ಪ್ರಾಮಾಣಿಕರನ್ನು ಬಿಜೆಪಿ ಹೊರಹಾಕುತ್ತಿದೆ: ರಾಹುಲ್ ಗಾಂಧಿ

Date:

Advertisements
  • ಬಿಜೆಪಿ ಭ್ರಷ್ಟಾಚಾರದ ವಿರುದ್ಧ ರಾಹುಲ್ ಗಾಂಧಿ ಕಿಡಿ
  • ಶೆಟ್ಟರ್ ಜೊತೆಗೂಡಿ ಬಿಜೆಪಿ ಒಳ ಸತ್ಯ ಬಿಚ್ಚಿಟ್ಟ ರಾಹುಲ್

ಯಾರು ಭ್ರಷ್ಟಾಚಾರಕ್ಕೆ ಕೈ ಜೋಡಿಸುವುದಿಲ್ಲವೋ ಅಂತಹ ಪ್ರಾಮಾಣಿಕರನ್ನು ಬಿಜೆಪಿ ಹೊರಹಾಕುತ್ತಿದೆ ಎಂದು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹೇಳಿದರು.

ಹಾನಗಲ್‌ನಲ್ಲಿನ ಕಾಂಗ್ರೆಸ್ ಚುನಾವಣಾ ಪ್ರಚಾರದಲ್ಲಿ ಪಕ್ಷದ ಅಭ್ಯರ್ಥಿ ಶ್ರೀನಿವಾಸ್ ಮಾನೆ ಪರ ರಾಹುಲ್ ಗಾಂಧಿ ಮತಯಾಚನೆ ಮಾಡಿದರು.

ಹೊಸದಾಗಿ ಪಕ್ಷ ಸೇರ್ಪಡೆಯಾದ ಜಗದೀಶ್ ಶೆಟ್ಟರ್ ಜೊತೆ ವೇದಿಕೆ ಹಂಚಿಕೊಂಡ ರಾಹುಲ್ ಗಾಂಧಿ ಅವರೊಂದಿಗೆ ಜೊತೆಗೂಡಿ ಬಿಜೆಪಿಯ ಒಳ ಸತ್ಯಗಳನ್ನು ಬಿಚ್ಚಿಟ್ಟರು.

Advertisements

ಶೆಟ್ಟರ್ ಅವರಂತಹ ಹಿರಿಯ ನಾಯಕರಿಗೆ ಬಿಜೆಪಿ ಯಾಕೆ ಟಿಕೆಟ್ ನೀಡಲಿಲ್ಲ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತಿತ್ತು. ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ್ದಾರೆ.

ಅಂತಹವರಿಗೆ ಈ ಪಕ್ಷ ಟಿಕೆಟ್ ನೀಡಿಲ್ಲ. ಏಕೆಂದರೆ ಅವರ ವಿರುದ್ಧ ಯಾವುದೇ ಟೇಪ್ ಆಗಲಿ, ಭ್ರಷ್ಟಾಚಾರ ಪ್ರಕರಣವಾಗಲಿ ಇಲ್ಲ. ಅವರು ಭ್ರಷ್ಟಾಚಾರ ಮಾಡದ ಕಾರಣ ಟಿಕೆಟ್ ಸಿಗಲಿಲ್ಲ, ಬಹುಶಃ ಅವರು ಶೇ. 40 ಕಮಿಷನ್‌ಗೆ ಕೈ ಜೋಡಿಸಿದ್ದರೆ ಅವರಿಗೂ ಟಿಕೆಟ್ ಸಿಗುತ್ತಿತ್ತೇನೋ ಎಂದು ಕುಟುಕಿದರು.

ಮೋದಿ ಅವರು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡುವಾಗ ಕರ್ನಾಟಕ ರಾಜ್ಯದ ಶೇ. 40 ಕಮಿಷನ್ ಭ್ರಷ್ಟಾಚಾರ ಮಾಡುವ ನಾಲ್ಕೈದು ನಾಯಕರು ಅವರ ಸುತ್ತ ಇರುತ್ತಾರೆ.

ಮೋದಿ ಅವರು ತಾವು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವುದಾಗಿ ಹೇಳಿದ್ದರು, ಆದರೆ ಅವರು ಯಾರು ಭ್ರಷ್ಟರಲ್ಲವೋ ಅವರನ್ನು ಪಕ್ಷದಿಂದ ಹೊರಹಾಕಿದ್ದಾರೆ. ಆ ಮೂಲಕ ಅವರು ಭ್ರಷ್ಟರ ಪರ ಹೋರಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ ಎಂದು ಲೇವಡಿ ಮಾಡಿದರು.

ಗದಗದಲ್ಲಿ ದಿಂಗಾಲೇಶ್ವರ ಸ್ವಾಮೀಜಿಗಳು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದಾರೆ. ಅವರು ಬಿಜೆಪಿ ಸರ್ಕಾರ ವಿನಾಯತಿ ನೀಡಿ, ಶೇ 40 ಬದಲು ಶೇ 30 ಕಮಿಷನ್ ಅನ್ನು ಮಠದಿಂದ ಪಡೆದಿರುವುದಾಗಿ ಹೇಳಿದ್ದಾರೆ.

ಬಿಜೆಪಿ ಅವರು ಧರ್ಮದ ವಿಚಾರವಾಗಿ ಮಾತನಾಡುತ್ತಾರೆ, ಭ್ರಷ್ಟಾಚಾರದಲ್ಲಿ ವಿನಾಯತಿ ನೀಡುತ್ತಾರೆ. ಅದು ಸಣ್ಣದಾಗಲಿ, ದೊಡ್ಡ ಕೆಲಸವಾಗಲಿ ಶೇ. 40 ನೀಡಲೇಬೇಕು ಎಂದಿರುವುದು ಸರ್ಕಾರದ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ ಎಂದರು.

ಈ ಹಿಂದೆ ಬಿಜೆಪಿಯವರು ಮಾಡಿದ್ದ ಸರ್ಕಾರ ಕೂಡ ಅವರ ಸ್ವಂತ ಬಲದಿಂದ ಮಾಡಿದ್ದಲ್ಲ. ಅಂದಿನ ಹಾಗೂ ಇಂದಿನ ಎರಡೂ ಸರ್ಕಾರ ಕಳ್ಳತನದಿಂದ ಮಾಡಿದ್ದು. ಜನ ಬೇರೆಯವರಿಗೆ ಮತ ನೀಡಿದ್ದರು. ನಂತರ ಅವರನ್ನು ಖರೀದಿ ಮಾಡಿ ಸರ್ಕಾರ ರಚಿಸಿದ್ದಾರೆ.

ಇವರ ಶಾಸಕರು ಹೇಳುವಂತೆ 2500 ಕೋಟಿ ರೂ. ಕೊಟ್ಟರೆ ಮುಖ್ಯಮಂತ್ರಿಯಾಗಬಹುದು. ಅಂದರೆ ನಿಮ್ಮ ಭವಿಷ್ಯದ ಬೆಲೆ 2500 ಕೋಟಿ ರೂ. ಇವರು ಶೇ. 40ರಲ್ಲಿ ನಿಮ್ಮ ಭವಿಷ್ಯ ಅಳೆಯುತ್ತಾರೆ. ಹೀಗಾಗಿ ಅವರಿಗೆ ಕೇವಲ 40 ಸೀಟು ಕೊಡಿ ಎಂದು ಹೇಳಿದರು.

ಬಿಜೆಪಿಯವರು ನಿಮ್ಮಿಂದ ಶೇ. 40 ಕಮಿಷನ್ ತಿಂದರು, ನಾವು ನಿಮಗೆ ನಾಲ್ಕು ಯೋಜನೆ ನೀಡುತ್ತಿದ್ದೇವೆ ಎಂದ ರಾಹುಲ್ ಕಾಂಗ್ರೆಸ್ ಸದಾ ಜನಪರ ಆಡಳಿತ ನೀಡಲಿದೆ ಎಂದರು.

ಪ್ರಧಾನಮಂತ್ರಿಗಳು ಹಿಂದುಳಿದ ವರ್ಗಗಳ ಬಗ್ಗೆ ಮಾತನಾಡುತ್ತಾರೆ. ಆದರೆ ಯುಪಿಎ ಅವಧಿಯಲ್ಲಿ ಮಾಡಲಾದ ಜಾತಿ ಗಣತಿ ಅಂಕಿಅಂಶಗಳನ್ನು ಬಹಿರಂಗಪಡಿಸುತ್ತಿಲ್ಲ.

ಮೋದಿಯವರಿಗೆ ಒಬಿಸಿ ಸಮುದಾಯಗಳ ಬಗ್ಗೆ ಕಾಳಜಿ ಇದ್ದರೆ, 2011ರಲ್ಲಿ ಮಾಡಿದ ಜಾತಿ ಗಣತಿ ಬಹಿರಂಗ ಮಾಡಿ ಜಾತಿ ಎಷ್ಟಿದೆ ಎಂದು ಹೇಳಲಿ ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? :ರಾಹುಲ್‌ ಗಾಂಧಿಯ ಮೋದಿ ಉಪನಾಮ ಹೇಳಿಕೆ; ಕೆಳ ನ್ಯಾಯಾಲಯದ ಆದೇಶಕ್ಕೆ ಪಾಟ್ನಾ ಹೈಕೋರ್ಟ್ ತಡೆಯಾಜ್ಞೆ  

ಇನ್ನು ಶೇ.50ರಷ್ಟು ನಿಗದಿ ಮಾಡಿರುವ ಮೀಸಲಾತಿ ಮಿತಿಯನ್ನು ತೆರವುಗೊಳಿಸಲಿ. ಇವುಗಳನ್ನು ಕಾರ್ಯರೂಪಕ್ಕೆ ತರುವವರೆಗೂ ಒಬಿಸಿ ಬಗ್ಗೆ ಅವರು ಮಾತನಾಡುವ ನೈತಿಕತೆ ಇರುವುದಿಲ್ಲ.

ಪರಿಶಿಷ್ಟರಿಗೆ ಜನಸಂಖ್ಯೆ ಅನುಗುಣವಾಗಿ ಮೀಸಲಾತಿ ಸಿಗಬೇಕು. ಬಿಜೆಪಿ ಸರ್ಕಾರ ಈ ಕೆಲಸಗಳನ್ನು ಮಾಡದಿದ್ದರೆ ಕಾಂಗ್ರೆಸ್ ಸರ್ಕಾರ ಈ ಕೆಲಸ ಮಾಡಲಿದೆ. ನಾವು ಒಬಿಸಿ, ದಲಿತರು, ಆದಿವಾಸಿಗಳಿಗೆ ಶಕ್ತಿ ತುಂಬಲಿದೆ ಎಂದರು.

ರೈತರ ವಿಚಾರವಾಗಿ ಮಾತನಾಡಿದ ರಾಹುಲ್ ಗಾಂಧಿ, ನಾನು ಕಬ್ಬು ಬೆಳೆಗಾರರ ಜತೆ ಸಂವಾದ ನಡೆಸಿದ್ದೇನೆ. ಕಬ್ಬು ಬೆಳೆಗೆ ಸೂಕ್ತ ಬೆಲೆ ನೀಡುವ ಭರವಸೆ ನೀಡಿದ್ದೇನೆ. ಇದರ ಜತೆಗೆ ಕೃಷಿ ಕೈಗಾರಿಕೆಗೆ ಆದ್ಯತೆ ನೀಡುತ್ತೇವೆ ಎಂದು ಹೇಳಿದರು.

ಅಂತಿಮವಾಗಿ ಮತದಾರರಲ್ಲಿ ಮನವಿ ಮಾಡಿಕೊಂಡ ರಾಹುಲ್ ಗಾಂಧಿ, ಮೋದಿಯವರ ರೀತಿ ಪರರಿಗೆ ದೇಶ ಮಾರುವ ಸರ್ಕಾರವನ್ನು ನಾವು ಮಾಡುವುದಿಲ್ಲ. ನೀವು ಕಾಂಗ್ರೆಸ್‌ಗೆ ಕನಿಷ್ಠ 150 ಕ್ಷೇತ್ರಗಳನ್ನು ನೀಡಲೇಬೇಕು.

ಇಲ್ಲದಿದ್ದರೆ ಭ್ರಷ್ಟಾಚಾರದ ಹಣದಲ್ಲಿ ಅವರು ಶಾಸಕರನ್ನು ಖರೀದಿ ಮಾಡುತ್ತಾರೆ. ಹೀಗಾಗಿ ನೀವು ಬಿಜೆಪಿಯವರಿಗೆ 40ಕ್ಕಿಂತ ಹೆಚ್ಚಿನ ಸೀಟುಗಳನ್ನು ನೀಡಬೇಡಿ. ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತ ನೀಡಿ ಅಧಿಕಾರದ ಖರ್ಚಿಯಲ್ಲಿ ಕೂರಿಸಿ ಎಂದು ಮನವಿ ಮಾಡಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

Download Eedina App Android / iOS

X