ಬಾಲಕಿಯ ಅಪಹರಣ ಮತ್ತು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅಮೇಥಿ ಜಿಲ್ಲೆಯ ಬಿಜೆಪಿ ಶಾಸಕರ ಸೋದರಳಿಯ ಮತ್ತು ಇತರ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಸದ್ಯ ಮೂವರು ಜೈಲಿನಲ್ಲಿದ್ದಾರೆ.
ಬಂಧಿತ ಆರೋಪಿಗಳನ್ನು ಶಾಸಕ ಸುರೇಶ್ ಪಾಸಿ ಅವರ ಸೋದರಳಿಯ ರವಿ ಕುಮಾರ್ ಮತ್ತು ಅವರ ಸ್ನೇಹಿತರಾದ ಬಾಬಾದಿನ್ ಮತ್ತು ರಾಂಬಚನ್ ಎಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಆದರೆ ಆರಂಭದಲ್ಲಿ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಿಸಲಾಗಿರಲಿಲ್ಲ. ಬಿಜೆಪಿ ಶಾಸಕ ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನು ಓದಿದ್ದೀರಾ? ಕಾಸ್‌ಗಂಜ್ ಸಾಮೂಹಿಕ ಅತ್ಯಾಚಾರ ಪ್ರಕರಣ; ಬಿಜೆಪಿ ನಾಯಕ ಸೇರಿ ಎಂಟು ಮಂದಿ ಬಂಧನ
ರವಿ ಕುಮಾರ್ ಮತ್ತು ಅವರ ಇಬ್ಬರು ಸಹಚರರು ಜೂನ್ 7ರಂದು ಮೋಹನ್ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಿಂದ 16 ವರ್ಷದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮರುದಿನ ರಾಯ್ ಬರೇಲಿ ಬಸ್ ನಿಲ್ದಾಣದಲ್ಲಿ ಬಾಲಕಿ ಪತ್ತೆಯಾಗಿದ್ದಾಳೆ ಎಂದು ಅತ್ಯಾಚಾರ ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಜೂನ್ 13ರಂದು ಮೋಹನ್ ಗಂಜ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 137(2)(ಅಪಹರಣ) ಮತ್ತು 87(ಮಹಿಳೆಯನ್ನು ಅಪಹರಿಸಿ ಮದುವೆಯಾಗುವಂತೆ ಒತ್ತಾಯಿಸುವುದು) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಜೂನ್ 16ರಂದು ಕೋರ್ಟ್‌ನಲ್ಲಿ ಬಾಲಕಿ ನೀಡಿದ ಹೇಳಿಕೆಯ ಆಧಾರದ ಮೇಲೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವೃತ್ತ ಅಧಿಕಾರಿ ಅಜಯ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಅತ್ಯಾಚಾರ ಪ್ರಕರಣ | ಬಿಜೆಪಿ ಶಾಸಕ ಮುನಿರತ್ನಗೆ ಜಾಮೀನು
ಇನ್ನು ಬಿಜೆಪಿ ನಾಯಕರ ಒತ್ತಡ ಪೊಲೀಸರ ಮೇಲಿದೆ. ಆದ್ದರಿಂದಾಗಿ ಪೊಲೀಸರು ಈ ಪ್ರಕರಣದಲ್ಲಿ ರಾಜಿ ಮಾಡಿಕೊಳ್ಳಲು ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಜೂನ್ 14ರಂದು ತಾಯಿ ಆರೋಪಿಸಿದ್ದರು. ಹಾಗೆಯೇ ಪ್ರಕರಣದಲ್ಲಿ ಪೊಲೀಸರು ಸರಿಯಾದ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ್ದರು.
ಪೊಲೀಸರು ಆರಂಭದಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು. ಆದರೆ ಅವರ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯ ಅಡಿಯಲ್ಲಿ ದೂರು ದಾಖಲಿಸಿರಲಿಲ್ಲ. ಮಂಗಳವಾರ ಈ ಸೆಕ್ಷನ್‌ಗಳನ್ನು ಸೇರಿಸಲಾಗಿದೆ.
