ಮಾಜಿ ರಾಜ್ಯಪಾಲ ದಿ. ಸತ್ಯಪಾಲ್ ಮಲಿಕ್ ಮತ್ತು ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ನಡೆಸಿದ್ದ ಧೋರಣೆಯ ಬಗ್ಗೆ ಟೀಕಿಸಿದ್ದಕ್ಕಾಗಿ, ಬಿಜೆಪಿ ವಕ್ತಾರ ಕೃಷ್ಣಕುಮಾರ್ ಜಾನು ಅವರನ್ನು ಬಿಜೆಪಿ ಉಚ್ಚಾಟಿಸಿದೆ. ರಾಜಸ್ಥಾನದ ಜಾನು ಅವರು 6 ವರ್ಷಗಳ ಕಾಲ ಪಕ್ಷದ ಸಾಮಾನ್ಯ ಸದಸ್ಯವನ್ನೂ ಹೊಂದಿರುವುದಿಲ್ಲ ಎಂದು ಹೇಳಿದೆ.
ಇತ್ತೀಚೆಗೆ, ರಾಜಸ್ಥಾನದ ಜುಂಝುನು ಜಿಲ್ಲಾ ಅಧ್ಯಕ್ಷೆಯಾಗಿ ಹರ್ಷಿನಿ ಕುಲ್ಹಾರಿ ಅವರನ್ನು ನೇಮಿಸಿದ್ದನ್ನು ಜಾನು ಪ್ರಶ್ನಿಸಿದ್ದರು. ಆ ಕಾರಣಕ್ಕೆ, ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ಆದಾಗ್ಯೂ, ಬಿಜೆಪಿಯ ಧೋರಣೆಗಳನ್ನು ಜಾನು ಟೀಕಿಸಿದ್ದರು. ಕಳೆದ ತಿಂಗಳು ಧನಕರ್ ಅವರು ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ನೀಡಿದಾಗ, ಅವರಿಗೆ ಗೌರವಯುವ ವಿದಾಯ ನೀಡಿದ ಬಿಜೆಪಿ ನಡೆಸಿಕೊಂಡ ರೀತಿಯ ಬಗ್ಗೆಯೇ ಜಾನು ಅಸಮಧಾನ ವ್ಯಕ್ತಪಡಿಸಿದ್ದರು.
ಕಳೆದ ವಾರ, ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಮೃತಪಟ್ಟಾಗ ಅವರ ಅಂತ್ಯಕ್ರಿಯೆ ನಡೆಸಿದ ರೀತಿ ಮತ್ತು ಸರಿಯಾದ ರೀತಿಯಲ್ಲಿ ಗೌರವ ಸಲ್ಲಿಸದ್ದರ ಬಗ್ಗೆಯೂ ಆಕ್ಷೇಪ ವ್ಯಕ್ತಪರಿಸಿದ್ದರು. ಹಿರಿಯ ನಾಯಕರನ್ನು ಬದಿಗಿಡುವ ಮೂಲಕ ಪ್ರಸ್ತುತ ನಾಯಕತ್ವವು ದಿಕ್ಕು ತಪ್ಪುತ್ತಿದೆ ಎಂದು ಟೀಕಿಸಿದ್ದರು.
“ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಯಶವಂತ್ ಸಿನ್ಹಾ, ಪ್ರವೀಣ್ ತೊಗಾಡಿಯಾ, ಸಂಜಯ್ ಜೋಶಿ, ವಸುಂಧರಾ ರಾಜೆ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರಂತಹ ಹಿರಿಯ ನಾಯಕರನ್ನು ಬದಿಗೆ ತಳ್ಳಲು ಪಕ್ಷದ ಹಿರಿಯ ನಾಯಕತ್ವವೇ ಕಾರಣ. ತಳಮಟ್ಟದಲ್ಲಿ ಬಲಿಷ್ಠರಾಗಿದ್ದ ನಾಯಕರನ್ನು ಕೈಗೊಂಬೆಗಳನ್ನಾಗಿ ಮಾಡಲಾಗಿದೆ” ಎಂದು ಆರೋಪಿಸಿದ್ದರು. ಈ ಕಾರಣಗಳಿಗಾಗಿ ಜಾನು ಅವರು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದ್ದರು.
ಅವರ ವಿರುದ್ಧ ರಾಜಸ್ಥಾನ ಬಿಜೆಪಿಯ ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷ ಅಂಕುರ್ ಸಿಂಗ್ ಲಖವತ್ ಅವರು, “ಜಾನು ಪಕ್ಷದಲ್ಲಿ ಅಶಿಸ್ತು ತೋರಿಸಿದ್ದಾರೆ. ಅಲ್ಲದೆ, ಶೋಕಾಸ್ ನೋಟಿಸ್‌ಗೂ ಸರಿಯಾಗಿ ಪ್ರತಿಕ್ರಿಯಿಸಿಲ್ಲ. ಹೀಗಾಗಿ, ಅವರನ್ನು ಉಚ್ಛಾಟನೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.