- ಸ್ವತಂತ್ರವಾಗಿ ಸ್ಪರ್ಧಿಸಿದರೆ 5 ಸಾವಿರ ಮತ ಪಡೆಯಲು ಸಾಧ್ಯವಿಲ್ಲ
- ಕಾಂಗ್ರೆಸ್ ಪಕ್ಷ ಮತ್ತು ಮುಖಂಡರ ಶ್ರಮದಿಂದ ಗೆದ್ದಿರಬಹುದು
ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿ ಸ್ವತಂತ್ರವಾಗಿ ನನ್ನ ವಿರುದ್ಧ ಸ್ಪರ್ಧಿಸಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೇ ಬಿಡೋಣ ಎಂದು ಮಾಜಿ ಸಚಿವ ಡಾ. ಕೆ ಸುಧಾಕರ್ ಸವಾಲು ಹಾಕಿದರು.
ಬಿಜೆಪಿ ಮುಖಂಡನ ಮೇಲೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ನಡೆಸಲು ಯತ್ನಿಸಿದ್ದನ್ನು ಖಂಡಿಸಿ ಚಿಕ್ಕಬಳ್ಳಾಪುರ ನಗರದ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಎಸ್‌ಪಿ ಡಿ ಎಲ್ ನಾಗೇಶ್ ಅವರಿಗೆ ದೂರು ಸಲ್ಲಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಡಾ. ಕೆ ಸುಧಾಕರ್ ಮಾತನಾಡಿದರು.
“ಇವರು ಸ್ವತಂತ್ರವಾಗಿ ಸ್ಪರ್ಧಿಸಿದರೆ 5 ಸಾವಿರ ಮತಗಳನ್ನು ಪಡೆಯಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಮತ್ತು ಮುಖಂಡರ ಶ್ರಮದಿಂದ ಗೆದ್ದಿರಬಹುದು. ಆದರೆ, ಈಗ ರಾಜೀನಾಮೆ ನೀಡಿ ನನ್ನ ವಿರುದ್ಧ ಸ್ವತಂತ್ರವಾಗಿ ಸ್ಪರ್ಧೆಗೆ ನಿಂತು ಗೆಲ್ಲಲಿ ನೋಡೋಣ” ಎಂದು ಕಿಡಿಕಾರಿದರು.
“ನಾವು ಸೋತಿರಬಹುದು. ಆದರೆ, ಸತ್ತಿಲ್ಲ. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತನಿಗೆ ತೊಂದರೆ ಕೊಟ್ಟರೆ ಸುಮ್ಮನೆ ಕೂರುವುದಿಲ್ಲ. ಆರು ತಿಂಗಳವರೆಗೂ ಯಾವುದೇ ಪ್ರತಿಕ್ರಿಯೆ ಕೊಡುವುದು ಬೇಡ ಎಂದು ಸುಮ್ಮನಿದ್ದೆ. ಆದರೆ, ಕ್ಷೇತ್ರದಲ್ಲಿ ದಿನೇ ದಿನೇ ಶಾಸಕರ ಬೆಂಬಲಿಗರ ಉಪಟಳ ಹೆಚ್ಚಾಗಿದೆ. ದಿಬ್ಬೂರಲ್ಲಿ ಇತ್ತೀಚೆಗೆ ನಮ್ಮ ಬಿಜೆಪಿ ಕಾರ್ಯಕರ್ತ ನವೀನ್ ಎಂಬುವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಇದೆಲ್ಲವನ್ನು ಸಹಿಸಲ್ಲ” ಎಂದು ಎಚ್ಚರಿಕೆ ನೀಡಿದರು.
“ಅಧಿಕಾರಿಗಳನ್ನು ಕರೆದುಕೊಂಡು ಬೆಂಗಳೂರಿನ ಅವರ ಸಂಸ್ಥೆಯಲ್ಲಿ ಸಭೆ ನಡೆಸಿರುವುದನ್ನು ಪ್ರಶ್ನಿಸಿದ್ದೇ ತಪ್ಪಾ? ಅವರನ್ನು ಯಾರೂ ಪ್ರಶ್ನಿಸಲೇಬಾರದಾ? ವಾಕ್ ಸ್ವಾತಂತ್ರ್ಯವೇ ಇಲ್ಲವೇ? ಪ್ರಶ್ನೆ ಮಾಡಿದ್ದಕ್ಕೆ ಅವರ‍್ಯಾರು ಗೆಲ್ಲಲ್ಲ ಎಂದು ನಗರಸಭೆ ಸದಸ್ಯರ ವಿರುದ್ಧ ಹೇಳಿಕೆ ಕೊಟ್ಟು ಪ್ರಚೋದಿಸಿರುವವರೇ ಇವರು. ಇದರ ವಿರುದ್ಧ ನಮ್ಮ ಮುಖಂಡರು ಮಾತನಾಡಿದರೆ ಅವರ ಅಂಗಡಿ ಬಳಿ ಹೋಗಿ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆಗೆ ಯತ್ನಿಸಿರುವುದು ಖಂಡನೀಯ” ಎಂದು ಕಿಡಿಕಾರಿದರು.
ಈ ಸುದ್ದಿ ಓದಿದ್ದೀರಾ? ಹಾಲು ಉತ್ಪಾದಕರ ಬ್ಯಾಂಕ್ ಮಾಡಲು ಸರ್ಕಾರದ ಜೊತೆ ಚರ್ಚೆ: ಬಸವರಾಜ ಬೊಮ್ಮಾಯಿ
“ಕೂಡಲೇ ಗೂಂಡಾಗಿರಿ ಮಾಡಲು ಬಂದ ಅವರ ವಿರುದ್ಧ ತನಿಖೆ ನಡೆಸಿ ತಪ್ಪಿದ್ದರೆ ಇನ್ನೊಂದು ದಿನದಲ್ಲಿ ಎಫ್‌ಐಆರ್ ದಾಖಲಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು. ಕ್ಷೇತ್ರದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ದೌರ್ಜನ್ಯವೆಸಗಿದರೆ ಯಾವುದೇ ಕಾರಣಕ್ಕೂ ಸುಮ್ಮನಿರುವ ಪ್ರಶ್ನೆಯೇ ಇಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್‌ಪಿ ಡಿ ಎಲ್ ನಾಗೇಶ್ ಅವರಿಗೆ ಶಾಸಕ ಪ್ರದೀಪ್ ಈಶ್ವರ್ ಬೆಂಬಲಿಗರ ದೌರ್ಜನ್ಯವನ್ನು ವಿವರಿಸಿ ದೂರು ಕೊಟ್ಟು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.