ಲೋಕಸಭಾ ಚುನಾವಣೆ ನಂತರ, ಕಣ್ಮರೆಯಾಗಿದ್ದ ಬಿಜೆಪಿ ಐಟಿ ಸೆಲ್ ಈಗ ಮತ್ತೆ ಸಕ್ರಿಯವಾಗಿದೆ. ಸುಳ್ಳು ಸುದ್ದಿಗಳನ್ನು ಹರಡುವ ತನ್ನ ಚಾಳಿಯನ್ನು ಮತ್ತೆ ಆರಂಭಿಸಿದೆ. ಕಾಂಗ್ರೆಸ್ ಮೀಸಲಾತಿ ವಿರುದ್ಧವಿದೆ. ರಾಹುಲ್ ಗಾಂಧಿ ಅವರು ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ ಎಂದು ಎಡಿಟ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಹಂಚಿಕೊಂಡಿದೆ.
ಇತ್ತೀಚೆಗೆ, ಚರ್ಚಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ, ಮೀಸಲಾತಿ ಬಗ್ಗೆ ಮಾತನಾಡಿದ್ದರು. ಅದರ ಸಣ್ಣ ತುಣಕನ್ನು ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ದೆಹಲಿ ಬಿಜೆಪಿ ಮತ್ತು ಬಿಜೆಪಿ ಐಟಿ ಸೆಲ್ ಮುಖಂಡ ಪ್ರದೀಪ್, “ರಾಹುಲ್ ಗಾಂಧಿ ಮೀಸಲಾತಿ ವಿರುದ್ಧ ಮಾತನಾಡಿದ್ದಾರೆ. ಅವರ ಮಾತುಗಳು ಕಾಂಗ್ರೆಸ್ ಮೀಸಲಾತಿ ವಿರುದ್ಧವಿದೆ” ಎಂದು ಪೋಸ್ಟ್ ಮಾಡಿದ್ದಾರೆ.
ಆದರೆ, ಬಿಜೆಪಿ ಹಂಚಿಕೊಂಡಿರುವ ವಿಡಿಯೋ ಎಡಿಟ್ ಮಾಡಲಾದ ವಿಡಿಯೋ ಎಂಬುದು ಕ್ಷಣಾರ್ಧದಲ್ಲೇ ಪತ್ತೆಯಾಗಿದೆ. ರಾಹುಲ್ ಗಾಂಧಿ ಮೀಸಲಾತಿ ವಿಚಾರವಾಗಿ ಮಾತನಾಡಿರುವ ಪೂರ್ಣ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪೂರ್ಣ ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರು ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್‌ನ ಬದ್ದತೆ ಮತ್ತು ಮೀಸಲಾತಿಯಿಂದ ತಲುಪಬೇಕಿರುವ ಗುರಿಯ ಬಗ್ಗೆ ಸಮರ್ಥವಾಗಿ ಮಾತನಾಡಿರುವುದು ಕಂಡುಬಂದಿದೆ.
ಅಂದಹಾಗೆ, “ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶವನ್ನು ಸಾಧಿಸಿದ ಬಳಿಕ ಮೀಸಲಾತಿ ಯಾಕೆ ಬೇಕು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಅದರಲ್ಲಿ, ಮೀಸಲಾತಿ ಯಾಕೆ ಬೇಕು ಎಂದು ಹೇಳುವ ತುಣುಕನ್ನು ಮಾತ್ರವೇ ಬಿಜೆಪಿ ಐಟಿ ಸೆಲ್ ಎಡಿಟ್ ಮಾಡಿಕೊಂಡು, ಕಾಂಗ್ರೆಸ್ ಮೀಸಲಾತಿ ಬೇಡವೆಂದು ಹೇಳುತ್ತದೆ. ಅದನ್ನು ರಾಹುಲ್ ಗಾಂಧಿಯೇ ಒಪ್ಪಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಟ್ಟಿದೆ.
ಇನ್ನು, ಮೀಸಲಾತಿ ಮತ್ತು ರಾಹುಲ್ ಗಾಂಧಿ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬಿಜೆಪಿಯ ಹುನ್ನಾರವನ್ನು ವಿವರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಕೂಡ ಪತ್ರಿಕಾ ಹೇಳಿಕೆ ನೀಡಿದ್ದಾರೆ. “ರಾಹುಲ್ ಗಾಂಧಿ ಅವರು ಮೀಸಲಾತಿ ವಿರೋಧಿ ಹೇಳಿಕೆ ನೀಡಿದ್ದಾರೆಂದು ಸುಳ್ಳು ಆರೋಪ ಮಾಡಿ ಬಿಜೆಪಿ ನಾಯಕರು ಮಾಡುವ ಪ್ರತಿಭಟನೆ, ‘ಪ್ರಾಣಿ ಹಿಂಸೆ ವಿರುದ್ಧ ಕಟುಕರು ಪ್ರತಿಭಟನೆ’ ಮಾಡಿದಂತಿದೆ. ಮೀಸಲಾತಿಯನ್ನು ವಿರೋಧಿಸುತ್ತಾ ಬಂದವರಿಗೆ, ಸಂವಿಧಾನವನ್ನೇ ಬದಲಾಯಿಸಲು ಹೊರಟವರಿಗೆ ಇಂತಹ ಪ್ರತಿಭಟನೆ ಮಾಡುವ ಯಾವ ನೈತಿಕತೆ ಇದೆ” ಎಂದು ಪ್ರಶ್ನಿಸಿದ್ದಾರೆ.
“ಮೀಸಲಾತಿ ವಿರೋಧವನ್ನು ರಕ್ತಗತವಾಗಿಸಿಕೊಂಡಿರುವ ಬಿಜೆಪಿ ನಾಯಕರಿಗೆ ರಾಹುಲ್ ಗಾಂಧಿಯವರ ಹೇಳಿಕೆಯನ್ನು ಅರ್ಥಮಾಡಿಕೊಳ್ಳುವ ಜ್ಞಾನವಾಗಲಿ, ವ್ಯವಧಾನವಾಗಲಿ ಇಲ್ಲದಿರುವುದು ಆಶ್ಚರ್ಯವೇನಲ್ಲ. ವಿದ್ಯೆ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸರ್ವರಿಗೂ ಸಮಾನ ಪಾಲನ್ನು ನೀಡುವುದೇ ಮೀಸಲಾತಿಯ ಮೂಲ ಉದ್ದೇಶ. ಆ ಉದ್ದೇಶ ಸಾಧನೆಯಾದ ನಂತರ ಮೀಸಲಾತಿ ಯಾಕೆ ಬೇಕು? ಇದನ್ನು ರಾಹುಲ್ ಗಾಂಧಿಯವರು ಮಾತ್ರ ಅಲ್ಲ ನಾನೂ ಹೇಳುತ್ತೇನೆ. ಇದು ಹೇಗೆ ಮೀಸಲಾತಿ ವಿರೋಧಿ ಹೇಳಿಕೆ ಆಗುತ್ತದೆ” ಎಂದಿದ್ದಾರೆ.
“ಸರ್ವರಿಗೂ ಶಿಕ್ಷಣ, ಉದ್ಯೋಗ ಮತ್ತು ಅವಕಾಶಗಳಲ್ಲಿ ಸಮಾನ ಪಾಲು ಸಿಗಬೇಕೆಂಬ ಉದ್ದೇಶದಿಂದಲೇ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮೀಸಲಾತಿ ನೀತಿಯನ್ನು ಸಂವಿಧಾನದಲ್ಲಿ ಅಳವಡಿಸಿದ್ದರು. ಆದರೆ, ಮೀಸಲಾತಿಯ ಹೊರತಾಗಿಯೂ ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ಜಾತಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಸಮಾನ ಅವಕಾಶ ಇನ್ನೂ ಸಿಕ್ಕಿಲ್ಲ. ಸಾಮಾಜಿಕ ಅಸಮಾನತೆ ಕಡಿಮೆಯಾಗಿಲ್ಲ. ಇದಕ್ಕೆ ಬಿಜೆಪಿ ನಾಯಕರಂತಹ ಜಾತಿ ಪಟ್ಟಭದ್ರರು ಕಾರಣ ಎನ್ನುವುದು ಗೋಡೆ ಬರಹದಷ್ಟು ಸ್ಪಷ್ಟ” ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
“ಬಿಜೆಪಿಯ ಮಾತೃ ಸಂಸ್ಥೆ ಆರ್‌ಎಸ್‌ಎಸ್ ಹುಟ್ಟಿನಿಂದಲೆ ವರ್ಣವ್ಯವಸ್ಥೆಯನ್ನು ಸಮರ್ಥಿಸಿಕೊಂಡು ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ. ಮೀಸಲಾತಿ ಫಲಾನುಭವಿಗಳಲ್ಲಿನ ಜಾಗೃತಿಯಿಂದಾಗಿ ಮೀಸಲಾತಿಯನ್ನು ನೇರವಾಗಿ ವಿರೋಧಿಸುವ ದಮ್ಮ-ತಾಕತ್ತು ಇಂದಿನ ಬಿಜೆಪಿ ನಾಯಕರಿಗೆ ಇಲ್ಲ. ಇದಕ್ಕಾಗಿ ಒಂದೆಡೆ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿರುವ ಸಂವಿಧಾನವನ್ನೇ ಬದಲಾಯಿಸುವ ಪ್ರಯತ್ನ ಮಾಡಿದರೆ, ಇನ್ನೊಂದೆಡೆ ಮೀಸಲಾತಿ ಫಲಾನುಭವಿಗಳ ನಡುವೆಯೆ ಅಂತಃಕಲಹ ಏರ್ಪಡಿಸಿ ಸಾಮಾಜಿಕ ನ್ಯಾಯದ ಅಸ್ತ್ರವನ್ನು ಮೊಂಡಾಗಿಸುವ ಪ್ರಯತ್ನ ಮಾಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಮೀಸಲಾತಿ ಪ್ರಮಾಣವನ್ನು ಈಗಿನ ಶೇ.50ರಿಂದ ಶೇ.75ಕ್ಕೆ ಹೆಚ್ಚಿಸಲು ಕಾಂಗ್ರೆಸ್ ಬದ್ಧವಾಗಿದೆ ಎಂದು ರಾಹುಲ್ ಗಾಂಧಿಯವರು ಬಹಿರಂಗ ಸಭೆಗಳಲ್ಲಿ ಮಾತ್ರವಲ್ಲ ಲೋಕಸಭೆಯಲ್ಲಿಯೂ ಹೇಳಿದ್ದಾರೆ. ಬಿಜೆಪಿ ನಾಯಕರಿಗೆ ಮೀಸಲಾತಿ ಬಗ್ಗೆ ಅಷ್ಟೊಂದು ಕಾಳಜಿ-ಬದ್ಧತೆ ಇದ್ದರೆ ಮೀಸಲಾತಿಯ ಪ್ರಮಾಣವನ್ನು ಶೇ.75ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ” ಎಂದಿದ್ದಾರೆ.