ಅಂಬಿಗರು-ಬೆಸ್ತರು ಭಾರೀ ಸಂಖ್ಯೆಯಲ್ಲಿರುವ ಗೋರಖ್‌ಪುರ ಕ್ಷೇತ್ರದಲ್ಲಿ ಬಿಜೆಪಿಯದೇ ಮೇಲುಗೈ

Date:

Advertisements

ಪ್ರಸಿದ್ಧ ಮಾನವತಾವಾದಿ ಹಿಂದೀ ಲೇಖಕ ಮುನ್ಷಿ ಪ್ರೇಮಚಂದ್, ಪ್ರಸಿದ್ಧ ಉರ್ದು ಬರೆಹಗಾರ ಫಿರಾಖ್ ಗೋರಖ್‌ಪುರಿ, ಕ್ರಾಂತಿಕಾರಿ ರಾಮಪ್ರಸಾದ್ ಬಿಸ್ಮಿಲ್ ಅವರ ಹುಟ್ಟೂರು ಗೋರಖ್‌ಪುರ. ಗೋರಕ್ಷನಾಥ ಪೀಠದ ನೆಲೆ. ಉತ್ತರಪ್ರದೇಶ ರಾಜ್ಯದ ಪೂರ್ವಾಂಚಲ ರಾಜಕಾರಣದ ನರಮಂಡಲ ಕೇಂದ್ರ. ಗೋರಖ್‌ಪುರ ಪೂರ್ವೀ ಉತ್ತರಪ್ರದೇಶ ಅಥವಾ ಪೂರ್ವಾಂಚಲದ ನರಮಂಡಲ ಕೇಂದ್ರ. ಗೋರಕ್ಷನಾಥ ಪೀಠ, ಹಿಂದೂ ಧಾರ್ಮಿಕ ಗ್ರಂಥಗಳ ಅತಿ ದೊಡ್ಡ ಪ್ರಕಾಶನ ಸಂಸ್ಥೆ ಗೀತಾ ಪ್ರೆಸ್‌ಗೆ ಹೆಸರುವಾಸಿ. ಸುತ್ತಮುತ್ತಲ ಆರೇಳು ಸೀಟುಗಳ ಮೇಲೆ ಪ್ರಭಾವ ಬೀರುವ ಕ್ಷೇತ್ರ.

ಇಲ್ಲಿನ ಬಿಜೆಪಿ ಅಭ್ಯರ್ಥಿ ರವಿಕಿಶನ್ ಶುಕ್ಲಾ ಮತ್ತು ಸಮಾಜವಾದಿಪಾರ್ಟಿ- ಕಾಂಗ್ರೆಸ್ ಮೈತ್ರಿಯ ಅಭ್ಯರ್ಥಿ ಕಾಜಲ್ ನಿಷಾದ್ ಇಬ್ಬರೂ ಭೋಜ್‌ಪುರಿ ಭಾಷೆಯ ಸಿನೆಮಾದ ಪ್ರಸಿದ್ಧ ನಟ-ನಟಿ. ಪಶ್ಚಿಮ ಬಿಹಾರ, ಪಶ್ಚಿಮ ಝಾರ್ಖಂಡ್ ಹಾಗೂ ಪೂರ್ವೀ ಉತ್ತರಪ್ರದೇಶದ ಜಿಲ್ಲೆಗಳ ಜನಪ್ರಿಯ ಭಾಷೆ ಭೋಜ್‌ಪುರಿ. ನೇಪಾಳ ಮತ್ತು ಫಿಜಿ ದೇಶಗಳ ಅಧಿಕೃತ ಭಾಷೆಗಳ ಪೈಕಿ ಭೋಜಪುರಿಯೂ ಒಂದು.

ಗೋರಖ್‌ಪುರ ಬಿಜೆಪಿಯ ಭದ್ರಕೋಟೆ. ಅಲ್ಪ ಅವಧಿಯನ್ನು ಹೊರತುಪಡಿಸಿದರೆ ನಾಲ್ಕು ದಶಕಗಳ ಕಾಲ ಈ ಕ್ಷೇತ್ರವನ್ನು ಬೇರೆ ಯಾವುದೇ ಪಕ್ಷ ಬಿಜೆಪಿಯಿಂದ ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ. ಸ್ವಾತಂತ್ರ್ಯಾನಂತರದ ಎಂಟು ಲೋಕಸಭಾ ಚುನಾವಣೆಗಳ ಪೈಕಿ ಆರು ಬಾರಿ ಕಾಂಗ್ರೆಸ್ ಈ ಕ್ಷೇತ್ರವನ್ನು ಗೆಲ್ಲುತ್ತ ಬಂದಿತ್ತು. ಆದರೆ 1984ರಿಂದ ಪರಿಸ್ಥಿತಿ ಬದಲಾಯಿತು.

Advertisements

Gorakhpura Loksabha

ಮತದಾರರ ಮೇಲೆ ಗೋರಕ್ಷನಾಥ ಪೀಠದ ಧಾರ್ಮಿಕ ಪ್ರಭಾವ ಬಲು ದಟ್ಟ. ಪೀಠದ ಮಹಂತರು 1989ರಿಂದ 2017ರ ತನಕ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಮಹಂತ ಅವೈದ್ಯನಾಥರ ನಂತರ ಯೋಗಿ ಆದಿತ್ಯನಾಥರು ಇಲ್ಲಿಂದ ಐದು ಸಲ ಆಯ್ಕೆಯಾಗಿದ್ದಾರೆ. ಆದಿತ್ಯನಾಥ 2017ರಲ್ಲಿ ಮುಖ್ಯಮಂತ್ರಿಯಾದರು. 2018ರ ಉಪಚುನಾವಣೆಯಲ್ಲಿ ಸಮಾಜವಾದಿ ಪಾರ್ಟಿಯು ಪ್ರವೀಣ್ ಕುಮಾರ್ ನಿಷಾದ್ ಅವರನ್ನು ಇಲ್ಲಿಂದ ಹೂಡಿ ಗೆಲ್ಲಿಸಿಕೊಂಡಿತ್ತು. 2019ರಲ್ಲಿ ಪುನಃ ಬಿಜೆಪಿಯ ಮಡಿಲಿಗೆ ಜಾರಿತ್ತು ಗೋರಖಪುರ.

2019ರಲ್ಲಿ ಬಿಜೆಪಿಯ ರವಿಕಿಶನ್ ಇಲ್ಲಿಂದ ಮೂರು ಲಕ್ಷ ಮತಗಳ ಅಂತರದಲ್ಲಿ ಗೆದ್ದಿದ್ದರು. ಎಸ್.ಪಿ. ಮತ್ತು ಬಿ ಎಸ್ ಪಿ ಮೈತ್ರಿ ಅಭ್ಯರ್ಥಿ ರಾಮಭುವಲ್ ನಿಷಾದ್ ಭಾರೀ ಸೋಲು ಕಂಡಿದ್ದರು. ರವಿಕಿಶನ್ ಮತ್ತು ಸಮಾಜವಾದಿ ಪಾರ್ಟಿಯ ಕಾಜಲ್ ನಿಷಾದ್ ನಡುವೆ ಇಲ್ಲಿ ನೇರ ಸ್ಪರ್ಧೆ ಏರ್ಪಟ್ಟಿದೆ. ಬಿ.ಎಸ್.ಪಿ ಜಾವೆದ್ ಸಿಮ್ನಾನಿ ಅವರನ್ನು ಕಣಕ್ಕಿಳಿಸಿದೆ. ರವಿಕಿಶನ್ ತಮ್ಮ ಗೆಲುವಿಗೆ ಗೋರಕ್ಷನಾಥ ಪೀಠದ ಪ್ರಭಾವ ಮತ್ತು ಯೋಗಿ ಆದಿತ್ಯನಾಥರ ವರ್ಚಸ್ಸು ಹಾಗೂ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳನ್ನೇ ಆಧರಿಸಿದ್ದಾರೆ.

Gorakhpur UP

ಗೋರಕ್ಷನಾಥ ಪೀಠದ ಸೇವಕ ತಾವೆಂದು ಬಣ್ಣಿಸಿಕೊಳ್ಳುತ್ತಾರೆ. ಈ ಮೊದಲು ಕಾಂಗ್ರೆಸ್ ಪಕ್ಷದಲ್ಲಿದ್ದ ರವಿಕಿಶನ್ ಜೌನ್ಪುರ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಗೋರಕ್ಷನಾಥ ಪೀಠದ ಮಹಂತರೂ ಮತ್ತು ಐದು ಬಾರಿ ಇಲ್ಲಿಂದ ಗೆದ್ದಿರುವ ಮುಖ್ಯಮಂತ್ರಿ ಆದಿತ್ಯನಾಥರಿಗೆ ರವಿಕಿಶನ್ ಅವರನ್ನು ಗೆಲ್ಲಿಸಿಕೊಳ್ಳುವುದು ಪ್ರತಿಷ್ಠೆಯ ವಿಷಯವೂ ಹೌದು. ಗೆಲುವಿನ ಅಂತರ ಕಳೆದ ಬಾರಿಯ ಮೂರು ಲಕ್ಷ ಮತಗಳಿಗಿಂತ ತಗ್ಗಿದರೂ ಯೋಗಿ ಪ್ರತಿಷ್ಠೆಗೆ ಮುಕ್ಕು ಬಂದಂತೆ. ತಾವು ಮುಖ್ಯಮಂತ್ರಿಯಾದ ನಂತರ ಗೋರಖ್‌ಪುರವನ್ನು ದೊಡ್ಡ ಪ್ರವಾಸೀ ಸ್ಥಳವಾಗಿ ಅಭಿವೃದ್ಧಿಪಡಿಸಿದ್ದಾರೆ.

ಒಂದಾನೊಂದು ಕಾಲಕ್ಕೆ ಗೋರಖ್‌ಪುರ ಸೊಳ್ಳೆಗಳ ತವರಾಗಿತ್ತು. ಪಾತಕಿಗಳ ಬೀಡೆನಿಸಿತ್ತು. ಹರಿಶಂಕರ ತಿವಾರಿ ಮತ್ತು ವೀರೇಂದ್ರ ಪ್ರತಾಪ ಶಾಹಿ ಎಂಬ ಪರಮಪಾತಕಿಗಳ ಗ್ಯಾಂಗುಗಳು ಈ ಸೀಮೆಯಲ್ಲಿ ಐವತ್ತು ಹತ್ಯೆಗಳನ್ನು ಎಸಗಿ ಮೆರೆದಿದ್ದುಂಟು. ಶ್ರೀಪ್ರಕಾಶ್ ಶುಕ್ಲಾ ಎಂಬುವನ ಹಾವಳಿ ಉತ್ತರ ಪ್ರದೇಶದ ಗಡಿಗಳನ್ನು ದಾಟಿ ನೆರೆಹೊರೆಯ ಬಿಹಾರಕ್ಕೂ ಹಬ್ಬಿತ್ತು. ಕಳೆದ ಕೆಲವು ವರ್ಷಗಳಿಂದ ಗೋರಖ್‌ಪುರ ಗ್ಯಾಂಗುಗಳ ಕಾಟದಿಂದ ಮುಕ್ತವಾಗಿದೆ. ಜಪಾನ್ ಮಿದುಳುಜ್ವರವನ್ನು ಹಬ್ಬಿಸಿ ಪ್ರತಿವರ್ಷ ನೂರಾರು ಮಂದಿಯನ್ನು ಬಲಿ ತೆಗೆದುಕೊಳ್ಳುತ್ತಿದ್ದ ಸೊಳ್ಳೆಗಳ ಕಾಟ ಗಣನೀಯವಾಗಿ ಈಗ ತಗ್ಗಿದೆ.

ಈ ಕ್ಷೇತ್ರದಲ್ಲಿ ಹಿಂದುಳಿದ ವರ್ಗಗಳ ಜನಸಂಖ್ಯೆ ಒಂಬತ್ತು ಲಕ್ಷ. ಈ ಪೈಕಿ ನಿಷಾದರು ನಾಲ್ಕು ಲಕ್ಷದಷ್ಟಿದ್ದಾರೆ. ಹೀಗಾಗಿ ಕಳೆದ ಕೆಲವು ಚುನಾವಣೆಗಳಿಂದ ಸಮಾಜವಾದಿ ಪಾರ್ಟಿ ಇಲ್ಲಿಂದ ನಿಷಾದ ಅಭ್ಯರ್ಥಿಗಳನ್ನೇ ಹೂಡುತ್ತ ಬಂದಿದೆ. ನದಿಗಳನ್ನೇ ಜೀವನೋಪಾಯಕ್ಕಾಗಿ ಅವಲಂಬಿಸಿದ ಅಂಬಿಗರು, ಬೆಸ್ತರು,ಕೇವಟ್, ಮಲ್ಲಾಹ್, ಬಿಂಡ್ ಮುಂತಾದವು ನಿಶಾದ ಜಾತಿಯ ಒಳಪಂಗಡಗಳು. ಕಡುಶೋಷಣೆಗೆ ಗುರಿಯಾಗಿ ಡಕಾಯಿತೆಯಾಗಿ ಚಂಬಲ್ ಕಣಿವೆ ಸೇರಿ, ಶರಣಾಗಿ ಲೋಕಸಭಾ ಸದಸ್ಯೆಯಾಗಿದ್ದ ದಿವಂಗತ ಫೂಲನ್ ದೇವಿ ಮಲ್ಲಾಹ್ ಒಳಪಂಗಡಕ್ಕೆ ಸೇರಿದವರು.

ಬಿ.ಎಸ್.ಪಿ.ಯ ಸದಸ್ಯರಾಗಿ ಆ ಪಕ್ಷಕ್ಕೆ ಬಲ ತುಂಬಿದ್ದ ಸಂಜಯ ನಿಷಾದ್ 2016ರಲ್ಲಿ ತಮ್ಮದೇ ನಿಷಾದ್ ಪಾರ್ಟಿಯನ್ನು ಹುಟ್ಟಿ ಹಾಕಿದರು. 2022ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಕೈ ಜೋಡಿಸಿದ್ದರು. ಆರು ವಿಧಾನಸಭಾ ಸೀಟುಗಳು ಅವರಿಗೆ ದಕ್ಕಿದ್ದವು.

ಈಗಲೂ ನಿಷಾದ್ ಪಾರ್ಟಿ ಬಿಜೆಪಿಯ ಮಿತ್ರಪಕ್ಷ. ಹೀಗಾಗಿ ನಿಷಾದ ಸಮುದಾಯದ ವೋಟುಗಳು ಎಸ್.ಪಿ. ಮತ್ತು ಬಿಜೆಪಿ ನಡುವೆ ಹಂಚಿ ಹೋಗುವ ಸಾಧ್ಯತೆಯಿದೆ. ಆದಿತ್ಯನಾಥ ಸಂಪುಟದಲ್ಲಿ ಮಂತ್ರಿಯಾಗಿರುವ ಸಂಜಯ್ ನಿಷಾದ್, ಇಲ್ಲಿಯೇ ಬಿಡಾರ ಹೂಡಿ ನಿಷಾದ ಮತಗಳು ಹಂಚಿ ಹೋಗುವುದನ್ನು ತಪ್ಪಿಸಲು ಶ್ರಮಿಸಿದ್ದಾರೆ. ಬಿ.ಎಸ್.ಪಿ. ಮುಸ್ಲಿಮ್ ಅಭ್ಯರ್ಥಿಯನ್ನು ಹೂಡಿರುವ ಕಾರಣ ಮುಸ್ಲಿಮ್ ಮತಗಳು ಕೂಡ ಸಮಾಜವಾದಿ ಪಾರ್ಟಿ ಅಥವಾ ಬಿಜೆಪಿಯ ಹಿಂದೆ ಏಕಶಿಲೆಯಾಗಿ ನಿಲ್ಲಲಾರವು.

Priyanka Gandhi Vadra 1

ಬಿಜೆಪಿ ಉಮೇದುವಾರ ರವಿಕಿಶನ್ ಕ್ಷೇತ್ರದಲ್ಲಿ ಈ ಹಿಂದಿನ ಬಿಜೆಪಿ ಸಂಸದರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಅವಲಂಬಿಸಿದ್ದಾರೆ. ಸಮಾಜವಾದಿ ಪಾರ್ಟಿಯ ಕಾಜಲ್ ನಿಷಾದ್ ಗೋರಖ್‌ಪುರದ ಯಾದವ (2.25ಲಕ್ಷ) ಮತ್ತು ಮುಸ್ಲಿಮ್ (2 ಲಕ್ಷ) ಯಾದವೇತರ ಹಿಂದುಳಿದ ಜಾತಿ ನಿಷಾದ (4 ಲಕ್ಷ) ಮತಗಳನ್ನು ನೆಚ್ಚಿದ್ದಾರೆ. ಉಳಿದಂತೆ ಬ್ರಾಹ್ಮಣ (1.5 ಲಕ್ಷ), ಠಾಕೂರ್ (1.5 ಲಕ್ಷ), ಭೂಮಿಹಾರ (1ಲಕ್ಷ), ವೈಶ್ಯ (1 ಲಕ್ಷ) ಬಹುತೇಕ ಬಿಜೆಪಿ ಬೆಂಬಲಿಗರು.

ಕೆಲದಿನಗಳ ಹಿಂದೆ ಸಮಾಜವಾದಿ ಪಾರ್ಟಿಯ ಮುಖ್ಯಸ್ಥ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಪ್ರಿಯಾಂಕಾ ಗಾಂಧೀ ಅವರು ಕಾಜಲ್ ನಿಷಾದ್ ಪರವಾಗಿ ನಡೆಸಿದ ಜಂಟಿ ಚುನಾವಣಾ ಪ್ರಚಾರ ಸಭೆ ದೊಡ್ಡ ಸಂಖ್ಯೆಯಲ್ಲಿ ಜನರನ್ನು ಸೆಳೆದಿತ್ತು.

UP ELECTION 1

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ಯಾಂಕ್ ವಂಚನೆ ಪ್ರಕರಣ: ಅನಿಲ್ ಅಂಬಾನಿ ನಿವಾಸದ ಮೇಲೆ ಸಿಬಿಐ ದಾಳಿ, ಎಫ್‌ಐಆರ್ ದಾಖಲು

ಸುಮಾರು ಎರಡು ಸಾವಿರ ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ...

ಚಿತ್ರದುರ್ಗ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನು ಬಂಧಿಸಿದ ಇಡಿ: ನಗದು ಸಹಿತ ಚಿನ್ನಾಭರಣ ವಶಕ್ಕೆ

ಚಿತ್ರದುರ್ಗದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಮನೆ, ಕಚೇರಿ ಸೇರಿದಂತೆ 31...

ತಾಂತ್ರಿಕ ದೋಷ: ಮತ್ತೊಂದು ಏರ್‌ ಇಂಡಿಯಾ ವಿಮಾನ ರದ್ದು, ವಾರದಲ್ಲೇ ಮೂರನೇ ಘಟನೆ

110 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಮುಂಬೈನಿಂದ ಜೋಧ್‌ಪುರಕ್ಕೆ ಹಾರುತ್ತಿದ್ದ ಏರ್‌ ಇಂಡಿಯಾ ವಿಮಾನವನ್ನು...

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

Download Eedina App Android / iOS

X