- ‘ಸರ್ಕಾರದ ಯಾವುದೇ ಸಚಿವರು ಲಂಚ ಕೇಳಿಲ್ಲ’
- ‘ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರಿಂದ ಆರೋಪ’
ಕೆಂಪಣ್ಣ ಮಾತ್ರ ಅಲ್ಲ, ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಸರ್ಕಾರದ ಯಾವುದೇ ಸಚಿವರು ಲಂಚ ಕೇಳಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ, ಈ ವಿಚಾರ ರಾಜಕೀಯ ಮಾಡಿ, ಗುತ್ತಿಗೆದಾರರನ್ನು ಬಳಸಿಕೊಂಡು ಆರ್ ಅಶೋಕ್, ಅಶ್ವತ್ಥನಾರಾಯಣ ಹಾಗೂ ಗೋಪಾಲಯ್ಯ ಅವರು ತಮ್ಮ ತಿಮಿಂಗಿಲಗಳ ರಕ್ಷಣೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಆರೋಪಿಸಿದರು.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, “ಕೇವಲ ಬಿಜೆಪಿ ಪ್ರಾಯೋಜಿತ ಗುತ್ತಿಗೆದಾರರು ಮಾತ್ರ ಸರ್ಕಾರದ ವಿರುದ್ಧ ಕಮಿಷನ್ ಆರೋಪ ಮಾಡುತ್ತಿದ್ದಾರೆ. ಆದರೆ, ನಮ್ಮ ಸರ್ಕಾರದ ಸಚಿವರು ಶಾಸಕರು ಲಂಚ ಕೇಳಿಲ್ಲ ಎಂದು ಕೇವಲ ಕೆಂಪಣ್ಣ ಮಾತ್ರವಲ್ಲ, ಗುತ್ತಿಗೆದಾರರ ಸಂಘದ ಇತರ ಪದಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ” ಎಂದರು.
“ಮುಖ್ಯಮಂತ್ರಿಯ ನಿರ್ದೇಶನದಂತೆ ಕಾಮಗಾರಿಗಳ ತನಿಖೆ ಮಾಡಿ ಪ್ರಾಮಾಣಿಕವಾಗಿ ಕೆಲಸ ಮಾಡಿರುವವರಿಗೆ ಬಿಲ್ ಪಾವತಿ ಮಾಡಲಾಗುವುದು. ಯಾವುದೇ ಗುತ್ತಿಗೆದಾರರಿಗೆ ಕಿರುಕುಳ ನೀಡುವುದು ನಮ್ಮ ಉದ್ದೇಶವಲ್ಲ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಬಿಜೆಪಿ ಒಳಜಗಳ | ಪ್ರಭು ಚೌಹಾಣ್ ವಿರುದ್ಧ 100 ಕೋಟಿ ಮಾನಹಾನಿ ಕೇಸ್ : ಸಚಿವ ಭಗವಂತ ಖೂಬಾ
“ನಾವು ಭ್ರಷ್ಟಾಚಾರರಹಿತ ಆಡಳಿತ ನೀಡುವ ವಚನ ನೀಡಿ ಅಧಿಕಾರಕ್ಕೆ ಬಂದಿದ್ದು, ಪಾರದರ್ಶಕವಾಗಿ ಆಡಳಿತ ಮಾಡಲು ಬದ್ಧರಾಗಿದ್ದೇವೆ. ಕರ್ನಾಟಕವನ್ನು ದಕ್ಷ ಆಡಳಿತ ರಾಜ್ಯವಾಗಿ ಮಾಡುವುದು ನಮ್ಮ ಕನಸು. ಇದಕ್ಕಾಗಿ ಜನ ನಮಗೆ ಆಶೀರ್ವಾದ ಮಾಡಿದ್ದಾರೆ” ಎಂದರು.
“ಕೆಂಪಣ್ಣ ಅವರು ಬಹಳ ಹಿರಿಯ. ಅವರು ಬಿಜೆಪಿ ಸರ್ಕಾರ ಬಾಕಿ ಉಳಿಸಿರುವ ಬಿಲ್ ಪಾವತಿ ಬಗ್ಗೆ ಮನವಿ ಮಾಡಲು ನನ್ನನ್ನು ಭೇಟಿ ಮಾಡಿದ್ದರು. ಬಿಜೆಪಿ ಸರ್ಕಾರ ಯಾಕೆ ಬಿಲ್ ಪಾವತಿ ಮಾಡಲಿಲ್ಲ” ಎಂದು ಪ್ರಶ್ನಿಸಿದರು.