ಕೇದಾರನಾಥ ದೇವಾಲಯದ ಆವರಣದಲ್ಲಿ ಹಿಂದೂಯೇತರರನ್ನು ನಿಷೇಧಿಸಬೇಕು ಎಂದು ಕೇದಾರನಾಥ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿ ಆಶಾ ನೌಟಿಯಾಲ್ ಆಗ್ರಹಿಸಿದ್ದಾರೆ. ಕೇದಾರನಾಥ ಯಾತ್ರೆ ನಿರ್ವಹಣೆ ಬಗ್ಗೆ ಸಭೆ ನಡೆಸಿದ ಬಳಿಕ ಈ ಹೇಳಿಕೆ ನೀಡಿರುವ ಬಿಜೆಪಿ ಶಾಸಕಿ ಇದು ಜನರು ಅಭಿಪ್ರಾಯ ಎಂದು ಹೇಳಿಕೊಂಡಿದ್ದಾರೆ.
“ಜನರು ಎತ್ತಿರುವ ಸಮಸ್ಯೆಗಳನ್ನು ನಾನು ಒಪ್ಪುತ್ತೇನೆ. ಕೇದಾರನಾಥ ಧಾಮದ ಪ್ರತಿಷ್ಠೆಗೆ ಕಳಂಕ ತರುವ ಕೆಲವು ಜನರು ಇದ್ದಾರೆ. ಅಂತಹ ಜನರು ದೇವಾಲಯದ ಆವರಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಬೇಕು” ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಕೇದಾರನಾಥ ದೇಗುಲದಿಂದ 228 ಕೆಜಿ ಚಿನ್ನ ನಾಪತ್ತೆ: ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ
“ಕೇದಾರನಾಥದಲ್ಲಿ ಯಾತ್ರೆ ನಿರ್ವಹಣೆಗೆ ಸಂಬಂಧಿಸಿದಂತೆ ಇತ್ತೀಚೆಗೆ ಸಭೆ ನಡೆಸಲಾಯಿತು. ಕೆಲವು ಘಟನೆಗಳು ಗಮನಕ್ಕೆ ಬಾರದೇ ನಡೆಯುತ್ತವೆ ಎಂಬ ವಿಷಯವನ್ನು ಕೆಲವರು ಪ್ರಸ್ತಾಪಿಸಿದ್ದಾರೆ. ಕೇದಾರನಾಥ ಧಾಮದ ಪ್ರತಿಷ್ಠೆಗೆ ಧಕ್ಕೆ ತರುವ ಕಾರ್ಯವನ್ನು ಯಾರಾದರೂ ಮಾಡುತ್ತಿದ್ದರೆ, ಅಂತಹ ಜನರ ಪ್ರವೇಶವನ್ನು ನಿಷೇಧಿಸಬೇಕು” ಎಂದು ಆಶಾ ಭಾನುವಾರ ತಿಳಿಸಿದ್ದಾರೆ.
“ದೇವಾಲಯದ ಅಪಖ್ಯಾತಿ ಮಾಡಲು ಬರುವವರು ಖಂಡಿತವಾಗಿಯೂ ಹಿಂದೂಯೇತರರು ಆಗಿದ್ದಾರೆ. ದೇವಾಲಯದ ಘನತೆಗೆ ಧಕ್ಕೆ ತರುವ ಕಾರ್ಯದಲ್ಲಿ ಭಾಗಿಯಾಗಿದ್ದಾರೆ” ಎಂದು ಆರೋಪಿಸಿದ್ದಾರೆ.
ವಿವಿಧ ಧರ್ಮ, ಜಾತಿ, ಸಂಸ್ಕೃತಿಯನ್ನು ಹೊಂದಿರುವ ಭಾರತದಲ್ಲಿ ದೇವಾಲಯ, ಚರ್ಚು, ದರ್ಗಾಗಳಿಗೆ ಇತರೆ ಧರ್ಮೀಯರು ಭೇಟಿ ನೀಡುವುದು ಸಾಮಾನ್ಯವಾಗಿದೆ. ಇದು ಸೌಹಾರ್ದ ಭಾರತದ ಒಂದು ಭಾಗ. ಆದರೆ ಧರ್ಮದ ಆಧಾರದಲ್ಲಿ ದ್ವೇಷ ಬಿತ್ತುವ ಬಿಜೆಪಿ ಒಗ್ಗಟ್ಟನ್ನು ಮುರಿಯುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾ ಬಂದಿದೆ. ಅದರ ಭಾಗವಾಗಿಯೇ ಈಗ ಕೇದಾರನಾಥಕ್ಕೆ ಪ್ರವೇಶಿಸುವ ವಿಚಾರದಲ್ಲಿ ಕೋಮುವಾದ ಸೃಷ್ಟಿಸಲು ಮುಂದಾಗಿದ್ದಾರೆ. ಇನ್ನು ದೇವಾಲಯದ ಸಮಿತಿಯಲ್ಲಿಯೂ ಬಹುತೇಕರು ಬಲಪಂಥೀಯರು, ಅಲ್ಪಸಂಖ್ಯಾತ ವಿರೋಧಿಗಳು ಎಂಬುದನ್ನು ನಾವು ಮರೆಯುವಂತಿಲ್ಲ.

ಕೇದಾರನಾಥ ಸ್ವಾಮಿಯೇ ಹಿಂದೂ ಅಲ್ಲ ಮೊದಲು ಆ ಸ್ವಾಮಿಯನ್ನು ನಿಷೇಧಿಸಿ