ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂಬ ವಿಚಾರ ಸುದ್ದಿಯಾಗುತ್ತಿದೆ. ಈ ಕುರಿತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನರೇಂದ್ರ ಮೋದಿ ಅವರು ಮೂರನೇ ಬಾರಿಯೂ ದೇಶದ ಪ್ರಧಾನಿ ಆಗಬೇಕು. ಭಾರತಕ್ಕೆ ಎದ್ದು ನಿಂತು ಗೌರವ ನೀಡುತ್ತಿರುವುದು ಪ್ರಧಾನಿ ಮೋದಿ ಅವರ ಕಾರಣಕ್ಕೆ” ಎಂದು ಹೇಳಿದ್ದಾರೆ.
“ರಾಜಕೀಯ ಭಿನ್ನಮತಗಳನ್ನು ದೂರವಿಟ್ಟು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಬೇಕು. ಇಂತಹ ಅಪೇಕ್ಷೆ ಎಲ್ಲ ರಾಜಕೀಯ ಪಾರ್ಟಿಯಲ್ಲೂ ಇದೆ. ಈ ಅಪೇಕ್ಷೆಯನ್ನು ಜೆಡಿಎಸ್ನಿಂದಲೂ ನಿರೀಕ್ಷೆ ಮಾಡುತ್ತೇವೆ” ಎಂದಿದ್ದಾರೆ.
“ದೇಶದಲ್ಲಿರುವ ರಾಜಕೀಯ ಪಕ್ಷಗಳು ಪ್ರಧಾನಿ ಮೋದಿ ಜೊತೆಗೆ ಜೋಡಣೆ ಆಗುತ್ತಿವೆ. ಭಾರತ ನೂರನೇ ವರ್ಷದ ಸಂಭ್ರಮಾಚರಣೆಯ ದಿನ ವಿಶ್ವದಲ್ಲೇ ನಂಬರ್ ಓನ್ ಆಗಿರಬೇಕು ಎಂಬುದು ಮೋದಿ ಅವರ ಕನಸು” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗೃಹಲಕ್ಷ್ಮಿ ಯೋಜನೆಗೆ ಜುಲೈ 19ರಿಂದ ನೋಂದಣಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
‘ಎರಡೇ ತಿಂಗಳಿಗೆ ಸರ್ಕಾರ ನೈತಿಕತೆ ಕಳೆದುಕೊಂಡಿದೆ’
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ರಾಜ್ಯಾದ್ಯಂತ ಕೊಲೆಗಳು ಆಗುತ್ತಿದೆ. ಕಾಂಗ್ರೆಸ್ ನೇತೃತ್ವ, ಕೃಪಾಕಟಾಕ್ಷದಲ್ಲಿ ರಾಜ್ಯದಲ್ಲಿ ಕೊಲೆಯಾಗುತ್ತಿದೆ. ದಿಗಂಬರ ಸ್ವಾಮಿ ಕೊಲೆ, ಬೆಂಗಳೂರಿನಲ್ಲಿ ಹಾಡಹಗಲೇ ಟೆಕ್ಕಿ ಸಾಯುತ್ತಾರೆ. ಉಳ್ಳಾಲದಲ್ಲಿ ನಮ್ಮ ಕಾರ್ಯಕರ್ತನ ಶವ ನೀರಲ್ಲಿ ಸಿಗುತ್ತದೆ. ಹನುಮಜಯಂತಿ ಯಶಸ್ವಿಯಾಗಿದ್ದಕ್ಕೆ ವೇಣುಗೋಪಾಲ್ ಕೊಲೆಯಾಗಿದೆ. ಎರಡೇ ತಿಂಗಳಿಗೆ ಸರ್ಕಾರ ನೈತಿಕತೆ ಕಳೆದುಕೊಂಡಿದೆ ಎಂದು ಸಚಿವೆ ಶೋಭಾ ಕರಾಂದ್ಲಾಜೆ ವಾಗ್ದಾಳಿ ನಡೆಸಿದರು.
ಎ4 ಆರೋಪಿಯನ್ನು ಎ1 ಮಾಡುತ್ತಾರೆ, A1 ಆರೋಪಿಯನ್ನು ರಕ್ಷಣೆ ಮಾಡುತ್ತಾರೆ. ಇದು ಇಂದಿನ ಕಾಂಗ್ರೆಸ್ ಸರ್ಕಾರದ ನೀತಿ ರಾಜಕೀಯ. 136 ಸೀಟ್ ಗೆದ್ದಿದ್ದೇವೆಂದು ದರ್ಪದಿಂದಿದ್ದಾರೆ, ಮುಂದೆ ಜನ ಪಾಠ ಕಲಿಸುತ್ತಾರೆ ಎಂದರು.
ಗ್ಯಾರಂಟಿಗಳು ಎಲ್ಲಿ ಹೋದವು? ಮೊದಲ ಕ್ಯಾಬಿನೆಟ್ ನಲ್ಲೇ ಗ್ಯಾರಂಟಿ ಎಂದಿದ್ದರು. ನಿಮ್ಮ ಮೊದಲ ಕ್ಯಾಬಿನೆಟ್ ಯಾವಾಗ? ಮೊದಲು ಅದನ್ನು ಹೇಳಿ ಎಂದು ಪ್ರಶ್ನಿಸಿದರು.