ಈಗಷ್ಟೇ ಚುನಾವಣೆ ನಡೆದ ಐದು ರಾಜ್ಯಗಳ ಪೈಕಿ, ನಾಲ್ಕು ರಾಜ್ಯಗಳ ಮತ ಎಣಿಕೆ ಭಾನುವಾರ ನಡೆದಿದೆ. ಅವುಗಳಲ್ಲಿ ಮೂರು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಆ ಮೂಲಕ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ 12 ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಲಿದೆ. ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಕಳೆದುಕೊಂಡ ಕಾಂಗ್ರೆಸ್, ಮೂರು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ.
ಕೇಂದ್ರ ಸರ್ಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಯು ಉತ್ತರಾಖಂಡ, ಹರಿಯಾಣ, ಉತ್ತರ ಪ್ರದೇಶ, ಗುಜರಾತ್, ಗೋವಾ, ಅಸ್ಸಾಂ, ತ್ರಿಪುರಾ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಅಧಿಕಾರದಲ್ಲಿದೆ. ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಂಡಿದೆ. ಜೊತೆಗೆ, ರಾಜಸ್ಥಾನ ಮತ್ತು ಛತ್ತೀಸ್‌ಗಢವನ್ನು ಕಾಂಗ್ರೆಸ್‌ನಿಂದ ಕಸಿದುಕೊಂಡಿದೆ. ಆ ಮೂಲಕ 12 ರಾಜ್ಯಗಳಲ್ಲಿ ತನ್ನದೇ ನೇರ ಆಡಳಿತ ನಡೆಸಲಿದೆ.
ಇದಲ್ಲದೆ, ಮಹಾರಾಷ್ಟ್ರ, ಮೇಘಾಲಯ, ನಾಗಾಲ್ಯಾಂಡ್ ಮತ್ತು ಸಿಕ್ಕಿಂ – ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ಮೈತ್ರಿ ಸರ್ಕಾರದ ಭಾಗವಾಗಿದೆ.
ನಾಲ್ಕು ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿದ್ದ ಕಾಂಗ್ರೆಸ್, ರಾಜಸ್ಥಾನ ಮತ್ತು ಛತ್ತಿಸ್‌ಗಢವನ್ನು ಕಳೆದುಕೊಂಡಿದೆ. ತೆಲಂಗಾಣದಲ್ಲಿ ಗೆಲ್ಲುವ ಮೂಲಕ ಮೂರು ರಾಜ್ಯಗಳಲ್ಲಿ ಆಡಳಿತದ ಚುಕ್ಕಾಣಿ ಹಿಡಿದಿದೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶದಲ್ಲಿ ಸುಭದ್ರ ಸರ್ಕಾರ ನಡೆಸುತ್ತಿದೆ.
ಜೊತೆಗೆ, ಬಿಹಾರ, ಜಾರ್ಖಂಡ್ ಹಾಗೂ ತಮಿಳುನಾಡಿನಲ್ಲಿ ಸರ್ಕಾರ ನಡೆಸುತ್ತಿರುವ ಮೈತ್ರಿ ಕೂಟದ ಭಾಗವಾಗಿ ಕಾಂಗ್ರೆಸ್ ಉಳಿದುಕೊಂಡಿದೆ.
ಇನ್ನು, ದೆಹಲಿ ಮತ್ತು ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಆಡಳಿತವಿದೆ. ಕೇರಳದಲ್ಲಿ ಸಿಪಿಐ(ಎಂ), ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ, ಒಡಿಶಾದಲ್ಲಿ ಬಿಜೆಡಿ, ಪುದುಚೆರಿಯಲ್ಲಿ ಎಐಎನ್‌ಆರ್‌ಸಿ, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಅಧಿಕಾರದಲ್ಲಿವೆ.
ಮಿಜೋರಾಂ ಚುನಾವಣಾ ಫಲಿತಾಂಶ ಸೋಮವಾರ ಪ್ರಕಟವಾಗಲಿದೆ. ಅಲ್ಲಿ ಎಂಎನ್‌ಎಫ್ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ. ಫಲಿತಾಂಶ ಏನಾಗಲಿದೆ ಎಂಬುದು ಡಿ.4ರಂದು ತಿಳಿಯಲಿದೆ.
ಇದೆಲ್ಲದರ ನಡುವೆ, ಸಿಕ್ಕಿಂ, ಅರುಣಾಚಲ ಪ್ರದೇಶ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ವಿಧಾನಸಭೆ ಅವಧಿ ಮುಗಿಯುತ್ತಾ ಬಂದಿವೆ. ಈ ರಾಜ್ಯಗಳಲ್ಲಿ 2014ರಲ್ಲಿ ಚುನಾವಣೆ ನಡೆಯಲಿದೆ. ಇನ್ನು, ಜಮ್ಮು ಮತ್ತು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. 370ನೇ ವಿಧಿ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಬಳಿಕ ಇದೂವರೆಗೂ ಚುನಾವಣೆ ನಡೆದಿಲ್ಲ. ಅಲ್ಲಿ, ವಿಧಾನಸಭೆ ಚುನಾವಣೆ ನಡೆಯುವುದು ಬಾಕಿ ಇದೆ.