- ಸೋಲಿನ ನೋವಿನಿಂದ ವಿ ಸೋಮಣ್ಣ ಇನ್ನೂ ಹೊರಬಂದಿಲ್ಲ
- ಸಿಎಂ, ಡಿಸಿಎಂಗೆ ಸವಾಲೊಡ್ಡುವ ವಿಪಕ್ಷ ನಾಯಕನ ನೇಮಕ
ಅಕ್ಕಿ ಕೊಡದಿರುವ ನೀಚ ಬುದ್ಧಿ ನಮಗಿಲ್ಲ, ಆ ರೀತಿ ಚೀಪ್ ಪಾಲಿಟಿಕ್ಸ್‌ನ್ನು ನಮ್ಮ ಮುಖಂಡರು, ಕಾರ್ಯಕರ್ತರು ಮಾಡುವುದಿಲ್ಲ. ಕರ್ನಾಟಕದ ಪ್ರತಿಯೊಬ್ಬರಿಗೂ ಅಕ್ಕಿ ಸಿಗಬೇಕೆಂಬುದು ನಾಯಕರ, ಕಾರ್ಯಕರ್ತರ ಆಶಯವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದಗೌಡ ತಿರುಗೇಟು ನೀಡಿದರು.
ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನನಗೆ ಬಿಜೆಪಿ ಸೋತಿದ್ದಕ್ಕೆ ಬೇಜಾರಿಲ್ಲ. ಆದರೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಹೆಚ್ಚು ಬೇಸರವಾಗಿದೆ ಎಂದರು.
ಕರ್ನಾಟಕದ ದುರ್ದೈವದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಎಂತೆಂತಹ ಮಂತ್ರಿಗಳಿದ್ದಾರೆ, ಸರ್ವರ್‌ನ್ನು ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಎನ್ನುತ್ತಾರೆ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಕುಣಿಯಲಾರದವ ನೆಲ ಡೊಂಕು ಎಂದ ರೀತಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ನವರು ಕೇಂದ್ರ ಸರ್ಕಾರ ಅಕ್ಕಿ ಕೊಟ್ಟಿಲ್ಲ ಎನ್ನುತ್ತಿದ್ದಾರೆ. ಘೋಷಣೆಗೂ ಮುನ್ನ ಕಾಂಗ್ರೆಸ್ ನವರಿಗೆ ಪರಿಜ್ಞಾನ ಇರಲಿಲ್ಲವೇ? ಮುಂದೆ ಯಾವ ರೀತಿ ತೊಂದರೆ ಉಂಟಾಗಬಹುದು ಎಂಬ ಚಿಂತನೆ ಇರಲಿಲ್ಲವೇ? 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯಗೆ ಮುಂದಾಲೋಚನೆ ಇರಬೇಕಿತ್ತು ಎಂದು ಕಿಡಿಕಾರಿದರು.
ಸಿಎಂ, ಡಿಸಿಎಂಗೆ ಸವಾಲೊಡ್ಡುವ ವಿಪಕ್ಷ ನಾಯಕನ ನೇಮಕ
ವಿಪಕ್ಷ ನಾಯಕನನ್ನು ನೇಮಕ ಮಾಡುವುದು ನಮ್ಮ ಧರ್ಮ, ಅಧಿವೇಶನ ಆರಂಭಗೊಳ್ಳುವ ಮುನ್ನ ವಿಪಕ್ಷ ನಾಯಕನನ್ನು ನೇಮಕ ಮಾಡಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಜುಗಲ್ಬಂದಿಗೆ ಸವಾಲೊಡ್ಡುವ ನಾಯಕನನ್ನು ನೇಮಕ ಮಾಡಲಾಗುವುದು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಈ ಸುದ್ದಿ ಓದಿದ್ದೀರಾ? ಹ್ಯಾಕ್ ವಿಚಾರ | ಕಾಂಗ್ರೆಸ್‌ನವರು ಹುಚ್ಚುಚ್ಚು ಹೇಳಿಕೆ ನೀಡುತ್ತಿದ್ದಾರೆ: ಸಿ.ಟಿ ರವಿ
ಇದೇ ವೇಳೆ ಕೆಲವರು ಹೊಂದಾಣಿಕೆ ರಾಜಕಾರಣ ಮಾಡುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಹೊಂದಾಣಿಕೆ ರಾಜಕಾರಣ ಯಾರೂ ಮಾಡುವುದಿಲ್ಲ. ಆ ರೀತಿ ರಾಜಕಾರಣ ಮಾಡಿದ್ದರೆ ಹಲವು ಕ್ಷೇತ್ರಗಳಲ್ಲಿ ಗೆಲ್ಲಬಹುದಿತ್ತು. ಆದರೆ, ನಾವು ಸೋತರೂ ಪರವಾಗಿಲ್ಲ, ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ ಎಂಬುದು ಮುಖಂಡರು ಮತ್ತು ಪಕ್ಷದ ನಿಲುವಾಗಿದೆ ಎಂದು ಸ್ಪಷ್ಟನೆ ನೀಡಿದರು.
ಇನ್ನು, ಸೋಲಿನ ಪರಾಮರ್ಶೆಯ ಕಾರ್ಯಕರ್ತರ ಸಭೆಗೆ ಮಾಜಿ ಸಚಿವ ವಿ ಸೋಮಣ್ಣ ಗೈರಾಗಿದ್ದರ ಸಂಬಂಧ ಪ್ರತಿಕ್ರಿಯಿಸಿ, ಸೋಮಣ್ಣ ತಾನು ಬರುವುದಿಲ್ಲ ಎಂದು ಹೇಳಿದರು. ಸೋಲಿನ ನೋವಿನಿಂದ ಅವರಿನ್ನೂ ಹೊರಬಂದಿಲ್ಲ. ಆದರೆ, ಅವರಿಗೆ ಯಾರಾ ಮೇಲೂ ಕೋಪ ಇಲ್ಲ ಎಂದು ಹೇಳಿದರು.