ರಾಜ್ಯದಲ್ಲಿ ನಡೆದ ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಕಂಡುಬಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನ ಆರ್.ಟಿ ನಗರದ ಬೋಸ್ಟನ್ ಸ್ಕೂಲ್‌ನಲ್ಲಿ ಮತದಾನ ಮಾಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. “ಬಿಜೆಪಿ ತನ್ನ ಭದ್ರಕೋಟೆಯಲ್ಲೂ ನಿಶ್ಚಿತವಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನ ಕಳೆದುಕೊಂಡಿದೆ. ಕರಾವಳಿ ಭಾಗದಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ತೀವ್ರ ಪೈಪೋಟಿ ನೀಡಿದ್ದಾರೆ” ಎಂದರು.
“ದಕ್ಷಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ಕಷ್ಟ ಎಂಬ ಪರಿಸ್ಥಿತಿಯಿತ್ತು. ಆದರೆ, ಮತಗಟ್ಟೆಗಳಿಂದ ಬರುತ್ತಿರುವ ಮಾಹಿತಿ ನೋಡಿದರೆ ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸ್ ತೀವ್ರ ಪೈಪೋಟಿ ನೀಡಿದೆ. ನಮ್ಮ ಅಭ್ಯರ್ಥಿ ಗೆಲ್ಲುವ ಸಾಧ್ಯತೆಗಳನ್ನ ತಳ್ಳಿಹಾಕುವಂತಿಲ್ಲ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪರವಾದ ವಾತಾವರಣ ಹೆಚ್ಚಾಗಿರುವುದನ್ನ ಗಮನಿಸಿದ್ದೇವೆ” ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
“ಬೆಂಗಳೂರಿನ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಪೈಪೋಟಿ ನೀಡಿದ್ದಾರೆ. ಬೆಂಗಳೂರು ದಕ್ಷಿಣ ಹಾಗೂ ಕೇಂದ್ರ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುವ ಸಾಧ್ಯತೆಗಳಿವೆ. ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಏಲ್ಲಿ ಗೆಲ್ಲುತ್ತೇವೆ ಎಂದು ಖಚಿತವಾಗಿ ಹೇಳಿಕೊಳ್ಳಲು ಬಿಜೆಪಿಗೆ ಸಾಧ್ಯವಾಗ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪರವಾದ ಅಲೆಯಿದ್ದು, ನಮ್ಮ ಕಾರ್ಯಕರ್ತರು ಮತಯಾಚನೆಗೆ ತೆರಳಿದಾಗ ಆತ್ಮೀಯತೆಯಿಂದ ಜನರು ಮಾತನಾಡಿಸಿದ್ದಾರೆ. ರಾಜ್ಯದಲ್ಲಿ 18 ರಿಂದ 20 ಸ್ಥಾನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.
“ಮೋದಿಯವರು 10 ವರ್ಷಗಳಲ್ಲಿ ತಾವು ಮಾಡಿದ ಕೆಲಸಗಳನ್ನ ಜನರ ಮುಂದಿಟ್ಟು ಮತ ಕೇಳಬೇಕಿತ್ತು. ಆದರೆ ಅವರ ಬತ್ತಳಿಕೆಯಲ್ಲಿ ಉತ್ತಮ ಕಾರ್ಯ ಮಾಡಿದ ಯಾವ ಅಸ್ತ್ರಗಳು ಇಲ್ಲ. ಹೀಗಾಗಿ ಸಮಾಜದಲ್ಲಿ ಒಡಕು ಮೂಡಿಸುವ ಹೇಳಿಕೆಗಳನ್ನ ನೀಡಿದ್ದಾರೆ. ಪ್ರಧಾನಿಯಾಗಿ ಹಲವು ಸುಳ್ಳುಗಳನ್ನ ಚುನಾವಣೆ ಸಂದರ್ಭದಲ್ಲಿ ಹೇಳಿರುವುದು ಜನರು ಗಮನಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲು ಸುಳ್ಳಿನ ಆಶ್ರಯ ಪಡೆದಿರುವ ಮೋದಿಯವರ ನಡೆ ಬಗ್ಗೆ ಜನರು ಪ್ರಶ್ನೆ ಮಾಡುತ್ತಿದ್ದಾರೆ” ಎಂದು ಹೇಳಿದರು.