ಬಿಜೆಪಿ ನಾಯಕರು ಹತಾಶರಾಗಿದ್ದಾರೆ, ಹಾಗಾಗಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ಆರೋಪಿಸಿದರು.
ಕಲಬುರಗಿ ವಿಭಾಗೀಯ ಮಟ್ಟದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ “ರಾಜ್ಯ ಸರ್ಕಾರ ನೆರೆ ನಿರ್ವಹಣೆ ವಿಚಾರದಲ್ಲಿ ವಿಫಲವಾಗಿದೆ” ಎಂಬ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದರು.
“ನಮ್ಮ ಸರ್ಕಾರ ರಾಜ್ಯದ ಜನರ ನಾಡಿಮಿಡಿತ ಅರಿತು ಕೆಲಸ ಮಾಡುತ್ತಿದೆ. ಬಿಜೆಪಿ ನಾಯಕರು ತಮ್ಮ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ರಾಜಕೀಯ ಬೆರೆಸುತ್ತಿದ್ದಾರೆ. ಎರಡೂವರೆ ತಿಂಗಳಾದರೂ ವಿಧಾನಸಭೆ, ಪರಿಷತ್ನಲ್ಲಿ ವಿರೋಧ ಪಕ್ಷ ನಾಯಕನ ಆಯ್ಕೆ ಮಾಡಿಕೊಳ್ಳುವುದಕ್ಕೆ ಆಗಿಲ್ಲ” ಎಂದು ಟೀಕಿಸಿದರು.
“ಅವರ ಮನೆಯ ಹುಳುಕನ್ನು ಮುಚ್ಚಿಕೊಳ್ಳಲು ನಮ್ಮ ವಿರುದ್ಧ ಅಪಪ್ರಚಾರಕ್ಕೆ ಮುಂದಾಗಿದ್ದಾರೆ. ವಿರೋಧ ಪಕ್ಷದ ನಾಯಕ ಯಾರು ಎಂದು ಜನರು ಕೇಳಲು ಮುಂದಾಗಿದ್ದಾರೆ. ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ ಮತ್ತು ಅವಮಾನ. ಬಿಜೆಪಿಯವರು ತಮ್ಮ ಮನೆಯನ್ನು ಮೊದಲು ಸರಿ ಮಾಡಿಕೊಳ್ಳಲಿ” ಎಂದು ತಿರುಗೇಟು ನೀಡಿದರು.
“ರಾಜ್ಯದ ಹಲವೆಡೆ ಇನ್ನೂ ಮಳೆ ಬರುತ್ತಿದ್ದು, ಸದ್ಯಕ್ಕೆ ಬೆಳೆ ಹಾನಿ ಸರ್ವೆ ಕಷ್ಟವಾಗಿದೆ. ಆದರೂ ಮುಂದಿನ ಒಂದು ವಾರದೊಳಗೆ ಬೆಳೆ ಹಾನಿ ಸರ್ವೆ ಮಾಡಲಾಗುವುದು. ಮಳೆ ಹಾನಿ, ಬೆಳೆ ಹಾನಿ, ಕಟ್ಟಡ ಹಾನಿಗಳ ಬಗ್ಗೆ ಕೂಡ ಸರ್ವೆ ಮಾಡಲು ಇಂದು ದಿನಾಂಕ ನಿಗದಿ ಮಾಡುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಕೊರೊನಾ ಹಗರಣ ನ್ಯಾಯಾಂಗ ತನಿಖೆಗೆ ಚಿಂತನೆ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್
“ಶಾಸಕ ಬಿ ಆರ್ ಪಾಟೀಲ ಕ್ಷಮೆ ಕೇಳಿದ್ದಾರೆ ಎಂದು ನಾವು ಯಾರೂ ಹೇಳಿಲ್ಲ. ಅವರ ಮನಸ್ಸಿಗೆ ನೋವು ಆಗಿದೆ. ಅದನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಂಡು ಹೋಗೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಮ್ಮ ವೈಯಕ್ತಿಕ ವಿಚಾರ ಬದಿಗಿಟ್ಟು ಜನರ ಕೆಲಸ ಮಾಡಬೇಕಾಗಿದೆ” ಎಂದು ತಿಳಿಸಿದರು.
“ಗೃಹಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ಪ್ರಜಾ ಪ್ರತಿನಿಧಿಗಳ ನೇಮಕ ಕಡ್ಡಾಯವಲ್ಲ. ನನಗೆ ಮಾಹಿತಿ ಇರುವ ಪ್ರಕಾರ 80 ಲಕ್ಷ ಮಂದಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ಮುಂದಿನ ಕೆಲ ದಿನಗಳ ಒಳಗೆ ಪೂರ್ತಿಯಾಗಿ 1.28 ಕೋಟಿ ಕುಟುಂಬಗಳ ನೋಂದಣಿಯಾಗುತ್ತವೆ. ನಾವು ಹೇಳಿದ ದಿನಾಂಕದ ಒಳಗಾಗಿ ಎಲ್ಲರಿಗೂ ಈ ಯೋಜನೆ ಸಿಗುವ ಹಾಗೆ ಮಾಡುತ್ತೇವೆ” ಎಂದು ಭರವಸೆ ನೀಡಿದರು.