- ‘ರಾಜ್ಯ ಸರ್ಕಾರ ಡಿಎಂಕೆ ಸರ್ಕಾರವನ್ನು ಓಲೈಸಲು ಕದ್ದುಮುಚ್ಚಿ ನೀರು ಕೊಡುತ್ತಿದೆ’
- ‘ಇವತ್ತು ಯಾವುದೇ ಅಧಿಕಾರಿ ಮುಕ್ತವಾಗಿ ಕೆಲಸ ಮಾಡಲು ಸರ್ಕಾರ ಬಿಡುತ್ತಿಲ್ಲ’
ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ನೀತಿ ನಡೆಯನ್ನು ಹೊಂದಿದೆ ಎಂದು ಬಿಜೆಪಿ ಆರೋಪಿಸಿ, ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವುದನ್ನು ಖಂಡಿಸಿ, ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿತು.
ಮಾಜಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿ ವಿ ಸದಾನಂದಗೌಡ ಹಾಗೂ ಮಾಜಿ ಸಚಿವರಾದ ಆರ್ ಅಶೋಕ, ಗೋವಿಂದ ಕಾರಜೋಳ ಅವರ ಮಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು.
ಬಸವರಾಜ ಬೊಮ್ಮಾಯಿ ಪ್ರತಿಭಟನೆಯಲ್ಲಿ ಮಾತನಾಡಿ, “ರಾಜ್ಯ ಸರ್ಕಾರ ತಮಿಳುನಾಡಿನ ಡಿಎಂಕೆ ಸರ್ಕಾರವನ್ನು ಓಲೈಸಲು ಕದ್ದುಮುಚ್ಚಿ ನೀರು ಹರಿಸಿದೆ. ಇದು ನಾಡಿನ ರೈತರು ಮತ್ತು ಜನತೆಗೆ ಮಾಡಿದ ದ್ರೋಹ. ಡಿಸೆಂಬರ್ ವೇಳೆಗೆ ಕುಡಿಯುವ ನೀರು ಸಿಗುವುದೂ ಕಷ್ಟವಿದೆ” ಎಂದು ಕಿಡಿಕಾರಿದರು.
“ಕಾವೇರಿ ನದಿ ನೀರಿನ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರೈತರಿಗೆ ನೀರು ಹರಿಸದೇ ತಮಿಳುನಾಡಿಗೆ ಹರಿಸಿದೆ. ಒಂದು ಕಾಳು ಅಕ್ಕಿಯನ್ನೂ ಕಾಂಗ್ರೆಸ್ ಕೊಟ್ಟಿಲ್ಲ, ಅವರು ನೀಚರು” ವಾಗ್ದಾಳಿ ನಡೆಸಿದರು.
“ದೊಡ್ಡ ದೊಡ್ಡ ಆಶ್ವಾಸನೆ ಕೊಟ್ಟು ಸರ್ಕಾರ ಅಧಿಕಾರಕ್ಕೆ ಬಂತು. ಇವರು ಅಕ್ಕಿ ಕೊಡುತ್ತಿರುವುದು ನರೇಂದ್ರ ಮೋದಿ ಕೊಡುತ್ತಿರುವ ಅಕ್ಕಿ. ಕರ್ನಾಟಕದಲ್ಲಿ ಗೃಹಲಕ್ಷಿ ಯೋಜನೆ ಬರುವಂತಹ ದಿನಗಳಲ್ಲಿ ಕಾಂಗ್ರೆಸ್ ಗೆ ಮುಳುವಾಗುತ್ತದೆ” ಎಂದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಸಂಪಾದಕರ ಬಾಯಿ ಬಡಿಯುವುದು ವಿಕಟ ವಿಡಂಬನೆ
“ಬೆಂಗಳೂರಿನ ಹೊರ ವಲಯದ ಅಧಿಕಾರಿ 8 ಕೋಟಿ ರೂ. ಕೊಟ್ಟಿದ್ದಾರೆ. ಅವರು ಬೇಡ ಅಂತ ಹೋದರೆ ಅದೇ ಜಾಗಕ್ಕೆ 13 ಕೋಟಿ ರೂ. ಪಡೆದು ನೇಮಕ ಮಾಡಿದ್ದಾರೆ. ಕುಮಾರ ಕೃಪಾದಲ್ಲಿ ದಂಧೆ ನಡೆಯುತ್ತಿದೆ. ಇವತ್ತು ಯಾವುದೇ ಅಧಿಕಾರಿ ಮುಕ್ತವಾಗಿ ಕೆಲಸ ಮಾಡಲು ಬಿಡುತ್ತಿಲ್ಲ” ಎಂದು ಆರೋಪಿಸಿದರು.
“ಸಣ್ಣಪುಟ್ಟ ವಿಚಾರಕ್ಕೆ ಬಿಜೆಪಿ ಕಾರ್ಯಕರ್ತರನ್ನು ಬಂಧಿಸುತ್ತಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತೇನೆ. ನಿಮ್ಮ ನಿಷ್ಠೆ ಕಾನೂನಿಗೆ ಇರಬೇಕು ಹೊರತು ಕಾಂಗ್ರೆಸ್ಸಿಗಲ್ಲ” ಎಂದು ಎಚ್ಚರಿಸಿದರು.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಮಾತನಾಡಿ, “ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದರ ವಿರುದ್ಧ ಸೆ.16ರಿಂದ ರಾಜ್ಯ ವ್ಯಾಪಿ ಪ್ರವಾಸ ಮಾಡುತ್ತೇನೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 25 ಸ್ಥಾನಗಳನ್ನು ಗೆಲ್ಲಲು ಶ್ರಮ ಹಾಕೋಣ” ಎಂದರು.
“ಕೋಲಾರದ ಕುರುಡುಮಲೆ ವಿನಾಯಕ ದೇವಸ್ಥಾನದ ಆವರಣದಿಂದ ಪ್ರವಾಸ ಆರಂಭಿಸುತ್ತೇನೆ. ಪಕ್ಷದ ಎಲ್ಲ ನಾಯಕರೂ ಭಾಗವಹಿಸುತ್ತಾರೆ” ಎಂದು ತಿಳಿಸಿದರು.