- ಅನ್ನಭಾಗ್ಯ ಯೋಜನೆಗೆ ಕೇಂದ್ರದ ಅಸಹಕಾರಕ್ಕೆ ಸಿದ್ದರಾಮಯ್ಯ ಕಿಡಿ
- ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ಸದಸ್ಯರು
ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸುತ್ತ, ಅನ್ನಭಾಗ್ಯ ಯೋಜನೆಗೆ ಕೇಂದ್ರ ಸರ್ಕಾರ ಹೇಗೆ ಸಹಕಾರ ಕೊಟ್ಟಿಲ್ಲ ಎಂದು ವಿವರಿಸುತ್ತಿದ್ದರು. ಬಿಜೆಪಿ ಸದಸ್ಯರು ಏಕಾಏಕಿ ಎದ್ದು ನಿಂತು ಸಿದ್ದರಾಮಯ್ಯ ಅವರನ್ನು ವಿರೋಧಿಸಿ, ಗಲಾಟೆ ಮಾಡಿ ಕೊನೆಗೆ ಸದನದಿಂದ ಹೊರ ನಡೆದರು.
ಆರ್ ಅಶೋಕ್ ಅವರು ಸಿಎಂ ಉತ್ತರಕ್ಕೆ ಮಧ್ಯ ಪ್ರವೇಶಿಸಿ ಪ್ರತಿಕ್ರಿಯಿಸಿ, “ಕಾಂಗ್ರೆಸ್ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೇಂದ್ರ ಸರ್ಕಾರ ಅನ್ನಭಾಗ್ಯ ಘೋಷಿಸಿಲ್ಲ. ನೀವು ಘೋಷಿಸಿದ್ದೀರಿ. ಅಕ್ಕಿ ಖರೀದಿಸಿ ಕೊಡಿ. ಇಲ್ಲಸಲ್ಲದಂತೆ ಕೇಂದ್ರದ ಮೇಲೆ ಆರೋಪ ಮಾಡಲು ಹೋಗಬೇಡಿ” ಎಂದರು.
ಅಷ್ಟೊತ್ತಿಗೆ ಕಾಂಗ್ರೆಸ್ ಸದಸ್ಯರು ಕೂಡ ಎದ್ದು ನಿಂತು ಬಿಜೆಪಿ ಸದಸ್ಯರ ವಿರುದ್ಧ ಹರಿಹಾಯ್ದರು. ಮಾತಿಗೆ ಮಾತು ಬೆಳೆದು ಪರಸ್ಪರ ಆರೋಪ ಮತ್ತು ಪ್ರತ್ಯಾರೋಪ ಮಾಡಿ ಕೂಗಾಡಿದರು. ಅಷ್ಟೊತ್ತಿಗೆ ಬಿಜೆಪಿ ಸದಸ್ಯರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿ ಸದನದಿಂದ ಹೊರನಡೆದರು.
ಡಿಸಿಎಂ ಡಿಕೆ ಶಿವಕುಮಾರ್ ಎದ್ದು ನಿಂತು, “ಬಡವರ ಬಗ್ಗೆ ನಿಜವಾದ ಬಿಜೆಪಿ ಕಾಳಜಿ ಈಗ ಸಾಬೀತಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನ್ನಭಾಗ್ಯ ಯೋಜನೆ ಬಗ್ಗೆ ಹೇಳುತ್ತಿದ್ದರೆ ಬಡವರ ಮೇಲಿನ ಅಸೂಯೆಯಿಂದ ಚರ್ಚೆ ಮಾಡದೇ ಎದ್ದು ಹೋದರು. ಇವರಲ್ಲಿ ಎಷ್ಟು ಹೊಟ್ಟೆ ಊರಿ ಇದೆ ಎಂಬುದು ಇವರ ನಡೆಯಿಂದ ಆರ್ಥವಾಗುತ್ತದೆ” ಎಂದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಜ್ಯದಲ್ಲಿ ಮತ್ತೆ ಶುರುವಾಯಿತು ಹೆಣ ರಾಜಕಾರಣ
ಮುಂದುವರಿದು, “ನಮ್ಮ ರಾಜ್ಯಕ್ಕೆ ಅಕ್ಕಿ ಅಲಾಟ್ ಮಾಡಲು ಅವಕಾಶ ಇದ್ದರೂ ಕೇಂದ್ರ ಸರ್ಕಾರ ಕೊಡಲಿಲ್ಲ. ಅನ್ನ ಭಾಗ್ಯ ಯೋಜನೆಯಿಂದ ಅವರ ಹೊಟ್ಟೆಯಲ್ಲಿ ಸಂಕಟವಾಗುತ್ತಿದೆ. ಕೇಂದ್ರ ಸರ್ಕಾರ ಬಡವರ ವಿರೋಧಿ ಸರ್ಕಾರ ಎಂಬುದು ಮತ್ತೆ ಸಾಬೀತಾಗಿದೆ. ಬಿಜೆಪಿಯವರು ಅಕ್ಕಿ ಕಡಿತಗೊಳಿಸಿದ್ದಕ್ಕೆ ನಮ್ಮ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ 10 ಕೆಜಿ ಅಕ್ಕಿ ಘೋಷಿಸಿದ್ದಾರೆ. ಜಾತಿ, ಧರ್ಮ ಮೀರಿ ಎಲ್ಲರಿಗೂ ಘೋಷಿಸಿದ್ದೇವೆ. ಇದು ನಮ್ಮ ಸಾಮಾಜಿಕ ಕಾಳಜಿ” ಎಂದು ತಿಳಿಸಿದರು.
“ಬಿಜೆಪಿಯವರು ನಮಗೆ ಸಹಕಾರ ಕೊಡಲಿ, ಕೊಡದೇ ಇರಲಿ; ಕಾಂಗ್ರೆಸ್ ಸರ್ಕಾರ ಘೋಷಿಸಿರುವ ಎಲ್ಲ ಗ್ಯಾರಂಟಿಗಳನ್ನು ನಾವು ಜಾರಿಗೆ ತಂದೇ ತರುತ್ತೇವೆ. ನಮ್ಮ ಮಾತಿಗೆ ತಪ್ಪಿ ನಡೆದರೆ ನಾವು ಮುಂದಿನ ಚುನಾವಣೆಯಲ್ಲಿ ಜನರ ಹತ್ತಿರ ಹೋಗುವುದಿಲ್ಲ” ಎಂದರು.