ಲೋಕಸಭೆ ಚುನಾವಣೆ ಬಳಿಕ ಮಹಾರಾಷ್ಟ್ರದ ಮಹಾಯುತಿ ಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದಲ್ಲಿ ಎನ್ಸಿಪಿ (ಅಜಿತ್ ಬಣ) ಮತ್ತು ಶಿವಸೇನೆ (ಶಿಂಧೆ ಬಣ)ದ ಸಂಸದರಿಗೆ ಸಚಿವ ಸ್ಥಾನ ಸಿಗದಿರುವುದು ಮಾತ್ರವಲ್ಲ, ಆರ್ಎಸ್ಎಸ್ ಮುಖವಾಣಿ ಆರ್ಗನೈಸರ್ನಲ್ಲಿ ಪ್ರಕಟವಾದ ಲೇಖನ ಕೂಡಾ ಮೈತ್ರಿಯಲ್ಲಿನ ಬಿರುಕನ್ನು ಸೂಚಿಸಿದೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೂ ಮುನ್ನವೇ ಮಹಾಯುತಿ ಒಕ್ಕೂಟದಿಂದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ ಹೊರ ನಡೆಯುವ ಸಾಧ್ಯತೆಗಳು ದಟ್ಟವಾಗಿವೆ.
ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯನ್ನು ಕಾಣಲು ಎನ್ಸಿಪಿ ಜೊತೆಗಿನ ಮೈತ್ರಿಯೂ ಕಾರಣ ಎಂದು ‘ಆರ್ಗನೈಸರ್’ನ ಲೇಖನವೊಂದರಲ್ಲಿ ಬರೆಯಲಾಗಿದೆ. ಇದು ಎನ್ಸಿಪಿ ಮತ್ತು ಬಿಜೆಪಿ ನಡುವೆ ಇರಿಸು ಮುರಿಸಿಗೆ ಕಾರಣವಾಗಿದೆ. ಆದರೂ ಅಲ್ಲಲ್ಲಿ ತೇಪೆ ಹಾಕಿ ‘ನಮ್ಮ ಮೈತ್ರಿ ಗಟ್ಟಿಯಾಗಿದೆ’ ಎಂದು ತೋರಿಸಿಕೊಳ್ಳುವ ಪ್ರಯತ್ನವನ್ನೂ ಮಾಡಲಾಗುತ್ತಿದೆ.
ಎನ್ಸಿಪಿಯನ್ನು ಇಬ್ಭಾಗ ಮಾಡಿ ಅಜಿತ್ ಪವಾರ್ ಬಣದೊಂದಿಗೆ ಮೈತ್ರಿ ಮಾಡಿಕೊಳ್ಳುವ ಬಿಜೆಪಿ ನಿರ್ಧಾರವು ಆರ್ಎಸ್ಎಸ್ಗೆ ಒಪ್ಪಿಗೆ ಇರಲಿಲ್ಲ. ಈ ಬಗ್ಗೆ ಹಲವಾರು ಮಾಧ್ಯಮಗಳು ಈ ಹಿಂದೆಯೇ ವರದಿ ಮಾಡಿದ್ದವು. ಇದಕ್ಕೆ ಆರ್ಎಸ್ಎಸ್ ಮುಖವಾಣಿಯಲ್ಲಿ ಪ್ರಕಟವಾದ ಆರ್ಎಸ್ಎಸ್ ಕಾರ್ಯಕರ್ತ ರತನ್ ಶಾರದ ಅವರ ಲೇಖನ ಕೂಡ ಪುಷ್ಟಿ ನೀಡಿದೆ.
ಇದನ್ನು ಓದಿದ್ದೀರಾ? ಪವಾರ್ v/s ಪವಾರ್ | ಅತ್ತಿಗೆ-ನಾದಿನಿಯರ ಪೈಪೋಟಿ ಕಣವಾದ ಬಾರಾಮತಿ ಕ್ಷೇತ್ರ
ಆರ್ಎಸ್ಎಸ್ ಕಾರ್ಯಕರ್ತ ರತನ್ ಶಾರದ “ಎನ್ಸಿಪಿ ನಾಯಕ ಅಜಿತ್ ಪವಾರ್ ಅವರೊಂದಿಗೆ ಮೈತ್ರಿ ಮಾಡಿಕೊಂಡು ಬಿಜೆಪಿಯ ‘ಬ್ರಾಂಡ್ ಮೌಲ್ಯ’ ಕಡಿಮೆಯಾಗಿದೆ. ಇತರೆ ಪಕ್ಷಗಳಂತೆಯೇ ಬಿಜೆಪಿಯೂ ಸಾಮಾನ್ಯವಾಗಿ ಕಾಣತೊಡಗಿದೆ. ಲೋಕಸಭೆ ಚುನಾವಣೆಯ ಫಲಿತಾಂಶವು ಬಿಜೆಪಿ ಕಾರ್ಯಕರ್ತರ ಅತಿಯಾದ ವಿಶ್ವಾಸದ ರಿಯಾಲಿಟಿ ಚೆಕ್ ಆಗಿದೆ” ಎಂದು ಬರೆದುಕೊಂಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಜಿತ್ ಪವಾರ್ ನೇತೃತ್ವದ ಎನ್ಸಿಪಿಯ ಮುಖ್ಯ ವಕ್ತಾರ ಉಮೇಶ್ ಪಾಟೀಲ್, “ಆರ್ಗನೈಸರ್ ಲೇಖನದಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಬಿಜೆಪಿಯ ಕೇಂದ್ರ ನಾಯಕತ್ವ ಒಪ್ಪುವುದಿಲ್ಲ ಎಂದು ಪಕ್ಷ ಈಗಾಗಲೇ ಖಚಿತಪಡಿಸಿದೆ. ಎನ್ಡಿಎ ಸಮನ್ವಯ ಸಮಿತಿಯಲ್ಲಿ ಆರ್ಎಸ್ಎಸ್ ಸದಸ್ಯರೂ ಇದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಮಹಾರಾಷ್ಟ್ರದಲ್ಲಿ ಮಹಾಯುತಿ ಪ್ರದರ್ಶನದ ಬಗ್ಗೆ ನಡೆಸಲಾದ ವಿಮರ್ಶೆಯಲ್ಲಿ ಎನ್ಸಿಪಿಯನ್ನು ದೂಷಿಸಲಾಗಿಲ್ಲ. ಬಿಜೆಪಿಯ ಕೇಂದ್ರ ನಾಯಕತ್ವವು ಅಜಿತ್ ಪವಾರ್ ಅವರ ದೀರ್ಘಾವಧಿಯ ದೃಷ್ಟಿಕೋನವನ್ನು ಪರಿಗಣಿಸಿ ಮೈತ್ರಿ ಮಾಡಿಕೊಂಡಿದೆ” ಎಂದು ಹೇಳಿಕೊಂಡಿದ್ದಾರೆ.
ಇದನ್ನು ಓದಿದ್ದೀರಾ? ಉದ್ಧವ್, ಶರದ್ ಪರವಾಗಿ ಅನುಕಂಪದ ಅಲೆಯಿದೆ ಎಂದ ಅಜಿತ್ ಪವಾರ್ ಬಣದ ನಾಯಕ!
ಅಜಿತ್ ಪವಾರ್ ಇಲ್ಲದ ಮೈತ್ರಿಕೂಟ
ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ 30 ಸ್ಥಾನಗಳನ್ನು ಗೆದ್ದಿದೆ. ಎನ್ಡಿಎ ಮೈತ್ರಿಕೂಟದ ಆಡಳಿತಾರೂಢ ಮಹಾಯುತಿ 17 ಕ್ಷೇತ್ರಗಳನ್ನು ಮಾತ್ರ ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಬಿಜೆಪಿ 9, ಶಿವಸೇನೆ (ಶಿಂದೆ ಬಣ) 7 ಮತ್ತು ಎನ್ಸಿಪಿ (ಅಜಿತ್ ಪವಾರ್) ಒಂದು ಕ್ಷೇತ್ರದಲ್ಲಿ ಜಯ ಗಳಿಸಿದೆ. ಸ್ಪರ್ಧಿಸಿದ ನಾಲ್ಕು ಕ್ಷೇತ್ರದ ಪೈಕಿ ಒಂದರಲ್ಲಿ ಮಾತ್ರ ಎನ್ಸಿಪಿ ಗೆಲುವು ಪಡೆದಿದೆ.
ಇನ್ನು, 3ನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣವಚನಕ್ಕೆ ಕೆಲವೇ ಗಂಟೆಗಳ ಮೊದಲು ಹೊಸ ಸರ್ಕಾರದಲ್ಲಿ ಎನ್ಸಿಪಿಗೆ ಸ್ವತಂತ್ರ ಉಸ್ತುವಾರಿ ರಾಜ್ಯ ಸಚಿವ (ಎಂಒಎಸ್) ಸ್ಥಾನ ನೀಡುವ ಭರವಸೆಯನ್ನು ಎನ್ಸಿಪಿ ತಿರಸ್ಕರಿಸಿತು. ಎನ್ಸಿಪಿ ಸಂಸದ ಪ್ರಫುಲ್ ಪಟೇಲ್ ಈ ಹಿಂದೆ ಕೇಂದ್ರ ಸಚಿವರಾಗಿದ್ದರಿಂದ ಈಗ ಎಂಒಎಸ್ ಸ್ಥಾನವನ್ನು ಸ್ವೀಕರಿಸುವುದು ಹಿನ್ನಡೆಯಾಗಲಿದೆ ಎಂದು ಎನ್ಸಿಪಿ ಹೇಳಿಕೊಂಡಿತ್ತು. ಇದು ಮಹಾರಾಷ್ಟ್ರದ ಮಹಾಯುತಿಯಲ್ಲಿ ಬಿರುಕು ಕಾಣುತ್ತಿದೆ ಎಂಬುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ.
ಈ ವರ್ಷದ ಕೊನೆಯಲ್ಲಿಯೇ ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನವೇ ಅಜಿತ್ ಪವಾರ್ ಜೊತೆಗಿನ ಮೈತ್ರಿ ಕೈಬಿಡುವ ಬಗ್ಗೆ ಬಿಜೆಪಿಯಲ್ಲಿ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ. ಅಜಿತ್ ಬಲವಿಲ್ಲದೆ ತಮ್ಮ ಮೈತ್ರಿಯನ್ನು ಹೇಗೆ ಮುನ್ನಡೆಸುವುದು ಎಂಬ ಚರ್ಚೆಗಳು ಕೂಡ ನಡೆಯುತ್ತಿದೆ ಎಂಬ ಮಾಹಿತಿಯಿದೆ.
ಇದನ್ನು ಓದಿದ್ದೀರಾ? ಮೋದಿ ಸಂಪುಟದಲ್ಲಿ ಶಿಂದೆ, ಅಜಿತ್ ಬಣಕ್ಕಿಲ್ಲ ಸ್ಥಾನ; ಶಿವಸೇನೆ ಸಂಸದ ಅಸಮಾಧಾನ
“ನಮ್ಮ ಪಕ್ಷವು ಅಜಿತ್ ಅವರನ್ನು ಕೈಬಿಟ್ಟು ವಿಧಾನಸಭೆ ಚುನಾವಣೆಯಲ್ಲಿ ಶಿಂಧೆಯವರೊಂದಿಗೆ ಮುನ್ನಡೆದರೆ, ಪಕ್ಷವು ಅಜಿತ್ ಅವರನ್ನು ಬಳಸಿ ಬಿಸಾಡಿದೆ ಎಂಬ ಆರೋಪವನ್ನು ಬಿಜೆಪಿ ಎದುರಿಸಬೇಕಾಗುತ್ತದೆ. ಯೂಸ್ ಆಂಡ್ ಥ್ರೋ ಎಂದು ಅನಿಸಬಹುದು. ಆದರೆ, ಅಜಿತ್ ಮೈತ್ರಿಯಿಂದ ಯಾವುದೇ ಪ್ರಯೋಜನವಿಲ್ಲ” ಎಂದು ತನ್ನ ಹೆಸರನ್ನು ಹೇಳಲು ಬಯಸದ ಬಿಜೆಪಿ ನಾಯಕರೊಬ್ಬರು ತಿಳಿಸಿರುವುದಾಗಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
1. After RSS earful, BJP likely to call it quits with Ajit Pawar led NCP ahead of state assembly elections in Maharashtra.
2. Uddhav Thackeray readies for all 288 state assembly seats. @NewIndianXpress pic.twitter.com/kR3CG9xx2f— Sudhir Suryawanshi (@ss_suryawanshi) June 13, 2024
ಇನ್ನೊಂದೆಡೆ ದೆಹಲಿಯಲ್ಲಿ ನಡೆದ ಎನ್ಡಿಎ ಸಭೆಗೆ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಮತ್ತು ಎನ್ಸಿಪಿ ನಾಯಕ ಅಜಿತ್ ಪವಾರ್ ಗೈರುಹಾಜರಾಗಿರುವುದು ಆಡಳಿತಾರೂಢ ಮಹಾಯುತಿ ಒಕ್ಕೂಟದಲ್ಲಿ ಬಿರುಕಿಗೆ ಮತ್ತೊಂದು ಸಾಕ್ಷಿಯಾಗಿದೆ. ಲೋಕಸಭೆ ಚುನಾವಣೆಯಲ್ಲಿ ಎನ್ಸಿಪಿಗೆ ಆದ ಹೀನಾಯ ಸೋಲಿನಿಂದ ಅಸಮಾಧಾನಗೊಂಡ ಪವಾರ್ ಎನ್ಡಿಎ ಸಭೆಯಿಂದ ನುಣುಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ತನ್ನ ‘ಯೂಸ್ ಆಂಡ್ ಥ್ರೋ’ ನೀತಿಯನ್ನು ಬಳಸುವ ಎಲ್ಲ ಸೂಚನೆಗಳು ಇದೆ. ಸದ್ಯ ಲೋಕಸಭೆ ಚುನಾವಣೆಯ ನಂತರ ಅಜಿತ್ ಪವಾರ್ ಎನ್ಸಿಪಿಗೆ ಬಲವಿಲ್ಲ ಎಂದು ತಿಳಿದ ಬಳಿಕ ಅಜಿತ್ ಬಣದಿಂದ ಬಿಜೆಪಿ ದೂರವಾಗುವ ಎಲ್ಲ ಸುಳಿವುಗಳಿದೆ. ಆದರೆ ವಿಧಾನಸಭೆ ಚುನಾವಣೆ ಸಮೀಪಿಸುವಾಗ ಬಿಜೆಪಿ ಇದರ ಘೋಷಣೆ ಮಾಡುತ್ತಾ ಅಥವಾ ಕೆಲವೇ ವಾರಗಳಲ್ಲಿ ಘೋಷಿಸುತ್ತಾ ಎಂದು ನಾವು ಕಾದುನೋಡಬೇಕಿದೆ.