿ ಸಾಕಷ್ಟು ಸವಾಲುಗಳನ್ನು ಎದುರಿಸಿ ಗೆದ್ದಿದ್ದಾರೆ. ಆದರೆ, ಈಗ ಭಾರತದ ಪರಿಸ್ಥಿತಿ ಕೋಮು ದೃವೀಕರಣಕ್ಕೆ ತುತ್ತಾಗಿದೆ. ಕುವೆಂಪು ಅವರ ಆಶಯದಂತೆ ‘ಸರ್ವಜನಾಂಗದ ಶಾಂತಿಯ ತೋಟ’ವಾಗಬೇಕಿದ್ದ ಭಾರತ, ಕೆಲವು ಕೆಡುಕ ರಾಜಕಾರಣಿಗಳ ದುರಾಸೆಗಳಿಗೆ ಬಲಿಯಾಗುತ್ತಿದೆ. ಕೆಲವರು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮ, ಸಮುದಾಯಗಳ ನಡುವೆ ಬೆಂಕಿಯ ಕಿಡಿ ಹಚ್ಚಿ ಮತ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.

ಧಾರ್ಮಿಕ ಸಹಬಾಳ್ವೆ, ಸಾಮರಸ್ಯಕ್ಕೆ ಹೆಸರಾಗಿದ್ದ ಭಾರತ, ಕೋಮು ಗಲಭೆಯ ಕಳಂಕದಿಂದ ದೂರವಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿ ಕೋಮುಗಲಭೆಗಳು, ಘರ್ಷಣೆ, ಹಿಂಸೆ, ಕೋಮುದ್ವೇಷಗಳೇ ಹೆಚ್ಚಾಗಿವೆ. ಅದರಲ್ಲಿಯೂ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಾಗಿನಿಂದ ಈ ಕೋಮು ಗಲಭೆಗಳಿಗೆ ಮಿತಿಯೇ ಇಲ್ಲ ಎಂಬಂತಾಗಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಬಿಜೆಪಿಗರು ಗುರಾಣಿಯಾಗಿ ಹಿಡಿದಿರುವುದು ಈ ಕೋಮು ದ್ವೇಷ ಭಾಷಣವನ್ನ.

ಬಿಜೆಪಿಯ ಜೀವಾಳ ಅಂದ್ರೆ ಕೋಮು ದ್ವೇಷ, ಕೋಮು ದ್ವೇಷ ಅಂದ್ರೆ ಬಿಜೆಪಿ. ಇದು ಸುಮ್ನೆ ಬಾಯಿ ಮಾತಿಗೆ ಹೇಳ್ತಿರೋದಲ್ಲ. ಪ್ರಧಾನಿ ಮೋದಿ ಆದಿಯಾಗಿ, ಬಿಜೆಪಿಯ ಎಲ್ಲ ನಾಯಕರು ಬಾಯಲ್ಲಿ ಉದುರುವ ಅಣಿಮುತ್ತುಗಳು ಕೋಮುದ್ವೇಷ, ಪ್ರಚೋದನಾಕಾರಿಯಾಗಿಯೇ ಇರುತ್ತವೆ. ನೀವು ಕರ್ನಾಟಕದ ಬಿಜೆಪಿ ನಾಯಕರನ್ನೇ ನೋಡಿ, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರು ತಮ್ಮ ಸುಧೀರ್ಘ ರಾಜಕೀಯ ಜೀವನದುದ್ದಕ್ಕೂ ಕೋಮು ದ್ವೇಷ ಹರಡುವ ಭಾಷಣಗಳನ್ನ ಮಾಡಿಕೊಂಡು, ಹಿಂದುತ್ವ ಹೇಸರೇಳಿ, ಮುಸ್ಲಿಂರ ಮೇಲೆ ಹರಿಹಾಯ್ದುಕೊಂಡು ಹಿಂದೂ ಯುವಕರನ್ನ ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಬಂದಿದ್ದಾರೆ.

Advertisements

ಅಂದಹಾಗೆ, ಬಿಜೆಪಿಗೆ ಸೇರುವ ಮೊದಲು ಯತ್ನಾಳ್‌ ಅವರು ಜೆಡಿಎಸ್‌ನಲ್ಲಿದ್ದರು. ಆ ಸಮಯದಲ್ಲಿ ಮುಸ್ಲಿಂ ಪರವಾಗಿ ಮಾತನಾಡುತ್ತಿದ್ದ ಯತ್ನಾಳ ಅವರು ಬಿಜೆಪಿ ವಿರುದ್ಧ ಹರಿಹಾಯುತ್ತಿದ್ದರು. “ಬಿಜೆಪಿಯದ್ದು ಕೆಟ್ಟ ಸಂಸ್ಕ್ರತಿ, ದ್ವೇಷ ರಾಜಕಾರಣ, ಬಿಜೆಪಿಯವರು ಸಂವಿಧಾನವನ್ನೇ ಮಾರಾಟ ಮಾಡಿದವರು” ಎಂಬ ಹೇಳಿಕೆ ನೀಡಿದ್ದರು. ಅದೇ ಯತ್ನಾಳ್‌ ಬಿಜೆಪಿ ಸೇರಿದ ಬಳಿಕ, “ನನ್ನ ಆಫೀಸ್‌ನಲ್ಲಿ ನನ್ನ ಹಿಂದೆ ಮುಂದೆ ಎಲ್ಲೂ ಬುರ್ಖಾದವರು, ಟೋಪಿಗಿ ಅವರು ಬಂದು ನಿಂದರಬಾರದು, ಹಿಂದುಪರವಾಗಿ ಕೆಲಸ ಮಾಡಬೇಕು, ಸಾಬರ ಪರವಾಗಿ ಅಲ್ಲ” ಎಂದಿದ್ದರು.

ಮತಕ್ಕಾಗಿ, ಅಧಿಕಾರಕ್ಕಾಗಿ ಕೋಮು ದ್ವೇಷ ಬಿತ್ತುವ ಕರ್ನಾಟಕ ಬಿಜೆಪಿಯಲ್ಲಿ ಯತ್ನಾಳ್ ಮಾತ್ರವೇ ಇಲ್ಲ. ಮಾಜಿ ಸಂಸದ ಅನಂತಕುಮಾರ ಹೆಗ್ಡೆ, ಪ್ರತಾಪ್ ಸಿಂಹ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ತೇಜಸ್ವಿ ಸೂರ್ಯ, ಎಂ.ಪಿ ರೇಣುಕಾಚಾರ್ಯ, ಸಿ.ಟಿ ರವಿ ಸೇರಿದಂತೆ ಹಲವರು ಕೋಮುದ್ವೇಷದ ಹೇಳಿಕೆಗಳನ್ನ ನೀಡಿಕೊಂಡು ಹಿಂದುತ್ವ ಹೇಸರೇಳಿಕೊಂಡು ಮುಸ್ಲಿಂ ಸಮುದಾಯದವರ ಮೇಲೆ ಹಿಂದು ಸಮುದಾಯದವರನ್ನು ಎತ್ತಿ ಕಟ್ಟುತ್ತಿದ್ದಾರೆ.

ಪ್ರತಾಪ್ ಸಿಂಹ ಅವರು ಸೆ.21 ರಂದು ಹಿಂದೂ ಮಹಾಗಣಪತಿ ವಿಸರ್ಜನೆ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ, ಮುಸ್ಲಿಮರ ಕುರಿತು ಪ್ರಚೋದನಕಾರಿ ಹೇಳಿಕೆ ನೀಡಿದ್ದರು. “ಗಣೇಶ ವಿಸರ್ಜನೆ ವೇಳೆ ಎಲ್ಲ ಕಡೆ ಕಲ್ಲು ತೂರುವ ಪ್ರವೃತ್ತಿ ಕಾಣಸ್ತಾ ಇದೆ. ಕಲ್ಲು ಹೊಡೆಯುವ ಪ್ರವೃತ್ತಿ ಮುಸ್ಲಿಮರಿಗೆ ಯಾಕೆ ಬರುತ್ತೆ? ಹಿಂದೂಗಳು ಕೈಯಲ್ಲಿ ಕಲ್ಲು ಹೀಡಿದುಕೊಂಡರೆ ನಿಮ್ಮ ಕಥೆ ಏನು ಆಗುತ್ತೆ? ನ್ಯೂಕ್ಲಿಯರ್ ಬಾಂಬ್ ಮಾಡಿದ ಹಿಂದೂಗಳಿಗೆ ಪೆಟ್ರೋಲ್ ಬಾಂಬ್ ಮಾಡೋಕೆ ಬರಲ್ವಾ? ಟಾಂಗಾಗಳು, ಗುಜರಿಗಳು ಮಾಡುವ ಕೆಲಸವನ್ನು ಕ್ಷಣ ಮಾತ್ರದಲ್ಲಿ ಹಿಂದೂಗಳಿಗೆ ಮಾಡಲು ಬರುತ್ತದೆ” ಎಂದಿದ್ದರು.

ರಾಹುಲ್ ಗಾಂಧಿ

ನೀವು ಗಮನಿಸಿರಬಹುದು, ಒಬ್ಬ ಹಿಂದು ಮಹಿಳೆಯ ಮೇಲೆ ಮುಸ್ಲಿಂ ಯುವಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರೇ, ಅಲ್ಲಿಗೆ ಈ ಎಲ್ಲ ಬಿಜೆಪಿ ನಾಯಕರ ದಂಡು ದೌಡಾಯಿಸುತ್ತದೆ. ಅತ್ಯಾಚಾರ, ಕೊಲೆಯಂತಹ ಪ್ರಕರಣದಲ್ಲಿ ಕೋಮು ದ್ವೇಷ ಬೆರೆಸಿ, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುತ್ತದೆ. ಅದೇ, ಹಿಂದು ಯುವಕ ಮುಸ್ಲಿಂ ಯುವತಿಯ ಮೇಲೆ ಅಥವಾ ಹಿಂದು ಯುವತಿಯ ಮೇಲೆ ಹಿಂದು ಯುವಕನೇ ಅತ್ಯಾಚಾರಗೈದು ಕೊಲೆ ಮಾಡಿದ್ದರೇ, ಅದರಲ್ಲೂ ಸಂತ್ರಸ್ತೆ ದಲಿತೆಯಾಗಿದ್ದರೆ, ಅಲ್ಲಿ ಯಾವ ಬಿಜೆಪಿ ನಾಯಕರೂ ಕಾಣುವುದಿಲ್ಲ. ಸಂತ್ರಸ್ತೆಯ ಪರವಾಗಿ ಮಾತನಾಡುವುದಿಲ್ಲ. ಅಷ್ಟೇ ಯಾಕೆ, ಕನಿಷ್ಠ, ಕೃತ್ಯವನ್ನು ಖಂಡಿಸುವುದೂ ಇಲ್ಲ. ಯಾರು-ಯಾರ ಮೇಲೆ ಅತ್ಯಾಚಾರ ಎಸಗಿದರೂ, ಅದು ಅಮಾನುಷ ಕೃತ್ಯವೇ. ಅಂತಹ ಕೃತ್ಯಗಳನ್ನು ಘಂಟಾಘೋಷವಾಗಿ ಖಂಡಿಸಲೇಬೇಕು. ಆದರೆ, ಬಿಜೆಪಿ ಮಾತ್ರ ಅಲ್ಲಿ, ಜಾತಿ-ಧರ್ಮಗಳನ್ನು ನೋಡುತ್ತದೆ. ತನ್ನ ರಾಜಕೀಯಕ್ಕೆ ಆ ಕೃತ್ಯ ಬಳಕೆಯಾಗುತ್ತದೆ ಎಂದಾದರೆ ಮಾತ್ರ, ಬೀದಿಗೆ ಬರುತ್ತದೆ.

ದೇಶದಲ್ಲಿರುವ ಪ್ರತಿಯೊಬ್ಬರನ್ನೂ ಸಮಾನರನ್ನಾಗಿ ಕಾಣಬೇಕಾದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಕೋಮು ದ್ವೇಷಪೂರಿತ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮತ ಕೇಳುವ ಉದ್ದೇಶದಿಂದ “ದೇಶದ ಸಂಪನ್ಮೂಲಗಳಿಗೆ ಅಲ್ಪಸಂಖ್ಯಾತರು ಮೊದಲ ಹಕ್ಕುದಾರರು ಎನ್ನುತ್ತದೆ ಕಾಂಗ್ರೆಸ್, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಅದು ದೇಶದ ಜನರ ಸಂಪತ್ತನ್ನು ಮುಸ್ಲಿಮರಿಗೆ ಮರು ಹಂಚಿಕೆ ಮಾಡುತ್ತದೆ. ಹಿಂದು ಮಹಿಳೆಯರ ಮಂಗಳಸೂತ್ರ ಕಿತ್ತುಕೊಳ್ಳುತ್ತಾರೆ” ಎಂಬ ಹೇಳಿಕೆ ನೀಡಿದ್ದರು.

ರಾಜಸ್ಥಾನದ ಬನ್ಸ್ವಾರಾದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಮೋದಿ, “ತಾಯಂದಿರು, ಸಹೋದರಿಯರ ಬಂಗಾರವನ್ನು ಲೆಕ್ಕ ಹಾಕುವುದಾಗಿ, ಅದರ ಬಗ್ಗೆ ಮಾಹಿತಿ ಪಡೆಯುವುದಾಗಿ, ನಂತರ ಸಂಪತ್ತನ್ನು ಮರು ಹಂಚಿಕೆ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆ ಹೇಳುತ್ತದೆ. ಅದನ್ನು ಯಾರಿಗೆ ಹಂಚುತ್ತಾರೆ? ಮುಸ್ಲಿಮರು ದೇಶದ ಸಂಪತ್ತಿನ ಮೊದಲ ಹಕ್ಕುದಾರರು ಎಂದು ಮನಮೋಹನ್ ಸಿಂಗ್ ಸರ್ಕಾರ ಹೇಳಿತ್ತು. ಅದರ ಅರ್ಥ, ಹೆಚ್ಚು ಮಕ್ಕಳು ಇರುವವರಿಗೆ ಸಂಪತ್ತು ಹಂಚಿಕೆ ಆಗುತ್ತದೆ. ನುಸುಳುಕೋರರಿಗೆ ನಿಮ್ಮ ಸಂಪತ್ತು ಹಂಚಿಕೆಯಾಗುತ್ತದೆ. ನೀವು ಕಷ್ಟದಿಂದ ಸಂಪಾದಿಸಿದ ಹಣ ನುಸುಳುಕೋರರ ಪಾಲಾಗಲೇ? ಅದಕ್ಕೆ ನಿಮ್ಮ ಸಮ್ಮತಿ ಇದೆಯೇ” ಎಂದು ಮೋದಿ ಪ್ರಶ್ನಿಸಿದ್ದರು.

ಇಷ್ಟೇ ಅಲ್ಲ, ಈಗ ಹರಿಯಾಣದ ವಿಧಾನಸಭಾ ಚುನಾವಣೆ ಹತ್ತಿರದಲ್ಲಿದೇ, ಮೋದಿ ಅವರು ತಮ್ಮ ದ್ವೇಷ ಭಾಷಣವನ್ನ ಮುಂದುವರೆಸಿದ್ದಾರೆ. “ಕಾಂಗ್ರೆಸ್‌ಗೆ ತುಷ್ಟೀಕರಣವೇ ಬಹುದೊಡ್ಡ ಗುರಿ. ಇಂದು ಕಾಂಗ್ರೆಸ್ ಆಡಳಿತವಿರುವ ಕರ್ನಾಟಕದಲ್ಲಿ ಗಣಪತಿಯನ್ನೂ ಕಂಬಿ ಹಿಂದೆ ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಡೀ ದೇಶವೇ ಇಂದು ಗಣೇಶ ಉತ್ಸವ ಆಚರಿಸುತ್ತಿದ್ದು, ಅದಕ್ಕೆ ಕಾಂಗ್ರೆಸ್ ಅಡ್ಡಿಪಡಿಸುತ್ತಿದೆ. ಅದು ಹಳೆಯ ಕಾಂಗ್ರೆಸ್ ಅಲ್ಲ. ಇಂದಿನ ಕಾಂಗ್ರೆಸ್ ನಗರ ನಕ್ಸಲ್‌ನ ಹೊಸ ರೂಪವಾಗಿದೆ” ಎಂದು ಬಹಿರಂಗವಾಗಿ ಸುಳ್ಳು ಹೇಳಿದ್ದರು. ಆ ಸುಳ್ಳಿನ ಮೂಲಕ ಕೋಮುದ್ವೇಷದ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು.

ವಾಸ್ತವ ಏನೆಂದರೆ, ಮಂಡ್ಯದ ನಾಗಮಂಗಲ ಗಲಾಟೆಯ ಹಿನ್ನೆಲೆಯಲ್ಲಿ ಬೆಂಗಳೂರಿನ ಟೌನ್ ಹಾಲ್ ಬಳಿ ಸಂಘಪರಿವಾರದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆಗೆ ಗಣೇಶ ಮೂರ್ತಿಯನ್ನೂ ಕೂಡ ತಂದಿದ್ದರು. ಪ್ರತಿಭಟನೆ ಮಾಡುವ ವೇಳೆ ಪೋಲಿಸರು ಸಂಘಪರಿವಾರದ ಕಾರ್ಯಕರ್ತರ ಕೈಯ್ಯಲ್ಲಿದ್ದ ಗಣೇಶ ಮೂರ್ತಿಯನ್ನು ವಶಪಡಿಸಿಕೊಂಡು, ಆ ಬಳಿಕ ವಿಸರ್ಜನೆ ಮಾಡಿದ್ದಾರೆ. ಇದನ್ನ ತಿರುಚಿ ಕರ್ನಾಟಕದ ಬಿಜೆಪಿ ನಾಯಕರು ಟ್ವೀಟ್ ಮಾಡಿದ್ದರು. ಅದನ್ನೇ ಸತ್ಯ ಎಂದು ನಂಬಿದ ಪ್ರಧಾನಿ ಮೋದಿ ದ್ವೇಷ ಹೇಳಿಕೆಗಳನ್ನ ನೀಡುವುದನ್ನ ಮುಂದುವರೆಸಿದ್ದಾರೆ.

 ಎಲ್ಲ ಧರ್ಮ

ಅಷ್ಟೇ ಏಕೆ, 2020ರಲ್ಲಿ ಕೊರೋನಾ ಆಕ್ರಮಣಕ್ಕೆ ಜಗತ್ತೇ ತತ್ತರಿಸಿತ್ತು. ಆದರೆ, ಅದೇ ಸಮಯದಲ್ಲಿ ಸುಳ್ಳು, ಪ್ರಚೋದನಾಕಾರಿ ಸುದ್ದಿಗಳ ಹಾವಳಿಯೂ ಹೆಚ್ಚಾಗಿತ್ತು. ಕೊರೋನಾ ಭಯ ಭಾರತದಲ್ಲಿ ಹೆಚ್ಚಾಗುವ ಕೆಲ ದಿನಗಳ ಮುನ್ನ ದೆಹಲಿಯಲ್ಲಿ ನಡೆದ ತಬ್ಲಿಗಿ ಕಾರ್ಯಕ್ರಮದಿಂದಲೇ ಕೊರೋನಾ ಹರಡಿದೆ. ದೇಶದಲ್ಲಿ ಕೊರೋನಾ ಹರಡಲು ತಬ್ಲಿಗಿಗಳೇ ಕಾರಣವೆಂದು ಬಿಜೆಪಿ, ಸಂಘಪರಿವಾರ ಹಾಗೂ ಗೋದಿ ಮೀಡಿಯಾಗಳು ನಿರಂತರವಾಗಿ ದ್ವೇಷ ಹರಡಿದವು. ಪರಿಣಾಮ, ಕೊರೋನಾ ಸಮಯದಲ್ಲಿಯೇ ಕೊರೋನಾ ಜತೆಗೆ ಕೋಮುದ್ವೇಷವೂ ಗ್ರಾಮೀಣ ಭಾಗಗಳಲ್ಲಿ ಹರಡಿಕೊಂಡಿತು.

ಚುನಾವಣೆ ಸಮಯದಲ್ಲಿಯೂ ಕೂಡ ಮತ ಕೇಳಲು ಬಿಜೆಪಿ, “ಆಟೋದಲ್ಲಿ ಹೋದ ಪ್ರಯಾಣಿಕರು ಕುಕ್ಕರ್ ಬಾಂಬ್ ಸ್ಪೋಟಕ್ಕೆ ಬಲಿಯಾಗಬೇಕಾ? ಕೆ ಜೆ ಹಳ್ಳಿ, ಡಿ ಜೆ ಹಳ್ಳಿ ಗಲಭೆಕೋರರನ್ನು ಓಲೈಸುವವರು ಬೇಕಾ? ವಿಧಾನಸೌಧಕ್ಕೆ ಹೋದಾಗ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೇಳಬೇಕಾ? ಹೋಟೆಲ್ಗೆ ಟೀ ಕುಡಿಯಲು ಹೋದ ಅಮಾಯಕರು ಬಾಂಬ್ ಸ್ಫೋಟಕ್ಕೆ ತುತ್ತಾಗಬೇಕಾ? ಕಾಲೇಜಿಗೆ ಹೋದ ಹೆಣ್ಣುಮಗಳು ಲವ್ ಜಿಹಾದ್ಗೆ ಬಲಿಯಾಗಬೇಕಾ? ಮುಗ್ದ ಜನರು ನಕ್ಸಲರಿಗೆ ಬಲಿಯಾಗುವುದು ನೋಡಬೇಕಾ? ಮೇಯಲು ಹೋದ ಗೋಮಾತೆ ಕಸಾಯಿಖಾನೆ ಸೇರಬೇಕಾ?” ಎಂಬ ಪ್ರಶ್ನೆಗಳನ್ನು ಜಾಹೀರಾತಿನಲ್ಲಿ ಹಾಕಿರುವ ಬಿಜೆಪಿ, “ಭದ್ರತೆ ಮತ್ತು ಸುರಕ್ಷತೆಗಾಗಿ ಬಿಜೆಪಿಗೆ ಮತ ನೀಡಿ” ಎಂದು ಕೇಳಿತ್ತು.

ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಗೂಡಿನಲ್ಲಿ ಮೂರು ಮೊಟ್ಟೆಗಳನ್ನು ಚಿತ್ರಿಸುವ ಅನಿಮೇಟೆಡ್ ವೀಡಿಯೊವನ್ನು ಬಿಜೆಪಿ ಸಿದ್ದಪಡಿಸಿತ್ತು. ಅದರಲ್ಲಿ, ಪ್ರತಿಯೊಂದು ಮೊಟ್ಟೆಗಳ ಮೇಲೂ SC, ST ಮತ್ತು OBC ಎಂದು ಬರೆಯಲಾಗಿದೆ. ಈ ಗೂಡಿಗೆ ಮುಸ್ಲಿಂ ಪದ ಇರುವ ಮತ್ತೊಂದು ಮೊಟ್ಟೆಯನ್ನು ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ ತರುತ್ತಾರೆ. ನಂತರ ಮೊಟ್ಟೆ ಒಡೆದು ಹಕ್ಕಿಗಳು ಹೊರಬಂದಾಗ ರಾಹುಲ್ ಗಾಂಧಿ ಅವರು ಮುಸ್ಲಿಂ ಎಂಬ ಹೆಸರಿದ್ದ ಮೊಟ್ಟೆಯಿಂದ ಹೊರಬಂದ ಹಕ್ಕಿಗೆ ನಿಧಿ ನೀಡುತ್ತಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ಈ ರೀತಿಯ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿತ್ತು. ಇದರ ವಿರುದ್ಧ ತೀವೃ ಆಕ್ರೋಶ ಕೂಡ ವ್ಯಕ್ತವಾಗಿತ್ತು. ಬಿಜೆಪಿ ಕೋಮುದ್ವೇಷಕ್ಕೆ ಇಂತಹ ಉದಾಹರಣೆಗಳು ಸಾವಿರಾರು ಸಿಗುತ್ತಿವೆ.

2016-2020ರ ಅವಧಿಯಲ್ಲಿ ಭಾರತದಲ್ಲಿ 3,399 ಕೋಮು ಅಥವಾ ಧಾರ್ಮಿಕ ಗಲಭೆ ಪ್ರಕರಣಗಳು ನಡೆದಿವೆ ಎಂದು ಕೇಂದ್ರ ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿತ್ತು. ಸೆಂಟರ್ ಫಾರ್ ಸ್ಟಡಿ ಆಫ್ ಸೊಸೈಟಿ ಮತ್ತು ಸೆಕ್ಯುಲರಿಸಂನ ಪ್ರಕಾರ, 2024ರ ಫೆಬ್ರವರಿಯೊಂದರಲ್ಲೇ ಹತ್ತು ಕೋಮು ಗಲಭೆಗಳು ನಡೆದಿದ್ದವು. ಒಂಬತ್ತು ಸಣ್ಣ ಮತ್ತು ಒಂದು ದೊಡ್ಡ ಗಲಭೆಗಳು ನಡೆದಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೋದಿ ಅವರ ಎರಡನೇ ಅವಧಿಯ ಆಡಳಿತದಲ್ಲಿ ಅಂದರೆ, 2019 ರಿಂದ 2024ರ ನಡುವೆ 210 ಕೋಮು ಘರ್ಷಣೆಗಳು ನಡೆದಿವೆ. ಇವುಗಳಲ್ಲಿ ಅತ್ಯಂತ ಮಾರಣಾಂತಿಕವಾದದ್ದು, 2020ರ ಫೆಬ್ರವರಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಕೋಮು ಗಲಭೆ. ಆ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು, ಮುಖ್ಯವಾಗಿ ಮುಸ್ಲಿಮರು ಕೊಲ್ಲಲ್ಪಟ್ಟಿದ್ದಾರೆ.

ಇನ್ನು ಬಿಜೆಪಿ ನಾಯಕರು ನೀಡಿರುವ ಪ್ರಚೋದನಾಕಾರಿ ಹೇಳಿಕೆಗಳಿಂದ ದೇಶದಲ್ಲಿ ನಡೆದಿರುವ ಕೋಮುಗಲಭೆಗಳು, ಗಲಾಟೆ, ಹಿಂಸಾಚಾರಗಳ ಪೈಕಿ ಕೆಲವು ಇಲ್ಲಿವೆ…

ಕೋಮುಗಲಭೆ

ಕೋಮು ಗಲಾಟೆಗಳು

1.. ಮಹಾರಾಷ್ಟ್ರದ ಬುಲ್ಧಾನಾದಲ್ಲಿ ಮೋದಿ ಗಣೇಶ್ ಮಂಡಲ್ ಸದಸ್ಯರು ಶೆಗಾಂವ್‌ನಲ್ಲಿ ಮುಸ್ಲಿಮರಿಗೆ ಸೇರಿದ ಅಂಗಡಿಗಳ ಮೇಲೆ ದಾಳಿ ಮಾಡಿ ಅಂಗಡಿಗಳನ್ನ ಧ್ವಂಸಗೊಳಿಸಿದ್ದಾರೆ.

2.. ದೆಹಲಿಯ ಕರವಾಲ್‌ ನಗರದಲ್ಲಿ ಮುಸ್ಲಿಂ ಜ್ಯೂಸ್ ಮಾರಾಟಗಾರನೊಬ್ಬ ತನ್ನ ಅಂಗಡಿಗೆ ಹಿಂದು ದೇವರಾದ ಶ್ರೀ ಕೃಷ್ಣನ ಹೆಸರು ಇಟ್ಟಿದ್ದಕ್ಕೆ ಹಿಂದುತ್ವ ಗುಂಪೊಂದು ಮುಸ್ಲಿಂ ಮಾರಾಟಗಾರನಿಗೆ ಕಿರುಕುಳ ನೀಡಿದೆ.

3.. ಮಧ್ಯಪ್ರದೇಶದ ಮಂಡ್ಸೌರ್‌ನಲ್ಲಿ ಸೆಪ್ಟೆಂಬರ್ 16 ರಂದು ಈದ್ಮಿಲಾದ್ಉನ್ನಬಿ ಮೆರವಣಿಗೆಯ ಸಂದರ್ಭದಲ್ಲಿ ಹಿಂದುತ್ವ ಗುಂಪುಗಳು ಕಬ್ಬಿಣದ ರಾಡ್‌ಗಳು ಮತ್ತು ಕೋಲುಗಳು ಹಿಡಿದು ಮುಸ್ಲಿಮರ ಮೇಲೆ ದಾಳಿ ಮಾಡಿದ ಘಟನೆ ನಡೆದಿತ್ತು. ದಾಳಿ ನಡೆಸಿದ ಗುಂಪುಗಳು ಮುಸ್ಲಿಂ ಒಡೆತನದ ಅಂಗಡಿಗಳನ್ನು ಧ್ವಂಸಗೊಳಿಸಿ ಲೂಟಿ ಮಾಡಿದ್ದವು.

4..ಇನ್ನು ಉತ್ತರಾಖಂಡ್‌ನ ಬೆರಿನಾಗ್ ನಗರದಲ್ಲಿರುವ ಮಸೀದಿಯ ಆಸ್ತಿಯ ದಾಖಲೆಗಳನ್ನು ಹಿಂದೂ ಪುರುಷರು ಮತ್ತು ಪುರೋಹಿತರ ಗುಂಪು ಕೇಳಿದೆ. ಮಸೀದಿಯ ದಾಖಲೆಗಳನ್ನು ಕೇಳಲು ಈ ಪುರುಷರಿಗೆ ಅಧಿಕಾರ ನೀಡಿದವರು ಯಾರು?

5… ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಹಿಂದುತ್ವ ಗುಂಪೊಂದು ರ‍್ಯಾಲಿಯನ್ನ ನಡೆಸಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರಚೋದನಾಕಾರಿ ಘೋಷಣೆಗಳನ್ನ ಕೂಗಿದೆ. ಅಲ್ಲದೇ, “ನೀವು ಭಾರತದಲ್ಲಿ ವಾಸಿಸಲು ಬಯಸಿದರೆ, ನೀವು ಜೈ ಶ್ರೀ ರಾಮ್” ಎಂದು ಹೇಳಬೇಕು ಎಂದಿದೆ.

6..ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿ ಮೊಹಮ್ಮದ್ ಕಲೀಂ ಎಂಬ ಮುಸ್ಲಿಂ ಅಂಗಡಿಯವನ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಧಾರ್ಮಿಕ ಘೋಷಣೆಗಳನ್ನು ಕೂಗುತ್ತಿದ್ದ ಹಿಂದುತ್ವ ಗುಂಪೊಂದು ಆತನ ಅಂಗಡಿಯನ್ನು ಲೂಟಿ ಮಾಡಿದೆ.

7.. ಉತ್ತರಪ್ರದೇಶದ ಶಾಹಜಹಾನ್ಪುರ ಜಿಲ್ಲೆಯಲ್ಲಿ ಹಿಂದುತ್ವ ಸಂಘಟನೆಗಳ ಗುಂಪೊಂದು ಸ್ಥಳೀಯ ಸೂಫಿ ಮಸೀದಿಗೆ ನುಗ್ಗಿ ಅಲ್ಲಿದ್ದ ಸಮಾಧಿಯನ್ನು ಧ್ವಂಸಗೊಳಿಸಿ ಆ ಸ್ಥಳದಲ್ಲಿ ಶಿವಲಿಂಗವನ್ನು ಸ್ಥಾಪಿಸಿದೆ. ಈ ಬಳಿಕ ಸಮುದಾಯಗಳ ನಡುವೆ ಉದ್ವಿಗ್ನತೆ ಉಂಟಾಗಿತ್ತು. ಈ ಕೃತ್ಯ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

8..ಅಲ್ಪಸಂಖ್ಯಾತರ ವಿರುದ್ಧ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ದ್ವೇಷವನ್ನು ಎತ್ತಿ ತೋರಿಸುವ ಮತ್ತೊಂದು ಘಟನೆಯಲ್ಲಿ, ಸೆಪ್ಟೆಂಬರ್ 19, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದು ಕಾಣಿಸಿಕೊಂಡಿದೆ. ಇದರಲ್ಲಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬರು ಕಚಿ ಮಸೀದಿಯತ್ತ ಬಾಣದಿಂದ ಬಿಲ್ಲು ಹೊಡೆಯುವ ರೀತಿ ತೋರಿಸಿದ್ದಾನೆ. ಪ್ರಚೋದನಕಾರಿಯಾಗಿ ಅಣಕಿಸುತ್ತಿರುವುದು ವಿಡಿಯೊದಲ್ಲಿ ಸೇರೆಯಾಗಿದೆ. ಈ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ.

ಈಗ ಇಲ್ಲಿ ನಡೆದಿರುವ ಎಲ್ಲ ಘಟನೆಗಳನ್ನ ನೀವು ನೋಡಬಹುದು, ಇಲ್ಲಿ ಮುಸ್ಲಿಂ ಬಿಸಿನೆಸ್ ಮ್ಯಾನ್ ಅಥವಾ ಹಿಂದೂ ಬಿಸಿನೆಸ್ ಮ್ಯಾನ್ ಗಲಭೆಯಲ್ಲಿ ಇಲ್ಲ. ಮುಸ್ಲಿಂ ನೌಕರ ಅಥವಾ ಹಿಂದು ನೌಕರರು ತಮ್ಮ ಕೆಲಸವನ್ನ ಬಿಟ್ಟು ಈ ಗಲಭೆಗಳಲ್ಲಿ ದೊಣ್ಣೆ, ಕಲ್ಲು ಹಿಡಿದುಕೊಂಡು ಬಂದು ನಿಂತಿಲ್ಲ. ಪ್ರಚೋದನೆ ಭಾಷಣ ಮಾಡುವ ಮುಸ್ಲಿಂ ರಾಜಕಾರಣಿ ಅಥವಾ ಹಿಂದು ರಾಜಕಾರಣಿ ರೋಡ್‌ನಲ್ಲಿ ತಲ್ವಾರ್ ಹಿಡಿದುಕೊಂಡು, ದೊಣ್ಣೆ ಹಿಡಿದುಕೊಂಡು ಓಡಾಡುವುದು ನಿಮಗೆ ಯಾವತ್ತಿಗೂ ಕಾಣಿಸಲ್ಲ. ರಾಜಕಾರಣಿಗಳ ಮಕ್ಕಳು, ಅವರ ಸಂಬಂಧಿಕರು ಈ ಕೋಮು ಗಲಭೆಗಳಲ್ಲಿ ಇಲ್ಲ. ರಾಜಕಾರಣಿಗಳ ಮಕ್ಕಳೆಲ್ಲ ಫಾರಿನ್‌ನಲ್ಲಿ ವಿದ್ಯಾಭ್ಯಾಸ್ ಮಾಡಿಕೊಂಡು ಆರಾಮಾಗಿ ಸೆಟ್ಲಡ್ ಆಗಿದ್ದಾರೆ. ಆದರೆ, ಈ ಗಲಭೆಗಳಲ್ಲಿ ಹೆಚ್ಚಾಗಿ ಇರುವವರು ನಿರುದ್ಯೋಗಿಗಳು, ಸ್ವತಃ ಮಾಡುವುದುಕ್ಕೆ ಯಾವುದೇ ಬಿಸಿನೆಸ್ ಇಲ್ಲದವರು, ಬಡವರು, ಶೂದ್ರ ಕಾಲಾಳುಗಳು. ಇವರನ್ನು ಈ ರಾಜಕಾರಣಿಗಳು ಹಿಂದುತ್ವದ ಹೆಸರೇಳಿಕೊಂಡು ಎತ್ತಿಕಟ್ಟುತ್ತಿದ್ದಾರೆ. ಇಲ್ಲಿ ನಾವು ಮನುಷ್ಯರನ್ನ ಮನುಷ್ಯನಾಗಿ ಕಾಣಬೇಕು. ಅದು ಬಿಟ್ಟು ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂದು ಭೇಧಭಾವ ಮಾಡೋದು ಬಿಡಬೇಕು. ರಾಜಕೀಯದಲ್ಲಿ ಯಾವತ್ತೀಗೂ ಈ ಧರ್ಮ ಅನ್ನೋದು ಬರಲೇಬಾರದು. ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕು. ಇನ್ನೊಂದು, ಜನರು ದ್ವೇಷ ಭಾಷಣದ ಪ್ರಚೋದನೆಗೆ ಒಳಗಾಗದೇ, ಆ ವಿಚಾರದ ಬಗ್ಗೆ ಸ್ವಲ್ಪ ಯೋಚನೆ ಮಾಡಿ ಮುಂದುವರೆದರೇ, ಬಿಜೆಪಿ ಈ ಅಜೆಂಡಾ ಕೂಡ ಸೋಲುತ್ತಾ ಹೋಗುತ್ತೆ, ದೇಶವೂ ಪ್ರಗತಿಯತ್ತ ಸಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಫೋನ್ ಪೇ, ಗೂಗಲ್ ಪೇ ಬಳಕೆಗೂ ಜಿಎಸ್‌ಟಿ ಬಿದ್ದರೆ ಮುಂದೇನು?

ಬಿಜೆಪಿ ಮತ್ತು ಅದರ ಮಾತೃ ಸಂಘಟನೆ ಆರ್‌ಎಸ್‌ಎಸ್‌ಗೆ ಈಗ ಇಂತಹ ಪ್ರಚೋದನಾಕಾರಿ ವಿಷಯಗಳನ್ನು ಬಿಟ್ಟರೆ ಮುಂದಿನ ಚುನಾವಣೆಯನ್ನು ಗೆಲ್ಲಲು ಬೇರೆ ವಿಷಯಗಳೇ ಇಲ್ಲ. ಸಮಾಜವನ್ನು ಅಂದರೆ ಭಾರತೀಯರನ್ನು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ವಿಭಜಿಸಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಜೊತೆಗೆ ಭಾರತದ ಜಾತ್ಯತೀತ ವ್ಯವಸ್ಥೆಯನ್ನು ದುರ್ಬಲಗೊಳಿಸುವುದು ಈ ಹೇಳಿಕೆ ಮತ್ತು ಚಟುವಟಿಕೆಗಳ ಹಿಂದಿನ ಉದ್ದೇಶಗಳಾಗಿವೆ ಎಂದರೆ ಅತಿಶಯೋಕ್ತಿಯಲ್ಲ.

ಆರ್‌ಎಸ್‌ಎಸ್‌ ಕೂಸಾಗಿರುವ ಬಿಜೆಪಿ ನಿತ್ಯ ನಿರಂತರವಾಗಿ ಒಂದು ಸಮುದಾಯದ ವಿರುದ್ಧ ದ್ವೇಷ ಭಾಷಣಗಳನ್ನ ಮಾತನಾಡುತ್ತಲೇ ಇದ್ದಾರೆ. ಬಿಜೆಪಿಗರ ನಾಲಿಗೆಗೆ ಕಡಿವಾಣ ಹಾಕದಿದ್ದರೇ, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಆದಿಯಾಗಿ ಸಮಸಮಾಜದ ಆಶಯಗಳನ್ನ ಬಿತ್ತಿದ ಮಹನೀಯರ ಆಶಯಗಳು ಆಶಯಗಳಾಗಿಯೇ ಉಳಿಯುತ್ತವೆ. ದೇಶದಲ್ಲಿ ಹಿಂಸಾಚಾರ ಶೋಷಣೆ, ದೌರ್ಜನ್ಯಗಳು ಮುಂದುವರೆಯುತ್ತವೆ. ಬಿಜೆಪಿಯ ಮನುವಾದಿ, ಕೋಮುವಾದಿ ಅಜೆಂಡಾವನ್ನು ಅರಿತು ಅದರ ವಿರುದ್ಧ ಗಟ್ಟಿ ಧ್ವನಿಯಲ್ಲಿ ದೇಶದ ಯುವಜನರು ಹೋರಾಟ ನಡೆಸಬೇಕಿದೆ. ಸ್ನೇಹ, ಪ್ರೀತಿ, ಸಹಬಾಳ್ವೆವುಳ್ಳ ಸಮಸಮಾಜದೆಡೆಗೆ ಸಾಗಬೇಕಿದೆ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X