ಮಹಿಳೆಯರ ಉಡುಗೆಗಳ ಬಗ್ಗೆ ಬಿಜೆಪಿಯ ಮಾಜಿ ಶಾಸಕರೊಬ್ಬರು ನಿಂದನಾತ್ಮಕ ಹೇಳಿಕೆ ನೀಡಿದ್ದು, ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಬಿಜೆಪಿಗರ ಇಂತಹ ಹೇಳಿಕೆಗಳು ಮಹಿಳೆಯರ ಕುರಿತು ಬಿಜೆಪಿ ನಾಯಕರಲ್ಲಿರುವ ವಿಕೃತ ಮನಸ್ಥಿತಿ ಮತ್ತು ಮಹಿಳಾ ವಿರೋಧಿ ಸಿದ್ದಾಂತವನ್ನು ಪ್ರತಿಬಿಂಬಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.
ಉತ್ತರಾಖಂಡದ ಬಿಜೆಪಿ ಮಾಜಿ ಶಾಸಕ ಹರ್ಭಜನ್ ಸಿಂಗ್ ಚೀಮಾ ಅವರು “ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳಿಗೆ ಮಹಿಳೆಯರ ಉಡುಗೆ ತೊಡುಗೆಯೇ ಕಾರಣ. ಮಹಿಳೆಯರು ಭಾರತೀಯ ಸಂಸ್ಕೃತಿಯಂತೆ ಬಟ್ಟೆ ತೊಡಬೇಕು” ಎಂದು ಹೇಳಿದ್ದರು.
ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಉತ್ತರಾಖಂಡದ ಕಾಂಗ್ರೆಸ್ ವಕ್ತಾರ ಗರಿಮಾ ಮೆಹ್ರಾ ದಸೌನಿ, “ಚೀಮಾ ಅವರ ಹೇಳಿಕೆಯು ಬಿಜೆಪಿಯ ಸಂಸ್ಕೃತಿ, ಸ್ವಭಾವ ಮತ್ತು ಮುಖವಾಡವನ್ನು ಬಹಿರಂಗಪಡಿಸಿದೆ. ಮಹಿಳೆಯರ ಪ್ರಗತಿ ಮತ್ತು ಅಭಿವೃದ್ಧಿಗೆ ವಿರುದ್ಧವಾದ ಮನಸ್ಥಿತಿಯನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ” ಎಂದು ಕಿಡಿಕಾರಿದ್ದಾರೆ.
“ರಾಜ್ಯದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿ ಹೆಚ್ಚಿನವು ಅಪ್ರಾಪ್ತರ ಮೇಲೆ ನಡೆಯುತ್ತಿವೆ. ಅಪ್ರಾಪ್ತರ ಮೇಲಾಗುವ ಕೃತ್ಯಗಳನ್ನು ತಡೆಯಲು ಅವರು ಏನನ್ನು ಧರಿಸಬೇಕು? ಚೀಮಾ ಅವರ ಹೇಳಿಕೆಯನ್ನು ‘ಕ್ಷಮಿಸಲಾಗದು’. ಅವರು ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
“ಮಹಿಳೆಯರ ವಿರುದ್ಧದ ಅಪರಾಧಗಳಿಗೆ ಮಹಿಳೆಯರನ್ನು ದೂಷಿಸುವ ಮನಸ್ಥಿತಿಯನ್ನು ಬಿಜೆಪಿ ಉತ್ತೇಜಿಸುತ್ತಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.