ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ, ಹಣ ಪಡೆದು ವಂಚಿಸಿದ್ದಾರೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಕುಟುಂಬದ ವಿರುದ್ಧ ಬಿಜೆಪಿ ಮುಖಂಡೆ ಸುನೀತಾ ಚೌಹಾಣ್ ಅವರು ದೂರು ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ.
ಬಿಜೆಪಿ ಮಾಜಿ ಶಾಸಕ ದೇವಾನಂದ್ ಸಿಂಗ್ ಚೌಹಾಣ್ ಅವರ ಪತ್ನಿ ಸುನೀತಾ ಚೌಹಾಣ್ ಅವರು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ”ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ, ಸಹೋದರಿ ವಿಜಯಲಕ್ಷ್ಮಿ ಜೋಶಿ ಹಾಗೂ ಗೋಪಾಲ್ ಜೋಶಿ ಅವರ ಪುತ್ರ ಅಜಯ್ ಜೋಶಿ ತಮಗೆ ವಂಚಿಸಿದ್ದಾರೆ. ಜಾತಿ ನಿಂದನೆ ಮಾಡಿದ್ದಾರೆ” ಎಂದು ಆರೋಪಿಸಿದ್ದಾರೆ.
”ಗೋಪಾಲ್ ಜೋಶಿ ಅವರು ಬಿಜಾಪುರ ಜಿಲ್ಲೆಯ ಅಥಣಿಯಲ್ಲಿ ಇಂಜಿನಿಯರ್ ಆಗಿರುವ ಶೇಖರ್ ನಾಯಕ್ ಅವರ ಮೂಲಕ ತಮ್ಮನ್ನು ಸಂಪರ್ಕಿಸಿದ್ದರು. ತಮ್ಮ ಸಹೋದರ ಪ್ರಲ್ಹಾದ್ ಜೋಶಿ ಅವರು ಮೋದಿ ಮತ್ತು ಅಮಿತ್ ಶಾ ಅವರಿಗೆ ಆಪ್ತರಾಗಿದ್ದಾರೆ. ಹಣ ಕೊಟ್ಟರೆ, ಅಮಿತ್ ಶಾ ಅವರೊಂದಿಗೆ ಮಾತನಾಡಿ, 2024ರ ಲೋಕಸಭಾ ಚುನಾವಣೆಯಲ್ಲಿ ವಿಜಯಪುರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಗೋಪಾಲ್ ಜೋಶಿ ಹೇಳಿದ್ದರು. ಮುಂಗಡವಾಗಿ 25 ಲಕ್ಷ ರೂ. ಹಣ ಮತ್ತು 5 ಕೋಟಿ ರೂ.ಗಳ ಚೆಕ್ ಪಡೆದುಕೊಂಡಿದ್ದರು. ಆದರೆ, ಟಿಕೆಟ್ ಕೊಡಿಸದೆ ವಂಚಿಸಿದ್ದಾರೆ” ಎಂದು ದೂರುದಾರೆ ಸುನೀತಾ ಚೌಹಾಣ್ ಆರೋಪಿಸಿದ್ದಾರೆ.
”ಟಿಕೆಟ್ ಸಿಗದ ಹಿನ್ನೆಲೆಯಲ್ಲಿ ಹಣ ಮತ್ತು ಚೆಕ್‌ಅನ್ನು ವಾಪಸ್ ಕೇಳಲು ಹೋದಾಗ, ಚೆಕ್‌ಅನ್ನು ಮಾತ್ರವೇ ಹಿಂದಿರುಗಿಸಿದರು. ಅಲ್ಲದೆ, ಸರ್ಕಾರದಿಂದ 200 ಕೋಟಿ ರೂ. ಮೌಲ್ಯದ ಪ್ರಾಜೆಕ್ಟ್ ಸಿಗಲಿದೆ. ಆಗ ಎಲ್ಲ ಹಣವನ್ನೂ ಹಿಂದಿರುಗಿಸುತ್ತೇನೆ. ಅದಕ್ಕಾಗಿ, 1.75 ಕೋಟಿ ರೂ. ಹಣದ ಅಗತ್ಯವಿದೆ. ಸಹಾಯ ಮಾಡಿ – 25 ದಿನಗಳೊಳಗೆ ಹಿಂದಿರುಗಿಸುತ್ತೇನೆಂದು ಗೋಪಾಲ್ ಜೋಶಿ ಕೇಳಿದ್ದರು. ಆ ಹಣವನ್ನು ನಾವು ಹೊಂದಿಸಿ ಕೊಟ್ಟೆವು. ಆದರೆ, ಹಲವಾರು ದಿನಗಳು ಕಳೆದರೂ ಹಣವನ್ನು ಹಿಂದಿರುಗಿಸಲಿಲ್ಲ. ಅದನ್ನು ಕೇಳಲು ಹೋಗಿದ್ದಕ್ಕೆ, ಗೋಪಾಲ್ ಜೋಶಿ ಅವರ ಸಹೋದರಿ ವಿಜಯಲಕ್ಷ್ಮಿ ಜೋಶಿ ಅವರು ನಮ್ಮನ್ನು ಜಾತಿ ನಿಂದನೆ ಮಾಡಿದ್ದಾರೆ. ಅಲ್ಲದೆ, ಗೂಂಡಾಗಳನ್ನು ಕರೆಸಿ, ಬೆದರಿಕೆ ಹಾಕಿದ್ದಾರೆ” ಎಂದು ದೂರಿದ್ದಾರೆ.
ಅವರ ದೂರಿನ ಆಧಾರದ ಮೇಲೆ, ಗೋಪಾಲ್ ಜೋಶಿ, ವಿಜಯಲಕ್ಷ್ಮಿ ಜೋಶಿ ಹಾಗೂ ಅಜಯ್ ಜೋಶಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಈ ಮೂವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 126(2), 118(1), 316(2), 318(4), 61-3(5) ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.