ದೆಹಲಿ ವಿಧಾನಸಭಾ ಚುನವಣೆ ನಡೆದಿದ್ದು, ಫೆಬ್ರವರಿ 8ರಂದು ಫಲಿತಾಂಶ ಪ್ರಕಟವಾಗಲಿದೆ. ಫಲಿತಾಂಶಕ್ಕೂ ಮುನ್ನವೇ ತಮ್ಮ ಅಭ್ಯರ್ಥಿಗಳನ್ನು ಬಿಜೆಪಿ ಬೇಟೆಯಾಡಲು (ಖರೀದಿಸಿ, ಪಕ್ಷಕ್ಕೆ ಸೇರಿಸಿಕೊಳ್ಳಲು) ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಅವರ ಆರೋಪದ ವಿರುದ್ಧ ಬಿಜೆಪಿ ದೂರು ನೀಡಿದ್ದು, ಈ ಬೆನ್ನಲ್ಲೇ, ತನಿಖೆ ನಡೆಸಲು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾ ಆದೇಶಿಸಿದ್ದಾರೆ.
ಎಎಪಿಯ ಆರೋಪಗಳು ಮಾನನಷ್ಟಕರ ಮತ್ತು ಚುನಾವಣಾ ಫಲಿತಾಂಶಕ್ಕೂ ಮುನ್ನ ತನ್ನ ವರ್ಚಸ್ಸಿಗೆ ಕಳಂಕ ತರುವ ಉದ್ದೇಶ ಹೊಂದಿವೆ ಎಂದು ಬಿಜೆಪಿ ವಾದಿಸಿದೆ. ಬಿಜೆಪಿ ದೂರು ಬಂದ ಬಳಿಕ, ಎಎಪಿ ಆರೋಪವು ತನಿಖೆಗೆ ಅರ್ಹವಾಗಿದೆ ಎಂದಿರುವ ಲೆಫ್ಟಿನೆಂಟ್ ಗವರ್ನರ್, ತನಿಖೆ ನಡೆಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಇತ್ತೀಚೆಗೆ, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಕೇಜ್ರಿವಾಲ್, “ಎಎಪಿಯ 16 ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಆಫರ್‌ಗಳು ಬಂದಿವೆ. ಎಎಪಿ ಜೊರೆದು ಬಿಜೆಪಿಗೆ ಪಕ್ಷಾಂತರ ಮಾಡಿದರೆ ಅವರಿಗೆ ಸಚಿವ ಸ್ಥಾನಗಳು ಮತ್ತು ತಲಾ 15 ಕೋಟಿ ರೂ. ನೀಡುವುದಾಗಿ ಬಿಜೆಪಿ ಭರವಸೆ ನೀಡಿದೆ” ಎಂದು ಆರೋಪಿಸಿದ್ದಾರೆ.
“ಕೆಲವು ಏಜೆನ್ಸಿಗಳು ಆ ಪಕ್ಷವು (ಬಿಜೆಪಿ) 55ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳುತ್ತಿವೆ. ಕಳೆದ ಎರಡು ಗಂಟೆಗಳಲ್ಲಿ, ನಮ್ಮ 16 ಅಭ್ಯರ್ಥಿಗಳಿಗೆ ಬಿಜೆಪಿಯಿಂದ ಕರೆಗಳು ಬಂದಿವೆ. ಅವರಿಗೆ ಎಎಪಿ ತೊರೆದು ತಮ್ಮ ಪಕ್ಷಕ್ಕೆ ಸೇರಿದರೆ, ಅವರನ್ನು ಮಂತ್ರಿಗಳನ್ನಾಗಿ ಮಾಡಿ ತಲಾ 15 ಕೋಟಿ ರೂ. ನೀಡಲಾಗುವುದು ಎಂಬ ಆಮಿಷವೊಡ್ಡಲಾಗಿದೆ” ಎಂದು ಕೇಜ್ರಿವಾಲ್ ವಿವರಿಸಿದ್ದಾರೆ.
“ಬಿಜೆಪಿ ನಿಜವಾಗಿಯೂ 55ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವುದಾದರೆ, ಅವರು ನಮ್ಮ ಅಭ್ಯರ್ಥಿಗಳನ್ನು ಏಕೆ ತಮ್ಮ ಪಕ್ಷಕ್ಕೆ ಕರೆಯುತ್ತಿದ್ದಾರೆ? ಈ ನಕಲಿ ಸಮೀಕ್ಷೆಗಳು ಎಎಪಿ ಅಭ್ಯರ್ಥಿಗಳನ್ನು ವಿಚಲಿತಗೊಳಿಸುವ ವಾತಾವರಣ ಸೃಷ್ಟಿಸುವ ಪಿತೂರಿ ಭಾಗವಾಗಿವೆ. ಆದರೆ, ನಮ್ಮ ಅಭ್ಯರ್ಥಿಗಳಲ್ಲಿ ಯಾರೂ ಪಕ್ಷಾಂತರ ಮಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಕೇಜ್ರಿವಾಲ್ ಆರೋಪದ ವಿರುದ್ಧ ಲೆಫ್ಟಿನೆಂಟ್ ಗವರ್ನರ್‌ಗೆ ಬಿಜೆಪಿ ದೂರು ನೀಡಿದೆ. ದೂರು ಬಂದ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗಿದೆ.
“ಈ ವಿಷಯದ ಬಗ್ಗೆ ಸತ್ಯವನ್ನು ತಿಳಿಯಲು ಭ್ರಷ್ಟಾಚಾರ ನಿಗ್ರಹ ದಳ (ACB) ಮೂಲಕ ಸಂಪೂರ್ಣ ತನಿಖೆ ನಡೆಸಬೇಕು” ಎಂದು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಹೇಳಿರುವುದಾಗಿ ಅವರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.
ದೆಹಲಿಯ ಎಲ್ಲ 70 ವಿಧಾನಸಭಾ ಸ್ಥಾನಗಳಿಗೆ ಬುಧವಾರ ಮತದಾನ ನಡೆದಿದೆ. ಶನಿವಾರ ಮತಗಳ ಎಣಿಕೆ ನಡೆಯಲಿದೆ. ಬುಧವಾರ ಸಂಜೆ ಹಲವಾರು ಚುನಾವಣೊತ್ತರ ಸಮೀಕ್ಷೆಗಳು ಬಂದಿದ್ದು, ಈ ಬಾರಿ ಬಿಜೆಪಿ ಅಧಿಕಾರ ಪಡೆಯುತ್ತದೆ ಎಂದು ಹೇಳುತ್ತಿವೆ. ಆದಾಗ್ಯೂ, 3ನೇ ಬಾರಿಗೆ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿ ಎಎಪಿ ಇದೆ.