- “ಇಷ್ಟು ವರ್ಷ ರಾಜಕೀಯ ಮಾಡಿಯೂ ಸಣ್ಣ ಕಾಮನ್ಸೆನ್ಸ್ ಕೂಡ ಈ ಬಿಜೆಪಿಯವರಿಗಿಲ್ಲ”
- ‘ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆ’ ಎಷ್ಟು ತಿಂಗಳು, ಹೇಗೆ ನಡೆಯುತ್ತದೆ ನೋಡೋಣ ಎಂದ ಮಾಜಿ ಪ್ರಧಾನಿ
ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಿ.ಟಿ.ರವಿ, ವಿಪಕ್ಷ ನಾಯಕ ಸ್ಥಾನಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ರನ್ನು ಆಯ್ಕೆ ಬಹುತೇಕ ತೀರ್ಮಾನವಾಗಿದೆ ಎಂದು ಕಳೆದ ಜುಲೈನಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, “ಬಿಜೆಪಿ ನಾಯಕರಲ್ಲೇ ಒಗ್ಗಟ್ಟಿಲ್ಲ. ಹಾಗಾಗಿ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ” ಎಂದು ಈಗ ಮತ್ತೊಂದು ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ವೇಳೆ ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಪತ್ರಕರ್ತರೋರ್ವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಿದ್ದ ವೇಳೆ ಈ ಹೇಳಿಕೆ ನೀಡಿದ್ದಾರೆ.
“ಬಿಜೆಪಿ ನಾಯಕರ ನಡುವೆಯೇ ಒಗ್ಗಟ್ಟಿಲ್ಲ. ಹಾಗಾಗಿ, ಅವರ ರಾಜ್ಯಾಧ್ಯಕ್ಷ ಯಾರು ಅಂತ ಅವರಿಗೇ ಗೊತ್ತಿಲ್ಲ, ಈವರೆಗೂ ವಿರೋಧ ಪಕ್ಷದ ನಾಯಕನ ಆಯ್ಕೆ ಆಗಿಲ್ಲ. ಬಿಜೆಪಿ-ಜೆಡಿಎಸ್ ಮೈತ್ರಿಯ ಕುರಿತು ಒಂದು ವೇಳೆ ಚರ್ಚೆ ನಡೆಸಿ, ಮಾತುಕತೆ ಮಾಡುವುದಾದರೆ ಯಾರ ಜೊತೆಗೆ ಮಾಡಬೇಕು? ಎಂದು ಕೇಳಿದ ಮಾಜಿ ಪ್ರಧಾನಿ, “ಇಷ್ಟು ವರ್ಷ ರಾಜಕೀಯ ಮಾಡಿಯೂ ಸಣ್ಣ ಕಾಮನ್ಸೆನ್ಸ್ ಕೂಡ ಈ ಬಿಜೆಪಿಯವರಿಗಿಲ್ಲ” ಎಂದು ನೇರವಾಗಿಯೇ ಹೇಳಿದರು.

“ಚಾಮುಂಡೇಶ್ವರಿ ಕೂಡ ಹೆಣ್ಣು ದೇವತೆ. ಹಾಗಾಗಿ ತಾಯಿ ಒಳ್ಳೆಯದು ಮಾಡು ಎಂದು ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂ. ದುಡ್ಡು ಕೊಟ್ಟಿದ್ದಾರೆ. ಆ ಗ್ಯಾರಂಟಿ ಎಷ್ಟು ತಿಂಗಳು, ಹೇಗೆ ನಡೆಯುತ್ತದೆ ನೋಡೋಣ. ಮೂರ್ನಾಲ್ಕು ತಿಂಗಳು ಕಾಯೋಣ. ಆಮೇಲೆ ಗೊತ್ತಾಗಬಹುದು” ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಇದೇ ವೇಳೆ ಗೃಹಲಕ್ಷ್ಮಿ ಯೋಜನೆ ಮುಂದುವರಿಯುವ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷ ಸಂಘಟನೆಯ ಕುರಿತು ಮಾತನಾಡಿದ ದೇವೇಗೌಡ, “ಈಗಾಗಲೇ ಜಿಟಿ ದೇವೇಗೌಡ ನೇತೃತ್ವದಲ್ಲಿ ಕೋರ್ ಕಮಿಟಿ ರಚಿಸಲಾಗಿದೆ. ಕೋರ್ ಕಮಿಟಿಯ 13 ಸದಸ್ಯರು ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಕಾರ್ಯಕರ್ತರು ನಮ್ಮ ಪಕ್ಷ ಬಿಟ್ಟುಹೋಗಲು ಅವಕಾಶ ನೀಡಲ್ಲ. ಜೆಡಿಎಸ್ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿದ್ದೇವೆ. ನನ್ನ ಶಕ್ತಿಯನ್ನು ಪಕ್ಷಕ್ಕಾಗಿ ಧಾರೆ ಎರೆಯುತ್ತೇನೆ” ಎಂದರು.
“ಕಳೆದ ಮೂರು ತಿಂಗಳಿನಿಂದ ಬಿಜೆಪಿಯವರು ಮಾಡಿರುವ ಎಲ್ಲ ಅಕ್ರಮಗಳ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಕಾಂಗ್ರೆಸ್ನವರು ದಿನಾ ತಮಟೆ ಹೊಡೆಯುತ್ತಿದ್ದಾರೆ. ಅವರನ್ನು ತನಿಖೆ ಮಾಡಬೇಡಿ ಎಂದು ಹಿಡಿದುಕೊಂಡಿರುವವರು ಯಾರು? ಬಿಟ್ ಕಾಯಿನ್ ಬಗ್ಗೆಯೂ ತನಿಖೆ ನಡೆಸಲಿ” ಎಂದು ಕಾಂಗ್ರೆಸ್ ವಿರುದ್ಧ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಗುಡುಗಿದರು.