ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ವಿಚಾರವಾಗಿ ಜೆಡಿಎಸ್ನ ಹಲವು ಮುಖಂಡರು ಬಂಡಾಯವೆದ್ದು ಪಕ್ಷ ತೊರೆದಿದ್ದಾರೆ. ಅಲ್ಲದೆ, ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಇದೆಲ್ಲದರ ನಡುವೆ, ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿರುವ ಕೇರಳ ಜೆಡಿಎಸ್ ಘಟಕದ ಮುಖಂಡ, ಕೇರಳ ವಿದ್ಯುತ್ ಸಚಿವ ಕೆ ಕೃಷ್ಣನ್ಕುಟ್ಟಿ, “ಜೆಡಿಎಸ್ ಕೇರಳ ಘಟಕವು ಸ್ವತಂತ್ರ ಪಕ್ಷವಾಗಿ ಮುನ್ನಡೆಯಲು ನಿರ್ಧರಿಸಿದೆ” ಎಂದು ಹೇಳಿದ್ದಾರೆ.
“ನಾನು ಮತ್ತು ಕೇರಳ ಜೆಡಿಎಸ್ ಅಧ್ಯಕ್ಷ ಮ್ಯಾಥ್ಯೂ ಟಿ ಥಾಮಸ್ ಅವರು ಕರ್ನಾಟಕದಲ್ಲಿ ಪಕ್ಷದ ನಾಯಕರನ್ನು ಭೇಟಿಯಾಗಿದ್ದೇವೆ. ಬಿಜೆಪಿಯೊಂದಿಗೆ ಮೈತ್ರಿ ಸ್ವೀಕಾರಾರ್ಹವಲ್ಲ. ಹೈಕಮಾಂಡ್ ನಡೆ ಸರಿಯಲ್ಲ ತಿಳಿಸಿದ್ದೇವೆ” ಎಂದು ಕೃಷ್ಣನ್ಕುಟ್ಟಿ ಹೇಳಿದ್ದಾರೆ.
“ನಾವು ಕರ್ನಾಟಕ ಜೆಡಿಎಸ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸುತ್ತಿದ್ದೇವೆ. ನಾವು ಸ್ವತಂತ್ರವಾಗಿ ಉಳಿಯುತ್ತೇವೆಂದು ಹೈಕಮಾಂಡ್ಗೆ ತಿಳಿಸಿದ್ದೇವೆ. ಇಲ್ಲಿ ಸಮಿತಿ ಸಭೆ ನಡೆಸಿ ಸ್ವತಂತ್ರವಾಗಿ ನಿಲ್ಲಲು ನಿರ್ಧರಿಸಿದ್ದೇವೆ. ಎಲ್ಲರೂ ಒಪ್ಪಿದ್ದಾರೆ. ನಮ್ಮದು ವಾಸ್ತವ ನಿಲುವು” ಎಂದು ಅವರು ಹೇಳಿದ್ದಾರೆ.
ರಾಷ್ಟ್ರಮಟ್ಟದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ನೊಂದಿಗಿನ ಸಂಬಂಧವನ್ನು ಕೇರಳದ ಆಡಳಿತಾರೂಢ ಸಿಪಿಐ(ಎಂ) ಕಡಿತಗೊಳಿಸಿಲ್ಲ ಎಂದು ಕಾಂಗ್ರೆಸ್ ನೇತೃತ್ವದ ಯುಡಿಎಫ್ ಆರೋಪಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, “ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿಯನ್ನು ನಮ್ಮೊಂದಿಗಿರುವ ಕೇರಳ ಜೆಡಿಎಸ್ ಒಪ್ಪಿಕೊಂಡಿಲ್ಲ” ಎಂದು ಹೇಳಿದ್ದಾರೆ.