- ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಭೇಟಿಗೆ ಅವಕಾಶ ಕೇಳಿರುವೆ
- ಸ್ಥಳೀಯವಾಗಿ ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ: ಸೋಮಶೇಖರ್
ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅವರು ಕಾಂಗ್ರೆಸ್ ಸೇರುತ್ತಾರೆ ಎನ್ನುವ ಸುದ್ದಿ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದು, “ಬಿಜೆಪಿಯವರೇ ನನ್ನನ್ನು ಕಾಂಗ್ರೆಸ್‌ಗೆ ಕಳಿಸುವಂತಿದೆ. ನಾನು ಕಾಂಗ್ರೆಸ್‌ಗೆ ಹೋಗುವ ಬಗ್ಗೆ ಎಲ್ಲೂ ಹೇಳಿಲ್ಲ” ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಈ ವಿಚಾರವಾಗಿ ಮಾತನಾಡಿದ ಅವರು, “ನಮ್ಮ ಕಾರ್ಯಕರ್ತರ ಜತೆಗೂ ಹೇಳಿಕೊಂಡಿಲ್ಲ. ಬಿಜೆಪಿ ನಾಯಕರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ” ಎಂದು ಹೇಳಿದ್ದಾರೆ.
“ಇಂದು ಬೆಳಿಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಟಿ ರವಿ ಅವರು ಫೋನ್ ಮಾಡಿದ್ದರು. ಡಿವಿ ಸದಾನಂದಗೌಡ ಅವರು ಮನೆಗೆ ಕರೆಸಿ ಮಾತನಾಡಿದ್ದಾರೆ. ನಾನು ಬಿಜೆಪಿ ಬಿಟ್ಟು ಹೋಗುತ್ತಿಲ್ಲ” ಎಂದರು.
“ಡಿಕೆ ಶಿವಕುಮಾರ್ ಜೊತೆ ರಾಜಕೀಯವಾಗಿ ಏನು ಮಾತಾಡಿಲ್ಲ. ನಮ್ಮ ಕ್ಷೇತ್ರಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಬಂದಿದ್ದರು. ನನ್ನ ಕ್ಷೇತ್ರದಲ್ಲಿ ಕುಡಿಯುವ ನೀರು ಸಮಸ್ಯೆ ಇದೆ, ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಆಗ ಉಪಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚನೆ ಕೊಟ್ಟರು. ಈ ವೇಳೆ ಅವರ ಬಗ್ಗೆ ಒಂದೆರಡು ಒಳ್ಳೆಯ ಮಾತಾಡಿದ್ದು ಹೌದು. ಇದು ಹೊರತು ಪಡಿಸಿ ನಾನು ಅವರ ಜತೆ ರಾಜಕೀಯ ಮಾತುಗಳನ್ನು ಆಡಿಲ್ಲ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಮಾತಿನ ಯುದ್ಧದಲ್ಲಿ ಮಾನ ಕಳೆದುಕೊಳ್ಳುತ್ತಿರುವ ನಾಯಕರು
“ಎರಡು ಸಲ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮ ಮಾಡಿದೀನಿ. ಆದರೆ, ಸ್ಥಳೀಯವಾಗಿ ನನ್ನ ವಿರುದ್ಧ ಎತ್ತಿ ಕಟ್ಟುವ ಕೆಲಸ ಆಗುತ್ತಿದೆ. ನನ್ನನ್ನು ಸೋಲಿಸಬೇಕು ಎಂದು ಸ್ಥಳೀಯ ಬಿಜೆಪಿಯವರು ವಿಡಿಯೋ ವೈರಲ್ ಮಾಡಿದ್ದಾರೆ. ನಾನೇನೂ ಪಕ್ಷ ವಿರೋಧಿ ಚಟುವಟಿಕೆ ಮಾಡಿಲ್ಲ” ಎಂದರು.
“ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದನ್ನೇ ಸ್ಥಳೀಯ ಬಿಜೆಪಿಗರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ಮೈಸೂರಿಗೆ ಹೋಗಿದ್ದಾಗ ಜಿಟಿ ದೇವೇಗೌಡರನ್ನೂ ಹೊಗಳ್ತೀನಿ. ಇದು ನನ್ನ ವೈಯಕ್ತಿಕ ಮಾತು” ಎಂದರು.
“ಮುಂದೆ ಕೂಡ ಬಿಜೆಪಿ ಬಿಡುವ ಯೋಚನೆ ಇಲ್ಲ. ಕಾಂಗ್ರೆಸ್‌ನವರು ಕೂಡ ಪಕ್ಷಕ್ಕೆ ಬನ್ನಿ ಎಂದು ಕರೆದಿಲ್ಲ. ಡಿಕೆ ಶಿವಕುಮಾರ್ ಅವರನ್ನು ಹೊಗಳಿದ್ದಕ್ಕೆ ನಾನು ಕಾಂಗ್ರೆಸ್ ಗೆ ಹೋಗುವೆ, ಲೋಕಸಭೆಗೆ ಅಪ್ಪ, ವಿಧಾನಸಭೆಗೆ ಮಗ ಅಂತ ಸೋಷಿಯಲ್ ಮೀಡಿಯಾದಲ್ಲಿ ಬಿಂಬಿಸುತ್ತಿದ್ದಾರೆ” ಎಂದು ಹೇಳಿದರು.