- ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಸದಸ್ಯ ಆರ್ ಅಶೋಕ ನಿಲುವಳಿ ಸೂಚನೆ
- ಬಿಜೆಪಿ ಸದಸ್ಯರ ಮಾತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿ
ಅಧಿವೇಶನ ಆರಂಭವಾಗಿ ಮೂರು ದಿನ ಆಯ್ತು. ಒಬ್ಬ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಆಗದ ಬಿಜೆಪಿ ಸದಸ್ಯರು ಇಲ್ಲಿ ಬುರುಡೆ ಬಿಡುತ್ತಿದ್ದಾರೆ. ಎಲ್ಲರೂ ಎದ್ದು ನಿಂತು ಮಾತನಾಡಿದರೆ ನಿಮ್ಮನ್ನು ವಿರೋಧ ಪಕ್ಷದ ನಾಯಕರನ್ನಾಗಿ ನೇಮಕ ಮಾಡುತ್ತಾರಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ಸದಸ್ಯರನ್ನು ಕುಟುಕಿದರು.
16ನೇ ವಿಧಾನಸಭೆಯ ಮೊದಲ ಅಧಿವೇಶನ ಮೂರನೇ ದಿನದ ಕಲಾಪದಲ್ಲಿ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಬಿಜೆಪಿ ಸದಸ್ಯ ಆರ್ ಅಶೋಕ ನಿಲುವಳಿ ಸೂಚಿಸಿ, ಆ ಕುರಿತು ಮಾತನಾಡುವಾಗ ನಡು ನಡುವೆ ಬಿಜೆಪಿ ಸದಸ್ಯರು ಎದ್ದು ನಿಂತು ಮಾತನಾಡುತ್ತಿದ್ದರು. ಈ ಬಗ್ಗೆ ಆಕ್ಷೇಪ ಎತ್ತಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣ ಕೊಟ್ಟಿರುವುದನ್ನು ಬಿಜೆಪಿ ಸದಸ್ಯರು ವಿರೋಧಿಸುತ್ತಿದ್ದಾರೆ. ನಿಮ್ಮ ಮುಖ ನೋಡಿಕೊಳ್ಳಿ. ನಿಮ್ಮ ಪ್ರಣಾಳಿಕೆಯಲ್ಲಿ ಎಷ್ಟು ಈಡೇರಿಸಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡರು.
“ನಿಲುವಳಿ ಸೂಚನೆ ಅಷ್ಟೇ ಮಾಡಿ, ಬೇಕಾಬಿಟ್ಟಿ ಮಾತನಾಡಬೇಡಿ. ಸಭಾಧ್ಯಕ್ಷರು ಚರ್ಚಿಸಲು ಅವಕಾಶ ಕೊಟ್ಟರೆ ನಾವು ಚರ್ಚಿಸಲು ಸಿದ್ಧ. ಬಿಜೆಪಿಯವರು ಎಷ್ಟೇ ವಿರೋಧ ಮಾಡಿದರೂ ಇದೇ ಆರ್ಥಿಕ ವರ್ಷದಲ್ಲಿ ಎಲ್ಲ ಗ್ಯಾರಂಟಿ ಈಡೇರಿಸುತ್ತೇವೆ. ನಾವು ಜನರಿಗೆ ಭರವಸೆ ಕೊಟ್ಟಿದೀವಿ ಹೊರತು ಬಿಜೆಪಿಯವರಿಗಲ್ಲ” ಎಂದರು.
ಆರ್ ಅಶೋಕ ನಿಲುವಳಿ ಸೂಚಿಸುತ್ತ, ಗ್ಯಾರಂಟಿಗಳ ಬಗ್ಗೆ ಚರ್ಚೆ ಸ್ವರೂಪದಲ್ಲಿ ಮಾತನಾಡುವುದನ್ನು ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಸಭಾಧ್ಯಕ್ಷರ ಸೂಚನೆ ಮೇರೆಗೆ ಗ್ಯಾರಂಟಿಗಳ ಬಗ್ಗೆ ವಿಧಿಸಿರುವ ಷರತ್ತುಗಳ ಬಗ್ಗೆ ಆಶೋಕ ಗಮನ ಸೆಳೆದು, “ಕಾಂಗ್ರೆಸ್ ಅಧಿಕಾರಕ್ಕೆ ಬರಲು ಜನರಿಗೆ ಮರುಳು ಮಾಡುವ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಆದರೆ, ಘೋಷಿಸುವ ಮುನ್ನ ಯಾವುದೇ ಷರತ್ತು ಹಾಕಿರಲಿಲ್ಲ. ಈಗ ಸರ್ಕಾರಿ ಅದೇಶದಲ್ಲಿ ಷರತ್ತು ವಿಧಿಸಿ, ಜನರಿಗೆ ಮೋಸ ಮಾಡಲಾಗುತ್ತಿದೆ” ಎಂದು ವಿವರಿಸಿದರು.
ಸಭಾಧ್ಯಕ್ಷ ಯು ಟಿ ಖಾದರ್ ಅವರು ಬಿಜೆಪಿ ಸದಸ್ಯರ ನಿಲುವಳಿ ಸೂಚನೆಯನ್ನು 69ಕ್ಕೆ ಕನ್ವರ್ಟ್ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಡುವೆ ಎಂದು ಭರವಸೆ ನೀಡಿದರು. ಸಭಾಧ್ಯಕ್ಷರ ನಡೆಗೆ ಮುಖ್ಯಮಂತ್ರಿ ಆಕ್ಷೇಪಿಸಿ, “ರಾಜ್ಯಪಾಲರ ಭಾಷಣದಲ್ಲೇ ಗ್ಯಾರಂಟಿಗಳ ಪ್ರಸ್ತಾಪ ಇದೆ. ಅದರಲ್ಲೇ ಚರ್ಚೆ ಮಾಡಬಹುದಿತ್ತು. ನೀವು ಸೂಚಿಸಿದ್ದು ಊರ್ಜಿತವಾಗುವುದಿಲ್ಲ” ಎಂದರು.
ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, “ಬಿಜೆಪಿಯವರು ಪಶ್ಚಾತ್ತಾಪದಿಂದ ಗ್ಯಾರಂಟಿಗಳ ಬಗ್ಗೆ ಪ್ರತಿಭಟಿಸುತ್ತಿದ್ದಾರೆ. ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗಿಲ್ಲ. ಅವರ ಪ್ರಣಾಳಿಕೆಯನ್ನು ಅವರು ಒಂದು ಸಲ ನೋಡಲಿ. ಜನರು ಅವರಿಗೆ ತಕ್ಕ ಉತ್ತರ ನೀಡಿ, ಜನಪರವಾದ ಕಾಂಗ್ರೆಸ್‌ಅನ್ನು ಅಧಿಕಾರಕ್ಕೆ ತಂದಿದ್ದಾರೆ” ಎಂದು ತಿಳಿಸಿದರು.