ಮುಂಬೈನಲ್ಲಿ ನಡೆದ ಮಹಾರಾಷ್ಟ್ರ ಮಾಜಿ ಸಚಿವ, ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಹತ್ಯೆ ದೇಶಾದ್ಯಂತ ಭಾರೀ ಚರ್ಚೆ ಹುಟ್ಟುಹಾಕಿದೆ. ಹತ್ಯೆಯ ಹೊಣೆಯನ್ನು ಗುಜರಾತ್‌ನ ಸಬರಮತಿಯ ಜೈಲಿನಲ್ಲಿರುವ ಪಾತಕಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ. ಈ ಬೆನ್ನಲ್ಲೇ, ಲಾರೆನ್ಸ್ ಗ್ಯಾಂಗ್ ನಡೆಸುತ್ತಿರುವ ಹತ್ಯೆಗಳ ಹಿಂದೆ ಕೇಂದ್ರ ಸರ್ಕಾರದ ಕುಮ್ಮಕ್ಕು ಇದೆ ಎಂದು ಕೆನಡಾ ಆರೋಪಿಸಿದೆ. ಈಗ, ಸಿದ್ದಿಕಿ ಹತ್ಯೆ ಮತ್ತು ಲಾರೆನ್ಸ್ ಗ್ಯಾಂಗ್ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆನಡಾದ ರಾಜತಾಂತ್ರಿಕರನ್ನು ಕೇಂದ್ರ ಸರ್ಕಾರ ಭಾರತದಿಂದ ಹೊರಹಾಕಿದೆ. ದೇಶ ತೊರೆಯುವಂತೆ ಸೂಚನೆ ನೀಡಿದೆ. ಮಾತ್ರವಲ್ಲದೆ, ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಮುಚ್ಚಿದ್ದು, ರಾಯಭಾರಿಯನ್ನು ವಾಪಸ್ ಕರೆಸಿಕೊಳ್ಳುತ್ತಿದೆ.
ಅಂದಹಾಗೆ, ಇತ್ತೀಚೆಗೆ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನು ಕೆನಡಾದಲ್ಲಿ ಇದೇ ಲಾರೆನ್ಸ್ ಗ್ಯಾಂಗ್ ಹತ್ಯೆ ಮಾಡಿತ್ತು. ಈ ಹತ್ಯೆಯ ಹಿಂದೆ, ಭಾರತೀಯ ರಾಯಭಾರಿಯ ಪಾತ್ರವಿದೆ. ಭಾರತದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಲಾರೆನ್ಸ್ ಗ್ಯಾಂಗ್ಅನ್ನು ಬಳಸಿಕೊಂಡು ತಮ್ಮ ವಿರೋದಿಗಳನ್ನು ಹಣಿಯಲು ಯತ್ನಿಸುತ್ತಿದೆ ಎಂದು ಕೆನಡಾ ಆರೋಪಿಸಿದೆ. ಎನ್‌ಸಿಪಿ ನಾಯಕ ಬಾಬಾ ಸಿದ್ದೀಕಿ ಅವರ ಹತ್ಯೆಯಲ್ಲೂ ಕೇಂದ್ರ ಸರ್ಕಾರ ಪಾತ್ರವಿದೆ ಎಂದು ಅನುಮಾನ ವ್ಯಕ್ತಪಡಿಸಿದೆ.
ಕೇವಲ 31 ವರ್ಷದ ಲಾರೆನ್ಸ್ ಬಿಷ್ಣೋಯ್ ಮತ್ತು ಆತನ ಗ್ಯಾಂಗ್ ‘ಸೈಕೋ’ ರೀತಿಯಲ್ಲಿ ವರ್ತಿಸುತ್ತಿದೆ. ಪ್ರತಿಕಾರ, ತ್ಯಾಗದ ಹೆಸರಿನಲ್ಲಿ ಹಲವರನ್ನು ಹತ್ಯೆ ಮಾಡುತ್ತಿದೆ. 25 ವರ್ಷಗಳ ಹಿಂದೆ ಕೃಷ್ಣ ಮೃಗವನ್ನು ಕೊಂದಿದ್ದ ಕಾರಣಕ್ಕೆ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಈ ಗ್ಯಾಂಗ್ ಹೇಳಿಕೊಳ್ಳುತ್ತಿದೆ. ಸಲ್ಮಾನ್ ಖಾನ್ ಅಲ್ಲದೆ, ತನ್ನ ಹಿಟ್‌ಲಿಸ್ಟ್‌ನಲ್ಲಿ ಹಲವರ ಹೆಸರುಗಳು ಇರುವುದಾಗಿಯೂ ಗ್ಯಾಂಗ್ ಘೋಷಿಸಿಕೊಂಡಿದೆ.
ವಿಶೇಷ ಅಂದರೆ, ಸಲ್ಮಾನ್ ಖಾನ್ ಕೃಷ್ಣಮೃಗವನ್ನು ಕೊಂದಾಗ ಈತನಿಗೆ ಕೇವಲ 5 ವರ್ಷ. ಬಹುಶಃ, ಆಗ ಸಲ್ಮಾನ್ ಖಾನ್ ಯಾರೆಂಬುದೇ ಈತನಿಗೆ ತಿಳಿದಿರಲಿಲ್ಲ. ಆದರೆ, ಆ ಪ್ರಕರಣಕ್ಕೆ ಈಗ ಸಲ್ಮಾನ್ ಅವರನ್ನು ಲಾರೆನ್ಸ್ ಗುರಿಯಾಗಿಸಿಕೊಂಡಿದ್ದಾನೆ.
ಸಲ್ಮಾನ್ ಖಾನ್ ಹತ್ಯೆ ಮಾಡುತ್ತೇವೆ ಎನ್ನುತ್ತಿರುವ ಲಾರೆನ್ಸ್ ಪಂಜಾಬ್‌ನ ಬಿಷ್ಣೋಯ್ ಸಮುದಾಯಕ್ಕೆ ಸೇರಿದವನು. ಈ ಸಮುದಾಯವು ಕೃಷ್ಣಮೃಗವನ್ನು ಪವಿತ್ರವೆಂದು ಪರಿಗಣಿಸುತ್ತದೆ. ತಾವು ಪವಿತ್ರವೆಂದು ಭಾವಿಸುವ ಕೃಷ್ಣಮೃಗವನ್ನು ಕೊಂದಿದ್ದಕ್ಕೆ ಸಲ್ಮಾನ್ ಖಾನ್ ಅವರನ್ನು ಲಾರೆನ್ಸ್ ದ್ವೇಷಿಸುತ್ತಿದ್ದಾನೆ.
ತಮ್ಮ ಗುರಿ ಸಲ್ಮಾನ್ ಖಾನ್ ಆಗಿದ್ದು, ಅವರ ಜೊತೆಗೆ ಹೆಚ್ಚು ಸಂಪರ್ಕದಲ್ಲಿದ್ದರೆ, ಅಂತಹ ಪ್ರಮುಖ ನಾಯಕರನ್ನೂ ಕೊಲ್ಲುತ್ತೇವೆಂದೂ ಲಾರೆನ್ಸ್ ಬೆದರಿಕೆ ಹಾಕಿದ್ದಾನೆ. ಸಲ್ಮಾನ್ ಖಾನ್ ಅವರ ಆಪ್ತರಾಗಿದ್ದ ಕಾರಣಕ್ಕಾಗಿಯೇ ಸಿದ್ದೀಕಿ ಅವರನ್ನು ಕೊಂದಿರುವುದಾಗಿಯೂ ಬಿಷ್ಣೋಯ್ ಗ್ಯಾಂಗ್ ಹೇಳಿಕೊಂಡಿದೆ. ಮಾತ್ರವಲ್ಲದೆ, ದಾವೂದ್ ಗ್ಯಾಂಗ್‌ಗೆ ಯಾರೆಲ್ಲ ಸಹಾಯ ಮಾಡುತ್ತಾರೋ ಅವರನ್ನೂ ಕೊಲ್ಲುವುದಾಗಿ ಬಿಷ್ಣೋಯ್ ಬೆದರಿಕೆ ಹಾಕಿದ್ದಾನೆ.
ಬಿಷ್ಣೋಯ್ ಗ್ಯಾಂಗ್ ರಾಜಕೀಯ ನಾಯಕರು ಹಾಗೂ ಸೆಲಬ್ರಿಟಿಗಳನ್ನು ಹತ್ಯೆಗೈದಿರುವುದು ಇದೇ ಮೊದಲಲ್ಲ. ಈ ಹಿಂದೆ, ಪಂಜಾಬಿ ಗಾಯಕ ಸಿಧು ಮೂಸೆವಾಲಾ, ಕರ್ಣಿ ಸೇನಾ ಅಧ್ಯಕ್ಷ ಸುಖದೇವ್ ಸಿಂಗ್ ಗೊಗಮೆಡಿ ಅವರನ್ನೂ ಹತ್ಯೆಗೈದಿದೆ. ಗಮನಾರ್ಹವಾಗಿ, ಈ ಗ್ಯಾಂಗ್ ಭಾರತ ಮಾತ್ರವಲ್ಲದೆ, ನಾನಾ ದೇಶಗಳಲ್ಲಿಯೂ ಸಕ್ರಿಯವಾಗಿದೆ. ಗ್ಯಾಂಗ್‌ನಲ್ಲಿ 700ಕ್ಕೂ ಹೆಚ್ಚು ಮಂದಿ ಶೂಟರ್‌ಗಳಿದ್ದಾರೆ ಎಂದು ಹೇಳಲಾಗಿದೆ. ಸಲ್ಮಾನ್ ಖಾನ್ ಅವರನ್ನು ಕೊಲ್ಲಲು ಪಾತಕಿ ಬಿಷ್ಣೋಯ್ ಸುಮಾರು 60 ಮಂದಿ ಶೂಟರ್‌ಗಳನ್ನು ನೇಮಿಸಿದ್ದ ಎನ್ನಲಾಗಿದೆ.
ವಿಶೇಷ ಅಂದರೆ, ಈ ಲಾರೆನ್ಸ್‌ನ ತಂದೆ ಹರಿಯಾಣ ಪೊಲೀಸ್ ಇಲಾಖೆಯಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. ಪೊಲೀಸ್ ಸಿಬ್ಬಂದಿಯ ಕುಟುಂಬದಲ್ಲಿ ಹುಟ್ಟಿದ ಲಾರೆನ್ಸ್, ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯ ಆಸಕ್ತಿ ಹೊಂದಿದ್ದ. ತಾನು ಕಾನೂನು ಶಿಕ್ಷಣ ಪಡೆಯುವಾಗಲೇ ತನ್ನ ಸ್ನೇಹಿತ ಗೋಲ್ಡಿ ಬ್ರಾರ್ ಜೊತೆಗೆ ರಾಜಕೀಯಕ್ಕೂ ಸೇರಿದ್ದ. 2011 ಮತ್ತು 2012 ರ ನಡುವೆ ಪಂಜಾಬ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷನೂ ಆಗಿದ್ದ. ಆದರೆ, ರಾಜಕೀಯ ರಂಗದಲ್ಲಿ ರಾಜಕಾರಣ ಮಾಡುವುದನ್ನು ಬಿಟ್ಟು, ಎದುರಾಳಿಗಳೊಂದಿಗೆ ಈ ಇಬ್ಬರೂ ಘರ್ಷಣೆ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದರು. 2010ರ ಏಪ್ರಿಲ್‌ನಲ್ಲಿ ಈತನ ವಿರುದ್ಧ ಮೊದಲ ಬಾರಿಗೆ ಪ್ರಕರಣ ದಾಖಲಾಗಿತ್ತು. ನಂತರದಲ್ಲಿ, ಲಾರೆನ್ಸ್ ವಿರುದ್ಧ ಹಲ್ಲೆ, ಕೊಲೆ ಯತ್ನ, ದರೋಡೆಯಂತಹ ಹಲವಾರು ಪ್ರಕರಣಗಳು ದಾಖಲಾದವು. ಇದೇ ವೇಳೆ, ಲಾರೆನ್ಸ್ ಮತ್ತು ಗೋಲ್ಡಿ ಬ್ರಾರ್ ಭೂಗತ ಪಾತಕಿಗಳ ಸಂಪರ್ಕವನ್ನೂ ಬೆಳೆಸಿಕೊಂಡಿದ್ದರು.
2012ರಲ್ಲಿ ಲಾರೆನ್ಸ್‌ನನ್ನು ಬಂಧಿಸಲಾಗಿತ್ತು. ಜೈಲಿನಿಂದ ಹೊರಬಂದ ಲಾರೆನ್ಸ್, 2013ರಲ್ಲಿ, ಲೂಧಿಯಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಅಭ್ಯರ್ಥಿಯನ್ನು ಗುಂಡಿಕ್ಕಿ ಕೊಂದಿದ್ದ. ಅಲ್ಲದೆ, ಶಸ್ತ್ರಾಸ್ತ್ರ ಕಳ್ಳಸಾಗಣೆ ಪ್ರಕರಣದಲ್ಲಿ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಈತನನ್ನು ಬಂಧಿಸಿತ್ತು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಕಾರ, ”ಲಾರೆನ್ಸ್ ಗ್ಯಾಂಗ್ ಉತ್ತರದ ಐದು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಅಂತಾರಾಷ್ಟ್ರೀಯ ಸಂಪರ್ಕಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಯುವಕರ ಬ್ರೈನ್ ವಾಶ್ ಮಾಡಿ ತನ್ನ ಗ್ಯಾಂಗ್‌ಗೆ ಸೇರಿಸಿಕೊಂಡು, ತನ್ನ ಜಾಲವನ್ನು ವಿಸ್ತರಿಸುತ್ತಿದೆ. ಕೆನಡಾದಂತಹ ಪಾಶ್ಚಿಮಾತ್ಯ ದೇಶಗಳಿಗೆ ವಲಸೆ ಹೋಗಿರುವ ಯುವಜನರನ್ನು ಆಕರ್ಷಿಸಿ, ತನ್ನ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮಾಡುತ್ತಿದೆ.
ಈ ವರದಿ ಓದಿದ್ದೀರಾ?: ಭಾರತ ಹಸಿವು ಮುಕ್ತ ಆಗೋದು ಯಾವಾಗ ಮೋದಿಜೀ?
ಸದ್ಯ, ಜೈಲಿನಲ್ಲಿರುವ ಲಾರೆನ್ಸ್, ಕೆಲ ಪ್ರಭಾವಿಗಳು ಮತ್ತು ತನ್ನ ಗ್ಯಾಂಗ್‌ಗಳ ಸಂಪರ್ಕದೊಂದಿಗೆ ಜೈಲಿನಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದಾನೆ. ತನ್ನ ಗ್ಯಾಂಗ್‌ಅನ್ನು ನಿಯಂತ್ರಿಸುತ್ತಿದ್ದಾನೆ. ಅದಕ್ಕಾಗಿ VoIP ಮತ್ತು ‘ಡಬ್ಬಾ ಕಾಲಿಂಗ್’ನಂತಹ ಸುಧಾರಿತ ಸಂವಹನ ವಿಧಾನಗಳನ್ನೂ ಬಳಸುತ್ತಿದ್ದಾನೆ ಎಂದು ಹೇಳಲಾಗಿದೆ.
ಈಗ ಪ್ರಮುಖ ವಿಚಾರ, ಕುಖ್ಯಾತ ಪಾತಕಿ ಲಾರೆನ್ಸ್‌ಗೆ ಕೇಂದ್ರ ಸರ್ಕಾರವೇ ಕುಮ್ಮಕ್ಕು ಕೊಡುತ್ತಿದೆ ಎಂಬ ಗಂಭೀರ ಆರೋಪವನ್ನು ಕೆನಡಾ ಮಾಡಿದೆ. ಕೆನಡಾ ಪ್ರಕಾರ, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ತನ್ನ ವಿರೋಧಿಗಳು, ಪ್ರಭಾವಿ ವಿಮರ್ಶಕರು, ಎದುರಾಳಿಗಳನ್ನು ಹತ್ತಿಕ್ಕಲು, ಕೊಲ್ಲಲು, ಬೆದರಿಕೆ ಹುಟ್ಟು ಹಾಕಲು ಲಾರೆನ್ಸ್ ಗ್ಯಾಂಗ್‌ಅನ್ನು ಬಳಸಿಕೊಳ್ಳುತ್ತಿದೆ.
ಕೆನಡಾದಲ್ಲಿದ್ದ ಖಲಿಸ್ತಾನಿ ಹೋರಾಟಗಾರ ಹರ್ದೀಪ್ ಸಿಂಗ್ ನಿಜ್ಜಾರ್ ಅವರನ್ನೂ ಲಾರೆನ್ಸ್ ಗ್ಯಾಂಗ್ ಕೊಂದಿದೆ. ಈ ಹತ್ಯೆಯ ಹಿಂದೆ, ಕೇಂದ್ರ ಸರ್ಕಾರದ ಗೃಹ ಮಂತ್ರಿ ಅಮಿತ್ ಶಾ ಇದ್ದಾರೆ, ಭಾರತೀಯ ರಾಯಭಾರಿಯ ಪಾತ್ರವಿದೆ. ನಿಜ್ಜಾರ್ ಹತ್ಯೆಗೈಯಲು ಲಾರೆನ್ಸ್ ಗ್ಯಾಂಗ್‌ಗೆ ಭಾರತೀಯ ರಾಯಭಾರಿಯೇ ಎಲ್ಲ ರೀತಿಯಲ್ಲೂ ನೆರವು ನೀಡಿದ್ದಾರೆ ಎಂದೂ ಕೆನಡಾ ಆರೋಪಿಸಿದೆ.
ಸದ್ಯ, ತಮ್ಮ ರಾಜಕೀಯ ವಿರೋಧಿಗಳು, ಪ್ರತಿಪಕ್ಷಗಳ ನಾಯಕರನ್ನು ಮೌನವಾಗಿಸಲು ಇಡಿ, ಸಿಬಿಐನಂತಹ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುತ್ತಿರುವ ಮೋದಿ ಸರ್ಕಾರ, ಭಾರತದ ಗಡಿಯೊಳಗೆ ಮತ್ತು ಗಡಿಯಾಚೆ ತಮ್ಮ ಸರ್ಕಾರಕ್ಕೆ ಸವಾಲಾಗಿರುವವರನ್ನು ದಮನಿಸಲು ಲಾರೆನ್ಸ್ ಗ್ಯಾಂಗ್‌ಅನ್ನು ಬಳಸುತ್ತಿದೆ ಎಂದು ಕೆನಡಾ ಗಂಭೀರ ಆರೋಪ ಮಾಡಿದೆ. ಈ ಆರೋಪಗಳ ಬೆನ್ನಲ್ಲೇ, ಕೆನಡಾದ ರಾಜತಾಂತ್ರಿಕರನ್ನು ಭಾರತ ಹೊರಗಟ್ಟಿದೆ. ಆದರೆ, ಲಾರೆನ್ಸ್ ಗ್ಯಾಂಗ್ ಜೊತೆ ಬಿಜೆಪಿ ನಂಟಿನ ಬಗ್ಗೆ ಯಾವುದೇ ಪ್ರತಿಕ್ರಿಯೆಗಳು ಇದೂವರೆಗೂ ಬಿಜೆಪಿಯಿಂದ ಬಂದಿಲ್ಲ ಎಂಬುದು ಗಮನಾರ್ಹ.
ಅಷ್ಟೇ ಅಲ್ಲ, ಸುದ್ದಿ ಮಾಧ್ಯಮಗಳು ಲಾರೆನ್ಸ್ ಬಿಷ್ಣೋಯ್ ಎಂಬ ಪಾತಕಿಯ ಸುತ್ತ ಕತೆ ಕಟ್ಟಿ ವೈಭವೀಕರಿಸುತ್ತಿವೆ. ಆದರೆ ಆತನ ಕೃತ್ಯಗಳಿಗೆ ಬೆಂಬಲಿಸಿ, ಆತನನ್ನು ರಕ್ಷಿಸುತ್ತಿರುವವರು ಯಾರು ಎಂಬ ಬಗ್ಗೆ ಪ್ರಶ್ನೆ ಮಾಡುತ್ತಿಲ್ಲ. ಈಗ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದೆ. ಆ ಹಿನ್ನೆಲೆಯಲ್ಲಿ ವಿರೋಧಿ ಪಾಳೆಯದ ಪ್ರಭಾವಿ ವ್ಯಕ್ತಿಗಳ ಪೈಕಿ ಒಬ್ಬರಾದ ಸಿದ್ದೀಕಿ ಹತ್ಯೆಯಾಗಿದೆ. ಆ ಮೂಲಕ ವಿರೋಧ ಪಕ್ಷಗಳ ನಾಯಕರನ್ನು ಜೀವಭಯದಲ್ಲಿಟ್ಟು, ಚುನಾವಣೆ ಗೆಲ್ಲುವ ಹುನ್ನಾರ ಅಡಗಿದೆಯೇ ಎಂಬ ಬಗ್ಗೆ ಪ್ರಶ್ನೆಯೂ ಎದುರಾಗಿದೆ. ಇದನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕಿದೆ.