ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ಮೌನ; ಒಂದು ವೇಳೆ ಕೊಲೆಗಡುಕರು ಮುಸ್ಲಿಂ ಆಗಿದ್ದರೆ?

Date:

Advertisements

2012ರಲ್ಲಿ ಧರ್ಮಸ್ಥಳದಲ್ಲಿ ನಡೆದಿದ್ದ ವಿದ್ಯಾರ್ಥಿ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೆ ಮತ್ತೆ ಭಾರೀ ಸದ್ದು ಮಾಡುತ್ತಿದೆ. ಧರ್ಮಸ್ಥಳದ ಕುಟುಂಬವೊಂದರ ಮಗ ಮತ್ತು ಆತನ ಸಹಚರರೇ ಕೃತ್ಯ ಎಸಗಿರುವ ನೈಜ ಆರೋಪಿಗಳು ಎಂಬ ಆರೋಪಗಳೂ ಇವೆ. ಸೌಜನ್ಯ ಪ್ರಕರಣದಲ್ಲಿ ನ್ಯಾಯಕ್ಕಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಆದರೆ, ಈ ಪ್ರಕರಣದ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. ಬದಲಾಗಿ, ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲಾಗುತ್ತಿದೆ ಎಂಬ ಆಷಾಢಭೂತಿಯ ವಾದ ಮಾಡುತ್ತಿದೆ.

ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗಳು ಕೂಡ ಮುನ್ನೆಲೆಯಲ್ಲಿವೆ. ಕಾರಣವಿಷ್ಟೇ, ಸೌಜನ್ಯ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ವ್ಯಕ್ತಿ ನಿರ್ದೋಷಿ ಎಂದು ಸಿಬಿಐ ನ್ಯಾಯಾಲಯ ಘೋಷಿಸಿದೆ. ಇನ್ನು, ಜನರು ಶಂಕಿಸುತ್ತಿರುವ ಆರೋಪಿಗಳು ಪ್ರಭಾವಿ ಕುಟುಂಬಕ್ಕೆ ಸೇರಿದವರು.

ಹೌದು, ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಹೆಚ್ಚಾಗಿ ಅಬ್ಬರಿಸೋದು ಮತ್ತು ಕಾಣಿಸೋದು ಧರ್ಮಗಳ ಮಧ್ಯೆ ಒಡಕು ತರುವ ವಿಚಾರವಿದೆ ಎಂದಾಗ ಮಾತ್ರ. ಯಾವುದಾದರೂ ಪ್ರಕರಣದಲ್ಲಿ ಆರೋಪಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರೆ, ಮರುಕ್ಷಣವೇ ಬಿಜೆಪಿ ಪಟಾಲಂ ಆ ಸ್ಥಳದಲ್ಲಿ ಪ್ರತ್ಯಕ್ಷವಾಗಿಬಿಡುತ್ತದೆ. ಅದೇ ಹಿಂದು ಸಮುದಾಯದವರು ಆರೋಪಿಯಾಗಿದ್ದರೆ, ಅದರಲ್ಲೂ ಆರೋಪಿ ಬಲಿಷ್ಠ ಜಾತಿ ಮತ್ತು ಪ್ರಭಾವಿ ಕುಟುಂಬಕ್ಕೆ ಸೇರಿದವನಾಗಿದ್ದರೆ ಬಿಜೆಪಿಗರು ಕಾಣಿಸುವುದಿರಲಿ, ಖಂಡನೆ-ಪ್ರತಿಕ್ರಿಯೆಯೂ ಬರುವುದಿಲ್ಲ. ಇದಕ್ಕೆ ಹಲವಾರು ಉದಾಹರಣೆಗಳಿವೆ.

Advertisements

ಕೆಲ ವರ್ಷಗಳ ಹಿಂದೆ, ಸುಳ್ಯದ ಪ್ರವೀಣ್ ನೆಟ್ಟಾರು ಎಂಬ ಯುವಕನನ್ನು ಮುಸ್ಲಿಂ ಯುವಕರು ಕೊಲೆ ಮಾಡಿದ್ದಾರೆ ಎಂಬುದು ಗೊತ್ತಾದ ಕೂಡಲೇ ಬಿಜೆಪಿ ಪಟಾಲಂ ಆ ಸ್ಥಳದಲ್ಲಿ ಮೊಕ್ಕಾಂ ಹೂಡಿತ್ತು. ಪ್ರವೀಣ್ ಕುಟುಂಬಕ್ಕೆ ಬಿಜೆಪಿಯಿಂದ 25 ಲಕ್ಷ ಪರಿಹಾರವನ್ನೂ ಘೋಷಿಸಿತ್ತು. ಅಲ್ಲದೆ, ಮಾಜಿ ಸಚಿವ ಅಶ್ವತ್ಥನಾರಾಯಣ ಸ್ವತಃ 10 ಲಕ್ಷ ರೂ. ಕೊಟ್ಟಿದ್ದರು.

ಶಿವಮೊಗ್ಗದಲ್ಲಿ ನಡೆದಿದ್ದ ಭಜರಂಗದಳ ಕಾರ್ಯಕರ್ತ ಹರ್ಷ ಎಂಬಾತನ ಹತ್ಯೆ ಪ್ರಕರಣದ ಆರೋಪಿ ಮುಸ್ಲಿಂ ಆಗಿದ್ದ, ಕೂಡಲೇ ಬಿಜೆಪಿಯ ನಾಯಕರು ಹರ್ಷ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು. ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಕೂಡ ಹರ್ಷನ ಮನೆಗೆ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದರು. ಪರಿಹಾರವಾಗಿ ರಾಜ್ಯ ಸರ್ಕಾರದ ವತಿಯಿಂದ 25 ಲಕ್ಷ ರೂ. ಮೊತ್ತದ ಚೆಕ್ ಹಸ್ತಾಂತರಿಸಿದ್ದರು. ಇಂತಹ ಹತ್ತಾರು ಉದಾಹರಣೆಗಳು ನಮ್ಮ ಮುಂದಿವೆ.

ಆದರೆ, ಇಂತಹದ್ದೇ ಮತ್ತೊಂದು ನಿದರ್ಶನದಲ್ಲಿ, 2016ರ ಮಾರ್ಚ್‌ 21ರಂದು ಮಂಗಳೂರಿನ ಕೊಡಿಯಾಲ್ ಬೈಲ್‌ನಲ್ಲಿ ಆರ್‍‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಆ ಪ್ರಕಣದಲ್ಲಿ ನಮೋ ಬ್ರಿಗೇಡ್‌ನ ನರೇಶ್ ಶೆಣೈ ಸೇರಿ ಒಟ್ಟು ಏಳು ಮಂದಿ ಹಿಂದುತ್ವವಾದಿಗಳೇ ಆರೋಪಿಗಳಾಗಿದ್ದರು. ಹಿಂದುತ್ವವಾದಿ ಸಂಘಟನೆಗಳ ಮುಖಂಡರು, ಕಾರ್ಯಕರ್ತರೇ ಆರೋಪಿಗಳಾಗಿದ್ದ ಕಾರಣಕ್ಕೆ ಆ ಪ್ರಕರಣದ ಬಗ್ಗೆ ಬಿಜೆಪಿ ಒಂದೇ ಒಂದು ಮಾತನಾಡಲಿಲ್ಲ.

ರಾಮನಗರ ಜಿಲ್ಲೆಯ ಹಾರೋಹಳ್ಳಿ ಬಳಿ ಜಾನುವಾರು ಸಾಗಣೆ ಮಾಡುತ್ತಿದ್ದ ವಾಹನವನ್ನು ತಡೆದು ವಾಹನದಲ್ಲಿ ಇದ್ದವರ ಮೇಲೆ ಹಲ್ಲೆಗೈದು, ಕೊಲೆ ಮಾಡಲಾಗಿತ್ತು. ಪ್ರಕರಣದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಸಂಗಡಿಗರು ಆರೋಪಿಗಳಾಗಿದ್ದರು. ಈ ಪ್ರಕರಣದ ಬಗ್ಗೆಯೂ ಬಿಜೆಪಿಗರು ಮಾತನಾಡಲಿಲ್ಲ. ಸಾವನ್ನಪ್ಪಿದ್ದ ಮುಸ್ಲಿಂ ವ್ಯಕ್ತಿ ಇದ್ರೀಶ್ ಪಾಷಾ ಮನೆಗೆ ತೆರಳಿ, ಸಾಂತ್ವನ ಹೇಳಲಿಲ್ಲ.

ಹಿಂದುತ್ವ, ಕೋಮುದ್ವೇಷ, ಕೋಮು ಪ್ರಚೋದನೆ ಉತ್ತೇಜಿಸಲು ಅವಕಾಶ ಸಿಗುತ್ತದೆ ಎಂದರೆ ಬಿಜೆಪಿಗರಿಗೆ ಪಕ್ಷವೂ ಲೆಕ್ಕಕ್ಕಿರುವುದಿಲ್ಲ. ಅಂತದ್ದೇ ಪ್ರಕರಣದಲ್ಲಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ್ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯಾದಾಗ ಬಿಜೆಪಿಗರು ಭಾರೀ ಪ್ರತಿಭಟನೆಗಳನ್ನು ನಡೆಸಿದ್ದರು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕೆ.ಎಸ್ ಈಶ್ವರಪ್ಪ ಸೇರಿದಂತೆ ಘಟಾನುಘಟಿ ನಾಯಕರು ಪಕ್ಷವನ್ನೂ ಲೆಕ್ಕಿಸದೆ ನಿರಂಜನ್ ಅವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದರು. ಯಾಕೆಂದರೆ, ಅಲ್ಲಿ ಆರೋಪಿ ಮುಸ್ಲಿಮನಾಗಿದ್ದ ಎಂಬುದು ಒಂದೇ ಕಾರಣ.

ಈ ವರದಿ ಓದಿದ್ದೀರಾ?: ತುಳುನಾಡ ಸಂಸ್ಕೃತಿಯಂತೆ ‘ದೈವ’ ಆಗಬೇಕಾಗಿದ್ದ ಸೌಜನ್ಯ ದೇವಿಯಾದಳು; ವೈದಿಕೀಕರಣದ ಹೊಸ ಮಗ್ಗಲು

ನೇಹಾ ಪ್ರಕರಣದಲ್ಲಿ ಭಾರೀ ಪ್ರತಿಭಟನೆಗಳನ್ನು ನಡೆಸಿದ ಬಿಜೆಪಿಗರು, ದಲಿತ ವಿದ್ಯಾರ್ಥಿನಿ ದಾನೇಶ್ವರಿ ಮೇಲಿನ ಅತ್ಯಾಚಾರ ಪ್ರಕರಣ, ಚಿತ್ರದುರ್ಗದ ಮುರುಘಾ ಮಠದಲ್ಲಿ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ವಿಚಾರದಲ್ಲಿ ಮೌನಕ್ಕೆ ಜಾರಿದ್ದರು. ಬಿಜೆಪಿಗರಿಗೆ ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ನಡೆಯಬಾರದು ಎಂಬುದಕ್ಕಿಂತ, ದೌರ್ಜನ್ಯ ಎಸಗಿದ ಆರೋಪಿ ಯಾವ ಸಮುದಾಯಕ್ಕೆ ಸೇರಿದವನು ಎಂಬುದು ಮುಖ್ಯವಾಗಿರುತ್ತದೆ. ಇದು, ಬಿಜೆಪಿಗರ ನಿಲುವು, ಧೋರಣೆಗಳಿಂದಲೇ ಸ್ಪಷ್ಟವಾಗಿವೆ.

ಹೀಗಾಗಿಯೇ, ಸೌಜನ್ಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗಳು ಮುಸ್ಲಿಮರಲ್ಲ. ಬಿಜೆಪಿಗೆ ಆ ಪ್ರಕರಣದಿಂದ ಲಾಭವಿಲ್ಲ. ಲಾಭವಿಲ್ಲದ ಪ್ರಕರಣದ ಬಗ್ಗೆ ಬಿಜೆಪಿಗರು ಮಾತನಾಡುವುದಿಲ್ಲ.

ಸೌಜನ್ಯ ಪ್ರಕರಣ ನಡೆದು 14 ವರ್ಷಗಳು ಕಳೆದಿವೆ. ಇನ್ನೂ ಕೂಡ ನೈಜ ಆರೋಪಿಗಳನ್ನು ಬಂಧಿಸಿಲ್ಲ. ಶಿಕ್ಷೆ ಆಗಿಲ್ಲ. ಈ ಬಗ್ಗೆ ಮುಸ್ಲಿಂ ಯುವಕ ಸಮೀರ್ ಧ್ವನಿ ಎತ್ತಿದ್ದಾನೆ, ಪ್ರಕರಣದಲ್ಲಿ ಸರಿಯಾಗಿ ತನಿಖೆಯಾಗದೇ ಇರುವ ಬಗ್ಗೆ ಪ್ರಶ್ನಿಸಿದ್ದಾನೆ. ಆತನ ಪ್ರಶ್ನೆಗಳು ಗಂಭೀರವಾಗಿವೆ. ಆದರೆ, ಆತನ ಪ್ರಶ್ನೆಗಳಿಗೆ ದನಿಗೂಡಿಸಬೇಕಾದ ಸಮಾಜವು ಆತನ ಸಮುದಾಯವನ್ನು ಎಳೆದು ತಂದು, ಆತನ ವಿರುದ್ಧವೇ ಗುಟುರು ಹಾಕುತ್ತಿದೆ.

ಒಂದು ವೇಳೆ, ಸೌಜನ್ಯಳನ್ನು ಕೊಂದವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರೆ, ಈಗ ಸಮೀರ್ ವಿರುದ್ಧ ಹರಿಹಾಯುತ್ತಿರುವವರು ಏನು ಮಾಡುತ್ತಿದ್ದರು? ಧರ್ಮಸ್ಥಳದ ಬೀದಿಗಳಲ್ಲಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ತನಿಖೆ, ಮರುತನಿಖೆಗಾಗಿ ಒತ್ತಾಯಿಸುತ್ತಿದ್ದರು. ಸೌಜನ್ಯಳ ಕುಟುಂಬ ನಮ್ಮದು, ಆಕೆಯ ಕುಟುಂಬದೊಂದಿಗೆ ನಾವಿದ್ದೇವೆಂದು ಅಬ್ಬರಿಸಿ, ಬೊಬ್ಬಿರಿಯುತ್ತಿದ್ದರು. ಆದರೆ, ಈಗ ಅದಾವುದೂ ನಡೆಯುತ್ತಿಲ್ಲ. ಯಾಕೆಂದರೆ, ಸೌಜನ್ಯಳನ್ನು ಕೊಂದವರು ಮುಸ್ಲಿಮರಲ್ಲ, ಜನರು ಹೇಳುವಂತೆ ಅವರು ಹಿಂದುಗಳೂ ಅಲ್ಲ. ಆದರೆ, ಪ್ರಭಾವಿ ಕುಟುಂಬಕ್ಕೆ ಸೇರಿದವರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X