ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಒಬ್ಬ ‘ಪೊಲಿಟಿಕಲ್ ಟೆರರಿಸ್ಟ್’ ಎಂದು ಮೈಸೂರು ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ. ಮಹೇಶ್ ಚಂದ್ರ ಗುರು ವಾಗ್ದಾಳಿ ನಡೆಸಿದ್ದಾರೆ.
ನಗರದ ಮಾನಸ ಗಂಗೋತ್ರಿಯಲ್ಲಿ ನಡೆದ ಮಹಿಷ ದಸರಾ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಾ ಪ್ರತಾಪ್ ಸಿಂಹ ವಿರುದ್ಧ ಹರಿಹಾಯ್ದರು.
ಸಭೆಯಲ್ಲಿ ಪ್ರತಾಪ್ ಸಿಂಹ ಹೆಸರು ಉಲ್ಲೇಖಿಸಿದ್ದನ್ನು ನೆನಪಿಸಿದ ಮಹೇಶ್ ಚಂದ್ರ ಗುರು, ‘ಪಾಪಿಗಳನ್ನು ಯಾಕೆ ಈ ಒಳ್ಳೆಯವರ ಸಭೆಯಲ್ಲಿ ನೆನಪಿಸುತ್ತೀರಾ? ಬುದ್ಧಿ ಇದೆಯಾ ನಿಮಗೆ. ಪ್ರತಾಪ್ ಸಿಂಹ ನನ್ನ ಶಿಷ್ಯ. ಒಮ್ಮೆ ಅವರಪ್ಪ ಸವೆದು ಹೋಗಿರುವ ಅಂಗಿ, ಪಂಚೆ ಹಾಕಿಕೊಂಡು ಮಗನಿಗೆ ದುಡ್ಡು ಕೊಡೋಣ ಅಂತ ಅವನತ್ರ ಬಂದ್ರೆ, ಇವನು ತನ್ನ ಕ್ಲಾಸ್‌ಮೇಟ್‌ಗಳಿಗೆ ನಮ್ಮನೇಲಿ ಕೂಲಿ ಮಾಡ್ತಾವ್ನೆ ಅಂತ ಅಪ್ಪನ ಬಗ್ಗೆ ಹೇಳಿದ್ದ’ ಎಂದು ಹಳೆಯ ಘಟನೆಯನ್ನು ನೆನಪಿಸಿದರು.

ಬಳಿಕ ಮುಂದುವರಿದು, ‘ಇದನ್ನು ಕೇಳಿಸಿಕೊಂಡ ನನಗೆ ಕೋಪ ಬಂದು ಥಳಿಸಿ ಬುದ್ದಿ ಹೇಳಿದ್ದೆ. ಅಪ್ಪನನ್ನೇ ಜೀತದ ಆಳು ಅಂತ ಹೇಳ್ತೀಯಲ್ವಾ. ನೀನು ಒಳ್ಳೆಯವರಿಗೆ ಹುಟ್ಟಿಲ್ಲ ಎಂದು ತಿಳಿಸಿದ್ದೆ’ ಎಂದು ಹೇಳಿದ್ದಾರೆ.
“ಸಂಸದ ಪ್ರತಾಪ್ ಸಿಂಹ ಒಬ್ಬ ಪೊಲಿಟಿಕಲ್ ಟೆರರಿಸ್ಟ್. ನಿನ್ನಂಥವರನ್ನು ಮಟ್ಟ ಹಾಕುವ ತಾಕತ್ತು ನಮಗೆಲ್ಲರಿಗೂ ಇದೆ. ನಿನಗೆ ಸರಿಯಾದ ಪಾಠ ಕಲಿಸ್ತೀವಿ” ಎಂದು ಪ್ರೊ. ಮಹೇಶ್ ಚಂದ್ರ ಗುರು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ.